ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ಸತ್ತ ಸಂತೋಷದ ಕ್ಷಣ
ನಿನ್ನ ಅಂತರಾಳದ
ಮೌನವನ್ನು
ಹೆಕ್ಕಿ ತೆಗೆಯಲು
ನಾನು ಮಾತು ಬಾರದವ
ಕನಸೆಲ್ಲವ ಕೂಡಿಟ್ಟು
ನಸುಕಿನಲಿ
ಬಸಿಯಬೇಕೆಂದರೆಮುಂಜಾವಿನ
ಬಿಸಿಬಿಸಿ ಅಪ್ಪುಗೆಯ ಕನಸು
ಬರಲೊಲ್ಲದು
ಒಂದು ಮಾಡಿದ
ಮಾತುಗಳು ಮಳೆಯಂತೆ
ಸುರಿದು ನಿಂತು ಹೋದವು
ವಿರಹದ ಕಾರ್ಮೋಡ ಕಟ್ಟುವ ಮುನ್ನ
ಹರೆಯದ ಹೊರೆಯಾದ
ದಿನಗಳು ಇಂದಿಗೂ
ಕರಗದ ಬೆಟ್ಟದಂತೆ ಕಟ್ಟಿದರೂ
ನೆರಳಾಗಿ ಬರುವ ಭರವಸೆ ಮೂಡದು
ಕಾವಲಾಗಿ
ನಿಲ್ಲುತ್ತೇನೆಂದ ಇರುಳ ಚಂದಿರ
ಬಾನ ಬುರುಡೆ ಒಡೆದು
ಬೆಳಕು
ನೀಡುವುದು ಬಿಟ್ಟು ಪ್ರೀತಿಗೆ
ಜರಿ ಹರಿಸುತ್ತಿಲ್ಲ
ಸಾಕೆನ್ನದ ಸಂತೋಷದ ಕ್ಷಣಗಳು
ಸತ್ತು ಹೋಗಿ
ಸ್ಮಶಾನದ ಸಂತೋಷದಿಂದ
ಮಲಗಿ
ದಿನಗಳೆಯುತ್ತಿರುವಾಗ ದುಃಖವೊಂದೇ
ದೈತ್ಯ ಗಾತ್ರದ ಕರಗದ ಕಲ್ಲು ಬಂಡೆಯಾಗಿದೆ
ಹನಮಂತ ಸೋಮನಕಟ್ಟಿ