ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಗೀಜಗನ ಗೂಡು
ಎಲ್ಲಿಂದಲೋ ಹಾರಿ ಬಂದ ಗೀಜಗ ಹಕ್ಕಿ
ಕಿಟಕಿಯಲೊಂದು ಗೂಡನು ಕಟ್ಟಿ
ಸಂಗಾತಿಯೊಡಗೂಡಿ ಗಿಜಿ ಗಿಜಿ ಆಡಿತು
ಹಾರುತ ನಲಿಯುತ ಜೋಡಿಹಕ್ಕಿ
ಮುಂಜಾನೆದ್ದು ಆಹಾರ ಹುಡುಕಿ
ಬೆಚ್ಚಗೆ ಗೂಡಲಿ ರಾತ್ರಿಯ ಕಳೆದವು
ದಿನಗಳದಂತೆ ಗೀಜಗ ಗೂಡಲಿ
ಗಿಜಿ ಗಿಜಿ ಕಲರವ ಹೆಚ್ಚಾಗಿ
ಪುಟ್ಟ ಮರಿಗಳು ಮೊಟ್ಟೆ ಒಡೆದು
ಹೊರಬಂದವು ಸಾಲಾಗಿ
ತಾಯ್ತಂದೆ ಹಕ್ಕಿ ಆಹಾರ ತಂದವು
ಪ್ರೇಮದಿ ಮರಿಗಳ ಸಾಕಿ ಪೊರೆದವು
ರೆಕ್ಕೆ ಪುಕ್ಕ ಬಲಿಯಲು ಮರಿಗಳು
ಕುಪ್ಪಳಿಸುತ ಹಾರತೊಡಗಿದವು
ಕೆಲ ದಿನಗಳ ಸದ್ದು ಮತ್ತೆ ಕೇಳದಾಗಿ
ತಿಳಿಯುವ ತವಕದಿ ಕಿಟಕಿಯ ತೆರೆಯಲು
ಮರಿಗಳಿಲ್ಲದ ಗೂಡು ಖಾಲಿಯಾಗಿತ್ತು
ತಾಯಿ ಹಕ್ಕಿ ಒಂದೇ ಹಾಡುತ್ತಿತ್ತು
ಇನಿಯನ ಬರುವಿಕೆಗೆ ಕಾಯುತಲಿತ್ತು.
ಶಾಲಿನಿ ಕೆಮ್ಮಣ್ಣು