ಲೇಖನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
‘ಸಮಯ ಕಲಿಸುವ
ಜೀವನ ಪಾಠಗಳು’
ನಾವು ಚಿಕ್ಕವರಿದ್ದಾಗ ಡಾಕ್ಟರಾಗ್ತೀನಿ ಇಂಜಿನಿಯರ್ ಆಗ್ತೀನಿ ಪೈಲೆಟ್ ಆಗ್ತೀನಿ ದೊಡ್ಡ ಮನೆ ಕಟ್ತೀನಿ ಸದಾ ವಿಮಾನದಾಗ ಹಾರಾಡ್ತೀನಿ ಅಂತೆಲ್ಲ ಕನಸು ಕಾಣ್ತೀವಿ. ಹಾಗೆ ಹೇಳಿಕೊಂಡು ನಗೆ ಪಾಟಲಿಗೀಡಾದದ್ದು ಇರುತ್ತದೆ.
ಈಗಲೂ ಕೂಡ ಕೆಲ ಪಾಲಕರು ಮಕ್ಕಳು ಪಿಯುಸಿ ಓದುತ್ತಿರುವಾಗ ಅವರು ಹೇಳಿದ ಮಾತುಗಳನ್ನ ಮೆಡಿಕಲ್ ಮಾಡ್ತೀನಿ ಅಂತ ಹೇಳಿ ಹಠ ಮಾಡ್ತಾರೆ… ಅವರು ಓದುವ ರೀತಿ ನೋಡಿದ್ರೆ ಗ್ಯಾರಂಟಿ ಸೀಟು ಸಿಕ್ಕೇ ಬಿಡುತ್ತದೆ ಎಂದು ಹೇಳುತ್ತಾರೆ…. ಆದರೆ ವಾಸ್ತವ ಅವರು ತಿಳಿದಂತೆ ಇರುವುದಿಲ್ಲ ಎಂಬುದು ಈಗಾಗಲೇ ಗೊತ್ತಿರುವವರು ತಪ್ಪು ತಿಳಿದಾರೆಂದು ಅವರಿಗೆ ತಿಳಿಸುವ ಗೋಜಿಗೆ ಹೋಗುವುದಿಲ್ಲ.
ಕೆಲ ವಿಷಯಗಳಿಗೆ ಕಾಲವೇ ಉತ್ತರಿಸಬೇಕು ಎಂಬುದು ಸರ್ವವೇದ್ಯವಾಗಿದ್ದು ಅಂತಹ ಕಾಲ
ಕಲಿಸುವ ಕೆಲ ಪಾಠಗಳು ಹೀಗಿವೆ.
ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ…
ಪರಿಪೂರ್ಣತೆ ಎನ್ನುವುದು ಒಂದು ಭ್ರಮೆ… ಯಾರು ತಮ್ಮ ಜೀವನದ ಪರಿಪೂರ್ಣತೆಯಿಂದ ತೃಪ್ತರಾಗುವುದಿಲ್ಲ. ಒಂದು ಬಾರಿ ಈ ಕುರಿತು ನಿಮಗೆ ಅರಿವಾದರೆ ಬೇರೊಬ್ಬರೊಂದಿಗೆ ನಿಮ್ಮನ್ನು ನೀವು ಹೋಲಿಸಿಕೊಳ್ಳುವ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ನೀವು ಸಂಪೂರ್ಣವಾಗಿ ಮುಕ್ತ ಮತ್ತು ಸ್ವತಂತ್ರ ಭಾವವನ್ನು ಹೊಂದುತ್ತೀರಿ.
ಎಲ್ಲ ಭಾಗ್ಯಗಳಿಗೆ ಮಿಗಿಲಾದದ್ದು ಆರೋಗ್ಯ ಭಾಗ್ಯ…
ಜೀವನದಲ್ಲಿ ಮನುಷ್ಯನಿಗೆ ಆರೋಗ್ಯ ಅತ್ಯಂತ ಮುಖ್ಯ. ಒತ್ತಡ, ಭಯ ಮತ್ತು ಚಿಂತೆಗಳು ನಾವು ತಿನ್ನುವ ಆಹಾರ ಮತ್ತು ಕುಡಿಯುವ ಪಾನಿಯಗಳಿಗಿಂತ ಹೆಚ್ಚು ತೊಂದರೆಯನ್ನು ಉಂಟುಮಾಡುತ್ತವೆ. ಸಂತೃಪ್ತಿ ಮತ್ತು ಮನಃಶಾಂತಿ ಎಂಬ ಎರಡು ಒಳ್ಳೆಯ ಔಷಧಿಗಳನ್ನು ನಮ್ಮಲ್ಲಿ ನಾವು ಒಳಗೊಳ್ಳುವ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂಬುದು ಗೊತ್ತಿದ್ದರೂ ಆರೋಗ್ಯ ಕೆಡುವವರೆಗೆ ಕಾಯುತ್ತೇವೆ. ಇದು ಸಲ್ಲದು
ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡದಿರಿ… ನಮ್ಮ ಜೀವನದ ಬಹುತೇಕ ಸಮಯವನ್ನು ನಾವು ಹುಚ್ಚು ಭ್ರಮೆಯ ಹಿಂದೆ ಓಡುವುದರಲ್ಲಿಯೇ ಕಳೆಯುತ್ತೇವೆ. ನಾವು ಓಡುತ್ತಿರುವುದು ಮರೀಚಿಕೆಯ ಹಿಂದೆ ಎಂಬುದು ಅರಿವಾದಾಗ ನಾವು ನಿಜವಾಗಿ ಬದುಕಲು ಆರಂಭಿಸುತ್ತೇವೆ.
ಜೀವನ ಬಹಳಷ್ಟು ಸಣ್ಣದು ನಿಜ ಆದರೆ ಇಲ್ಲಸಲ್ಲದ ವಿಚಾರಗಳಿಗೆ ತಲೆ ಕೆಡಿಸಿಕೊಂಡರೆ ಜೀವನವೊಂದು ಜೀವಾವಧಿ ಶಿಕ್ಷೆಯಂತೆ ಭಾಸವಾಗುತ್ತದೆ. ಜೀವನ ಒಂದು ಬೇಸರದ ಪಯಣವಾಗಿರದೆ ಸಾಹಸಮಯ ಚಾರಣದಂತಿರಬೇಕು. ಕಷ್ಟ ಸುಖ ನೋವು ನಲಿವುಗಳೆಂಬ ಏರು ಇಳಿವುಗಳನ್ನು ಹತ್ತಿ ಇಳಿದು ಜೀವನದ ಆನಂದವನ್ನು ಅನುಭವಿಸಬೇಕು.
ಪ್ರಕೃತಿ ಧರ್ಮದಿಂದ ಯಾರೂ ಹೊರತಲ್ಲ….
ವಯಸ್ಸಾಗುವಿಕೆಯನ್ನು ಮರೆಮಾಚುವುದು ಗಾಳಿಯನ್ನು ಹಿಡಿದಂತಹ ವ್ಯರ್ಥ ಪ್ರಯತ್ನ ವಯಸ್ಸಾಗುವಿಕೆಯನ್ನು ಆಲಂಗಿಸಿ. ನೀವು ಹುಟ್ಟಿದಾರಭ್ಯದಿಂದ ಇಲ್ಲಿಯವರೆಗೂ ಆಗುತ್ತಿರುವ ಮನೋದೈಹಿಕ ಬದಲಾವಣೆಗಳಂತೆಯೇ ಇನ್ನು ಮುಂದೆಯೂ ಆಗುವ ಬದಲಾವಣೆಗಳನ್ನು ಸ್ವಾಗತಿಸುವ ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಹೊಂದಿ ಜೀವನದ ಸವಿಯನ್ನು ಅನುಭವಿಸಿ.
ತನುವಿನ ಸೌಂದರ್ಯಕ್ಕಿಂತ ಮನದ ಸೌಂದರ್ಯ ಮುಖ್ಯ…..ನಿಮ್ಮ ದೇಹದ ಸೌಷ್ಠವ ಅಂದ ಚಂದಗಳನ್ನು ನೀವೇ ಕಟುವಾಗಿ ಟೀಕಿಸುತ್ತಾ ಪಶ್ಚಾತಾಪ ಪಡದಿರಿ. ಯಾವ ರೀತಿ ದ್ರವ ಪದಾರ್ಥವು ತನ್ನನ್ನು ಹಾಕುವ ಪಾತ್ರೆಗೆ ಹೋಗಿಕೊಳ್ಳುತ್ತದೆಯೋ ಅಂತಯೇ ನಿಮ್ಮ ಆತ್ಮವನ್ನು ಹೊತ್ತಿರುವ ದೇಹದ ಪರಿಸ್ಥಿತಿಗಳಿಗೆ ನಿಮ್ಮನ್ನು ಒಪ್ಪಿಸಿಕೊಳ್ಳಿ. ನಿಮ್ಮ ದೇಹ ಒಂದು ಅದ್ಭುತ ವಾಹಕ ನಿಜ ಆದರೆ ನೀವು ಯಾರೆಂಬುದನ್ನು ನಿಮ್ಮ ಅಂದ ಚಂದ ಆಕಾರ ಬಣ್ಣಗಳು ವ್ಯಕ್ತಪಡಿಸುವುದಿಲ್ಲ. ಆಕಳು ಕಪ್ಪಾದರೆ ಹಾಲು ಕಪ್ಪೇ? ಎಂಬ ಮಾತನ್ನು ಕೇಳಿಲ್ಲವೇ.
ಐಶ್ವರ್ಯ ಪದವಿ ಅಂತಸ್ತುಗಳು ಶಾಶ್ವತವಲ್ಲ…
ವಯಸ್ಸು ಮಾಗುತ್ತಿದ್ದಂತೆ ನಿಮ್ಮನ್ನು ನೆನಪಿಸಿಕೊಳ್ಳುವವರು ಯಾರು ಎಂಬುದು ಹೆಚ್ಚು ಮುಖ್ಯವಾಗುತ್ತದೆಯೇ ಹೊರತು ನೀವು ಹೊಂದಿರುವ ಯಶಸ್ಸು ಅಂತಸ್ತು ಮತ್ತು ಹುದ್ದೆಗಳಲ್ಲ ಎಂಬುದು ನಿಮಗೆ ಅರಿವಾಗುವುದು… ನಿಮ್ಮ ಕಥೆಗಳನ್ನು ಹಂಚಿಕೊಳ್ಳಿ…. ನೀವು ಬದುಕಿನಲ್ಲಿ ಸಾಗುವುದಕ್ಕಿಂತ ಹೆಚ್ಚು ದೂರದವರೆಗೂ ಅವು ಸಾಗುತ್ತವೆ.
ಎಲ್ಲರನ್ನೂ ಎಲ್ಲಾ ಕಾಲದಲ್ಲಿಯೂ ಮೆಚ್ಚಿಸಲು ಸಾಧ್ಯವಿಲ್ಲ……ಆದ್ದರಿಂದ ನಿಮ್ಮ ತನು ಮನಗಳ ಕಾಳಜಿ ವಹಿಸಿ. ನೀವು ಪ್ರೀತಿಸುವವರ ಕಾಳಜಿ ಮಾಡಿ.. ನೀವು ವ್ಯಕ್ತಪಡಿಸಿದ್ದು ನಿಮಗೆ ಖಂಡಿತವಾಗಿಯೂ ಮರಳುತ್ತದೆ.
ನೀವು ಮಾಡುವ ಒಳ್ಳೆಯ ಕೆಲಸಗಳನ್ನು ಜನರು ಗಮನಿಸದಿದ್ದರೂ ನಿಮ್ಮ ತಪ್ಪುಕೆಲಸಗಳು ಬಲು ಬೇಗನೆ ಅವರ ಕಣ್ಣಿಗೆ ಬೀಳುತ್ತವೆ. ಇದನ್ನು ಅರಿತಾಗ ಮಾತ್ರ ನೀವು ಸರಿಯಾದ ದಾರಿಯಲ್ಲಿ ಸಾಗಲು ಆರಂಭಿಸುತ್ತೀರಿ ಮತ್ತು ಜೀವಿತದ ಕೊನೆಯವರೆಗೂ ಆ ಪಥವನ್ನು ಅನುಸರಿಸುತ್ತೀರಿ
ಬದುಕು ಅನಿಶ್ಚಿತವಾದುದು….ನಾಳೆ ಎಂಬುದು ಭವಿಷ್ಯ, ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ.ನಿನ್ನೆ ಎಂಬುದು ಭೂತ ಕಾಲಕ್ಕೆ ಸಂದು ಹೋಗಿದೆ. ಇಂದು ಮಾತ್ರ ನಮ್ಮದು. ನಿಮ್ಮ ಭವಿಷ್ಯಕ್ಕೆ ಇರಲಿ ಎಂದು ನಿಮ್ಮ ಇಂದಿನ ಸುಖ ಸಂತೋಷಗಳನ್ನು ಮುಂದೂಡಬೇಡಿ. ಸದಾ ಹಣವನ್ನು ಶೇಖರಿಸುತ್ತಿದ್ದ ವ್ಯಕ್ತಿ ತನ್ನ ಸಾವಿನ ಗಳಿಗೆಯಲ್ಲಿ ತನ್ನ ಜೀವಿತದ ಎಲ್ಲ ಸಂಪಾದನೆಯನ್ನು ಸುರಿದರೂ ನಿಗದಿತ ಸಮಯಕ್ಕಿಂತ ಒಂದು ಕ್ಷಣ ಹೆಚ್ಚು ಹೊತ್ತು ಬದುಕಲು ಸಾಧ್ಯವಿಲ್ಲ…. ಆದ್ದರಿಂದ ಇದ್ದಾಗ ಚೆನ್ನಾಗಿ ಉಂಡು ತಿಂದು, ಕೊಡಬೇಕೆನಿಸಿದರೆ ಬೇರೆಯವರಿಗೆ ಕೊಟ್ಟು, ಕೊಟ್ಟೆನೆಂದು ಹಳಹಳಿಸದೆ ತೃಪ್ತಿಯಿಂದ ಬದುಕನ್ನು ಆಲಂಗಿಸಿ.
ನೆನ್ನೆ ನೆನ್ನೆಗೆ, ನಾಳೆ ನಾಳೆಗೆ… ಇಂದು ನಮ್ಮದೇ ಚಿಂತೆ ಏತಕೆ’ ಎಂಬ ಚಲನಚಿತ್ರ ಗೀತೆಯ ಅರ್ಥವನ್ನು ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ಸಾಗಿಸೋಣ.
ವೀಣಾ ಹೇಮಂತ್ ಗೌಡ ಪಾಟೀಲ್