ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಆವಿಯಾದ ಭಾವ
ನುಂಗಲಾರದೆ ಉಗುಳಲಾರದ
ತಳಮಳದ ಭಾವನೆಗಳು
ಎದೆಯಗೂಡಿನಲಿ
ಒಯ್ದಾಡಿ ಆವಿಯಾಗಿವೆ
ಅಂತರಂಗದ ಅಳಲು
ಬಹಿರಂಗದ ನಾಟಕೀಯತೆಗೆ
ಹ್ರದಯಗೂಡು ಬಸವಳಿದು
ಕಮರಿಹೋಗಿದೆ
ಹೇಳಿದರೆ ಆಡಿಕೊಂಡು ನಕ್ಕಾರೆಂಬ
ಸ್ವಾಭಿಮಾನ
ನುಂಗಿದರೆ ಕರಕಲಾಗಿ ಸವೆದಾವೆಂಬ
ಅಳುಕು
ಎರಡರ ನಡುವೆ ದಿಕ್ಕುತಪ್ಪಿದ
ನಾವಿಕನ ನರಳಾಟದಲಿ
ಭಾವದ ಕುಸುಮಗಳು ತೇಲದೆ
ಮುಳುಗದೆ ಬಾಡಿಬತ್ತಿವೆ
ಅರಳಿ ಪರಿಮಳ ಸೂಸುವ
ಮನವು ಭಾರವಾಗಿ ಬಂಡೆಯಂತೆ
ಜಡವಾಗಿದೆ
ಕುದ್ದಾದರೂ ಕುದಿಯಲಿ ಆವಿಯಾಗಿ
ಹೋಗಲಿ ಬಿಡು.
ಅಂತರಂಗದ ಬಿಸಿ ತಣ್ಣಗಾದೀತು.
ಲಲಿತಾ ಪ್ರಭು ಅಂಗಡಿ