ಮಳಿಗಾಲ ಶುರುವಾಗಿ ಮೂರು ತಿಂಗಳಾಯ್ತು , ಅಷ್ಟು ಇಷ್ಟು ಮಳಿ ಬರಲತದ , ಅದರೊಂದಿಗಿ ಧಗಿನೂ ಹೆಚ್ಚಾಗಲತದ . ಬ್ಯಾಸಗಿ ಧಗಿಗಿಂತ ಈ ಮಳಿಗಾಲದ ಧಗಿ ವಿಪರೀತ. ಈ ಬಿಸಲು ಧಗಿ ಜೋಡಿನೆ ನಮ್ಮ ಜೀವನ ಸಾಗತಿರತದ.

ಇವತ್ತ ಮುಂಜಾನಿ ಬಂದ ರತ್ನ ಗಪ್ಪಾಗಿ ಕೆಲಸ ಮಾಡಲತಿದ್ದಳು. ಮನಿಗೆ ಬರೊದೆ ತಡ ಮೊದಲು   ನಾನು ಆಕಿ ಕುಂತು  ಚಾ ಕುಡದು ಆಕಡಿ ಈಕಡಿನ ಸುದ್ದಿ ಮಾತಾಡಿ ನಂತರ ಕೆಲಸಕ್ಕ ಶುರುಮಾಡೋ ಆಕಿ ಇವತ್ಯಾಕೋ ಸುಮ್ಮನಿದ್ದಾಳಂದ್ರ ಅಕಿ ಮನ್ಯಾಗ ಮತ್ತ ಅತ್ತಿದರೆ ಇಲ್ಲ ಗಂಡಂದು ಎನಾರ ರಂಪ ರಾಮಾಯಣ ಆಗಿರಬೇಕು ಅನಸ್ತು.

ಇದೇನು ಹೋಸದಾಗಿರಲಿಲ್ಲ . ದಿನಾ ಕುಡದು ಅದಕ್ಕ ವ್ಯಸನಿಯಾಗಿರೋ ಗಂಡನ ಜೋಡಿ ಏಗೋದು ನೋಡಿದವರಿಗಿ ಸಾಮಾನ್ಯ ಅನಿಸಿದ್ರು ಅವಳ ಪರಿಸ್ಥಿತಿ ನನಗ ಒಮ್ಮೆ ಪಾಪ ಅನಿಸಿದ್ರ ಒಮ್ಮೆ ಸಿಟ್ಟು ಬರಿಸ್ತಿತ್ತು. ಸಿಟ್ಟು ಯಾಕಂದ್ರ ಇಷ್ಟಾದ್ರು ಅವಳು ಗಂಡನ ಜೋಡಿ ಬದುಕೋದು ಅನಿವಾರ್ಯ ಎಂದು ಸಹಜವಾಗಿರುವಾಗ.

ಕುಡಿತದ ವ್ಯಸನ ಒಂದು ಅತೀ ದೊಡ್ಡ ಸಮಸ್ಯೆ. ಕುಡಿಯುವದನ್ನು ಒಳ್ಳೆದು ಕೆಟ್ಟದು ಅಂತ ನಿರ್ಣಯ ಮಾಡುವದು ಅನವಶ್ಯಕ. ಆದ್ರ ಅದರ ವ್ಯಸನಕ್ಕ ಒಳಪಡೋದಂದ್ರ ಅವರಿಗಿಂತ ಅವರ ಜೋತೆಗಿರುವವರಿಗಿ ನರಕ ನೋಡಿದಂಗ.

ನಾನು ನಮ್ಮ ಸುತ್ತಲೂ ಇರೋ ಎಷ್ಟೋ ಕೂಲಿ ಕೆಲಸದವರ ಸಂಸಾರ ನೋಡತಿರತಿನಿ , ಪ್ರತಿ ಕುಟುಂಬಗಳಲ್ಲೂ ಕುಡುಕ ಗಂಡ. ದಿನಾಲೂ ದುಡದು ಸಂಜೆ ಅಷ್ಟೂ ದುಡ್ಡು ಹೆಂಡದಂಗಡಿಗೆ ಸುರುದು ಬಂದು ಮನಿಗಿ ಬಂದು ಹೆಂಡರು ಮಕ್ಕಳ ಜೋಡಿ ಜಗಳ ಆಡಿ ಮುಂಜಾನಿ ಮತ್ತ ಏನೂ ಆಗೇ ಇಲ್ಲ ಅಂಬಂಗ ಇರೋ ಎಷ್ಟೋ ಗಂಡ ಹೆಂಡತಿರಿಗಿ ನೋಡಿನಿ . ಎಷ್ಟು ಜಗಳ ಆಡಿದ್ರೂ ಮತ್ತ ಒಂದೇ ಸೂರಿನಡಿ ಇರೋ ಅನಿವಾರ್ಯ ತೆಗೆ ಹಣೆಬರಹ ಅಂದು ಸಮಾಧಾನ ಮಾಡ್ಕೋತಾರ ಅಷ್ಟೆ.

ನಾನು ಒಮ್ಮೆ ಕುಡಿತದ ವ್ಯಸನಿಗಳ ಶಿಬಿರಕ್ಕೆ ಅಥಿತಿಯಾಗಿ ಸಮಾಲೋಚನೆಗಿ ಹೋಗಿದ್ದ. ಅಲ್ಲಿ ಹೆಣ್ಣಮಕ್ಕಳು ಹೆಂಡದಂಗಡಿ ಬಂದ ಮಾಡಬೇಕು , ಅದು ಮಾತ್ರ ಕುಡಿತದ ವ್ಯಸನಿಗಳಿಗಿ ಪರಿಹಾರ ಎಂದು ನಿರ್ಧರಿಸಿದ್ರು. ಎಷ್ಟೋ ಕಡಿ ಎಷ್ಟೋ ಊರೊಳಗ ಹೆಣ್ಣಮಕ್ಕಳಿಂದ ಹೆಂಡದಂಗಡಿಗಳು ಮುಚ್ಚಿಸೋ ಪ್ರಯತ್ನಗಳು ಆಗ್ತಾವ . ಆದ್ರ ಎಷ್ಟ ದಿನ..!  ಕೆಲವೊಂದು ರಾಜ್ಯಗಳಲ್ಲೂ ಪೂರ್ತಿ ಮಧ್ಯ ಬ್ಯಾನ್ ಮಾಡಿಬಿಟ್ಟಾವ. ಇವೆಲ್ಲ ಪರಿಣಾಮಕಾರಿ ಆಗ್ಯಾವ ಅಂತ ಹೇಳಲಿಕ್ಜಾಗಲ್ಲ. ಕುಡಿತದ ಚಟ ಇರೋರು ತಮ್ಮ ಊರಿನ ಅಂಗಡಿ ಬಂದ ಮಾಡಿದ್ರ ಪರ ಊರಿಂದ ತಂದು ಕುಡಿತಾರ. ನಮ್ಮ ರಾಜ್ಯ ದಲ್ಲಿ ಬಂದ್ ಮಾಡಿದ್ರ ಪಕ್ಕದ ರಾಜ್ಯದಿಂದಾದ್ರೂ ತಂದು ಕುಡಿತಾರ , ಈ ಸಮಸ್ಯೆ ಗೆ ಮದ್ಯ ಮಾರಾಟ ನಿರ್ಭಂಧನೆ ಪರಿಣಾಮಕಾರಿ ಅಲ್ಲ ಅಂತಲೆ ಹೇಳಬಹುದು.

ಈ ರೀತಿ ವ್ಯಸನಕ್ಕ ಒಳಪಟ್ಟವರ ಬಗ್ಗೆ ಒಮ್ಮೊಮ್ಮೆ ಕೋಪ ಬಂದ್ರೂ ನನಗ ಅವರ ಬಗ್ಗೆ ಅನುಕಂಪನೆ ಹೆಚ್ಚು , ಯಾಕಂದ್ರ ಒಬ್ಬೊಬ್ಬರಿಗಿ ಒಂದೊಂದು ವ್ಯಸನ ಇರತಾವ. ಯಾರಿಗಿ ಸಿಗರೇಟಿನ ವ್ಯಸನ , ಬೀಡಿ ವ್ಯಸನ , ಗಟ್ಕಾ ವ್ಯಸನ , ಮೊಬೈಲ್ ವ್ಯಸನ. ಆದ್ರ ಇವೆಲ್ಲ ಅವರ ಮೇಲೆ ಪರಿಣಮ ಬಿರಿದ್ರ ಮದ್ಯವ್ಯಸನ ಅವರ ಪೂರಾ ಕುಟುಂಬದ ಮ್ಯಾಲ ಪರಿಣಾಮ ಬಿರತದ. ಅವರ ಮನಿ ಆರ್ಥಿಕ ಪರಿಸ್ಥಿತಿ ಮ್ಯಾಲ ಪರಿಣಾಮ ಬಿರತದ. ವ್ಯಸನಕ್ಕ ಒಳಪಟ್ಟಮ್ಯಾಲ ಅದ್ರಿಂದ ಹೋರಬರೋ ಪ್ರಯತ್ನ ಮಾಡಿದಷ್ಟೂ ಇನ್ನೂ ಇನ್ನೂ ಆಳಕ್ಕೆ ಎಳಕೊತಿರತದ. ಈ ಕಡಿ ಮನೆಯವರ ನಿರಾದರ , ಹಣಕಾಸಿನ ಒತ್ತಡ , ಕುಡಿತದ ಒತ್ತಡ , ಏನೂ ಮಾಡಲಾಗದ ಅಸಹಾಯಕತೆ ಎಲ್ಲವೂ ಅವರನ್ನು ಕಾಡತೊಡಗತವ , ಪರಿಹಾರವಾಗಿ ಮತ್ತ ಕುಡಿತಕ್ಕ ಮೊರೆ ಹೋಗತಾರ.

ಕುಡದು ಸಾಯ್ಲಿ , ಆದ್ರ ಕುಡದ ಬಂದು ಹೆಂಡತಿಗಿ ಹೊಡೆಯೊದಂದ್ರ ನನಗ ಬಾಳ ಸಿಟ್ಟು ಬರತದ. ನಾನು ಅಂತವರಿಗಿ ಹೇಳತಿನಿ , ಯಾಕ ಹೊಡಸ್ಕೋತೀರಿ , ನೀವೂ ಎರಡ ಪೆಟ್ಟು ವಾಪಸ ಹಾಕಲಕ್ಕ ಬರಲ್ಲೆನು , ಗಂಡ ಏನ ಮಾಡ್ದರೂ ನಡಿತದ ಅಂದ್ರ ಹೊಡಸ್ಕೊಂಡು ಸಾಯರಿ ಮತ್ತ , ಅಂತೀನಿ ಸಿಟ್ಟಿಲೆ.

ನನಗೂ ಗೊತ್ತು ಹೇಳಿದಷ್ಟು ಇದು ಸುಲಭ ಅಲ್ಲ ಅಂತ. ಇಂತಹ ಸಂದರ್ಭದಾಗ ಅಕಿಗಿ ಸಪೊರ್ಟ ಮಾಡೊವರಾದ್ರೂ ಯಾರಿರತಾರ. ತವರ ಮನಿಯವರು ಮದಿವಿ ಆದ ಮ್ಯಾಲ ಮಗಳ ಜವಾಬ್ದಾರಿ ಮುಗೀತು ಅಂತ ಕೈ ತೊಳಕೊಂಡಿರತಾರ. ತವರ ಮನ್ಯಾಗ ಹೋಗಿ ಹಂಗಿನಲ್ಲಿ ಇರೋದಕ್ಕಿಂತ ಹೊಡಸಕ್ಕೊಂಡು ಬಡಸ್ಕೊಂಡು ಗಂಡನ ಮನ್ಯಾಗೆ ಇರಬೇಕು ಅಂಬೋ ಪಾಠ ಸುತ್ತಲಿನವರಿಂದ ಕೇಳತಾನೆ ಇರತಿವಿ. ಹಾಗಾಗಿ ಹೆಣ್ಣು ಮಕ್ಕಳು ದೈವಕ್ಕ ಬಂದದ್ದು ಅನುಭವಿಸಬೇಕು ಅಂತ ತಮ್ಮ ಹಣೆಬರಕ್ಕ ಬೈಕೋತ ಬದುಕತಾರ.

ಎನೇನೋ ಯೋಚನಿ ಮಾಡ್ಕೋತ ನಾನು ಮಾತಾಡದಂಗ ಸುಮ್ನ ಇದದ್ದು ನೋಡಿ ರತ್ನ ನೇ ಅಕ್ಕೋರೆ ಅಂದ್ಳು. ಅಕಿನ ಕಡಿ ನೋಡಿದಾಗ.

ಇವತ್ತ ಜಲ್ಲಿ ಹೋಗತಿನರ್ರಿ ನನ್ನ ಗಂಡಗ ದಾವಾಖಾನಿಗಿ ಕರಕೊಂಡು ಹೋಗಬೇಕು ಅಂದಳು.  ನಿನ್ನ ಕುಡದು ಬಂದು ಸುಮ್ ಸುಮ್ ನೆ ಜಗಡ ತೆಗೆದಾನ್ರಿ   ಹೊಡಿಲಾಕ ಮೈಮ್ಯಾಲೆ ಬಂದ್ರ ನಾನೂ ಸಿಟ್ಟಿಲಿ ನೂಕಿನ ನೋಡ್ರಿ. ಗ್ವಾಡಿಗ ತಲಿ ಬಡ್ದು ರಕ್ತ ಬಂತು , ಹಂಗೆ ಅಳಕೊತ ಮಕ್ಕೊಂಡಾನ , ದವಖಾನಿಗಿ ಕರಕೊಂಡು ಹೋಗತಿನಿ ಅಂತ , ಅಳ್ಳಕ ಸುರುಮಾಡ್ದಳು.

ಅಯ್ಯೋ ಹೆಣ್ಣು ಜನ್ನವೇ ಅಂತ ಜೀವ ಧಗ ಧಗ ಉರಿತು. ಎಂತಾ ಹೆಣ್ತಿನೂ ಗಂಡಗ ಒಂದೊಮ್ಮ ತಾಯಿನೇ ಆಗಬೇಕು. ಮತ್ತ ಅವನ ಕಷ್ಟಕ ಕಣ್ಣಿರು ಸುರಸಬೇಕು. ಅವನ ಬ್ಯಾನಿ ಬ್ಯಾಸರಿಕಿಗಿ  ಟೊಂಕ ಕಟ್ಟಿ ನಿಲ್ಲಬೇಕು. ಇದೆಲ್ಲ ಯಾರಾರ ಕಲಿಸ್ತಾರೇನು ಹೆಣ್ಣಾದವಳಿಗಿ..!  ಮತ್ಯಾಕ ಹೆಣ್ಣು ಪ್ರತಿ ಗಂಡಸಿನ ತಾಯಾಗತಾಳ.ಮತ್ಯಾಕ ಅವನೆಲ್ಲ ತಪ್ಪುಗಳನ್ನು ಕ್ಷಮಿಸತಾಳ ,  ಪ್ರೀತಿನಾ , ಅವಲಂಬನೆನಾ , ಅನಿವಾರ್ಯತೆನಾ , ಲೋಕದ ನಿಯಮನಾ…ಗಂಡಂಗ ಬಿಟ್ರ ಅವಳಿಗಿ ಬ್ಯಾರೆ ಅಸ್ತಿತ್ವ ಇಲ್ವ. ಇಲ್ಲ ಅವಳಿಗಿ ಗಂಡಗ ಬಿಟ್ಟು ಬದುಕಕ್ಕೆ ಬರಲ್ವ. ಅವಲಂಬನೆ ಇದ್ರ ಗಂಡಗ ಬಿಟ್ಟು ಬದುಕೊ ಶಕ್ತಿ ಇಲ್ಲ ಅನ್ನಬಹುದು.ಎಷ್ಟೋ ಸ್ವಾವಲಂಬಿ ಮಹಿಳೆಯರು ಗಂಡನ ದಬ್ಬಾಳಿಕಿ ಸಹಿಸಿಕೊಂಡು ಬದುಕೊರು ಇದ್ದಾರ. ಯಾಕೆ.

ರತ್ನ ಮತ್ತ ಅಕ್ಕೋರೆ ಅಂದ್ಳು. ನಾನು ಎನನ್ನಬೇಕು..!
ಇಷ್ಟ ಹೋಡದ್ರು ಮತ್ತ ಗಂಡಗ ದವಾಖಾನಿಗಿ ಒಯ್ತಿ ಏನೇ  ಅಂತ ಬೈಯಬೇಕಾ..
ಸಾಯಲಿ ಬಿಡು ಅಂದ್ರ..ರತ್ನ ಬಿಡತಾಳಾ..
ಅವನ ಜೋತಿಗಿ  ಬದುಕೊದಕ್ಕಿಂತ ನೀನು ದುಡದು
ಒಬ್ಬಕೀನೆ ಬದುಕು ಅಂದ್ರ…ಸಮಜ ಒಂಟಿ ಮಹೀಳೆಗೆ ಗೌರವದಿಂದ ಬದುಕಗೊಡತದಾ..
ಅವನಿಗಿ ಬಿಟ್ಟು ನಿನ್ನ ತವರ ಮನ್ಯಾಗ ಹೋಗಿರು ಅಂದ್ರ.. ಅಲ್ಲಿ ಅವಳನ್ನು ಆದರಿಸತಾರ..
ಅವನನ್ನು ಬಿಟ್ಟು ಇನ್ನೊಬ್ಬ ಜೀವನ ಸಂಗಾತಿ ಹುಡಕಿಕೊಳ್ಳೊದು ಅಷ್ಟು ಸುಲಭಾನಾ..
ಇನ್ನೂ ಮಕ್ಕಳು , ಅವನ್ನು ತಂದಿಯಿಂದ ದೂರಮಾಡಬೇಕಾ ..
ವ್ಯಸನ ಮುಕ್ತ ಕೇಂದ್ರಗಳಲ್ಲಿ ಒಯ್ದು ಹಾಕಬೇಕು.
ಎಷ್ಟು ದಿನ ತಿಂಗಳು , ಮೂರು ತಿಂಗಳು , ಆರು ತಿಂಗಳು ಬಂದ ಮೇಲೆ ಸ್ವಲ್ಪ ದಿನ ಚಂದಿದ್ರು , ಮತ್ತದೆ ಹಳೆ ಚಾಳಿ , ಮತ್ತ ಅವನೊಂದಿಗೆ ಅದೇ ಬದುಕು.

ಮೊದಲು ದವಖಾನಿಗಿ ಕರಕೊಂಡು ಹೋಗು , ಅವನಿಗಿ ಅರಾಮ ಆಗೋತನಾ ಅವನ ಜೊತಿಗೆ ಇರು , ಅವನ ಮ್ಯಾಲ ಸಿಟ್ಟು ಮಾಡ್ಕೋಬ್ಯಾಡ ಅಂತೇಳಿ ಕಳಸ್.

ನಾನು ಸಮಾಜದ ಒಂದು ಭಾಗ. ಆದರ್ಶಗಳು ಬರಿ ಬಾಯಿಮಾತುಗಳು ಮಾತ್ರ ಇದು ನನಗೂ ತಿಳಿದದ್ದೆ.

ಇಲ್ಲಿ ನಾನು ಕುಡಿಯೊದ್ರಿಂದ ಆಗೋ ಪರಿಣಾಮ
 ದುಷ್ಪರಿಣಾಮದ ಬಗ್ಗೆ ಹೆಳತಿಲ್ಲ. ಕುಡಿಯಲೇಬೇಡಿ ಅಂತ ಹೇಳೊ ಉಪದೇಶದಿಂದ ಏನೂ ಪ್ರಯೋಜನವೂ ಇಲ್ಲ .  ನಾನೂ ಹೇಳತಿರೊದು ಕುಡಿತದ ವ್ಯಸನಿಗಳ ಜೊತೆಗಿರುವವರ ಬಗ್ಗೆ. ಅವರ ಪರಿಸ್ಥಿತಿ ಬಗ್ಗೆ. ಇದಕ್ಕೆ ಯಾರೂ ಹೊಣೆಯಲ್ಲ , ಕುಡಿಯುವರನ್ನು ಸಮಾಜವನ್ನು ದೂರುವದರಿಂದ ಪ್ರಯೋಜನವೂ ಇಲ್ಲ.  ಅವರವರ ಪರಿಸ್ಥಿತಿ ಅವರೆ ಅನುಭವಿಸಬೇಕು . ಆದ್ರ ಆ ಅನುಭವಿಸುವ ಅನಿವಾರ್ಯ ತೆಗೆ ಮನ ಮಮ್ಮಲ ಮರಗತದ.


One thought on “

  1. ಸಾಮಾಜಿಕ ಪಿಡುಗು ಒಂದು ಅಂಟು ರೋಗ ಆಗಬಾರದು. ಅದನ್ನು ಚಿಂತನೆಗೆ ಹಚ್ಚುವ ಲೇಖನ ಚೆನ್ನಾಗಿ ಬಂದಿದೆ.

Leave a Reply

Back To Top