ಮುಂಗಾರು ಆಲಿಂಗನ...
ಬಾಲಕೃಷ್ಣ ದೇವನಮನೆ
ಮುಂಗಾರು ಸುರಿದಂತೆ ಸಣ್ಣಗೆ
ಕೊರೆಯುತಿದೆ ಚಳಿ ಹೊರಗೂ ಒಳಗೂ…
ಬಾಚಿ ತಬ್ಬಿದ ಮಳೆಯ ತೋಳು
ಇಳೆಯ ತೆಕ್ಕೆಯಲಿ
ಕವಿದ ಮೋಡದ ನಡುವೆ ಚಂದ್ರ ತಾರೆಯ ಬೆಳಕ
ಅರಸುತಿವೆ ಇರುಳ ಆಲಿಂಗನದಲ್ಲಿ…
ಕಪ್ಪಾನೆಕಪ್ಪು ಮೋಡಗಳು ಸುರಿಯುತಿವೆ
ಗವ್ವನೆಯ ಇರುಳ ಮೌನ ಸೀಳಿ
ಮಾತಿಗಿಳಿದಿವೆ ಹನಿಯ ಜೊತೆ ಜೀರುಂಡೆ ಕ್ರಿಮಿ ಕೀಟ
ಇಳೆಯ ಬಿಸಿ ಉಸಿರ ಸದ್ದನು ಮೀರಿ…
ನಾಚಿ ಪುಳಕಿತಗೊಂಡ ನವ ವಧುವಿನಂತ ಇಳೆ
ಮೊರೆಯುತಿದೆ ಹುಣ್ಣಿಮೆ ಕಡಲಂತೆ
ಹನಿಯ ಬೆರಳು ಇಟ್ಟಂತೆ ಕಚಗುಳಿ
ಇಳೆಯ ಮೈಯ ತುಂಬಾ
ಮೊಳೆಯುತಿದೆ ಗರ್ಭದೊಡಲಲಿ ಹಸಿರು ಸಂತೆ…
ರಮಿಸುತಿದೆ ಮಳೆಯ ತೋಳು ಇಳೆಯ ತೆಕ್ಕೆಯಲಿ ತಬ್ಬಿ
ಹೊಸ ಹುಟ್ಟು ಒಳಗಿಂದ ಚಿಗುರಿ ಬರುವಂತೆ…
***********
ಮುಂಗಾರಿನ ಸಿಂಚನಕೆ ಮೋಹದ ಇಳೆ ತೇವಗೊಂಡಿದೆ
ಕವಿತೆ ತುಂಬಾ ಚೆನ್ನಾಗಿದೆ
Thank you
ತುಂಬಾ ಚೆನ್ನಾಗಿದೆ…. ಮುಂದುವರೆಸಿ…