ಕಾವ್ಯ ಸಂಗಾತಿ
ಭಾರತಿ ಅಶೋಕ್
ಯಾರ ಪಾಲಿಗಾಯ್ತು ಅಮೃತ
ಜಾತಿ ಕಂದಕದಿ ಅಮೃತವೆಂದೆಣಿಸಿ
ಹಾಲಾಹಲದಿ ತೇಲಿದ್ದು ಹೆಣದ ರಾಶಿ
ತಾಯ್ ಎದೆಯ ಅಮೃತ ಕುಡಿದು
ವಿಷ ಕಕ್ಕುವ ಬಾಯಿಗೆ ಅಮೃತ ಲೇಪನ
ಮತಿಗೆಟ್ಟು ಮತಕ್ಕೆ ಜೋತು ಬಿದ್ದು ಹರೆಯಕೆ ಕಿಚ್ಚಿಟ್ಟ ಬೆಂಕಿಯಲಿ ಮೈ ಕಾಯಿಸುವ ಲಂಡ
ಗುಲಾಮರ ಅಟ್ಟಹಾಸಕೆ ಸಂಭ್ರಮದ ಅಮೃತ
ಅವರೇನೋ ತನು ಮನ ಧನದಿ ಕಟ್ಟಿಟ್ಟು
ತಿರಂಗ, ಕಾಯ ವಾಚಾ ಮನಸಾ ಕಾಯಿರೆಂದು
ಅಭಯವಿತ್ತು ಇಟ್ಟ ಮಾತಿಗೆ ತಪ್ಪದೇ ಹರಿಸಿದ್ದು ಕೇಸರಿ ನೆತ್ತರು,ಮೆರೆಸಿದ್ದು ಮತ್ಸರ
ಬರೆದಿಟ್ಟ ಠರಾವಿಗೆ ಸದ್ಗತಿ ತೋರಿ ಸ್ವತಃ ಬರೆಯುತಿಹರು ಮೇಲಿಂದ ಮರಣ ಶಾಸನ
ದಿಕ್ಕೆಟ್ಟ ದಲಿತ ಬೆಂಕಿ ಇಕ್ಕಿ ತನ್ನದೇ ಹೆಣಕ್ಕೆ
ಮುಗಿಲಿಗೆ ಬಾಯ್ತೆರೆದು ನಿಂತಿಹನು
ಆತ್ಮ ಸತ್ತ ಸೂತಕಕೆ ಅಮೃತ ಉಣಿಸಲು
ಹೇಳು ಆಯಿ ಯಾರು ಮಕ್ಕಳು??
ನೀನ್ಹೆತ್ತವರಲ್ಲವೆ ನಾವೆಲ್ಲರು
ಅವನೇಕೆ ಹೀನ, ಇವನೇಕೆ ಕುಲೀನ
ನಿನ್ನುದರದಿ ಭೇದವುಂಟೆ
ನಿನ್ನ ರಕುತಕೆ ಮಲಿನವುಂಟೇ ನೀನೇ ಹೇಳು
ಭಾರತಿ ಅಶೋಕ್