ಅದೊಂದು ಗಳಿಗೆ.
ನಿನ್ನ ಕಾಣುವ ಬಯಕೆಯೊಂದು
ಮತ್ತೆ ಮತ್ತೆ
ಮುಗಿಬೀಳಲು
ತುಕ್ಕು ಹಿಡಿದ ಬುದ್ದಿ
ಹಿಡಿತ ತಪ್ಪಿ ಬಂದು ನಿಂತಿದ್ದು
ನಿನ್ನ ಮನೆಯಂಗಳಕೆ
ಬಂದಾಗ ನೀನು
ಮುಚ್ಚಿದ ಕದ ತೆರೆಯದೆ ಕಾಯಿಸಿದ್ದು
ನಿನ್ನೊಳಗಿನ ಅಹಮ್ಮಿನ ತುಣುಕಿನೊಂದಂಶವಾಗಿತ್ತು
ಕರಗಿದ ಹಗಲು ನಿಶ್ಯಬ್ದ ಇರುಳೊಳಗೆ ಕರಗಿ
ಲೀನವಾಗುವ ಸರಿಹೊತ್ತಲ್ಲಿ
ದಿಡೀರನೆ ಜ್ಞಾನೋದಯವಾಗಿ
ಕಣ್ಮುಂದೆ ಕಂಡ ಮಾಣಿಕ್ಯವೊಂದು
ಕಣ್ಮರೆಯಾದ ಪರಿಗೆ
ಏಳೂರುಗಳೂ
ದಿಗ್ಬ್ರಮೆಗೊಳಗಗಿದ್ದವು.
ಸುದೀರ್ಘ ಬರದ ಬೆಂಕಿಯೊಳಗೆ
ಬೆಂದ ನನ್ನೂರೊಳಗಿನ
ಹಸಿವಿನ ಹಾಹಾಕಾರಕ್ಕೆ ಅಸುನೀಗಿದ
ಹಾಲುಗಲ್ಲದ ಹಸುಗೂಸುಗಳ
ಹೊತ್ತು ಮಣ್ಣು ಮಾಡಿದ ಕೈಗಳಿಗೆ
ಹತ್ತಿದ ಕುಷ್ಠ
ಕಿವಿ ಮೂಗು ಪಾದಗಳ ಬೆರಳ ಸಂದಿಗಳಿಗೆ ವ್ಯಾಪಿಸಿ
ಉರಿದು ಹೋಯಿತು ಹಾಗೇನೆ
ಹಗಲ ಚಿತೆ
ಹಿಮ ಪರ್ವತದ ತುತ್ತ ತುದಿಯಲಿ ನೆಲೆಸಿದ ಶಂಕರನ
ಪಾದಗಳ ನುಣುಪಾದ
ತಣ್ಣನೆಯ ಸ್ಪರ್ಶಕೆ ಕರಗಬಲ್ಲುದೆಂದು ನಂಬಿದ ಪಾಪಾತ್ಮಗಳ
ದಿವ್ಯೋಪದೇಶಕೆ ಮಾರು ಹೋಗಿ
ಹಮ್ಮು ತೊರೆದು ಸುತ್ತೂರಿನೆಲ್ಲ ಗರತಿಯರ ಪಾದಕೆರಗಿ
ಶತಮಾನಗಳ ಪುರಾತನ
ಶಾಪ ಉಶ್ಯಾಪಗಳೆಲ್ಲವನ್ನು ಇಲ್ಲವಾಗಿಸಿ
ಅದೊಂದು ಮಂಗಳಕರವಾದ ಬೆಳಗಿಗೆ
ಕಾಯುತ್ತ ಕೂತ ಕಡುಪಾಪಿ ಮನುಷ್ಯನ
ಪಾಪಿಷ್ಠ ಕ್ಷಣಗಳ ಮನ್ನಿಸುವ
ಮನಸಿರುವ ದೇವಪುರುಷನಿಗಾಗಿ ಕಾಯುವ
ಗಳಿಗೆಯಿದೆಯಲ್ಲ
ಅದಕ್ಕಿಂತ ಅಮೃತಮಯವಾದ್ದು ಬೇರೆ ಯಾವುದಿದೆ?
*********
ಕು.ಸ.ಮಧುಸೂದನ
ಆಪ್ತವಾಗಿ ಓದಿಸಿಕೊಳ್ಳುವ ಕವಿತೆ
Nice poem
ಎಲ್ಲೋ ಕಳೆದು ಹೋಗುವ ಹಾಗೂ ಆಪ್ತ ಕವಿತೆ….……….. ಮಾತಿಲ್ಲ..
ಸಂಗಾತಿ ಬ್ಲಾಗಿನ ಬರಹಗಳು ಬರುತ್ತಿವೆ.ಹಾಗೇ ಬರುತಿರಲಿ ನಮ್ಮ ಕಡೆಗೆ.