ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು ಅವರ ಕವಿತೆ-
ಭಾರವಾದ ಬದುಕು
ಅಂತರಾಳದಲಿ ಅದುಮಿಕೊಂಡಿರುವ
ಭಾವನೆ ಆವಾಹನಗೊಂಡು ನಗುತ್ತಿದೆ
ಒಳಗೊಳಗೆ ಕರಗುವ ಕಣ್ಣೀರ ಓರೆಸಿ
ನಕ್ಕವರ ಮುಂದೆ ನಗುವನ್ನು ಸೆಳೆದು
ಅಳುವ ಕಣ್ಣಿಗೂ ಕಾಡಿಗೆ ತೀಡಿ
ಚೆಂದಗಾಣಿಕೊಳ್ಳಲು ಪ್ರಯತ್ನಿಸಿ
ಜೀವನ ಪಥ ಜೀವ ಹಿಂಡಿ ನಗುತ್ತಿರಲು
ನೋವೆ ಇಲ್ಲದಂತೆ ನಿತ್ಯ ಪಥಸಂಚಲನ
ನಾನ್ಯಾರಿಗೂ ಕಮ್ಮಿ ಇಲ್ಲವೆಂಬಂತೆ ತೋರಿಸಿ
ಬದುಕು ಭಾರವಾಗಿ ತೂಗಿರಲು
ಬದುಕಿನ ತಕ್ಕಡಿ ಸಮಾನಾಗಿಸಲು
ತನ್ನೆಲ್ಲ ಶಕ್ತಿಗಳನ್ನು ಹೆಗಲಿಗಿಳಿಸಿ
ಅತ್ತ ಇಲ್ಲ ಸಲ್ಲದ ಮಾತಿಗೂ
ತಲೆಯಾಡಿಸಿ ಎಲ್ಲವನ್ನು ಅನುಭವಿಸಿ
ಮರುಗಿ ಕಾಲಚಕ್ರದೊಂದಿಗೆ ಚಲಿಸಿ
ಯಾವ ದಾರಿ ಯಾರ ಪರವಾಗಿ
ಯಾರ ಹಣೆಬರಹ ಯಾರಿಗೆ ವರವಾಗಿ
ಕಾಲದ ನಿರ್ಣಯವೇ ಇಲ್ಲಿ
ಜೀವನ ಮುಗಿಯುವವರೆಗೂ
ಬಾಳಿಗೆ ಬಂದಿಳಿದ ಕಷ್ಟ
ನಷ್ಟಗಳ ಲೆಕ್ಕಚಾರ ಭಗವಂತನದ್ದು
ಸೋತು ಸುಣ್ಣವಾಗಿರುವ ಬದುಕು
ಕೊಳಕು ಅಲ್ಲ ,ಶುಭ್ರವಾದ ಬೆಳಕು
ಅನುಭವವೇ ಮುಂದಿನ ಬದುಕು
ಒಂದು ದಿನದ ಸೋಲು
ಮುಂದೊಂದು ದಿನ ಸ್ಪೂರ್ತಿ ಗೆಲ್ಲಲು
ನಿಶ್ಚಿಂತೆಯಿಂದಿರು ನೆಮ್ಮದಿಯಾಗಿರಲು
ಸತೀಶ್ ಬಿಳಿಯೂರು