ಫಾಲ್ಗುಣ ಗೌಡ ಅಚವೆ
ಮತ್ತೆ ಅದೇ ಏಕಾಂಗಿತನ
ಮರಿ ಮಾಡುತ್ತಲೇ ಇದೆ
ಕಾವು ಕೊಡದಿದ್ದರೂ
ಮೊನ್ನೆ ನಡೆದ ಅಸಂಗತ ನಾಟಕದ
ನಾಯಕ ಅವನ ಪಾತ್ರದಲ್ಲಿಯೇ
ನೆಲೆಗೊಂಡಂತಿದೆ ಇನ್ನೂ
ಧಾವಂತಗಳ ದಾಟದೇ
ದಗದಿ ದಳ್ಳುರಿಯ ಎದುರಿಸಲಾಗದೇ
ಹೊಸ ಹುಡುಕಾಟಗಳ ಲೆಕ್ಕಿಸದೇ
ತಡಕಾಡಿಸುತ್ತಲೇ ಇದೆ
ಚುಕ್ತಾ ಮಾಡಲಾಗದ
ಬಡತನದ ಕನಸುಗಾರಿಕೆ
ಇಲ್ಲಿಯೇ ಇದ್ದು ಅಲ್ಲಿ ಹೊರಟಂತೆ
ದಾಪುಗಾಲಿಟ್ಟವರು
ಮನವಿ ಕೊಟ್ಟಂತಿದೆ
ಗೈರು ಹಾಜರಾದ ಕುರಿತು
ಸಾವು ಸಮನಿಸುವಂತ
ಸವಾಲುಗಳಿವೆ ಇನ್ನೂ
ಅಂಟಿಕೊಂಡಿವೆ ಅರವತ್ತರ
ನಂತರದ ಆಹ್ವಾನಗಳು
ಕಾಲದ ಹೆಜ್ಜೆಗಳಿಗೆ ಒಂದಷ್ಟು
ಬಣ್ಣ ಬಳಿದರೂ
ಹಿಂದೆ ಬಳಿದ ಸುಣ್ಣವೇ
ಇಣುಕುತ್ತಿದೆ ಅಲ್ಲಲ್ಲಿ
ಸಹಜ ನಿಯಮವೇ ಬದಲಾವಣೆ
ಸ್ತಬ್ಧಗೊಂಡಿದೆ ಹರಿವು
ನಿದ್ದೆಯ ಮಂಪರಿದೆ
ಅಲೆಯದ ಕಡಲಿಗೆ
ಹೊಸ ಅಲೆಯುಕ್ಕಿಸೋ
ಸುನಾಮಿ ಅದೆಲ್ಲಿದೆಯೋ?
ಆಧುನಿಕ ಅವಾಂತರಗಳು
ಮತ್ತೆ ಮತ್ತೆ ಆವರಿಸಿ
ಗುಂಗೆ ಹುಳವಾಗಿ ಗಿರಕಿ ಹೊಡೆದ
ನೂರೆಂಟು ನರಳಿಕೆಗಳು
ಜಗ್ಗಿದಂತೆನಿಸಿವೆ
ಅಚ್ಚರಿಯೆಂದರೆ
ಹೊರಟ ಹೈದರಿಗೆ
ಇನ್ನೂ ಆಚೆ ದಡ
ನಿಲುಕಿಲ್ಲ!
**********
ದಡ…
ಕವಿತೆ ಆರಂಭ ಮತ್ತು ಕೊನೆಯಲ್ಲಿ ಒಂದು ಲಿಂಕ್ ಇದೆ. ಬದುಕಿನ ಅಸಂಗತತೆಯನ್ನು ಎಷ್ಟು ಚೆಂದ ಕಟ್ಟಿಕೊಟ್ಟಿದ್ದಾನೆ ಕವಿ ಪಾಲ್ಗುಣ….
ಹೌದು.ಈ ಬದುಕು ಅಸಂಗತವಾದುದು. ನನ್ನ ಕಾಡಿದ ಸಾಹಿತಿಗಳಲ್ಲಿ ಕಾಫ್ಕ ಮತ್ತು ಅಲ್ಬರ್ಟ ಕಾಮ್ಯೂ ಪ್ರಮುಖರು. ಅನ್ಯ – ಕಾದಂಬರಿ ( ಔಟ್ ಸೈಡರ್,ಕಾಲಿಗುಲಾ, ಮಿಸ್ಸಿಂಗ್ ಲಿಂಕ್- ) ತಪ್ಪಿದ ಎಳೆ ನಾಟಕ ಪ್ರಮುಖವಾದವು. ಬದುಕಿನ ಅಸಂಗತತೆ ಅಲ್ಲಿದೆ. ಇವತ್ತು ಪರಿಸ್ಥಿತಿ ಹಾಗೆ ಇದೆ.ಕರೋನಾದ ಅಸಂಗತ ಕಾಲ. ಅಧಿಕಾರಶಾಹಿ, ಆಡಳಿತ ಶಾಹಿ ಅಸಂಗತವಾಗಿವೆ.
ಬದುಕು ಸಹ… ದಡ ಅರಸಿ ಹೊರಟ ಹುಡುಗರ ಏಕಾಂಗಿಯಾಗಿದ್ದಾರೆ. ಕಾವು ಕೊಡದಿದ್ದರೂ ಮರಿಮಾಡುವ ಏಕಾಂಗಿತನ ಎಂಬುದು ಬದುಕಿನ ಅಸಂಗವನ್ನೇ ಹೇಳುವುದಾಗಿದೆ. ಅರವತ್ತರ ನಂತರ ಅಹ್ವಾನಗಳು ಅಂಟಿಕೊಂಡಿರುವುದು, ಆಧುನಿಕ ಅವಾಅವಾಂತರಗಳು ಗುಂಗಿಹುಳದ ತರಹ ಕಾಡುವುದು, ಹುಡುಗರಿಗೆ ಆಚೆ ದಡ ಸಿಗದಿರುವುದು…ಎಲ್ಲವೂ ಅಸಂಗತ ಬದುಕಿನ ವಿಚಿತ್ರ ಕಾಂಬಿನೇಷನ್ ಈ ಕವಿತೆಯಲ್ಲಿದೆ….
ಹಿಂದೆ ಬಳಿದ ಸುಣ್ಣವೇ
ಇಣುಕುತ್ತಿದೆ ಅಲ್ಲಲ್ಲಿ
ಎಷ್ಟೋ ನೋವು ಕಾಡಿದ ನಿದಿರೆಯಲಿ ಕನಸು ಕಂಡ ಕಂಗಳಿಗೆ ಬದುಕನ್ನು ಹಸನಾಗಿವ ಆಸೆ ಕಾಡುವುದು ಸಹಜ.ಆದರೆ ಆ ಪ್ರಯತ್ನದಲಿ ಸೋಲು ಬೆನ್ನ ಹಿಂದಿರುವಾಗ ಏನು ತಾನೆ ಮಾಡಲು ಸಾಧ್ಯ. ಮೇಲಿನ ಈ ಸಾಲುಗಳು ತುಂಬ ಮಾರ್ಮಿಕವಾದ ಅದ್ಭುತ ಅನುಭವ ನೀಡುವ ಸಾಲುಗಳಾಗಿವೆ.ಫಾಲ್ಗುಣ ಗೌಡರ ಕವಿತೆಯೇ ಒಂದು ತರ.ಅವು ತನ್ನದೇ ಆದ ಸೋಜಿಗದ ಜೊತೆಗೆ ಬದುಕಿನ ಪಾಠ ಹೇಳಲು ಹವಣಿಸುತ್ತವೆ
ಗೆಳೆಯ ಫಾಲ್ಗುಣ ಗೌಡರ ಕವಿತೆ ‘ ದಡ ‘ ಬದುಕಿನ ಜಡತ್ವ , ಅದರ ಏಕತಾನತೆ ಮತ್ತು ವ್ಯವಸ್ಥೆಯ ಒಳ ಹೂರಣಗಳನ್ನು ಅನಾವರಣ ಗೊಳಿಸುತ್ತದೆ. ಓದುಗನಿಗೆ ಅವನದೇ ಆದ ದ್ರಷ್ಟಿಕೋನದ ಅರ್ಥಗಳನ್ನು ಅನಾವರಣಗೊಳಿಸುವ ಒಂದುರೀತಿಯ ಅಂತರ್ಮುಖಿ ಕವಿತೆಯಾಗಿದೆ.
ಪ್ರತಿಕ್ರಿಯೆ ನೀಡಿದ ಎಲ್ಲಾ ಗೆಳೆಯರಿಗೆ ಧನ್ಯವಾದಗಳು. ಇದು 2012 ರಲ್ಲಿ ಬರೆದ ಪದ್ಯ.ಈಗಲೂ ಪ್ರಸ್ತುತ ಆಗಿರುವುದಕ್ಕೆ ಖುಷಿಯಾಯ್ತು.
ಎಲ್ಲಾ ಕಾಲಕ್ಕು ಪ್ರಸ್ತುತ ಆಗುವುದೇ ಕವಿತೆಯ ಹೆಗ್ಗಳಿಕೆಗೆ ಆಗಬೇಕು.
ಪ್ರಕಟಿಸಿದ ಪ್ರೀತಿಯ ” ಸಂಗಾತಿ ” ಗೆ ಧನ್ಯವಾದಗಳು
ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಿಸುವುದೇ ಕವಿತೆ
“ದಡ” ಎಂದಾಕ್ಷಣ ಎರಡು ತೀರಗಳು ಇದೆಯೆಂಬುದಂತೂ ಸತ್ಯ. ಹರಿವ ತೊರೆ ನದಿಗಳಿಗೂ ಎರಡು ತೀರ ಹಾಗೆ ಸಮುದ್ರಕ್ಕೂ… ಮತ್ತು ಬಾಳಿಗೂ…
ಒಂದು ಈಚೆ ಇನ್ನೊಂದು ಆಚೆ. ಈಚೆ ದಡದಿಂದ ಆಚೆ ದಡಕ್ಕೆ ಸಾಗುವ ಯಾನ ಬಾಳಿನುದ್ದಕ್ಕೂ ನಿರಂತರ ನಡೆಯುತ್ತಲೇ ಇರುತ್ತದೆ. ಈಚೆ ದಡ ಹುಟ್ಟು, ಬದುಕಿನ ಆರಂಭವಾಗಿದ್ದರೆ ಆಚೆ ದಡ ಸಾರ್ಥಕ ಬದುಕಿನ ಸಾನಿಧ್ಯವೂ ಅಥವಾ ಪರಿಪೂರ್ಣತೆಯ ಹುಡುಕಾಟದ ಕೊನೆಯೋ ಆಗಬಹುದಾದದ್ದು.
“ದಡ” ಎಂಬುದು ಬದುಕಿನ ನೆಲೆ, ಆ ನೆಲೆಯ ಬೆನ್ನತ್ತಿ ಓಡುವ ಕನಸುಗಳ ಜೂಟಾಟ…
“ದಡ” ಸಿಕ್ಕುವವರೆಗೂ ಕಾಡುವ ಏಕಾಂಗಿತನವನ್ನು ತೊರೆದು ಬದಲಾವಣೆಯ ಮನ್ವಂತರದೆಡೆಗೆ ಓಡುವ ಜೀವನ್ಮುಖಿ ಸೆಲೆಯಾಗಲಿ ಕಾವಿಲ್ಲದೇ ಮರಿಯಾದ ಏಕಾಂಗಿತನ…