‘ಸಾಂಸ್ಕೃತಿಕ ಪ್ರಜ್ಞೆಯ ಹರಿಕಾರ ಗಣೇಶ’-ವೀಣಾ ಹೇಮಂತಗೌಡ ಪಾಟೀಲ

ಅದು ಹತ್ತೊಂಭತ್ತನೇ ಶತಮಾನದ ಆದಿಭಾಗ.ಸ್ವತಂತ್ರ ಚಳುವಳಿಯ ಅತ್ಯಂತ ತುರುಸಿನ ಕಾಲ ಅದಾಗಿತ್ತು. ಬ್ರಿಟಿಷ್ ಆಡಳಿತದ ಅಂದಿನ ದಿನಗಳಲ್ಲಿ ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಳ್ಳುವ ಎಲ್ಲ ಸೇನಾನಿಗಳ ಮೇಲೆ ಹದ್ದಿನ ಕಣ್ಣಿಡಲಾಗಿತ್ತು. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಸೇನಾನಿಗಳು ಒಬ್ಬರಿಗೊಬ್ಬರು ಸಂದೇಶಗಳನ್ನು ರವಾನಿಸುವುದು, ಗುಪ್ತ ಕಾರ್ಯ ಚಟುವಟಿಕೆಗಳನ್ನು ನಡೆಸುವುದು ಕಷ್ಟಕರವಾಗತೊಡಗಿತ್ತು. ಆಗ ‘ಲೋಕಮಾನ್ಯ’ ಎಂದು ಬಿರುದಾಂಕಿತರಾಗಿದ್ದ ಬಾಲಗಂಗಾಧರ ತಿಲಕರು  ಇಡೀ ಮಹಾರಾಷ್ಟ್ರದ ಪ್ರಾಂತ್ಯದಲ್ಲಿ ಅತ್ಯಂತ ವಿಜೃಂಭಣೆಯ ಸಾರ್ವಜನಿಕ ಗಣೇಶೋತ್ಸವವನ್ನು ೧೮೯೩ರಲ್ಲಿ  ಮೊತ್ತಮೊದಲ ಬಾರಿಗೆ  ಆರಂಭಿಸಿದ್ದರು. ಹೊರಗೆ ಭರ್ಜರಿಯಾಗಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಪೂಜೆ-ಪುನಸ್ಕಾರಗಳನ್ನು ಅರ್ಚನೆ-ಭಜನೆಗಳನ್ನು ಮಾಡುತ್ತಾ ಒಳಗೆ ಸ್ವತಂತ್ರ ಭಾರತದ ಕನಸಿನ ಸಾಕಾರಕ್ಕಾಗಿ ಚಳುವಳಿಗಳನ್ನು ಮಾಡಲು, ವಿವಿಧ ರೀತಿಯ ಅವಕಾಶಗಳ ಕುರಿತು ಚರ್ಚೆ, ವಾದ, ಚಳುವಳಿಯ ಸ್ವರೂಪ ಮತ್ತು ರೂಪುರೇಷೆಗಳು  ಮತ್ತು ಪ್ರಣಾಳಿಕೆಗಳು ತಯಾರಾಗುತ್ತಿದ್ದವು.ಗಣೇಶ ಹಬ್ಬದ ಪೆಂಡಾಲ್ ಗಳು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ವೀರರು ಗುಪ್ತವಾಗಿ ಭೇಟಿಯಾಗುವ ತಾಣಗಳಾಗಿದ್ದವು. ಈ ವಿಷಯದಲ್ಲಿ ಬ್ರಿಟಿಷರು ಅಸಹಾಯಕರಾಗಲು ಕಾರಣ ಭಾರತೀಯರ ಧಾರ್ಮಿಕ ಶ್ರದ್ಧೆ … ನಮ್ಮ ಧಾರ್ಮಿಕ ಶ್ರದ್ಧೆಯೊ೦ದನ್ನೇ ಬಂಡವಾಳವಾಗಿಸಿಕೊಂಡು  ಅತ್ಯಂತ ದೊಡ್ಡ ಪ್ರಮಾಣದ ಬ್ರಿಟೀಷ್ ಸತ್ತೆಯನ್ನು ಮುಳುಗಿಸಲು ನಮಗೆ ಸಹಾಯಕವಾಗಿದ್ದು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಗಣಪ.

 ಗಣೇಶ ಚತುರ್ಥಿ ಹಬ್ಬವು ಮಕ್ಕಳಾದಿಯಾಗಿ ಮುದುಕರವರೆಗೆ ಎಲ್ಲರಿಗೂ ಅಚ್ಚುಮೆಚ್ಚಿನ ಹಬ್ಬ .ಮಕ್ಕಳಿಗೆ ಗಣೇಶನ ಜೊತೆ ಅದೇನೋ ಅವಿನಾಭಾವ ಸಂಬಂಧ. ಗಣೇಶನನ್ನು ತಮ್ಮಂತೆಯೇ ಮಗು ಎಂದು ಕಲ್ಪಿಸಿಕೊಳ್ಳುವ ಮಕ್ಕಳು ಗಣೇಶನ ಕುರಿತ ಹಲವಾರು ಕತೆಗಳನ್ನು  ಇಷ್ಟಪಟ್ಟು ಕೇಳುತ್ತಾರೆ . ಇತ್ತೀಚೆಗಂತೂ ಕಾರ್ಟೂನುಗಳಲ್ಲಿ ಕೂಡ ಗಣೇಶನ ಚಿತ್ರಗಳು ಬಂದು ಮಕ್ಕಳೇ ಹಿರಿಯರಿಗೆ ಗಣೇಶನ ಕುರಿತು ಹೇಳುವಷ್ಟು ವಿಷಯ ಸಂಗ್ರಹ ಅವರಲ್ಲಿದೆ.  

ಜನಜನಿತವಾಗಿರುವ ಐತಿಹ್ಯದ ಪ್ರಕಾರ,
ಪಾರ್ವತೀದೇವಿ ಒಂದು ಬಾರಿ ಸ್ನಾನಕ್ಕೆ ಹೋಗುವಾಗ  ಆಕೆ ತನ್ನ ಮೈಗೆ ಹಚ್ಚಿದ ಅರಿಶಿನ ಮತ್ತು ಗಂಧ ಮಿಶ್ರಿತ ಲೇಪವನ್ನು ಮರಳಿ ಬಳಿದು ಇಡುವಾಗ ಅದಕ್ಕೆ ಒಂದು ವಿಗ್ರಹದ ರೂಪವನ್ನು ಕೊಟ್ಟಳು.ಅರಿಶಿಣ ಮತ್ತು ಗಂಧದ ಬಣ್ಣವೆಂದರೆ ಯಾರು  ಮರುಳಾಗಲಾರರು?? ದೇವಿಯೂ ಅಷ್ಟೆ!! ಅತ್ಯಂತ ಮನಮೋಹಕವಾಗಿ ಕಾಣುತ್ತಿದ್ದ ಆ ವಿಗ್ರಹಕ್ಕೆ ಪಾರ್ವತಿದೇವಿ ಜೀವಕಳೆಯನ್ನು ತುಂಬಿದಳು.ಅಮ್ಮಾ ಎಂದು ಆ ಮಗು ಆಕೆಯನ್ನು ಬರಸೆಳೆದು ಅಪ್ಪಿದಾಗ ಆಕೆ ಆನಂದತುಂದಿಲಳಾದಳು. ಮಗುವನ್ನು ಅಪ್ಪಿ ಮುದ್ದಾಡಿದ ಆಕೆ ತಾನು ಸ್ನಾನ ಮಾಡಿ ಬರುವವರೆಗೂ ಬಾಗಿಲಲ್ಲಿ ಕಾಯುತ್ತಾ ಕುಳಿತಿರು,ಯಾರನ್ನೂ ಒಳಗೆ ಬಿಡಬೇಡ  ಎಂದು ಮಗುವಿಗೆ ತಾಕೀತು ಮಾಡಿ  ತಾನು ಸ್ನಾನಕ್ಕೆ ತೆರಳಿದಳು. ತಾಯಿಯ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ಮಗು ಮನೆಯ ಬಾಗಿಲಲ್ಲಿ ಕುಳಿತುಕೊಂಡಿತು.

ಜಗತ್ಸಂಚಾರಿ ಶಿವ, ಪಾರ್ವತಿಯ ಪತಿ ಮಹಾದೇವ ಅದೇ ಕಾಲಕ್ಕೆ ತನ್ನ ಕೆಲಸ-ಕಾರ್ಯ ಮುಗಿಸಿ ಮನೆಗೆ ಮರಳಿದ.ಮನೆಯ ಒಳಗೆ ಹೋಗಬೇಕೆಂದರೆ ಈ ಮಗು ಆತನನ್ನು ಮನೆಯೊಳಗೆ ಬಿಡಲಿಲ್ಲ. ಮಗುವನ್ನು ಕಂಡು ಆಶ್ಚರ್ಯಗೊಂಡ ಶಿವ ಮಗುವಿಗೆ ಪರಿಪರಿಯಾಗಿ ತಾನು ಪಾರ್ವತಿ ದೇವಿಯ ಪತಿ ಎಂದು ಹೇಳಿದರೂ ಮಗು ತನ್ನ ತಾಯಿಯ ಮಾತನ್ನು ಮೀರಿ ಆತನನ್ನು ಮನೆಯೊಳಗೆ ಬಿಟ್ಟುಕೊಳ್ಳಲು ಒಪ್ಪಲಿಲ್ಲ. ಹಲವು ವಿಧಗಳಲ್ಲಿ ತಿಳಿಸಿ ಹೇಳಿದರೂ ಕೇಳದ ಮಗುವಿನ ಮೇಲೆ ಕುಪಿತನಾದ ಶಿವನು ತನ್ನ ತ್ರಿಶೂಲದಿಂದ ಆ ಮಗುವಿನ ರುಂಡವನ್ನು  ಮುಂಡದಿಂದ ಬೇರ್ಪಡಿಸಿದ.

ಸ್ನಾನ ಮುಗಿಸಿ ಬಂದ ಶಿವೆಯು ತನ್ನ ಪುತ್ರನಿಗಾದ ಆಘಾತವನ್ನು ನೋಡಿ ಅಳುತ್ತಾ “ಇದೇನು ಮಾಡಿಬಿಟ್ಟಿರಿ?” ಎಂದು ಪತಿಯನ್ನು ಪೀಡಿಸಿ” ಆತನ ದೇಹದಲ್ಲಿ ಮತ್ತೆ ಪ್ರಾಣಪ್ರತಿಷ್ಠೆ ಮಾಡಿ ನನ್ನ ಮಗನನ್ನು ನನಗೆ ಮರಳಿಸಿ ಕೊಡಿ” ಎಂದು ಕೇಳಿಕೊಂಡಳು.

ಪತ್ನಿಯನ್ನು ಸಮಾಧಾನಪಡಿಸಿದ ಶಿವ ತನ್ನ ದೂತರನ್ನು ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿರುವ ಯಾವುದಾದರೂ ವ್ಯಕ್ತಿಯ, ಪ್ರಾಣಿಯ ಮುಖವನ್ನು ತಂದುಕೊಡಲು ಆಜ್ಞಾಪಿಸಿದ. ಆದರೆ ಉತ್ತರಕ್ಕೆ ಮುಖಮಾಡಿದ ಯಾವೊಂದು ವ್ಯಕ್ತಿಯ (ಶವ) ಮುಖವು ಸಿಗದೇ ಇದ್ದಾಗ ಶಿವಗಣಗಳು ಉತ್ತರ ದಿಕ್ಕಿನಲ್ಲಿ ಮುಖ ಮಾಡಿ ಸಾವನ್ನಪ್ಪಿದ  ಗಜವೊಂದರ ಕುತ್ತಿಗೆಯನ್ನು ತಂದರು.ಅನಿವಾರ್ಯವಾಗಿ ಆ ಆನೆಯ ಮುಖವನ್ನು ಮಗುವಿನ ದೇಹಕ್ಕೆ ಅಂಟಿಸಿದ ಶಿವನು ಆ ದೇಹಕ್ಕೆ ಪ್ರಾಣ ಪ್ರತಿಷ್ಠೆ ಮಾಡಿದನು.ಹೀಗೆ ಗಣಪತಿಯು ಗಜಾನನನಾಗಿ, ಗಜಮುಖನಾಗಿ, ಶಿವ ಪಾರ್ವತಿಯರ ಮಾನಸ ಪುತ್ರನಾಗಿ  ಹೊರಹೊಮ್ಮಿದ. ಶಿವನು ಎಲ್ಲ ಪೂಜೆಗಳಿಗೂ ಮುಂಚೆ ವಿಘ್ನನಿವಾರಕನಾಗಿ ಗಣೇಶನ ಪೂಜೆಯನ್ನು ಮಾಡಬೇಕೆಂದು ಆಜ್ಞಾಪಿಸಿದ. ಹೀಗೆ ಗಣೇಶ ಜನಿಸಿದ ಎಂಬ ಐತಿಹ್ಯವನ್ನು ಸಾರುವ ದಿನವೇ ಭಾದ್ರಪದ ಚೌತಿಯ ದಿನ.ಅಂದು ಮನೆಮನೆಗಳಲ್ಲಿ ಸಾರಿಸಿ, ಗುಡಿಸಿ, ರಂಗೋಲಿ ಹಾಕಿ ಅಲಂಕರಿಸಿ ಗಣಪತಿಯ ವಿಗ್ರಹವನ್ನು  ಮನೆಗೆ ತರುತ್ತಾರೆ. ಹಲವಿಧದ ಹೂವು ಪುಷ್ಪಗಳಿಂದ ಗರಿಕೆಗಳಿಂದ ಆತನನ್ನು ಪೂಜಿಸಿ ಪಂಚಕಜ್ಜಾಯ ಮೋದಕ ಕರಿಗಡಬು ನೈವೇದ್ಯ ಮಾಡುತ್ತಾರೆ.

ಬಾಲಕ ಗಣೇಶನ ನೂರಾರು ಕತೆಗಳು ಜನಜನಿತವಾಗಿವೆ.ಶಿವ ಪಾರ್ವತಿಯರು ಗಣೇಶ ಮತ್ತು ಆತನ ಸಹೋದರ ಸುಬ್ರಹ್ಮಣ್ಯ ಇಬ್ಬರಿಗೂ  ಜಗತ್ತನ್ನು ಸುತ್ತಿ ಬರಲು ಕೇಳಿಕೊಂಡಾಗ ತನ್ನ ತಂದೆ ತಾಯಿಯ ಸುತ್ತಲೂ ಸುತ್ತಿ ಅವರೇ ಮೂರು ಲೋಕ ಎಂದು ಹೇಳಿದ ಜಾಣ ಗಣೇಶ.

 ಗಣೇಶ  ಎಂದೊಡನೆ ಕಣ್ಣಮುಂದೆ ಬರುವುದು ಡೊಳ್ಳುಹೊಟ್ಟೆ, ಆನೆಯ ಮುಖ,ಉದ್ದನೆಯ ಸೊಂಡಿಲು, ಮೊರದಗಲದ ಕಿವಿ, ಹೊಟ್ಟೆಗೆ ಸುತ್ತಿರುವ ಹಾವು ಮುಂದೆ ಕುಳಿತಿರುವ ಮೂಷಿಕ. ಆದರೆ ಈ ಗಣೇಶನ ದೊಡ್ಡ ಮುಖ  ಜ್ಞಾನ, ಅರಿವು ಮತ್ತು ಜಾಣ್ಮೆಯಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದರ ಸಂಕೇತ. ಗಣೇಶನ ಡೊಳ್ಳುಹೊಟ್ಟೆ ಇಡೀ ಬ್ರಹ್ಮಾಂಡದ  ಸಂಕೇತ. ಸಾಮಾನ್ಯವಾಗಿ ಆನೆಗಳು ನಡೆದಾಡುವ ರಸ್ತೆಗಳು ಬೇರೆಯವರಿಗೆ ದಾರಿ ಯಾಗುತ್ತವೆ.ಆನೆಗಳು ನಡೆದಾಡಿದ ಹಾದಿಯಲ್ಲಿ ಇನ್ನುಳಿದ ಪ್ರಾಣಿಗಳು ಹಿಂಬಾಲಿಸುತ್ತವೆ ಆದ್ದರಿಂದಲೇ ಎಲ್ಲ ದೇವರನ್ನು ಪೂಜಿಸುವ ಮೊದಲು ವಿಘ್ನನಿವಾರಕ ವಿಘ್ನೇಶ್ವರನ ಪೂಜೆ ಕಡ್ಡಾಯ.

ಗಣೇಶನ ಡೊಳ್ಳುಹೊಟ್ಟೆ ಜೀವನದಲ್ಲಿ ಹೊಂದಾಣಿಕೆ ಮತ್ತು ದಕ್ಷತೆಯ ಗುಣಗಳನ್ನು ಅಳವಡಿಸಿಕೊಂಡು  ನಿಪುಣರಾಗಬೇಕು ಎಂಬ ಸಂದೇಶವನ್ನು ನೀಡುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಜೀವನದ ಯಾವುದೇ ಸಂದರ್ಭಗಳಿಗೂ ತಯಾರಾಗಿರಬೇಕು ಗಣೇಶನ 2ದಂತಗಳು ಮಾನವನ ವ್ಯಕ್ತಿತ್ವದಲ್ಲಿರುವ ಬುದ್ಧಿವಂತಿಕೆ ಮತ್ತು ಭಾವನಾತ್ಮಕ ಅಂಶಗಳನ್ನು ಸೂಚಿಸುತ್ತವೆ ಬಲ ದಂತವು ಬುದ್ಧಿವಂತಿಕೆಯನ್ನು ಪ್ರತಿನಿಧಿಸಿದರೆ ಮುರಿದ ಎಡ ದಂತವು ಭಾವನೆಯನ್ನು ಪ್ರತಿನಿಧಿಸುತ್ತದೆ.ಇಲ್ಲಿಯೂ ಕೂಡ ನಮಗೆ ಬುದ್ದಿವಂತಿಕೆಯಿಂದ ಭಾವನೆಗಳನ್ನು ಜಯಿಸಬೇಕು ಬುದ್ಧಿಯ ಕೈಯಲ್ಲಿ ಭಾವನೆಗಳಿರಬೇಕು ಎಂಬ ಸಂದೇಶವನ್ನು ಗಣೇಶನ ದಂತಗಳು ನೀಡುತ್ತವೆ. ಗಣೇಶನ ಪುಟ್ಟ ಪುಟ್ಟ ಕಣ್ಣುಗಳು ವಸ್ತುಗಳು ನಿಜವಾಗಿ ಇರುವುದಕ್ಕಿಂತ ದೊಡ್ಡವಾಗಿವೆ ಎಂಬುದನ್ನು ಗ್ರಹಿಸಲು ಅನುವು ಮಾಡಿಕೊಡುತ್ತವೆ ಹೇಗೆ ಒಬ್ಬರು ವಿನಯವಂತರಾಗಿ  ನಮ್ರವಾಗಿ ಇರಬೇಕು ಎಂಬುದನ್ನು ಅದು ಸೂಚಿಸುತ್ತದೆ. ಗಣೇಶನ ಮೊರದಗಲದ ಕಿವಿಗಳ ನಾವು ನೋಡುವದಕ್ಕಿಂತ ಹೆಚ್ಚಿನದನ್ನು ಕಿವಿಯಿಂದ ಕೇಳಬೇಕು ಎಂಬುದನ್ನು ಸೂಚಿಸುತ್ತವೆ.

ಮತ್ಸ್ಯಪುರಾಣದಲ್ಲಿ ಕ್ರೌಂಚ ಎಂಬ ಸಂಗೀತಗಾರನೋರ್ವ ವಾಮದೇವ ಎಂಬ ಮುನಿಯ ಮೇಲೆ ಗೊತ್ತಿಲ್ಲದೆ ತುಳಿದುದರ  ಪರಿಣಾಮವಾಗಿ ಆತನನ್ನು ವಾಮದೇವ ಮುನಿಯು  ಇಲಿಯಾಗಿ ಹೋಗೆಂದು ಶಪಿಸಿದ.ಇಲಿಯೇ ಗಣೇಶನ ವಾಹನವಾಯಿತು. ಗಣೇಶ ಗರಿಕೆ ಪ್ರಿಯ.ಅಂತೆಯೇ ಎಕ್ಕೆಯ ಎಲೆ, ಹೂಗಳು ಕೂಡ ಗಣೇಶನಿಗೆ ಅತ್ಯಂತ ಪ್ರಿಯವಾದದ್ದು. ಅಂತೆಯೇ ಹಳದಿ ಹೂವುಗಳು ಕೂಡ.ಮೋದಕ ಕರಿಗಡಬು,ಫಲಾಹಾರಗಳು,ರಸಾಯನಗಳು ಕೂಡ ಗಣೇಶನ ಪ್ರಿಯವಾದ ಭಕ್ಷ್ಯ ಭೋಜ್ಯಗಳು.

 ಐತಿಹ್ಯಗಳ ಪ್ರಕಾರ ಗಣೇಶ ಮಹಾಭಾರತದ ಕರ್ತೃ.ಮಹರ್ಷಿ ವೇದವ್ಯಾಸರು ಮಹಾಭಾರತದ ಕಥೆಯನ್ನು ಹೇಳುತ್ತಾ ಹೋದಂತೆ ಗಣೇಶನು ಬರೆಯುತ್ತ ಹೋದನು.ಮಹರ್ಷಿ ವೇದವ್ಯಾಸರು ಕಣ್ಣುಮುಚ್ಚಿ ಹೇಳುತ್ತಿರುವಾಗ ಗಣೇಶನ ಕೈಯಲ್ಲಿದ್ದ ಬರೆಯುವ ಓಲೆಗರಿಯು ಮುರಿದುಹೋಯಿತು. ಅವರು ಹೇಳುತ್ತಿರುವ ಓಘವನ್ನು ತಡೆಯಬಾರದೆಂಬ ಉದ್ದೇಶದಿಂದ ಗಣೇಶ ತನ್ನದೇ  ಎಡ ದಂತವೊಂದನ್ನು ಮುರಿದು ತನ್ನ ಬರವಣಿಗೆಗೆ ಬಳಸಿದ,ಅದಕ್ಕಾಗಿಯೇ ಆತನನ್ನ ವಕ್ರತುಂಡ, ಏಕದಂತ ಎಂದು ಕರೆಯುತ್ತಾರೆ.

“ವಕ್ರತುಂಡ ಮಹಾಕಾಯ ಸೂರ್ಯಕೋಟಿ(ಕೋಟಿ ಸೂರ್ಯ ) ಸಮಪ್ರಭ, ನಿರ್ವಿಘ್ನಂ ಕುರುಮೇ ದೇವ
ಸರ್ವಕಾರ್ಯೇಷು ಸರ್ವದ”
 ಎಂದು ಪೂಜಿಸುತ್ತಾರೆ.

   “ಗಜಾನನಂ ಭೂತಗಣಾಧಿ ಸೇವಿತಂ
    ಕಪಿತ್ಥ ಜಂಬೂಫಲಸಾರ ಭಕ್ಷಿತಂ
    ಉಮಾಸುತಂ ಶೋಕವಿನಾಶ ಕಾರಣಂ                    
    ನಮಾಮಿ  ವಿಘ್ನೇಶ್ವರ ಪಾದ ಪಂಕಜಂ “
   ಎಂದು ಭಜಿಸುತ್ತಾರೆ.

ಸಕಲ ಕಾರ್ಯಕ್ಕೂ ಗಣೇಶನೇ ಮೊತ್ತಮೊದಲ ಪೂಜೆಯನ್ನು ಸ್ವೀಕರಿಸುವ ದೇವತೆ.ನಾವು ಮಾಡುವ ಎಲ್ಲ ಕಾರ್ಯಗಳಲ್ಲಿಯೂ ವಿಘ್ನನಿವಾರಕನಾಗಿ, ಯಶಸ್ಸಿನ ದಾತನಾಗಿ, ವಿದ್ಯಾದಾತನಾಗಿ ನಮ್ಮನ್ನು ಸದಾಕಾಲ ಸಲಹುವ ದೇವತೆ ಗಣೇಶ .ಅಂತೆಯೇ ಈತನನ್ನು ಲಂಬೋದರ, ಲಕುಮಿಕರಾ, ಅಂಬಾಸುತ, ವಿನಾಯಕ, ಗಜವದನ, ಗಜಾನನ,ಗಣೇಶ ಎಂದು ಹಲವಾರು ನಾಮಗಳಿಂದ ಕರೆಯುತ್ತಾರೆ .

ಜನಪದರ ದೃಷ್ಟಿಯಲ್ಲಿ ಗಣೇಶ …ಶಿವ ಪಾರ್ವತಿಯರ ಮಾನಸ ಪುತ್ರ ಗಣೇಶ  ಗೌರಿ ದೇವಿಯು ತನ್ನ ತವರುಮನೆಯಾದ ಭೂಮಿಯನ್ನು ನೆನೆಸಿ ಶ್ರಾವಣ ಮಾಸದಲ್ಲಿ ಭೂಲೋಕಕ್ಕೆ ಬರುತ್ತಾಳೆ.ತವರಿಗೆ ಬಂದ  ಗೌರಿದೇವಿಯನ್ನು ಭೂಮಿಯ ಜನರು  ಹೋಳಿಗೆ, ಪಾಯಸ ಭಕ್ಷ್ಯಭೋಜ್ಯಗಳಿಂದ ಸತ್ಕರಿಸುತ್ತಾ, ಮಂಗಳವಾರ, ಶುಕ್ರವಾರ ಪೂಜಿಸುತ್ತಾ, ಹುಣ್ಣಿಮೆಯ ದಿನದಂದು ಆಕೆಯ  ನೂಲನ್ನು ಧರಿಸುತ್ತಾ,ಸೀರೆ, ಕುಪ್ಪಸ, ಉಡಿಯ ಮುತ್ತೈದೆತನದ ಸಂಭ್ರಮದಲ್ಲಿ  ತೇಲಿಸುತ್ತಾರೆ. ಆಕೆಯು ತವರಿನ ಜನರ ವೈಭೋಗದಲ್ಲಿ ಮುಳುಗಿಹೋಗುತ್ತಾಳೆ. ಹೆಂಡತಿ ಇಲ್ಲದೆ ಕಾಲ ಕಳೆಯಲು ಆ ದೇವಾದಿದೇವ ಮಹಾದೇವನಿಗೂ ಅಸಾಧ್ಯ.ಬಣಗುಡುತ್ತಿರುವ ಕೈಲಾಸವನ್ನು ಮತ್ತೆ ಕಳೆ ಏರಿಸುವಂತೆ ಮಾಡುವ ಶಕ್ತಿಯಿರುವ ಪಾರ್ವತೀದೇವಿಯನ್ನು ಕರೆತರಲು ಶಿವ ತನ್ನ ಮಗ ಗಣೇಶನನ್ನು ಭೂಮಿಗೆ ಕಳುಹಿಸುತ್ತಾನೆ. ಹಾಗೆ ಬಂದ ಗಣೇಶನನ್ನು ಹಾಗೆಯೇ ಕಳುಹಿಸುವುದು ಹೇಗೆ ಸಾಧ್ಯ ತಾಯಿಯೊಂದಿಗೆ ಮಗನಿಗೂ ಕೂಡ ಪೂಜೆ ಪುನಸ್ಕಾರ ಭಕ್ಷ್ಯ ಭೋಜ್ಯಗಳ ನೈವೇದ್ಯ ಅದುವೇ ಗೌರಿ ಗಣೇಶ ಹಬ್ಬ .ಈ ಸಮಯದಲ್ಲಿ  ಮಹಿಳೆಯರಿಗೆ   ತವರಿನಿಂದ ಮುತ್ತೈದೆ  ಕಾಣಿಕೆಯಾಗಿ ಅರಿಶಿನ, ಕುಂಕುಮ,ಬಳೆಗಳು ಮತ್ತು ಬಾಗಿನದ ಉಡುಗೊರೆಗಳು ಕಾಣಿಕೆಯಾಗಿ ಸಿಗುತ್ತವೆ.ಗಂಡನ ಮನೆಯ ಚಿನ್ನ,ಬೆಳ್ಳಿ, ವಜ್ರದ ಒಡವೆಗಳು ಕೂಡ ಈ ತವರಿನ ಉಡುಗೊರೆಯ ಮುಂದೆ ತೃಣಸಮಾನವಾಗಿ ಕಾಣುತ್ತವೆ ಮಹಿಳೆಯರಿಗೆ. ಪ್ರತಿ ಹೆಣ್ಣು ಮಕ್ಕಳಿಗೂ ಅದೊಂದು ಭಾವನಾತ್ಮಕ ವಿಷಯ.

ಮುಂದೆ ಐದನೇ ದಿನ, ಏಳನೇ ದಿನ, ಒಂಭತ್ತನೇ ದಿನ, ಹನ್ನೊಂದನೇ ದಿನ, ತಿಂಗಳವರೆಗೆ ಗಣೇಶನ ಹಬ್ಬವನ್ನು ಆಚರಿಸಿ ನಂತರ ಪೂಜಿಸಿ ಗಣೇಶನನ್ನು ತಾಯಿ ಗೌರಿ ದೇವಿಯೊಂದಿಗೆ ಮೊಸರನ್ನದ ಬುತ್ತಿ ಕಟ್ಟಿ ಬೀಳ್ಕೊಡುತ್ತಾರೆ .ಹತ್ತಿರದ ಕೆರೆ, ಹಳ್ಳ ಹೊಳೆ, ಬಾವಿಗಳಲ್ಲಿ ಗಣಪತಿಯನ್ನು ಪೂಜಿಸಿ ವಿಸರ್ಜಿಸುತ್ತಾರೆ. ಹೀಗೆ ವಿಸರ್ಜಿಸುವಾಗ ಡೋಲು ತಮಟೆ,ಇತ್ತೀಚೆಗೆ ಬ್ಯಾಂಡ್  ಸೆಟ್ಟುಗಳ ನಿನಾದದೊಂದಿಗೆ ಗಣಪತಿಯನ್ನು ಭರ್ಜರಿಯಾಗಿ ಕಳುಹಿಸಿ ಕೊಡುತ್ತಾರೆ. ಸರಿಯಾಗಿ ಹನ್ನೊಂದು ದಿನಗಳು ಗಣೇಶನ ಹಬ್ಬದ ಸಮಯದಲ್ಲಿ ಪ್ರತಿ ಗಲ್ಲಿ ಗಲ್ಲಿಯೂ ಸಂಭ್ರಮ ಸಂತಸದಲ್ಲಿ ಓಲಾಡುತ್ತಿರುತ್ತದೆ. ಪ್ರತಿದಿನ ಸಂಜೆಯಾದರೆ ಪ್ರತಿಯೊಂದು ಮನೆಯ ಗಂಡು- ಹೆಣ್ಣು ಮಕ್ಕಳು ಎಲ್ಲರೂ ತಯಾರಾಗಿ ರೇಷ್ಮೆ ಸೀರೆ ಉಟ್ಟು,ವಿಧವಿಧದ ಬಟ್ಟೆ ತೊಟ್ಟು ಗಣೇಶನ ವಿವಿಧ ರೂಪಗಳನ್ನು ನೋಡಲು ಮನೆಮನೆಗೆ ಮತ್ತು ಪೆಂಡಾಲುಗಳಿಗೆ ಭೇಟಿ ಕೊಡುತ್ತಾರೆ.

ಇತ್ತೀಚೆಗಿನ ಹಲವು ವರ್ಷಗಳಿಂದ ಗಣೇಶ ಆಯಾ ವರ್ಷಗಳಲ್ಲಿ ಆಯಾ ಸಂದರ್ಭಗಳಿಗೆ ತಕ್ಕಂತೆ ವಿವಿಧ ವೇಷಭೂಷಣಧಾರಿಯಾಗಿ ಪೂಜಿಸಲ್ಪಡುತ್ತಾನೆ. ಅನೇಕ ಕಡೆ ಗಣೇಶನ ವಿವಿಧ ವರ್ಣರಂಜಿತ ಪುಟ್ಟ ನಾಟಕಗಳನ್ನು ಮಾಡುತ್ತಾರೆ .ಹಲವೆಡೆ  ನೃತ್ಯ,ಗಾನ ಮತ್ತು ವೇಷಭೂಷಣ ಸ್ಪರ್ಧೆಗಳು, ಅನ್ನದಾನದ ಪ್ರಕ್ರಿಯೆಗಳು ಕೂಡ ನಡೆಯುತ್ತವೆ.
ಹೀಗೆ ಗಣೇಶ ದೇವರಾಗಿಯೂ ಕೂಡ ನಮ್ಮೆಲ್ಲರ ಧಾರ್ಮಿಕತೆಯ,ಸಾಂಸ್ಕೃತಿಕತೆಯ, ಸಾಮಾಜಿಕತೆಯ, ಐತಿಹಾಸಿಕ ಪ್ರಜ್ಞೆಯ ಕೇಂದ್ರಬಿಂದುವಾಗಿದ್ದಾನೆ. ಆಬಾಲವೃದ್ಧರಾದಿಯಾಗಿ ಪೂಜಿಸುವ ಗಣೇಶ ನಮ್ಮಲ್ಲಿ  ಸಾಂಸ್ಕೃತಿಕ  ಪ್ರಜ್ಞೆಯನ್ನು ಮೂಡಿಸುವ ದಾತಾರನಾಗಿದ್ದಾನೆ.  

ಕೊನೆಯದಾಗಿ ಗಣೇಶನ ಪೂಜೆ ಮಾಡುವ ಭರದಲ್ಲಿ ಇತ್ತೀಚೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಅತ್ಯಂತ ದೊಡ್ಡ ಗಣೇಶ ವಿಗ್ರಹ ಗಳನ್ನು ಸ್ಥಾಪಿಸಲಾಗುತ್ತದೆ.ಈ ವಿಗ್ರಹಗಳು ಆಕರ್ಷಕವಾಗಿ ಕಾಣಲು ಹಲವು ವಿಧದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಜೊತೆಗೆ ಕಬ್ಬಿಣ ಮತ್ತು ಸಿಮೆಂಟ್ ಅನ್ನು  ಕೂಡಾ ಬಳಸಲಾಗುತ್ತದೆ. ಆದರೆ ಈ ರೀತಿ ತಯಾರಿಸಿದ  ಗಣೇಶ ವಿಗ್ರಹಗಳನ್ನು ವಿಸರ್ಜಿಸಿದಾಗ ಅವುಗಳು ಮುಳುಗಲೂ ಆಗದೆ, ಕರಗಲಾರದೆ , ಕೈ ಕಾಲು ಮುರಿದ ಸ್ಥಿತಿಯಲ್ಲಿ ಹಲವಾರು ದಿನಗಳ ಕಾಲ ನೀರಿನಲ್ಲಿಯೇ ಇರುವಂತಾಗುತ್ತದೆ. ಆ ಸಮಯದಲ್ಲಿ ಈ ವಿಗ್ರಹಗಳಿಗೆ ಲೇಪಿಸಿದ ಆಕರ್ಷಕ ಬಣ್ಣಗಳ ರಸಾಯನಿಕಗಳು ನೀರಿನಲ್ಲಿ ಕಲೆತು ಜಲಚರಗಳಿಗೆ ಹಾನಿಯನ್ನುಂಟು ಮಾಡುತ್ತವೆ.ನಾವೇ ಪೂಜಿಸಿದ ದೇವರನ್ನು, ಚಿಕ್ಕ ಪುಟ್ಟ ಮಕ್ಕಳು ತಮ್ಮ ಜೀವವನ್ನು ಪಣಕ್ಕಿಟ್ಟು ತೀರಗಳಿಗೆ ತಂದು ಒಡೆದು ಆ ವಿಗ್ರಹ ಗಳಲ್ಲಿರುವ ಅಲಂಕಾರಿಕ ಸಾಮಗ್ರಿಗಳನ್ನು ಕಿತ್ತು ತೆಗೆಯುತ್ತಾರೆ.ಇದರಿಂದಾಗಿ ವಿಗ್ರಹ ಕೈಕಾಲು, ಮುಖ, ಕೆಲವೊಮ್ಮೆ ಸೊಂಡಿಲು ಮುರಿದು ವಿಕಾರವಾಗಿ ಕಾಣುತ್ತದೆ. ಈ ರೀತಿ ಸಲ್ಲದು.ವಿಗ್ರಹಗಳ ಸೂಕ್ತ ವಿಲೇವಾರಿಯೂ ಅತ್ಯಂತ ಅಗತ್ಯವಾದ ಕಾರ್ಯಗಳಲ್ಲೊಂದು.ಜೊತೆಗೆ ಮಣ್ಣಿನಿಂದ ತಯಾರಿಸಿದ ಸುಲಭವಾಗಿ ನೀರಿನಲ್ಲಿ ಕರಗಿ ಹೋಗುವಂತಹ ವಿಗ್ರಹಗಳ ತಯಾರಿ ಉಪಯುಕ್ತವಾದುದು.ನಿಸರ್ಗ ಸಹಜ ಬಣ್ಣಗಳ ಬಳಕೆ ಶ್ಲಾಘನೀಯ. ಈ ನಿಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಕಾರ್ಯ ಸ್ತುತ್ಯಾರ್ಹ .ಇದು ಹೀಗೆಯೇ ಇನ್ನೂ ಮುಂದುವರಿಯಬೇಕು ಎಲ್ಲರೂ ಪರಿಸರ ಪ್ರೇಮಿ ಗಣೇಶ ವಿಗ್ರಹವನ್ನು ತಯಾರಿಸಿ ಪೂಜಿಸಬೇಕು.ಸ್ವಾತಂತ್ರ್ಯಪೂರ್ವದಲ್ಲಿ ಯಾವ ರೀತಿ ಗಣೇಶ ನಮ್ಮೆಲ್ಲರ ಪ್ರಜ್ಞೆಯ ಪ್ರೇರಕ ಶಕ್ತಿಯಾಗಿದ್ದನೋ ಆ ಶಕ್ತಿಗೆ ನಮಸ್ಕರಿಸುತ್ತ

 “ಬೆನಕ ಬೆನಕ ಏಕದಂತ
ವಕ್ರತುಂಡ  ಪಚ್ಚೆಕಲ್ಲು ಪಾಣಿಮೆಟ್ಲು
 ಒಪ್ಪವುಳ್ಳ ಗಣಪ ನಿನಗೆ ಇಪ್ಪತ್ತೊಂದು ನಮಸ್ಕಾರಗಳು “

ಗಣೇಶ ಚತುರ್ಥಿಯ ಈ ಹಬ್ಬ ನಮ್ಮೆಲ್ಲರ ಬಾಳಿನ ವಿಘ್ನಗಳನ್ನು ಕಳೆಯಲಿ ಎಂಬ ಆಶಯದೊಂದಿಗೆ

——————————–

One thought on “‘ಸಾಂಸ್ಕೃತಿಕ ಪ್ರಜ್ಞೆಯ ಹರಿಕಾರ ಗಣೇಶ’-ವೀಣಾ ಹೇಮಂತಗೌಡ ಪಾಟೀಲ

  1. ಸವಿವರಣೆಯ ಆಪ್ತ ಲೇಖನ, ವೈಚಾರಿಕ ಪ್ರಜ್ಞೆಯ ಭಾವನೆ ಮತ್ತು ಸಾಂಸ್ಕೃತಿಕ ಒಡನಾಡಿ ಲೇಖನ ಇಷ್ಟವಾಯಿತು

Leave a Reply

Back To Top