ತನ್ನ ವೃತ್ತಿಜೀವನ ಮತ್ತು ಮಕ್ಕಳನ್ನು ಬೆಳೆಸುವ ಪ್ರಶ್ನೆಗಳು ಎದುರಾದಾಗ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಆಯ್ಕೆ ಮಾಡಿಕೊಳ್ಳುವುದು ಮಕ್ಕಳನ್ನು ಬೆಳೆಸುವುದನ್ನು. ಮತ್ತೆ ಕೆಲವು ಬಾರಿ ವೃತ್ತಿ ಜೀವನದ ವರಮಾನದಿಂದಲೇ ಬದುಕು ಸಾಗಿಸುವ ಅನಿವಾರ್ಯತೆ ಇದ್ದಾಗ,ವೃತ್ತಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅದಮ್ಯ ಆಕಾಂಕ್ಷೆಯನ್ನು ಹೊಂದಿದ್ದು, ಮನೆಯಲ್ಲಿ ಪ್ರೋತ್ಸಾಹದಾಯಕ ವಾತಾವರಣವನ್ನು ಹೊಂದಿರುವ ಹೆಣ್ಣು ಮಕ್ಕಳು ಎರಡನ್ನೂ ವಿಭಾಯಿಸುತ್ತಾರೆ.

 ಕೆಲ ಆಟಗಾರರು, ಸಿನಿಮಾ ತಾರೆಯರು  ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ನಿವೃತ್ತಿಯನ್ನು ಘೋಷಿಸುತ್ತಾರೆ. ಮತ್ತು ಕೆಲವು ಜನ ಪುಟ್ಟದೊಂದು ವಿರಾಮವನ್ನು ತೆಗೆದುಕೊಂಡು ಮತ್ತೆ ತಮ್ಮ ಕಾರ್ಯ ಚಟುವಟಿಕೆಗಳಿಗೆ ಮರಳುತ್ತಾರೆ.

 ಎಷ್ಟೋ ಬಾರಿ ಮದುವೆ ನಿಶ್ಚಯವಾಗಿದೆ ಎಂಬ ಒಂದೇ ಕಾರಣಕ್ಕೆ ಒಲ್ಲದ ಸಂಗಾತಿಯೊಂದಿಗೆ ಜೀವನಪೂರ್ತಿ ಬಾಳುವ ಅನಿವಾರ್ಯತೆಯನ್ನು ಹೊಂದುವ ಬದಲು ಮದುವೆಗೆ ಮುಂಚೆಯೇ ಪರಸ್ಪರ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಂಡು ಸಂಬಂಧದಿಂದ ವಿಮುಖತೆಯನ್ನು ಹೊಂದಿ ಒಳ್ಳೆಯ ಬದುಕನ್ನು ನಡೆಸುವುದು ಎಷ್ಟೋ ಪಾಲು ಮೇಲು.

 ಕಚೇರಿಗಳಲ್ಲಿ ಕೆಲಸ ಮಾಡುವ ಗಂಡಸರಿಗೆ 60 ವರ್ಷಕ್ಕೆ ನಿವೃತ್ತಿಯಾದರೆ, ಮನೆ ಕೆಲಸ ಮಾಡುವ ಗೃಹ ಸ್ವಾಮಿನಿಗೆ ನಿವೃತ್ತಿಯ ಮಾತೇ ಇಲ್ಲ. ಚಿಕ್ಕವಳಿದ್ದಾಗ ತಾಯಿಗೆ ಸಹಾಯ ಮಾಡುವ ಹೆಣ್ಣುಮಗಳು ಮದುವೆಯಾಗಿ ಗಂಡ, ಅತ್ತೆ ಮಾವ ಮತ್ತು ಮಕ್ಕಳ ಸೇವೆಯಲ್ಲಿ, ಮುಂದೆ ವಯಸ್ಸಾದಾಗ ಮೊಮ್ಮಕ್ಕಳ ಸೇವೆಯಲ್ಲಿ ತೊಡಗುವ ಹೆಣ್ಣು ಮಕ್ಕಳಿಗೆ ನಿವೃತ್ತಿ ಎಂಬುದು ಕನಸೇ ಸರಿ. ಇಂತಹ ಸಮಯದಲ್ಲಿ ಕ್ವಿಟ್ ಮಾಡಲು ಸಾಧ್ಯವೇ ಇಲ್ಲ ಎನ್ನುವ ಜನರಿಗೆ ಕ್ವಿಟ್ ಎಂಬ ಕೃತಿಯ ಕೆಲವು ಮಾತುಗಳು ದಾರಿದೀಪವಾಗಬಲ್ಲವು.

ಮಾಜಿ ಪೋಕರ್ ಆಟಗಾರ್ತಿ ಮತ್ತು ನಿರ್ಧಾರ ತಂತ್ರಜ್ಞಳಾಗಿ ಕಾರ್ಯನಿರ್ವಹಿಸಿದ ಅನಿ ಡ್ಯೂಕ್ ಎಂಬ ಲೇಖಕಿ ಬರೆದಿರುವ ಕ್ವಿಟ್ ಎಂಬ ಕೃತಿಯಲ್ಲಿ ಆಕೆ ಅಂದುಕೊಂಡ ಕೆಲಸಗಳನ್ನು ಅರ್ಧದಲ್ಲಿಯೇ ಬಿಟ್ಟು ಬಿಡುವ ಮಾನಸಿಕತೆಯ ಕುರಿತಾಗಿ ಬರೆದಿದ್ದಾಳೆ. ಕ್ವಿಟ್ ಎಂದರೆ ಬಿಟ್ಟು ಬಿಡುವುದು ತ್ಯಜಿಸುವುದು ಎಂದರ್ಥ… ಇಲ್ಲಿ ಕ್ವಿಟ್ ಪದವನ್ನು ಹಾಗೆಯೇ ಬಳಸಿದ್ದೇನೆ.

 ಈ ಕೃತಿಯು ನಮ್ಮ ಸುತ್ತ ಇರುವ ಅರ್ಧದಲ್ಲಿಯೇ ಕೆಲಸಗಳನ್ನು ಬಿಟ್ಟುಬಿಡುವ ಕುರಿತಾದ ಸಾಂಸ್ಕೃತಿಕ ಕಳಂಕದ ವಿರುದ್ಧ, ಕೆಲವು ವಿಷಯಗಳನ್ನು ಇದ್ದಲ್ಲಿಯೇ ಬಿಟ್ಟುಬಿಡುವ ಕುರಿತು ಮತ್ತು ಹಾಗೆ ಬಿಟ್ಟು ಬಿಡುವ ಮೂಲಕ ಮಹತ್ವದ ನಿರ್ಣಯವನ್ನು ಕೈಗೊಳ್ಳುವ ಕುರಿತಾಗಿ ತನ್ನದೇ ಆದ ನಿಲುವುಗಳನ್ನು ಹೊಂದಿರುವ ಆನಿ ಡ್ಯೂಕ್ ನಿರ್ಣಯ ವಿಜ್ಞಾನದ ಹಲವಾರು ಉದಾಹರಣೆಗಳನ್ನು ನೀಡುತ್ತಾ ಯಾವ ಸಮಯದಲ್ಲಿ ಕ್ವಿಟ್ ಮಾಡಿದರೆ ಯಶಸ್ಸು ನಮ್ಮದಾಗುತ್ತದೆ ಎಂಬುದರ ಕುರಿತು ವಿವರಿಸಿದ್ದಾಳೆ . ಯಾವಾಗ ಕಾರ್ಯವನ್ನು ನಿರಂತರವಾಗಿ ಕೊಂಡೊಯ್ಯಬೇಕು ಮತ್ತು ಯಾವಾಗ ಕೈ ಬಿಡಬೇಕು ಎಂಬುದರ ನಿರ್ಧಾರವನ್ನು ಕೈಗೊಳ್ಳಬೇಕು, ಕ್ವಿಟ್ ಮಾಡುವುದು ವೈಯುಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಾವ ರೀತಿ  ಸಹಾಯವಾಗುತ್ತದೆ ಎಂಬುದರ ಕುರಿತು ವಿಷದವಾಗಿ ವಿವರಿಸಿದ್ದಾಳೆ ಡ್ಯೂಕ್.

 ಆನಿ ಡ್ಯೂಕ್ ಳ ಕೃತಿಯ ಕೆಲವು  ಪಾಠಗಳು ಇಂತಿವೆ
೧. ಕ್ವಿಟ ಮಾಡುವುದು ಒಂದು ನಿರ್ಣಯಾತ್ಮಕ ಆಯ್ಕೆಯಾಗಿದ್ದು ಇದನ್ನು ಸೋಲು ಇಲ್ಲವೇ ವಿಫಲತೆ  ಎಂದು ಪರಿಗಣಿಸಬಾರದು. ನಿರಂತರತೆ ಮತ್ತು ಬದ್ಧತೆಯನ್ನು ಸದಾ ಪ್ರೋತ್ಸಾಹಿಸುವ ನಮ್ಮ ಸಮಾಜದಲ್ಲಿ ಕೆಲವೊಮ್ಮೆ ಕೆಲಸಗಳನ್ನು ಅರ್ಧದಲ್ಲಿಯೇ ಬಿಟ್ಟು ಬಿಡುವುದು ಕೂಡ ಸ್ವಾಗತಾರ್ಹ. ಸರಿಯಾದ ಸಮಯದಲ್ಲಿ ನಿರ್ಧರಿತ  ಕಾರ್ಯವನ್ನು ಕೈ ಬಿಡುವ ಮೂಲಕ ನಾವು ಸಂಪನ್ಮೂಲಗಳು, ಸಮಯ ಮತ್ತು ಭಾವನಾತ್ಮಕ ದೃಢತೆಯನ್ನು ಉಳಿಸಿಕೊಳ್ಳಬಹುದು.

2. ಈಗಾಗಲೇ ಸಾಕಷ್ಟು ಹಣವನ್ನು ತೊಡಗಿಸಿದ್ದೇವೆ, ಕ್ವಿಟ್ ಮಾಡುವುದರಿಂದ ಮುಳುಗಿ ಹೋಗುತ್ತೇವೆ, ನಮ್ಮ ಸಮಯ ಹಣ ಮತ್ತು ಪ್ರಯತ್ನಗಳೆಲ್ಲವೂ ನಿಷ್ಪಲವಾಗುತ್ತವೆ ಎಂಬ ಭಯದಿಂದಲೇ ಬಹಳಷ್ಟು ಜನ ತಾವು ಕೈಗೊಂಡ ಕೆಲಸಗಳನ್ನು ಅರ್ಧಕ್ಕೆ ಕೈ ಬಿಡಲು ಹಿಂಜರಿಯುತ್ತಾರೆ. ಇಲ್ಲಿಯೇ ಅವರು ತಪ್ಪು ಮಾಡುವುದು. ಈ ಹಿಂದೆ ಹೂಡಿಕೆ ಮಾಡಿರುವ ಹಣ ಸಮಯಕ್ಕಿಂತ ನಮಗೆ ಮುಂದಿನ ಭವಿಷ್ಯದ ಸಾಮರ್ಥ್ಯ ಮುಖ್ಯವಾಗಿದ್ದು ಅದನ್ನು ಉಳಿಸಿಕೊಳ್ಳಲು ನಾವು ಖಂಡಿತವಾಗಿಯೂ ನಮ್ಮ ಪ್ರಯತ್ನವನ್ನು ಕೈಬಿಡುವುದು ಒಳ್ಳೆಯದು.

3. ಯಾವುದೇ ಒಂದು ಕೆಲಸವನ್ನು ಅರ್ಧದಲ್ಲಿ ಬಿಡಲು ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ನಿರ್ದಿಷ್ಟ ಸಮಯವಿರುತ್ತದೆ ‘ಕಿಲ್ ಕ್ರೈಟೀರಿಯ’ ಎಂಬ ಪೂರ್ವ ನಿರ್ಧರಿತ ಮುನ್ಸೂಚನೆಗಳ ಅರಿವನ್ನು ಹೊಂದಿರಬೇಕು. ಈ ಮುನ್ಸೂಚನೆಗಳು ಸಂಪೂರ್ಣವಾಗಿ ತರ್ಕದಿಂದ ಕೂಡಿದ್ದು ಯಾವುದೇ ಭಾವನಾತ್ಮಕ ಮತ್ತು ಸಾಮಾಜಿಕ ಒತ್ತಡವನ್ನು ಮೀರಿ ನಿರ್ಧಾರ ತೆಗೆದುಕೊಳ್ಳಲು ಅತ್ಯಂತ ಅವಶ್ಯಕ.

4. ಮಾಡುತ್ತಿರುವ ಕೆಲಸವನ್ನು ಅರ್ಧದಲ್ಲಿಯೇ ಕ್ವಿಟ್ ಮಾಡುವುದರಿಂದ ಉಳಿಯುವ ಸಮಯ, ಹಣ, ಶಕ್ತಿ, ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಬೇರೊಂದು ಪ್ರಮುಖ ಕಾರ್ಯದಲ್ಲಿ ತೊಡಗಿಸಬಹುದು. ಹೆಚ್ಚು ಫಲಪ್ರದವಾದ ಮತ್ತು ಸಂತೃಪ್ತಿಯನ್ನು ನೀಡುವ ಕಾರ್ಯಗಳಲ್ಲಿ ನಮ್ಮ ಹೂಡಿಕೆಯನ್ನು ಮಾಡಬಹುದು

5. ಈ ಕ್ಷೇತ್ರದಲ್ಲಿ ನಾವು ಸಾಕಷ್ಟು ಹೆಸರು ಮಾಡಿದ್ದೇವೆ ಎಂಬ ಅಹಂ ಎಷ್ಟೋ ಬಾರಿ ನಮ್ಮ  ಕಾರ್ಯಕ್ಷೇತ್ರಗಳಲ್ಲಿ ವಿಫಲವಾಗುತ್ತಿದ್ದರೂ ಮುಂದುವರೆಯಲು ಕಾರಣವಾಗುತ್ತದೆ. ಬಹಳಷ್ಟು ಜನ ತಾವಿರುವ ಕಾರ್ಯಕ್ಷೇತ್ರದಲ್ಲಿ ತಮ್ಮದೇ ಆದ ಸ್ವ ವ್ಯಕ್ತಿತ್ವವನ್ನು,ಛಾಪನ್ನು ಹೊಂದಿರುತ್ತಾರೆ. ತಾವು ಮಾಡುತ್ತಿರುವ ಕೆಲಸವನ್ನು  ಕೈಬಿಡುವುದರಿಂದ ತಮ್ಮ ಇಮೇಜಿಗೆ  ಧಕ್ಕೆಯಾಗುತ್ತದೆ ಎಂಬ ಭಾವವನ್ನು ಹೊಂದಿರುತ್ತಾರೆ. ಈಗಾಗಲೇ ಮುಳುಗಿ ಹೋಗುತ್ತಿರುವ ಹಡಗನ್ನು ಉಳಿಸಿಕೊಳ್ಳುವುದರ ಬದಲು ಜೀವ ರಕ್ಷಕ ದ ಸಹಾಯದಿಂದ ಬೇರೊಂದು ಹಡಗಿಗೆ ಹೋಗಿ ಮತ್ತೆ ಹೊಸ ಬದುಕನ್ನು ಕಟ್ಟಿಕೊಳ್ಳುವುದು ಒಳ್ಳೆಯದು,ಆನಿ ಡ್ಯೂಕ್ ಇಮೇಜಿಗೆ ಜೋತು ಬೀಳಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

6. ನಿಜ ಜೀವನದ ಹಲವಾರು ಉದಾಹರಣೆಗಳನ್ನು ನೀಡುತ್ತಾ ವೃತ್ತಿಪರ ಜೀವನದ, ವ್ಯಾಪಾರ ಮತ್ತು ಉದ್ದಿಮೆಗಳ, ಕ್ರೀಡೆ ಮತ್ತು ಮನರಂಜನಾ ಕ್ಷೇತ್ರದ ಹಲವಾರು ಉದಾಹರಣೆಗಳನ್ನು ನೀಡುತ್ತಾ ಆಕೆ  ಕ್ವಿಟ್ ಮಾಡುವ ಮಹತ್ವದ ನಿರ್ಧಾರದ ಕುರಿತು ಹೇಳುತ್ತಾರೆ. ಲಾಭದಾಯಕವಲ್ಲದ ಉದ್ಯಮಗಳಿಂದ ಹಿಡಿದು, ಕ್ರೀಡಾಕ್ಷೇತ್ರದಲ್ಲಿ ವಯೋ ಸಹಜ ವಿಫಲತೆಯ ಕಾರಣಕ್ಕಾಗಿ, ವಿಷಮಯ ಸಾಂಗತ್ಯವನ್ನು ತ್ಯಜಿಸುವ ಮೂಲಕ ಹೊಸ ಸಾಧ್ಯತೆಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡು ಸಫಲರಾಗಿರುವವರ ಹಲವಾರು ಉದಾಹರಣೆಗಳನ್ನು ಆಕೆ ನೀಡಿದ್ದಾರೆ.

7. ಯೋಜಿತ ಕೆಲಸಗಳನ್ನು ಕೈಬಿಟ್ಟ ನಂತರ ತಾವೆಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆಯೋ ಎಂಬ ಭಯದಿಂದ ಬಹಳಷ್ಟು ಜನ ಕ್ವಿಟ್ ಮಾಡುವುದನ್ನು ಕೈ ಬಿಡುತ್ತಾರೆ. ಈ ವಿಷಯವನ್ನು ವಿವರಿಸುತ್ತಾ ಆಕೆ ಕ್ವಿಟ್ ಮಾಡುವುದು ಶಾಶ್ವತವಾಗಿ ಇರಬೇಕು ಎಂದಿಲ್ಲ, ಕೆಲವೊಮ್ಮೆ ಅದೊಂದು ಅಲ್ಪವಿರಾಮದಂತೆ ಕಾರ್ಯನಿರ್ವಹಿಸಬಲ್ಲದು ಮತ್ತು ಕೆಲವೊಮ್ಮೆ ಕಾರ್ಯವನ್ನು ಮುಂದೂಡಲು ಸಹಕಾರಿಯಾಗಬಲ್ಲದು. ಈ ಮೂಲಕ ಆಕೆ ತಮ್ಮ  ಅವಶ್ಯಕತೆಗಳನ್ನು ಅರಿತು ಕ್ವಿಟ್ ಮಾಡುವುದಕ್ಕಿಂತ ಹೆಚ್ಚಿನ ತೊಂದರೆಯನ್ನು ಕ್ವಿಟ್ ಮಾಡುವ ಭಯ ಉಂಟು ಮಾಡುತ್ತದೆ ಎಂದು ಓದುಗರಿಗೆ ಹೇಳುತ್ತಾರೆ.

8 ಕ್ವಿಟ್ ಮಾಡುವ ಮತ್ತು ಹೊಸತನ್ನು ಅನ್ವೇಷಿಸುವ ಮಧ್ಯದಲ್ಲಿ ಕೊಂಡಿಯಿದ್ದು ಎಷ್ಟೋ ಬಾರಿ ಕ್ವಿಟ್ ಮಾಡುವುದರಿಂದ ನಾವು ಹೊಸತನ್ನು ಅನ್ವೇಷಿಸುತ್ತ  ಪ್ರಗತಿಯೆಡೆ ದಾಪುಗಾಲು ಹಾಕಬಹುದು..ಆದ್ದರಿಂದ ಹೊಸ ವಿಷಯಗಳು ಕಲಿಯಲು ಮತ್ತು ಹೆಚ್ಚು ಅವಕಾಶಗಳನ್ನು ಗಳಿಸಲು ಕ್ವಿಟ್ ಮಾಡುವುದನ್ನು ನಾವು ಕಲಿಯಲೇಬೇಕು. ಅಷ್ಟೇನೂ ಲಾಭದಾಯಕವಲ್ಲದ ವಿಷಯಗಳನ್ನು ತ್ಯಜಿಸುವಲ್ಲಿ ಯಾವುದೇ ಹಿಂಜರಿತಗಳನ್ನು ಹೊಂದಿರಬಾರದು. ಕ್ವಿಟ್ ಮಾಡುವುದರಿಂದ ಹೆಚ್ಚಿನ ಕ್ರಿಯಾತ್ಮಕತೆ ಮತ್ತು ಪ್ರಗತಿಯನ್ನು ಸಾಧಿಸಬಹುದು.

 ತನ್ನ ಕೃತಿ ಕ್ವಿಟ್ ನಲ್ಲಿ ಆನಿ ಡ್ಯೂಕ್ ನಿರಂತರತೆ ಸರಿಯಾದ ಆಯ್ಕೆ ಎಂಬ ಸಾಮಾನ್ಯ ಮತ್ತು ಸಾರ್ವತ್ರಿಕ  ನಂಬಿಕೆಗೆ  ಸವಾಲೊಡ್ಡುತ್ತಾರೆ.
 ಕ್ವಿಟ್ ಮಾಡುವ ನಿಖರ ಜ್ಞಾನ ಮತ್ತು ನಿರ್ದಿಷ್ಟವಾದ  ಸಮಯವನ್ನು ಗುರುತಿಸಿ ಕ್ವಿಟ್ ಮಾಡುವ ಮೂಲಕ ಜಾಣ್ಮೆಯನ್ನು ಮೆರೆಯಲು, ತರ್ಕ ಬದ್ಧವಾದ ಉದ್ದೇಶಗಳನ್ನು ಸಾಧಿಸಲು ಮತ್ತು ದೀರ್ಘಕಾಲೀನ ಗುರಿಗಳನ್ನು ತಲುಪಲು ಆಕೆ ಪ್ರೋತ್ಸಾಹಿಸುತ್ತಾಳೆ.  ಅತ್ಯಂತ ಅನಿವಾರ್ಯವಾದಂತಹ ಸನ್ನಿವೇಶಗಳಲ್ಲಿ ಕ್ವಿಟ್ ಮಾಡುವುದು ಸೋಲಿನ ಸಂಕೇತವಲ್ಲ, ಬದಲಾಗಿ ಯಶಸ್ವಿಗೆ ರಹದಾರಿಯಾಗುತ್ತದೆ ಎಂದು ಆಕೆ ಹೇಳುತ್ತಾಳೆ.

 ನೋಡಿದಿರಾ ಸ್ನೇಹಿತರೆ, ನಿರಂತರ ಪ್ರಯತ್ನ ಯಶಸ್ಸಿನತ್ತ ನಮ್ಮನ್ನು ಕೊಂಡೊಯ್ಯಬಹುದು ನಿಜ ಆದರೆ ಎಷ್ಟೋ ಬಾರಿ ಕ್ವಿಟ್ ಮಾಡುವುದು ಕೂಡ ನಮ್ಮ ಮನೋ ದೈಹಿಕ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗಬಲ್ಲದು.
 ಆಯ್ಕೆ ನಮ್ಮದು ಮತ್ತು ನಿರ್ಧಾರಗಳು ಕೂಡ.


Leave a Reply

Back To Top