ಗಝಲ್

ಎ.ಹೇಮಗಂಗಾ

ಸ್ವಾರ್ಥದ ಭದ್ರಕೋಟೆಯಿಂದ ಎಂದೂ ಹೊರಗೆ ಬರಲಿಲ್ಲ ನೀನು
ಅನರ್ಥಕೆ ಎಡೆ ಮಾಡಿದ ನಡೆಗೆ ಎಂದೂ ಪರಿತಪಿಸಲಿಲ್ಲ ನೀನು

ಒಂಟಿ ಪಥಿಕಳ ಪಯಣಕೆ ಕೊನೆತನಕ ಜೊತೆ ನೀನೆಂದೆಣಿಸಿದ್ದೆ
ಜನ್ಮ ಕೊಟ್ಟ ಜೀವಕೆ ಬೊಗಸೆಯಷ್ಟೂ ಪ್ರೀತಿ ನೀಡಲಿಲ್ಲ ನೀನು

ಹಮ್ಮು ಬಿಮ್ಮಿನ ನಿನ್ನ ಅಧೀನದಿ ನೋವ ಸಹಿಸಿದ್ದು ಅದೆಷ್ಟು ಬಾರಿ
ಕಟುವರ್ತನೆಗೆ ಕರುಳು ಕೊರಗಿದುದನು ಅರಿಯಲಿಲ್ಲ ನೀನು

ತಾಯ್ತನದ ಬಳ್ಳಿಯಲಿ ಹೂವಿಗಿಂತ ಮುಳ್ಳುಗಳೇ ಹೆಚ್ಚಾದವೇಕೆ
ಸಾಂಗತ್ಯ ಬೇಡಿ ಹರಿಸಿದ ಕಂಬನಿಧಾರೆಗೂ ಕರಗಲಿಲ್ಲ ನೀನು

ಮಾತಿನ ಕೂರಂಬುಗಳ ಕ್ರೂರ ಇರಿತಕೆ ಹೃದಯ ನೆತ್ತರು ಸುರಿಸಿತು
ಮಾಯದ ಗಾಯಕೆ ಮಮತೆಯ ಮದ್ದನು ಲೇಪಿಸಲಿಲ್ಲ ನೀನು

ತುತ್ತಿಟ್ಟವಳ ತೊರೆದು ಮುತ್ತಿಟ್ಟವಳ ಸಂಗವೇ ಸಗ್ಗವೆಂದುಕೊಂಡೆ
ಹೆತ್ತೊಡಲಿಗೆ ಹಚ್ಚಿದ ಕಿಚ್ಚನು ಕೊಂಚವೂ ತಣಿಸಲಿಲ್ಲ ನೀನು

ಬೇಡದ ಹೊರೆಯಾದ ಹೇಮ ಳ ಬಾಳಯಾತ್ರೆಯೀಗ ಮುಗಿದಿದೆ
ಚಿರಶಾಂತಿ ಕಂಡವಳಿಗೆ ಅಂತಿಮ ವಿದಾಯವನೂ ಹೇಳಲಿಲ್ಲ ನೀನು

*************

2 thoughts on “ಗಝಲ್

  1. ತಾಯ್ತತನದ ಬಳ್ಳಿಯಲಿ ಹೂಗಿಂತ ಮುಳ್ಳುಗಳೇ ಹೆಚ್ಚಾದವೇಕೆ?
    ಪ್ರಶ್ನೆ ಮನಸ್ಸಿಗೆ ನಾಟಿತು.
    ಚಿಂತನೆಗೆ ಹಚ್ಚುವ ಗಝಲ್‌.

Leave a Reply

Back To Top