ಅವನಿ

ನಾಗಲಕ್ಷ್ಮೀ ಕಡೂರು

 ಕೊಟ್ಟಿಗೆ ಗೊಬ್ಬರದಿಂದ ಕಳೆಕಳೆಯಾಗಿ ಅಲಂಕೃತ ಯುವತಿಯಾಗಿದ್ದವಳಿಂದು

ರಾಸಾಯನಿಕ ಗೊಬ್ಬರಗಳಿಂದ ಬೆಂದು ಬಸವಳಿದ ವೃದ್ಧೆಯಂತಾಗುತ್ತಿದ್ದಾಳೆ…

ಬಹುಮಹಡಿ ಕಟ್ಟಡಗಳ ಭರಾಟೆಯಲ್ಲಿ
ಭೂರಮೆಯ ಹಸಿರುಡುಗೆ ಹರಿದಂತೆ
ಆ ವಸತಿಗಳಿಗೆ ನೀರುಪೂರೈಸುವಲ್ಲಿ
ಭೂತಾಯಿಯೊಡಲಿಗೇ ಕನ್ನಹಾಕಿದಂತೆ 🙁

ಮನುಜರ ದಾಹಕ್ಕೆ ಕೊನೆಮೊದದಿಲ್ಲ
ಅಂತರ್ಜಲ ಅಭಿವೃದ್ಧಿ ಮರೆತಿಹೆವಲ್ಲ
ವೃಕ್ಷಗಳನ್ನು ಧರಾಶಾಯಿಯನ್ನಾಗಿಸುವುದೇ
ನಿತ್ಯದ ಕಾಯಕ
ಕಿತ್ತುಹೋಗಿರುವ ರಸ್ತೆಗಳ ಅಗಲಮಾಡೋದಕ್ಕ…

ಕಾಡುಗಳೆಲ್ಲ ನಾಡಾಗುತ್ತಿದೆ ನೋಡ
ಅದಕಂಡು ಓಟಕಿತ್ತಿದೆ ಕಾರ್ಮೋಡ
ನಡೆದರೆ ತಾಯಿಗೆ ನೋವಾದೀತೆಂದು ಕ್ಷಮೆಯಾಚಿಸುತ್ತಿದ್ದರು ಹಿರಿಯರು
ಐಷಾರಾಮಿ ಬದುಕಿನಲ್ಲಿ ಅವಳನ್ನು ಮರೆತೇಬಿಟ್ಟಿದ್ದಾರೆ ಈಗಿನವರು!

ಬೆಟ್ಟಕಡಿದು ಇಲಿಹಿಡಿದಂತೆ ನಮ್ಮ ಪ್ರಯತ್ನ
ಪ್ರಕೃತಿಯ ಮುಂದೆ ಎಂದಿಗೂ ಸಾಗದು ಮಾನುಷಯತ್ನ
ಕೆರೆಕಟ್ಟೆ ಮುಚ್ಚಿ ಜಾನುವಾರುಗಳಿಗೂ ಪಡಬಾರದ ಪಾಡು
ಹಕ್ಕಿಪಕ್ಷಿಗಳಿಗೆ ತಾವಿಲ್ಲ ಕಟ್ಟಲು ಗೂಡು!

ಮಾಲಿನ್ಯಗಳ ಸುರಿಮಳೆಯಲ್ಲಿ ಮಾಯವಾಗುತ್ತಿದೆ ಮಳೆ
ಕಾದು ಕನಲಿ ಕೆಂಪಾಗಿ ಬಾಯ್ದೆರೆದು ಹಪಹಪಿಸುತ್ತಿದ್ದಾಳೆ ಇಳೆ
ಬತ್ತಿ ಬರಡಾಗುತ್ತಿರುವ ಕಾನನದಿಂದ ಸಾಧ್ಯವೇ ಹಸಿರು ಬೆಳೆ ಮಳೆಯಿಲ್ಲದ ಇಳೆಯಲ್ಲಿ ಬೇಕೆಂದರೂ ಕಾಣದಾಗಿದೆ ಸಮೃದ್ಧವಾದ ಕಳೆ…

ಈಗಲಾದರೂ ಎಚ್ಚೆತ್ತುಕೊಂಡರೆ ನಾವು ಪಾರು
ಕೊಂಚ ಮೈಮರೆತರೂ ಕಾಪಾಡುವವರಿಲ್ಲ ಯಾರೂ
ಈಗಲೇ ಸಹಿಸಲಸಾಧ್ಯ ಧಗೆ, ನೀರಿಗಾಗಿ ಹಾಹಾಕಾರ
ಮುಂದಿನ ಪೀಳಿಗೆಗೆ ಬಹುಶಃ ಪ್ರಾಕೃತಿಕ ಸಂಪತ್ತನ್ನು ರಚಿಸಿಡಬೇಕು ಚಿತ್ರಕಾರ!

Leave a Reply

Back To Top