ತರುಣ್ ಎಂ ಅವರ ಕವಿತೆ-ಇರಿಯುವ ಮುನ್ನ ಹೇಳಬೇಕಲ್ಲವೆ….

ನಿನಗೆಂದು ಹಿಡಿದು ತಂದಿದ್ದ ಪಾತರಗಿತ್ತಿಯು
ಕಿಟಕಿಯಾಚೆಗಿನ ಬೇಲಿ ನೋಡುತಿದೆ
ಅದನ್ನಾದರು ಬಿಟ್ಟು ಬರುತ್ತಿದ್ದೆ
ಕೊಂಚ ತಡವಾಗುತ್ತಿತ್ತು ಅಷ್ಟೆ

ನಿನ್ನ ನೆನಪಿನಲಿ ನಿದ್ದೆಗೆಟ್ಟು ಬರೆದ
ಕಣ್ಣ ಕವಿತೆಯ ಪುಟವು
ಗಾಳಿಗೆ ಸದ್ದು ಮಾಡುತ್ತಿದೆ
ಹರಿದು ಸುಟ್ಟಾದರು ಬರುತ್ತಿದ್ದೆ

ನೀ ಕೆಲ ಹೊತ್ತು ಜೋಕಾಲಿಯಲಿ ಕೂತು
ತೂಗಾಡಬಹುದಿತ್ತು
ಎಂದೋ ಕಂಡ ಕನಸಾದರು
ಕೊಲ್ಲುವ ಮೊದಲು ಈಡೇರಿಸಬಹುದಿತ್ತು

ಹಿಂದಿರುಗಿ ಹೋಗಲು ಹೊತ್ತಾಗುತ್ತಿರಲಿಲ್ಲ
ಕೂತು ಜೊತೆ ಮಾತಾಡಿದ್ದರೆ ಆಗಿತ್ತು
ಕೊಲ್ಲಲು ಬಂದ ಕಾರಣವೇನೆಂದು ನಾ ಕೇಳುತ್ತಿರಲಿಲ್ಲ

ಎದೆಗಾದರು ಇರಿಯಬೇಕಲ್ಲವೆ
ಇದ್ದ ಪ್ರೀತಿಯನ್ನು ನನ್ನೊಂದಿಗೆ
ಕೊಲ್ಲಬಹುದಿತ್ತು
ನಾನೇನು ಬೇಡವೆನ್ನುತ್ತಿರಲಿಲ್ಲ

ಇರಿತದ ರಭಸಕ್ಕೆ ನಿನ್ನ ಉಡುಗೆ ನೆತ್ತರಾಗಿದೆ
ಹಾಗೆ ಹೋಗಬೇಡ
ನಿನಗೆ ಕೊಡಲೆಂದು
ನಿನ್ನ ನೆಚ್ಚಿನ ಬಣ್ಣದ ಸೀರೆ ತಂದಿದ್ದೆ
ಅದು ಅಲ್ಲೆ ಎಲ್ಲೊ ಇದೆ
ಮೈಗೊದ್ದಿಕೊಂಡು ಹೋಗು

ಅಂಗಳದಲ್ಲಿ ನಾವಿಬ್ಬರು ನೆಟ್ಟ
ಗುಲಾಬಿ ಗಿಡದಲ್ಲಿ ಹೂ ಬಿಟ್ಟಿರಬಹುದು
ಇದ್ದರೆ ಕಿತ್ತು ಮುಡಿಗಿಟ್ಟುಕೊ
ನೆತ್ತರು ಅಂಟುವುದೆಂದು ಯೋಚಿಸಬೇಡ
ಅದು ಕೂಡ ಕೆಂಪಗೆ ಇದೆ

ಹೂವಿಲ್ಲವೆಂದರೆ ಗಿಡವನ್ನೆ ಕಿತ್ತು ಹೋಗು
ಚುಚ್ಚುವ ಮುಳ್ಳುಗಳ ಮೇಲೆ
ಕೋಪಗೊಳ್ಳಬೇಡ


4 thoughts on “ತರುಣ್ ಎಂ ಅವರ ಕವಿತೆ-ಇರಿಯುವ ಮುನ್ನ ಹೇಳಬೇಕಲ್ಲವೆ….

Leave a Reply

Back To Top