ಎಸ್ ವಿ ಹೆಗಡೆ ಅವರ ಕವಿತೆ-ಉಸಿರು

ಅನವರತ ಸಂಗಾತಿ
ಜನನಮರಣದ ನಡುವೆ
ಭೇದ ಭಾವವ ತೊರೆದು
ದೇಶ ಭಾಷೆಯ ಮರೆತು
ಹೆಸರಿಲ್ಲ ಬೇಸರದ ಮಾತಿಲ್ಲ
ಮರೆತರೂ ಮುನಿಸಿಲ್ಲ
ಹಿಡಿದ ಕೆಲಸವ ಬಿಟ್ಟು
ಕೈಕಟ್ಟಿ ಕುಳಿತಿಲ್ಲ
ಬಿಟ್ಟಿರುವೆ ನಿಟ್ಟುಸಿರು
ಎದೆಯಾಳದಲ್ಲಿ ಒಬ್ಬಂಟಿಯಾಗಿ

ಆಟೋಟದಲಿ ಕಳೆದೆ
ಏದುಸಿರ ಜೊತೆಯಾಗಿ
ಪ್ರೇಮಕ್ಕೆ ಹುಚ್ಚಾಗಿ
ಬಿಸಿಯುಸಿರ ಕಾವಾಗಿ
ಗರ್ಭದಲ್ಲಿ ಹೊಕ್ಕಿ ಮರೆಯಾದೆ
ಕ್ರೋಧದಲಿ ಉರಿವ
ಬಿಗಿಯುಸಿರ ಸುರಿದು
ಅಗ್ನಿಯಲಿ ಆಹುತಿಯಾದೆ

ನಿನ್ನ ತಿರುಗಾಟದಲಿ
ಮಿತವಾದ ಜೊತೆಯಾಗಿ
ಆಯಾಮ ಹೊಂದಿದರೆ
ಮುಗ್ಧ ಮಗುವಿನ ಉಸಿರು
ಎಳೆ ಎಳೆಯಾಗಿ ಮನತುಂಬಿ
ಹಾಯಾಗಿ ಮಲಗಿ ನಿದ್ರಿಸಿದೆ

ಆಗಮಿಸಿ ಕಾಲ ವರ್ತುಲದ
ಯಾವುದೋ ಬಿಂದುವಿನಲಿ
ಬಂದಾಗ ಇನ್ನೊಂದು ಬಿಂದು
ನೀನು ಎಣಿಸಿದಂತೆ
ಹೋಗಿ ಕಣ್ಮರೆಯಾದೆ ಹಾರಿ
ಪ್ರಾಣ ಪಕ್ಷಿಯ ಜೊತೆಗೆ
ಕೊನೆಯುಸಿರನೆಳೆದು.


Leave a Reply

Back To Top