ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಬಂದು ಹೋಗುವ ನಡುವೆ’

ಸುಡುತ್ತಿದೆ ನೆನಪುಗಳು
ಮನದ ಚಿತಗಾರದಲ್ಲಿ
ಮುಂಜಾನೆಯ ಕಿರಣ
ಬೆಳಗುತ್ತಿದೆ ಜಗದಲ್ಲಿ
ಕೆಂಪು ಬಣ್ಣದ ಓಕುಳಿ
ಚೆಲ್ಲುತ್ತಿದ್ದಾನೆ ನೇಸರ ನೋಡಲ್ಲಿ
ಕನಸುಗಳ ಸರಿಸಿ
ಮುನಿಸುಗಳ ಮರೆತು ಹೊಸ
ನಿರೀಕ್ಷೆಗಳೊಂದಿಗೆ ಜನರ
ಕಲರವ ಮೂಡಿದೆ ಅಲ್ಲಿ
ಮನಸೆಂದರೆ ಸವಿ ಸವಿ
ನೆನಪುಗಳ ತಾಣವಾಗಿರಲಿ
ಸೋಕದಿರಲಿ ಮನಸಿಗೆ
ಯಾವುದೇ ಕಹಿ ವಿಷಬಾಣ
ಇರಬೇಕು ಪ್ರತಿಯೊಬ್ಬರಿಗೂ
ನೆಮ್ಮದಿಯ ನಿಲ್ದಾಣ
ಬೆಚ್ಚನೆಯ ಮನೆ ಇರಲು
ಪ್ರೀತಿಸುವ ಕುಟುಂಬದವರು
ಜೊತೆಗಿರಲು
ಬದುಕಾಗುವುದು ನಂದಾಗೋಕುಲ
ಬಯಸುವುದು ಮನ
ಇದನ್ನ ನೂರು ಕಾಲ
ಇಷ್ಟಾರ್ಥ ಜೊತೆಯಾಗಲು
ಬದುಕಿನ ಸಾಯಂಕಾಲ
ಸಾರ್ಥಕ ಎನಿಸುವುದು ನಮ್ಮ
ಪೂರ್ಣ ಜೀವಿತಕಾಲ
ಮನಸಿನ ಹೊಯ್ದಾಟ
ನಿಂತಾಗ ಸಂತೃಪ್ತಿಯ
ಪ್ರಾಪ್ತಿಯು
ಶಾಂತಿ ನೆಮ್ಮದಿಯಿಂದ ಕೂಡಿರಲಿ
ಬದುಕಿನ ಅಂತ್ಯಕಾಲ
ಬಂದು ಹೋಗುವ ನಡುವೆ ಇರಲಿ
ಹಿಡಿ ನೆಮ್ಮದಿಗೆ ಸ್ಥಾನ


Leave a Reply

Back To Top