ಆಖ್ಯಾನ

ಆಖ್ಯಾನ

ಆಖ್ಯಾನ
ಲೇಖಕರು- ಮೂರ್ತಿ ಅಂಕೋಲೆಕರ
ಕಥಾಸಂಕಲನ
ಪ್ರಕಾಶಕರು- ಕ್ರೈಸ್ಟ್ ವಿಶ್ವವಿದ್ಯಾಲಯ ಕನ್ನಡ ಸಂಘ

ಜೀವ ವಿಮಾ ನಿಗಮದ ಅಧಿಕಾರಿಯಾಗಿ ಈಗ ನಿವೃತ್ತಿ ಜೀವನ ನಡೆಸುತ್ತಿರುವ ಮೂರ್ತಿ ಅವರು ತಮ್ಮ ಇಪ್ಪತ್ತರಿಂದ ಮೂವತ್ನಾಲ್ಕನೇ ವಯಸ್ಸಿನವರೆಗೆ ಬರೆದ ಕಥೆಗಳಲ್ಲಿ ಆಯ್ದ ಹತ್ತು ಕಥೆಗಳು ಇಲ್ಲಿವೆ.

ಇದಕ್ಕೆ ಕೆ.ವಿ. ತಿರುಮಲೇಶ್ ಅವರು ಮುನ್ನುಡಿ ಬರೆದಿದ್ದಾರೆ.
ನಾನಿಲ್ಲಿ ಉದ್ದೇಶಪೂರ್ವಕವಾಗಿ ಪ್ರತೀ ಕಥೆಯ ಬಗ್ಗೆ ಬರೆಯುವುದಿಲ್ಲ. ಏಕೆಂದರೆ ಇವು ಸಾಕಷ್ಟು ಸಂಕೀರ್ಣವಾಗಿ ಇದ್ದು ಒಂದೇ ಹಿಡಿತಕ್ಕೆ ಸಿಗುವಂಥವಲ್ಲ. ಇವೆಲ್ಲವೂ ಬಹಳ ಪ್ರಬುದ್ಧ ಕಥೆಗಳೆಂದು ಮಾತ್ರ ಹೇಳಬಹುದು. ಕತೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೇಖಕನಿಗೆ ಮಾತ್ರ ಸಾಧ್ಯವಾಗುವ ಕತೆಗಳು.

ಬಹುಮುಖ್ಯವಾದ ಕಥಾವಸ್ತುಗಳು, ಗಂಭೀರವಾದ ಶೈಲಿ, ಎಲ್ಲವನ್ನೂ ಗಮನಿಸುವ ಸೂಕ್ಷ್ಮತೆ, ಅವಕ್ಕೆ ಸ್ಪಂದಿಸುವ ಗುಣ, ಅದ್ಭುತವಾದ ವೈಚಾರಿಕತೆ – ಇವೆಲ್ಲವೂ ಈ ಕಥೆಗಳನ್ನು ಬಹಳ ಮೇಲ್ಮಟ್ಟದಲ್ಲಿ ಇರಿಸುತ್ತವೆ.

ಅಂಕೋಲೆಕರರು ಚಿತ್ರಿಸುವ ಜಗತ್ತು- ಕರಾವಳಿ ಮತ್ತು ಘಟ್ಟದ ಮೇಲಿನ ಹಳ್ಳಿ , ಪಟ್ಟಣಗಳು. ಅಲ್ಲಿನ ಎಲ್ಲಾ ತಲೆಮಾರಿನ ಜನ, ತೋಟ, ಒಳದಾರಿಗಳು, ಕಾಡು, ತೊರೆ, ಪ್ರಕೃತಿ. ದೇವಸ್ಥಾನ, ಜಾತ್ರೆ ಮತ್ತು ಕಾಲೇಜುಗಳು. ಈ ಜನರ ಸಂಬಂಧ, ವೈಷಮ್ಯ, ಪ್ರೀತಿ ಪ್ರಣಯ, ಹಾದರ, ಅಸೂಯೆ, ಅನುರಾಗ ಇತ್ಯಾದಿ. ಆದರೆ ಅವರ ‘ ಕ್ರಿಟಿಕಲ್ ಇನ್ಸೈಡರ್ ‘ ಈ ಮೇಲಿನವುಗಳನ್ನೇ ವಿಭಿನ್ನವಾದ ದೃಷ್ಟಿಯಿಂದ ಚಿತ್ರಿಸಿದ್ದಾರೆ.

ಮಾರುತಿಯವರ ಪಾತ್ರಗಳು ಹೆಚ್ಚು ತೀವ್ರತೆಯಲ್ಲಿ ಚಿಂತನ ಮಂಥನದಲ್ಲಿ ತೊಡಗುತ್ತವೆ. ಕೆಲವು ಗೊಂದಲಗಳಲ್ಲಿ ಉಳಿದರೆ , ಇನ್ನು ಕೆಲವಕ್ಕೆ ಉಪಸಂಹಾರಗಳು ತಾನಾಗಿಯೇ ಒದಗಿ ಬರುತ್ತವೆ. ಮನುಷ್ಯಾವಸ್ಥೆ ಎಂದರೆ ಇದೇನೇ ಎಂದು ಕಥೆಗಳು ತೋರಿಸಿಕೊಡುವಂತೆ ಅನಿಸುತ್ತದೆ. ಈ ಚಿಂತನೆಯ ಸ್ವಭಾವವೇ ಅವರ ಕಥಾಪಾತ್ರಗಳನ್ನು ಬಹು ಆಯಾಮಿಗಳಾಗಿ ಮಾಡುತ್ತವೆ.

ಬೆನ್ನುಡಿಯಲ್ಲಿ ಶ್ರೀಧರ ಬಳಗಾರ ಅವರು ಹೇಳಿರುವಂತೆ – ಮೂರ್ತಿ ಅವರ ಕಥನ ಪ್ರಪಂಚದಲ್ಲಿ ಸ್ವಭಾವತಃ ಒಳ್ಳೆಯತನದಲ್ಲಿ ಬದುಕುವ ಅಪೂರ್ವ ಶೋಭೆಯ ಮನುಷ್ಯರಿದ್ದಾರೆ. ಆತ್ಮಶೋಧನೆಗೆ ಹಿಂಜರಿಯದ ಅವರ ಕಥೆಗಳು ನವ್ಯೋತ್ತರ ಕಥನ ಸ್ವರೂಪಕ್ಕೆ ಸೂಚಕವಾಗುವುದರಿಂದ ಕಥನ ಪರಂಪರೆಯ ಅಧ್ಯಯನ ದೃಷ್ಟಿಯಿಂದಲೂ ಮುಖ್ಯವಾಗುತ್ತವೆ.

ಇವೆಲ್ಲ ಕಾರಣಗಳಿಂದ ಒಮ್ಮೆ ಓದಲೇಬೇಕಾದ ಕೃತಿ ‘ ಆಖ್ಯಾನ’.
**********

ಡಾ. ಅಜಿತ ಹರೀಶಿ

Leave a Reply

Back To Top