ಕಾವ್ಯ ಸಂಗಾತಿ
ಪ್ರಮೋದ ಜೋಶಿ ಕವಿತೆ
ಯಾರು ಬಲ್ಲರು
ಕುದಿಯುತಿದೆ ಮೌನ
ಯಾವ ಘಟನೆಗೆ ನಾಂದಿ
ಉರಿದು ಹೋಗದಿರಲಿ
ಸಹನೆಯ ಹವೇಲಿ
ನೋಡಿ ನೋಡಿ ಭುಗಿಲೆದ್ದ ಜ್ವಾಲೆಗೆ
ಮುಚ್ಚಿ ಆರಿಸಿದೆ ಮನ
ಒಳಿತೊ ಕೆಡಕೊ ಅರಿಯದು
ಮುಂಗಡ ಕ್ಷಣಕ್ಕೆ ಹೆದರುತಿದೆ ತನ
ಹುಚ್ಚಿನ ಕಿಚ್ಚಿಗೆ ಬೀಸುತಿದೆ ಗಾಳಿ
ಅರಿವಿಲ್ಲದೆ ಸುಡುವುದು ಅದರ ಚಾಳಿ
ಗಾಳಿ ನಿಂತರೂ ಧಗೆ ಹಾಗೆ ಇದೆ
ಸುಟ್ಟರೂ ಗಾಯದಿ ತೆಪ್ಪಗಿದೆ ಧರೆ
ಅರೆಸುಟ್ಟ ಜಾಗಕೆ ಮತ್ತೆ ಹವಿಸ್ಸು
ಒಳಗೆ ನಿಗಿ ಹೊರಗೆ ಹೊಗಿ
ತಪ್ತಧರೆ ಅಣಿಮಾಡುತಿದೆ ಲಾವಾ
ಸ್ಪೋಟಗೊಳ್ಳುವುದೆಲ್ಲೋ ನಾ ಕಾಣೆ
ಬೀಸುವ ಗಾಳಿ ಹತ್ತುವ ಬೆಂಕಿ
ಇಲ್ಲದಿರೆ ತಾನೆ ಎಲ್ಲಡೆ ಶಾಂತಿ
ಆಲಯದ ಬಯಲಿನಲಿ ಎಲ್ಲವೂ ಒಂದೆ
ಸುಡಲಾರದೆಂಬ ಭಾವನೆ ನಮ್ಮ ಭ್ರಾಂತಿ
ಭುಗಿಲೇಳುವ ಮನಕೆ ಅರಿವು ಕಮ್ಮಿ
ಆತಂಕದ ಕ್ಷಣಕೆ ಎಲ್ಲಿದೆ ಮಾಪನ
ಘಟನೆಯ ಘಟನೆ ಘಟಿಸುವುದೋ
ಘಟನೆಯಲಿ ಘಟ ನಶಿಸುವುದೊ
ಯಾರು ಬಲ್ಲರು
ಪ್ರಮೋದ ಜೋಶಿ ಧಾರವಾಡ