ವಾಣಿ ಯಡಹಳ್ಳಿಮಠ ಅವರ ಕವಿತೆ-ಈಗೀಗ

ಈಗೀಗ ನನ್ನ ಕವಿತೆಗಳು ಮಾತಾಡುತಿಲ್ಲ
ಕಾಗದ ಕರೆದರೂ ಲೇಖನಿಯೆಡೆಗೆ ನೋಡುತಿಲ್ಲ
ಭಾವದಿ ಭಾವನೆಗಳ ಬರಗಾಲವೋ ಏನೋ !?
ಪದಗಳು ಪುಟಕ್ಕಿಳಿಯದೇ ಮುಷ್ಕರ ಹೂಡಿವೆಯೋ ಏನೋ!?

ಸುನೆನಪುಗಳು ಕೈಬೀಸಿ ಕರೆಯುತಿಲ್ಲ
ಹಳೆಯ ನೋವುಗಳು ನಲುಗಿ ಬಿಕ್ಕುತಿಲ್ಲ
ಧೂಳು ಸರಿಸಿ ಮೊದಲ ಪ್ರೇಮ ಇಣುಕುತಿಲ್ಲ
ಹಾಡಿದ ಒಲವ ರಾಗ ಮರಳಿ ಗುನುಗುತಿಲ್ಲ

ಮುಂಜಾನೆಯ ನಸುಕು ಹೊಸ ಹಾಡು ಹಾಡುತಿಲ್ಲ
ಮುಸ್ಸಂಜೆಯ ಬಾನು ಯಾರಿಗಾಗಿಯೂ ಕೆಂಪೇರುತಿಲ್ಲ
ಹಗಲಿನ ಭಾಸ್ಕರನಿಗೆ ಯಾರ ಪರಿವೆಯೂ ಇಲ್ಲ
ಚಂದ್ರ ಚುಕ್ಕಿಗಳು ಯಾರನು ನೆನಪಿಸುತ್ತಲೂ ಇಲ್ಲ

ನನ್ನವರನು ಹುಸಿ ಹೊಗಳಲು ಮನಸಿಲ್ಲ
ಅನ್ಯರನು ಅನವರತ ಮೆಚ್ಚಿಸಲು ಮನಸಿಲ್ಲ
ಗೊಡ್ಡು ಸಂಪ್ರದಾಯಗಳ ಗುನುಗಲು ಮನಸಿಲ್ಲ
ಮುಖವಾಡದ ಹಿಂದಿನ ಮುಖ ನೋಡಲು ಮನಸಿಲ್ಲ
ಕಾಮುಕರ ಹಿಂಸೆಗಳ ಬಣ್ಣಿಸಲು ಮನಸಿಲ್ಲ
ಸಿರಿವಂತರ ಸಿರಿತನ ಸಿಂಗರಿಸಲು ಮನಸಿಲ್ಲ

ಈಗೀಗ ನನ್ನ ಕವಿತೆಗಳು ಮಾತಾಡುತಿಲ್ಲ
ಕಾಗದ ಕರೆದರೂ ಲೇಖನಿಯೆಡೆಗೆ ನೋಡುತಿಲ್ಲ


2 thoughts on “ವಾಣಿ ಯಡಹಳ್ಳಿಮಠ ಅವರ ಕವಿತೆ-ಈಗೀಗ

Leave a Reply

Back To Top