ಪುಸ್ತಕ ಸಂಗಾತಿ

ಬರ್ಫದ ಬೆಂಕಿ

ಬರ್ಫದ ಬೆಂಕಿ
ಕವನ ಸಂಕಲನ
ಲೇಖಕರು- ನಾಗರೇಖಾ ಗಾಂವ್ಕರ್
ಸಾಧನ ಪಬ್ಲಿಕೇಷನ್

ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ನಾಗರೇಖಾ ಗಾಂವ್ಕರ್ ಅವರ ಮೂರನೇ ಕವನ ಸಂಕಲನವಿದು.
ಏಣಿ ಎಂಬ ಪ್ರಥಮ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ದೊರೆತಿದೆ. ಇನ್ನೊಂದು ಪದಗಳೊಂದಿಗೆ ನಾನು ಎಂಬ ಕವನ ಸಂಕಲನ.

ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧ ಮತ್ತು ಆಂಗ್ಲ ಸಾಹಿತ್ಯ ಲೋಕ ಭಾಗ -೨ ಎಂಬ ಎರಡು ವಿಮರ್ಶಾತ್ಮಕ ಕೃತಿಗಳನ್ನು ಇವರು ರಚಿಸಿದ್ದಾರೆ.

ಈ ಕವನ ಸಂಕಲನದಲ್ಲಿ ಒಟ್ಟು ನಲವತ್ಮೂರು ಕವಿತೆಗಳಿವೆ.

ಅ) ಮಾಗುವುದೆಂದರೆ – ಅಡಿಯಲ್ಲಿ ಹನ್ನೆರಡು
ಬ)ಅವಳ ಕವಿತೆಗಳು- ಇದರಲ್ಲಿ ಹದಿಮೂರು
ಕ) ಕಾಲಾತೀತ ಕವಿತೆಗಳು- ಎಂಟು
ಡ)ಬಾನ್ಸುರಿಯ ನಾದ- ಹತ್ತು ಕವಿತೆಗಳಿವೆ.

ಮೊದಲು ಕವಿತೆ ಆಳವೆಂಬ ಅರಿವು ನೋಡಿ…

ಎದೆಗಿಳಿದ ಅಕ್ಷರಗಳು
ಶೋಕೇಸಿನ ಕಪಾಟಿನಲ್ಲಿ
ಗಾಜಿನ ಕೋಣೆಯಲ್ಲಿ ತಳತಳಿಸುವ
ಪದಕವಾಗಲ್ಲ..
ನೆಲಕ್ಕಿಳಿಯಬೇಕು,
ಕೆಸರ ಕೊಳದ ನೈದಿಲೆಯಾಗಬೇಕು.
ಬೆಳಕಿನ ಹಾಡ ಹೊಮ್ಮಿಸಬೇಕು.

ಅವಳು ನಡೆಯುತ್ತಿದ್ದಾಳೆ… ಕವಿತೆಯಲ್ಲಿ

ಅಕ್ಷರದ ಅರಮನೆಗೆ ಪರಿಮಳವ
ಮಾರಿ ಬರಬೇಕು.

ಎಂತಹ ಸೊಗಸಾದ ಸಾಲುಗಳು.!

ಶೀರ್ಷಿಕೆ ಕವಿತೆಯಾದ ಬರ್ಫದ ಬೆಂಕಿಯಲ್ಲಿ…

ಉಕ್ಕುವ ಕಡಲ ಮೋಹಿಸುವ ಅವಳ
ಹಠಕ್ಕೆ ಬರ್ಫದ ಬೆಂಕಿಯ ಕುಡಿವ ಹುಚ್ಚು.
ಸೀದು ಹೋದರೂ ಬಿಸಿಯುಸಿರ
ಹಂಬಲದ ಪಾತ್ರೆ
ಮತ್ತೆ ಮತ್ತೆ ತಿಕ್ಕಿ ತಿಕ್ಕಿ ಶುಭ್ರವಾಗಿಡುವುದೇ
ಅವಳ ದಿವ್ಯ ಭಕ್ತಿ.

ರಾತ್ರಿಯಲ್ಲಿ ಹಗಲಿನ ಪಾಳಿ…ಸ್ವಗತದ ಸಾಲುಗಳಿರಬಹುದು.

ತೆಕ್ಕೆಯೊಳಗಿಳಿದ ಪದಗಳ
ಉಸಿರೊಳಗೆ ಬಚ್ಚಿಟ್ಟುಕೊಂಡೇ
ಕಾಯ್ದುಕೊಂಡೇ
ಹಾಡು ಹೆಣೆಯುವುದೆಂದರೆ
ರಾತ್ರಿಯಲ್ಲೂ ಹಗಲಿನ ಪಾಳಿ.

ಮಾತ್ರಿಯೋಷ್ಕಿ ಕವಿತೆಯ ಗೊಂಬೆಯೊಳಗಿನ ಗೊಂಬೆಯ ಸೃಷ್ಟಿ ಚೆನ್ನಾಗಿದೆ.

ಗೂಸಬಮ್ಸ ನಿರೀಕ್ಷೆಯಲ್ಲಿ ಕವಿತೆ ಗಮನಿಸಿ…

ಗಗನ ಚುಂಬಿ ಕಟ್ಟಡದ
ಏರುವ ಇಳಿಯುವ
ಎಸ್ಕಲೇಟರಗಳ ಮೇಲೆ
ಕಿರುಸೊಂಟದ
ಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನು
ಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರ
ಜೀವ ಹೊತ್ತ ಗಜಗಾಮಿನಿಯರನ್ನು
ಕಂಡು ಅರೆರೆ.. ಎಂದುಕೊಳ್ಳುತ್ತ
ಮೈ ರೋಮ ನಿಮಿರಿತೆ?
ಕಾಣದೇ ವ್ಯಗ್ರಗೊಂಡೆ.

‌…..

ಮಿಂಚು ಕಂಗಳ
ಸುಂದರಾಂಗರ ಕಣ್ಣಿನ ಸಂಚಲನೆಗೆ
ಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದ
ಸೆಳೆತಕ್ಕೆ ಮನಸ್ಸು ಜೋಲಿ ಹೊಡೆದು
ಕೈ ನೋಡಿದರೆ
ರೋಮಾಂಚನ ವ್ಯಾಕ್ಸಾಯನ.

ನಾಗರೇಖಾರ ವೈವಿಧ್ಯತೆಯ ಝಲಕ್ ಇಲ್ಲಿದೆ.

ಮುನ್ನುಡಿಯಲ್ಲಿ ಹಿರಿಯರಾದ ಶ್ರೀ ಸುಬ್ರಾಯ ಚೊಕ್ಕಾಡಿ ಅವರು ಹೇಳಿರುವಂತೆ- ವಸ್ತು ವೈವಿಧ್ಯ, ಭಾವವಿಲಾಸ, ಹೊಸ ರೂಪಕಗಳ ಸೃಷ್ಟಿ, ಸೂಕ್ಷ್ಮಜ್ಞತೆ, ಭಾಷೆಯ ಪರಿಣಾಮಕಾರಿ ಬಳಕೆ, ಪಕ್ವ ಚಿಂತನೆಗಳ ಕಾರಣಗಳಿಗಾಗಿ ನಾಗರೇಖಾ ಅವರು ಕಾವ್ಯಾಸಕ್ತರು ಗಮನಿಸಲೇಬೇಕಾದ ಕವಯತ್ರಿಯಾಗಿದ್ದಾರೆ. ಒಮ್ಮೆ ಓದಲೇಬೇಕಾದ ಕೃತಿ ‘ ಬರ್ಫದ ಬೆಂಕಿ’.
**********

ಡಾ. ಅಜಿತ್ ಹರೀಶಿ

One thought on “ಪುಸ್ತಕ ಸಂಗಾತಿ

Leave a Reply

Back To Top