ಕಾವ್ಯ ಸಂಗಾತಿ
ಜಯಂತಿ ಸುನಿಲ್
ನಿನ್ನದೇ ನೆರಳ ಹಿಡಿದು
ಭ್ರಮೆಯ ಮೋಡದಿ ಕೂತು
ನನಸಾಗದ ಕನಸ ಜೋಪಾನ ಮಾಡುತ್ತಾ, ಮಾಡುತ್ತಾ
ಅದೆಷ್ಟು ಹಗಲುಗಳು ದಣಿದವು
ನನ್ನ ಕನಸಿನಲ್ಲಿ ನಿನ್ನ ಮುಖ
ನನ್ನದೇ ಉಸಿರಿನಲ್ಲಿ ಈಜುತ್ತಾ ಈಜುತ್ತಾ…
ಹೆಸರಿಲ್ಲದ ಊರ ದಡ ಮುಟ್ಟುತ್ತದೆ
ನನ್ನೊಳಗೆ ಹೊರಳಿ ನರಳಿಸುವ ನೋವು..
ಆ ಬೆಟ್ಟದ ತುದಿಯ ಬಿಂದಿಗೆಯ ಹೂ
ಎರಡೂ ಒಂದೇ ಇರಬೇಕು
ಸುಲಭವಾಗಿ ಯಾರಿಗೂ ದಕ್ಕುವುದಿಲ್ಲಾ..!!
ಒಡೆದ ಕನ್ನಡಿಯಲ್ಲಿ
ಹಾರಾಡುವ ಗಾಜಿನ ಚೂರುಗಳು
ಮಳೆಮೋಡವನ್ನು ಹಿಂಬಾಲಿಸುವ ಮಿಂಚುಗಳು ನಿನ್ನಲ್ಲಿಗೆ ಹಾರಿ ಬರಬಹುದು..
ಹಿಂತಿರುಗಿ ನೋಡಬೇಡ
ನಿನ್ನ ನಾಲಿಗೆಯಲಿ ನನ್ನೆಸರ ಜಪಿಸಲುಬೇಡ
ಕದ್ದು ಆಲಿಸಿದರೆ…?
ಗೋರಿಯ ಮೇಲೆ ಸೂರ್ಯ ಮೂಡುವುದಿಲ್ಲಾ..
ಗುಲ್ಮೊಹರ ಅರಳುವುದಿಲ್ಲಾ..!!
ಈ ಮೋಹಾನುರಾಗದ ಹಾಳೆಯ ಮೇಲೆ
ಕಣ್ಣಹನಿ ಮರಿ ಹಾಕುತ್ತಾ ಬಂಕುಬಡಿದ ರಾತ್ರಿಗಳಿಗೆ ಕಥೆ ಹೇಳಹೊರಟಿದೆ
ಪ್ರತಿಪದವೂ ನಾಟಕವೆಂದು ಇರುಳಿಗೆ ತಿಳಿಯುತ್ತಿಲ್ಲಾ..
ಹಕ್ಕಿಯನ್ನು ಒಪ್ಪಿಕೊಳ್ಳದ ಆಗಸ
ಕಲ್ಲುಮಳೆ ಸುರಿಸುವುದು ನಿಲ್ಲಿಸುತ್ತಿಲ್ಲಾ..!!
ನೀನೀಗ ಕನಸಿಗೆ ಎದುರಾಗಬೇಡ
ಕಣ್ಣಿಗೂ ಕಾಣದಂತೆ ನನ್ನೊಳಗೆ ಪುನಃ ಹೂ ಅರಳಬಹುದು
ಆಕಾಶಕ್ಕೆ ಕೖ ಚಾಚಿ ನಿಂತ ಭೂಮಿ
ಹಡಗನ್ನು ಅಪ್ಪಿಕೊಳ್ಳುವ ಸಾಗರ
ಅವುಗಳ ಛಾಯೆಯಲಿ ನಮ್ಮ ಕಥೆ
ಗಾಳಿ ಪದರದಲಿ ತೇಲುವ ನಿನ್ನ ನೆರಳು…
ಮತ್ತೆ ನನ್ನ ಕಾಡಬಹುದು
ಇಂಚಿಂಚೇ ಕೊಲ್ಲಬಹುದು..!!
ಜಯಂತಿ ಸುನಿಲ್