ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ಶಕುನ ನುಡಿದ ಬಾಗಿಲು
ಮಧ್ಯರಾತ್ರಿ ಎದ್ದ ಬುದ್ಧನಿಗೆ
ಯಾರು ಜೊತೆಗೆ ಬರಲಿಲ್ಲ
ಜೊತೆಯಾರಿಲ್ಲ ಎಂಬುದರ ಚಿಂತೆಯೂ
ಅವರಿಗಿರಲಿಲ್ಲ
ಸಂತೋಷದ ನಿದ್ದೆಗೆ
ಜಾರಿದ ಮೂವರು ನಗುನಗುತಾ
ಮಲಗಿದ್ದರು
ಬೆಳಗಿನ ಸೂರ್ಯನ ಶುಭೋದಯಕ್ಕೆ
ಮಧ್ಯ ರಾತ್ರಿ
ಮನೆ ಬಾಗಿಲಿಗೆ ಬಂದ ಚಂದ್ರ
ಮಂದಹಾಸದ ಮುಖಕ್ಕೆ
ಬೆಳಕು ನೀಡಿ ಬುದ್ದನಷ್ಟೇ ಎಬ್ಬಿಸಿ
ಲೋಕದ ಕತ್ತಲೆಡೆಗೆ
ಕೈ ತೋರಿ ಹೊರಡು ಎಂದ
ನಿದ್ರೆಯು, ನಿಲ್ಲು ಬುದ್ಧ
ನಾನಿನ್ನು ಲೋಕದ ಜೊತೆಗಿರುವೆ
ಮಡದಿ ನಿನ್ನ ನಿನ್ನಾಸರೆಗೆ
ನಿದ್ರಿಸುತಿಹಳು,
ಮಗನು ರಾಜ್ಯ ವಿಸ್ತರಿಸುವ ಕನಸು ಕಾಣುತಿಹನು
ಧನಕನಕ ಆಭರಣ ತುಂಬಿದ ತಿಜೋರಿ
ಬಾಗಿಲು ತೆರೆದು ಫಳಫಳನೆ ಹೊಳೆದು
ಚಂದ್ರನಿಗೂ ಕಣ್ಣು ಕುಕ್ಕಿತು
ಆದರೆ ಲೋಕದ ಕತ್ತಲು
ಬುದ್ದನಿದ್ದೆಡೆ ಬಂದು ನಿಂತು ಬಾ ಎಂದಾಗ
ಮನೆಯಿಂದ ಹೊರಡುವ ಮುನ್ನ
ಹೆಂಡತಿ ಮಗನೊಂದಿಗೆ ಮಾತನಾಡಬೇಕೆಂದಿದ್ದ
ಹೋಗಿ ಬರುವೆ
ಎನ್ನುವಷ್ಟರಲ್ಲಿ, ಕಾವಲಿನವನಿದ್ದ ಬಾಗಿಲು ನೂಕಿ
ಸಾಕು ಹೊರಡು ಬುದ್ಧ
ಎಲ್ಲರೂ ನಿದ್ದೆಯಲ್ಲಿದ್ದರೆ
ನೀ ಜಗ ಉದ್ಧರಿಸಲು ಸಾಧ್ಯ
ಎಂದು ಶಕುನ ನುಡಿಯಿತು
ಹನಮಂತ ಸೋಮನಕಟ್ಟಿ