ಗ್ಯಾರಂಟಿ ರಾಮಣ್ಣವಿರಚಿತ ‘ಸಂಕೋಲೆ’ ಜಾತಿ ವ್ಯವಸ್ಥೆಯೊಳಗೆ ಸುಳಿದಾಡುವ ಸಂಕೋಲೆ ಸಾಮಾಜಿಕ ನಾಟಕ ಒಂದು ಅವಲೋಕನ-ಗೊರೂರು ಅನಂತ ರಾಜು ಹಾಸನ

ಹಾಸನ ಜಿಲ್ಲಾ ಕ.ಸಾ.ಪ.ಭವನದಲ್ಲಿ ಕಲಾವಿದ ಗ್ಯಾರಂಟಿ ರಾಮಣ್ಣ ರಚಿಸಿ ನಿರ್ದೇಶಿಸಿದ ಸಂಕೋಲೆ ಸಾಮಾಜಿಕ ನಾಟಕ ಶನಿವಾರ ಪ್ರದರ್ಶಿತವಾಯಿತು. ಜಾತಿ ವ್ಯವಸ್ಥೆಯಲ್ಲಿ ಒಂದು ದಲಿತ ಕುಟುಂಬ ಶೋಷಣೆಗೆ ಬಲಿಯಾಗುವುದನ್ನು ನಾಟಕ ಬಿಂಬಿಸಿತು. ಆದರೆ ನಾಟಕ ಪ್ರದರ್ಶನಕ್ಕೆ ಕ.ಸಾ.ಪ. ಭವನ ಸೂಕ್ತ ರಂಗವೇದಿಕೆ ಆಗಲಿಲ್ಲ. ಹಳೇಬೀಡು ಶ್ರೀ ಪುಷ್ಪಗಿರಿ ಸಂಸ್ಥಾನಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜಿಯವರು ತಿಳಿಸಿದಂತೆ ೧೫೦ ಮಂದಿ ಪ್ರೇಕ್ಷಕರು ಕುಳಿತು ನೋಡಬಹುದಾದ ಮಿನಿ ಥಿಯೇಟರ್ ಖಂಡಿತ ಹಾಸನಕ್ಕೆ ಅಗತ್ಯ ಇದೆ. ಕ.ಸಾ.ಪ ಭವನ ಸಭೆ ಸಮಾರಂಭ ನಡೆಸುವುದಕ್ಕೆ ಸೂಕ್ತ. ನಾಟಕ ಪ್ರದರ್ಶನಕ್ಕೆ ತಕ್ಕ ವ್ಯವಸ್ಥೆ ಇಲ್ಲ. ತಂಡ ಹಗಲು ವೇಳೆ ನಾಟಕ ಪ್ರದರ್ಶಿಸಿ ಲೈಟಿಂಗ್ ಮೈಕ್ ಎಲ್ಲವೂ ವ್ಯರ್ಥ.!  ಕ.ಸಾ.ಪ.ಭವನ ಪಕ್ಕ  ಇರುವ ಬಯಲು ರಂಗಮಂದಿರ ಬಳಕೆಯಾಗದೇ ಅದೂ ಕೂಡ ಸದ್ಯ ವ್ಯರ್ಥ.! ಇದಕ್ಕೆ ಹೊಂದಿಕೊಂಡಂತೆ  ಹಿಂದಕ್ಕೆ ರಂಗತಾಲೀಮು ಕೊಠಡಿ ಮುಂದೆ ೧೫೦ ಪ್ರೇಕ್ಷಕರು ಕೂರಲು ಬಿಸಿಲು ಮಳೆಗೆ ನೆರಳು ಸೌಕರ್ಯ ಒದಗಿಸಿದರೆ ಕಲಾವಿದರಿಗೆ ಅನುಕೂಲ ಆಗಬಹುದು.
ಗ್ಯಾರಂಟಿ ರಾಮಣ್ಣನವರ ೭೦ನೇ ವರ್ಷದ ಹುಟ್ಟು ಹಬ್ಬಕ್ಕೆ ಕಲಾವಿದರು ಪ್ರಸೆಂಟ್ ಮಾಡಿದ ನಾಟಕ ಈ ಹಿಂದೆ ಯುವಜನ ಮೇಳಗಳಲ್ಲಿ ಉಳ್ಳವರು, ಜೀತ, ಪಿಡುಗು, ಬಲಿಪಶು, ಓಟು ಏಟು, ನ್ಯಾಯಕ್ಕೆ ನೇಣುಗಂಬ, ತಿಗಣೆಗಳು ಎಂಬ ಹೆಸರಿನಲ್ಲಿ ಪ್ರದರ್ಶನಗೊಂಡಿದೆ ಎಂದು ರವಿ, ವೆಂಕಟೇಶ್ ತಿಳಿಸಿದರು. ನಾನು ಇವು ಬೇರೆ ಬೇರೆ ನಾಟಕಗಳೆಂದೇ ತಿಳಿದಿದ್ದೇ.  ಯುವಜನ ಮೇಳದಲ್ಲಿ ೪೫ ನಿಮಿಷಕ್ಕೆ ಸೀಮಿತಗೊಳಿಸಿ ಇಲ್ಲಿ ೨ ಗಂಟೆಗೆ ಎಳೆಯಲಾಗಿತ್ತು.
ನಾಟಕದ ಕೇಂದ್ರ ಪಾತ್ರ  ಹನುಮ (ನಟರು ಎ.ನಂಜಪ್ಪ). ಈತ ಕೈಲಿ ಗುದ್ದಲಿ ಹಿಡಿದು ತನ್ನ ಹೊಲದ ಕಡೆ ಹೊರಟಿರಲು ದಾರಿಯಲ್ಲಿ ಭೈರಜ್ಜ ಬಾಯಾರಿ ಸುಸ್ತಾಗಿ ಬಿದ್ದಿರುವನು. ಈ ಅಜ್ಜನಿಗೆ ನೀರು ತರಲು ಅಮ್ಮನವರ ಕೊಳಕ್ಕೆ ಹೊರಡಲು ಆಗ ಅಶರಿರವಾಣಿಯಂತೆ ಹಿನ್ನೆಲೆ ಧ್ವನಿ. ‘ಏ ಹನುಮ, ನೀನು ಕೀಳು ಜಾತಿಯವನು. ಅಮ್ಮನವರ ಕೊಳ ಮುಟ್ಟಿದರೆ ಮೈಲಿಗೆ ಆಗೋಲ್ವೇನೋ. ಊರಿನವರಿಗೆ ಈ ವಿಷಯ ಗೊತ್ತಾದ್ರೆ ನಿನ್ನ ಸುಮ್ನೆ ಬಿಡ್ತಾರಾ..


ಖಂಡಿತ ಬಿಡುವುದಿಲ್ಲ ನಾಟಕದ ಕಡೆಯವರೆಗೂ ಕಾಡಿಸಿ ಪೀಡಿಸಿ ಗೋಳುಹೂಯ್ದು, ಜಮೀನು ಕಿತ್ಕೊಂಡು, ಜೀತಕ್ಕೆ ಮಡಿಕೊಂಡು ಹಿಂಸೆ ನೀಡಿ ಊರು ಬಿಡಿಸುವರೆಗೂ ನಾಟಕ ಹನುಮನ ಕುಟುಂಬವನ್ನು ಪೀಡಿಸುತ್ತದೆ. ನೀರು ತರಲು ಚೆಂಬು ಇಲ್ಲದೇ ಹನುಮ ಅಮ್ಮನವರ ಕೊಳದಲ್ಲಿ ಇಳಿದು (ಕಲ್ಪಿಸಿಕೊಳ್ಳಿ) ಟವಲ್‌ನ್ನು ನೀರಿಗೆ ಅದ್ದಿ ತಂದು ಅಜ್ಜನ ಬಾಯಿಗೆ ಹಿಂಡುವುದನ್ನು ಪೂಜಾರಿ (ವಿಜಯಕುಮಾರ್) ನೋಡಿ ‘ಅಯ್ಯೋ.. ಶೂದ್ರ ಮುಂಡೇದೆ, ಅಮ್ಮನವರ ಕೊಳದ ನೀರು ಮುಟ್ಟಿ ಮೈಲಿಗೆ ಮಾಡಿಬಿಟ್ಟೆಲ್ಲೋ..ಅನಿಷ್ಟ ಮುಂಡೇದೆ.. ಎಂಬಲ್ಲಿಗೆ ನಾಟಕ ಸಾಗುವ ಹಳೆಯ ಹಾದಿ ತಿಳಿಯುತ್ತದೆ.  ಪಂಚಾಯ್ತಿ ಕಟ್ಟೆಯಲ್ಲಿ ಗೌಡ್ರ ಗದ್ಲ ನಡೆಯುತ್ತದೆ. ಇತ್ತ ಸಿಂಗಾರಿಗೌಡ (ಕೆ.ಬಿ.ಸತೀಶ್) ಇವನಿಗೊಬ್ಬ ಚೇಲ ಕೆಂಪ (ನಾಗಮೋಹನ್) ಅತ್ತ ರಾಮೇಗೌಡ (ಬಿದರೆ ರವಿಕುಮಾರ್) ಅವನಿಗೂ ಒಬ್ಬ ನಿಂಗ (ರಮೇಶ್).  ಮದ್ಯೆ ಅಜ್ಜಪ್ಪನ ಪಾತ್ರದಲ್ಲಿ ಗೋವಿಂದೇಗೌಡರು ಪಾಪ ಗೋವು ಇದ್ದಂತೆ. ಪಾತ್ರ ಮುಗಿದರೂ ನಾಟಕದ ನಡುವೆ ಎಲ್ಲಂದರಲ್ಲಿ ಅಡ್ಡಾಡುತ್ತಾರೆ. ಈ ಅಜ್ಜಪ್ಪ ಎರಡೂ ಗೌಡ ಹುಲಿಗಳ ಆರ್ಭಟಕ್ಕೆ ನಜ್ಜುಗುಜ್ಜಾಗಿ ಅತ್ತ  ಪೂಜಾರಿ ಮೈ ಮೇಲೆ ದೇವರು ಬಂದು ಹೇಳುತ್ತೆ. ‘ದೇವಿಗೆ ಆಗಿರೋ ಮೈಲಿಗೆ ಕಳೆಯ ಬೇಕೂಂದ್ರೆ ದೇವಿಗೆ ೧೦ ಕುರಿ, ೨೫ ಕೋಳಿ, ೩ ಹಂದಿ ಕುಯ್ದು ನೇವೇದ್ಯ ಮಾಡಬೇಕು.  ಊರಿಗೆಲ್ಲಾ ಊಟ ಹಾಕಬೇಕು. (ಊರಲ್ಲಿ ಎಷ್ಟು ಒಕ್ಕಲು ಐತೆ ಅಂತ ತಿಳಿಲಿಲ್ಲ?)  ಊರ ಹೆಣ್ಣುಮಕ್ಕಳೆಲ್ಲಾ ಬಾಯಿ ಬೀಗ ಚುಚ್ಕೊಂಡು ಆರತಿ ಮಾಡಬೇಕು. ತಪ್ಪು ಮಾಡಿದವ ೫೦೦೧ರೂ. ದೇವಿ ಹುಂಡಿಗೆ ದಂಡ ಹಾಕಬೇಕು. ಈಗಿದ್ರೆ ದೇವಿ ಊರಲ್ಲಿ ರ‍್ತಾಳಂತೆ.! ಇಲ್ಲಾಂದ್ರೆ ಊರಾಚೆ ಇರೋ ಹುಣಸೆ ಮರಕ್ಕೆ ಸೇರಿಕೊಂಡು ಬಿಡುತ್ತಂತೆ.! ದೇವಿ ಅಪ್ಪಣ್ಗೆ ಮುದುಕಪ್ಪ ಬಾಯಿ ಬಾಯಿ ಬಡ್ಕೊಂಡು ‘ಅಯ್ಯಯ್ಯೋ ಅಂಗೆ ಮಾಡಬೇಡ ಕಣವ್ವ. ನೀನೇಳಿದಂತೆ ಮಾಡ್ತಿವಿ.. ಎಂದು ಹನುಮನಿಂದ ಹೆಬ್ಬಟ್ಟು ಒತ್ತಿಸಿಕೊಡುತ್ತಾನೆ.  ತೀರ್ಪಿನಂತೆ ಸಿಂಗಾರಿಗೌಡ ಹನುಮನಿಗೆ ಸಾಲ ಕೊಟ್ಟು ತನ್ನ ಗದ್ದೆ ಪಕ್ಕ ಇರೋ  ಹನುಮನ ೨ ಎಕರೆ ಗದ್ದೇನ ೩ ವರ್ಷ ಬೋಗ್ಯ ಮಾಡಿಕೊಂಡು ಜೀತಕ್ಕೆ ಮಡಿಕ್ಕೊಂಡು ಅಟ್ಟಾಡಿಸಿ ಶೋಷಣೆಗೈಯುವುದೇ ನಾಟಕದ ಕಥಾವಸ್ತು.  ಸಿಂಗಾರಿಗೌಡ್ರ ಶೋಷಣೆಗೆ ಎಂಎಲ್‌ಎ (ರಮೇಶ್ ಬಿಟ್ಟಗೌಡನಹಳ್ಳಿ) ಎಸ್‌ಐ (ದೇವೇಗೌಡ) ಲಾಯರ್ ಇವರೆಲ್ಲರೂ ಕೈಜೋಡಿಸಿ ನಾಟಕ ಮುನ್ನೆಡೆಸುತ್ತಾರೆ. ನಾಟಕದಲ್ಲಿ ಬರುವ ಸ್ತ್ರೀಪಾತ್ರಗಳು ಹನುಮನ ಹೆಂಡತಿ ಕಮಲಮ್ಮ (ಮಂಜುಳಾ ಉಮೇಶ್) ಮಗಳು ಮೀನಾಕ್ಷಿ (ತಾರಾ ಗಣೇಶ್) ಸಿಂಗಾರಿಗೌಡರ ಹೆಂಡತಿ ಗಂಗಾ (ಅರುಣಾ ಭಾಸ್ಕರ್). ಪೋಷಕ ಪಾತ್ರದಲ್ಲಿ ಚಂದ್ರಶೇಖರ ಶೆಟ್ರು ಎರಡು ಪಾತ್ರಗಳಲ್ಲಿ ಬಂದು ಹೋಗುತ್ತಾರೆ.  


One thought on “ಗ್ಯಾರಂಟಿ ರಾಮಣ್ಣವಿರಚಿತ ‘ಸಂಕೋಲೆ’ ಜಾತಿ ವ್ಯವಸ್ಥೆಯೊಳಗೆ ಸುಳಿದಾಡುವ ಸಂಕೋಲೆ ಸಾಮಾಜಿಕ ನಾಟಕ ಒಂದು ಅವಲೋಕನ-ಗೊರೂರು ಅನಂತ ರಾಜು ಹಾಸನ

Leave a Reply

Back To Top