ಕಾವ್ಯ ಸಂಗಾತಿ
ಡಾ. ಯಲ್ಲಮ್ಮ ಕೆ
ಕೇಳೇ ಅಕ್ಕಾ..
ಅಕ್ಕಾ,
ಕೇಳೇ ಅಕ್ಕಾ..,
ತುತ್ತಿನ ಚೀಲವಾ
ತುಂಬಿಸಲೋಸುಗ
ಎರವರ ಮನೆಯ
ತೊತ್ತಾಗಿ
ಬಾಳುತ್ತಿರುವೆನೇ..,
ಊರ ಮುಂದಿನ
ಕೆರೆ, ತೊರೆ, ಹಳ್ಳವು
ಬತ್ತಿರಲು..,
ಊರಹೊರಗಿನ
ಪಾಳು ಗುಡಿಯು
ಬಿದ್ದಿರಲು..,
ದಾರಿಹೋಕ
ಪುಂಡ-
ಪೋಕರಿಕಗಳಿಗೆ
ಹೆದರಿ..,
ಶಯನಕ್ಕೆ
ಎರವರ ಮನೆಯ
ತೊತ್ತಾಗಿ
ಬಾಳುತ್ತಿರುವೆನೇ..,
ಹೆಣ್ಣು ಅಬಲೇ
ತಂದೆ, ಗಂಡ –
ಮಕ್ಕಳಾಶ್ರಯದಿ
ಬದುಕಬೇಕೆಂಬ
ಮನುವಿನ
ಮಂತ್ರ, ತಂತ್ರಕ್ಕೆ
ತಲೆಬಾಗಿ
ಎರವರ ಮನೆಯ
ತೊತ್ತಾಗಿ
ಬಾಳುತ್ತಿರುವೆನೇ..,
ವಿದ್ಯೆ ನೈವೇದ್ಯವಾಗಿ
ಪರಶಿವನಿಗದು
ಅರ್ಪಿತವಾಗಿ
ಹುದ್ದೆಯನ್ಹಿಡಿದು
ತನ್ನ ಕಾಲ್ಮೇಲೆ
ತಾ ನಿಂತಾಗ್ಯೂ..,
‘ಹೂವೊಂದು ಬೇಕು
ಬಳ್ಳಿಗೆ,
ಮಗುವೊಂದು
ಬೇಕು ಹೆಣ್ಣಿಗೆ’
ಎಂಬೀ –
ಹಾಡಿಗೆ ದನಿಯಾಗಿ..,
ಹೃದಯದ ಬಡಿತಕ್ಕೆ,
ತನುವಿನ ತುಡಿತಕ್ಕೆ
ಮನವ ನೀಡಿ –
ಎರವರ ಮನೆಯ
ತೊತ್ತಾಗಿ
ಬಾಳುತ್ತಿರುವೆನೇ..,
ಗಂಡಿನ ಅಂಕೆ-
ಶಂಕೆಯ ನಡುವೆ
ಉಸಿರುಗಟ್ಟಿ ಹಿಡಿದು
ಹೊರನಡೆದರೆ..,
‘ಆಡಿಕೊಂಬುವವರ
ಮುಂದೆ ಎಡವಿ ಬಿದ್ದರೆ
ಹೇಗೆಂಬ?’ ಭಯದಿ,
ಛಲದಿ –
ಎರವರ ಮನೆಯ
ತೊತ್ತಾಗಿ
ಬಾಳುತ್ತಿರುವೆನೇ..,
ಅಕ್ಕಾ,
ಕೇಳೇ ಅಕ್ಕಾ..,
ಬಾಳ ಬೇಗುದಿಯಲಿ
ಬೆಂದು-ನೊಂದು
‘ಬಸವ’ಳಿದಿರುವೆನೇ..,
ಡಾ.ಯಲ್ಲಮ್ಮ ಕೆ
ತುಂಬಾ ಆರ್ಥಗರ್ಭಿತವಾಗಿದೆ