ಎ.ಎನ್.ರಮೇಶ್.ಗುಬ್ಬಿ-ಕಿನಾರೆ ಕನ್ನಿಕೆಯ ಹನಿಗಳು..

1. ಸಂದೇಹ.!

ಚಂದಮನಿಗೂ ಶುರುವಾಗಿದೆ ಅನುಮಾನ
ಶರಧಿ ಬೋರ್ಗರೆದು ಉಕ್ಕುತ್ತಿರುವುದು..
ತನ್ನಯ ಬೆಳದಿಂಗಳಿನ ಆಕರ್ಷಣೆಗೋ?
ತೀರದಲಿ ಕುಳಿತ ಅವಳ ನಗೆಬೆಳಕಿಗೋ??

2. ಮೋಡಿ.!

ದಂಡೆಯಲಿ ಕುಳಿತವಳ ಪಾದಗಳೊಂದಿಗೆ
ಆಡುತಿವೆ ಕಡಲಲೆಗಳು ಇಡುತ ಕಚಗುಳಿ
ಮನಸೋತು ಆಗ ಕಿಲಕಿಲ ನಗೆ ಸೊಬಗಿಗೆ
ಹೋಗುತ್ತಲೇ ಇಲ್ಲ  ಕಡಲಿನೆಡೆಗೆ ಮರಳಿ.!

3. ಸಾಮ್ಯತೆ.!

ಕಿನಾರೆಯಲಿ ಕುಳಿತವಳ ಕಣ್ಣೆದುರಿಗೆ
ಮೊರೆಯುತಿವೆ ಸಾಗರದ ಅಲೆಗಳು
ಜೊತೆಗೆ ಎದೆಯಾಳದ ಒಡಲೊಳಗೆ
ಭೋರ್ಗರೆದಿವೆ ಭಾವದ ಸೆಲೆಗಳು.!

4. ಪವಾಡ.!    

ತೀರಕೆ ಬೀಸಿ ಬಂದ ಮಂದಮಾರುತ
ಅವಳ ಹೆರಳ ಸೋಕಿದೊಡನೆ ಸ್ಥಗಿತ
ಚಲನೆ ಮರೆತು ಆ ರೇಷಿಮೆ ಕೇಶಗಳ
ಹಾರಿಸುತ ಪುಳಕಿಸುವುದರಲ್ಲೇ ನಿರತ.!

5. ಲಜ್ಜೆ.!

ತೀರದಲ್ಲಿ ನಿಂತವಳ ತೀರದ
ನೋಟಕ್ಕೆ ನಾಚುತ ಕೆಂಪಾದ
ಆ ಸಂಜೆಸೂರ್ಯ ಮೆಲ್ಲಹಾರಿ
ಕಡಲೊಳಗೆ ಬಚ್ಚಿಟ್ಟುಕೊಂಡ.!

6. ಕಾಂತಿ.!

ಅವಳ ಕಣ್ಣಂಚಲಿ ಮಿನುಗುತಿಹ
ನಕ್ಷತ್ರಗಳ ಹೊಳಪಿಗೆ ಬಾನಂಚಿನ
ಆ ತಾರೆಗಳೂ ಅಕ್ಷರಶಃ ಕಳಾಹೀನ
ಚಂದಿರನೂ ಈಗಿವಳ ಪರಾಧೀನ.!


Leave a Reply

Back To Top