ಸಿದ್ಧರಾಮ ಹೊನ್ಕಲ್ ಅವರ ಕೃತಿ ‘ಸಾಕಿ’ ಗಜಲ್ ಒಂದುಅವಲೋಕನ-ಅನಸೂಯ ಜಹಗೀರದಾರ

ಸಾಕಿ
ಲೇಖಕ ಸಿದ್ಧರಾಮ ಹೊನ್ಕಲ್
ಪ್ರಕಟನೆ-೨೦೨೦
ಬೆಲೆ-೧೦೦/-
ಶ್ರೀ ಅಲ್ಲಮಪ್ರಭು ಪ್ರಕಾಶನ ಶಹಾಪುರ

ಪ್ರೇಮದ ಸೆಲೆ ನೆಲೆಯ ಹುಡುಕುತ್ತ ….!

ನಿನ್ನ ಪ್ರೇಮವಿಲ್ಲದೇ ಸಾಕಿ
        ಇದು ಕವಿ, ಲೇಖಕ, ಕಥೆಗಾರ ಬರಹಗಾರರಾದ
ಸಿದ್ಧರಾಮ ಹೊನ್ಕಲ್ ರ ಮೂರನೆಯ ಗಜಲ್ ಗಳ ಸಂಕಲನ ಕೃತಿ.

ಗಜಲ್ ಒಂದು ಅರಬ್ಬಿ ಪದ. ಹೃದಯದ ವೃತ್ತಾಂತ
ಅರುಹುವುದು ಮತ್ತು ಪ್ರೇಮ, ಮೋಹ, ಅನುರಾಗ ವಿದ್ಯಮಾನಗಳ ಹೇಳಿಕೆ ಅದೂ ಪಿಸುಮಾತಿನಲ್ಲಿ ಎಂಬುದು ಇದರ ಪಾರಿಭಾಷಿಕ ಅರ್ಥವಾಗಿದೆ. ಗಜಲ್ ಕಾವ್ಯ ಉರ್ದು ಭಾಷೆಯಲ್ಲಿ ವಿಪುಲವಾಗಿ ಬೆಳೆದು ಅಪಾರ ಜನಮನ್ನಣೆ, ಜನಾನುರಾಗ ಗಳಿಸಿದ್ದು ಈಗ ಹಲವು ಭಾಷೆಗಳಲ್ಲಿ ಇದರ ಹರವು ಬಿತ್ತರಗೊಂಡಿದೆ.
ಪ್ರೀತಿ, ಮೋಹ, ವಿರಹ, ಅನುರಾಗ, ವಿಪ್ರಲಂಭ, ಕಳಕಳಿ, ಅಂತಃಕರಣ, ವಾತ್ಸಲ್ಯ, ದಯೆ, ಅನುಕಂಪ, ರೋಷ, ಹತಾಶೆ, ನೋವು, ಕರುಣೆ, ಹೀಗೆ ನವರಸಗಳಲ್ಲಿ ಅದ್ದಿದ, ಏಳು ಬಣ್ಣಗಳಲ್ಲಿ ಮಿಂದ, ಹಲವಾರು ವಿಷ ಮತ್ತು ಅಮೃತಗಳನ್ನು ಮೆದ್ದ ಮನವು ಎದೆಯ ನುಡಿಗಳನ್ನು ಅಕ್ಕರ ರೂಪದಲ್ಲಿ ಭಾವ ಲಯದೊಂದಿಗೆ ಹಾಡುಗಬ್ಬವಾಗಿ ಗಜಲ್ ನಲ್ಲಿ
ಅಭಿವ್ಯಕ್ತಗೊಳಿಸುವ ಸುಂದರ ಪ್ರಕಾರದ ಕಾವ್ಯವಾಗಿದೆ.

ಆಧ್ಯಾತ್ಮ, ತಾಧ್ಯಾತ್ಮ, ಸೂಫಿ ಸತ್ವ, ದೇಸೀ ಸತ್ವ, ಮೊದಲಾದ ಆತ್ಮಿಕ ನಂಟಿನ ವಿಚಾರಗಳನ್ನೊಳಗೊಂಡ ಗಜಲ್ ಕಾವ್ಯ ಪ್ರಕಾರವು
ಲೌಕಿಕವಾದ ರಸಾನುಭೂತಿ ಹೇಳುತ್ತ ಅಲೌಕಿಕವಾದ ಅನುಭಾವದ ಅನುಭೂತಿ ಮಿಂದು ಸಂತುಷ್ಟಗೊಳ್ಳುವ
ಸಂತೃಪ್ತಿಹೊಂದುವ ಸುಕೂನಿನ ಮೆಹಸೂಸ ಆಗಿದೆ.

ನಿನ್ನ ಪ್ರೇಮವಿಲ್ಲದೆ ಸಾಕಿ ಕೃತಿಯಲ್ಲಿ ಸಾಕಿ ಕವಿಯ ಮನದ ಇಂಗಿತ ಅರಿತ ಕವಿಗೆ ಬೇಕಾದುದನ್ನು ಕೊಡಬಲ್ಲ ವ್ಯಕ್ತಿ, ಕವಿ ಇಲ್ಲಿ ಬಯಸಿದ್ದು ಪ್ರೀತಿ,
ನಿರಂತರದ ಪ್ರೀತಿ ಭದ್ರತೆ…
ಕವಿ ಮನವು ಅಂತಹ ಪ್ರೇಮ ಮೋಹದ ಅಭಿಲಾಷೆಯಲಿ ಆ ರಸಾನುಭೂತಿಯಲಿ ಬರೆದ ಆರ್ದ್ರ ಆರ್ತ ಮೊರೆಯ ಗಜಲ್ ಗಳು ಇಲ್ಲಿವೆ.

ಇಲ್ಲಿಯ ಒಂದು ಗಜಲ್ ನಲ್ಲಿ ಜೀವ ಪ್ರೀತಿ ಉಕ್ಕಿ ಹರಿಯುತ್ತ ಲೋಕಕ್ಕೆ ಜೀವ ಪ್ರೀತಿಯೊಂದಿಗೆ ಆ ಆಶಯದೊಂದಿಗೆ ಬದುಕುವ ಸಂದೇಶವನ್ನೂ ಈ ಗಜಲ್ ನೀಡುತ್ತದೆ.
ನಿಜ..ಬದುಕಲು ಜೀವ ಪ್ರೀತಿ ಬೇಕು. ಖಿನ್ನತೆ, ಅಸಹಾಯಕತೆ, ನಿರಾಶೆ, ಹತಾಶೆ, ಇಂತಹ ಋಣಾತ್ಮಕ ಭಾವ ಉದಯಿಸಬಾರದು. ಉದಯಿಸಿದರೂ ಅವನ್ನು ಮೊಟಕುಗೊಳಿಸಿ ಜೀವ ಪ್ರೀತಿಯತ್ತ ಜೀವನೋತ್ಸಾಹದತ್ತ ವಿಮುಖ ಬದುಕಿನ ಮುಖ ತಿರುಗಲಿ ಅನ್ನುವುದು ಈ ಗಜಲ್ ನ ಆಶಯವಾಗಿದೆ.
ಅಂತಹ ಭಾವ ಇಲ್ಲಿ ವ್ಯಕ್ತವಾಗಿದೆ.

ಸುಮಧುರ ಹಗುರ ಪದಗಳಿಂದ ಹೆಣೆದ ಈ ಗಜಲ್  ನೀ ತಿಳಿ ಪದ ರದೀಫ್ ನೊಂದಿಗೆ ಲಯಬದ್ಧತೆಯೊಂದಿಗೆ ಸಾಗಿ ಬದುಕಿನ ಹೆಜ್ಜೆಗಳೊಂದಿಗೆ ಹೆಜ್ಜೆ ಹಾಕುತ್ತದೆ. ಒಂದು ಹೆಜ್ಜೆ ಮತ್ತೊಂದು ಹೆಜ್ಜೆಯ ಅಂತರ್ ಲಯದಂತೆ ಈ ಗಜಲ್ ನ ಶೇರ್ ಗಳು ಭಾವ ಲಯ ಪ್ರಾಸ ತುಂಬಿಕೊಂಡು ನಡೆಯುತ್ತವೆ. ಜೊತೆಗೆ ಓದುವ ಸಹೃದಯನನ್ನೂ ನಡೆಸುತ್ತವೆ.

ಈ ಬದುಕು ಬದುಕಲಿಕ್ಕಿದೆ ತಾನಾಗಿ ಹೋಗಲಿಕ್ಕಿಲ್ಲ ನೀ ತಿಳಿ
*ಯಾರ ಜೀವನವಿಲ್ಲಿ ಪೂರ್ಣ ಸಂತೃಪ್ತಿಯಿಂದಿಲ್ಲ
ನೀ ತಿಳಿ*
ಅದ್ಭುತ ಜೀವನ ಸಾರ ಹೇಳುವ ಸಶಕ್ತ ಮತ್ಲದೊಂದಿಗೆ
ಪ್ರಾರಂಭವಾಗುತ್ತದೆ.
ಮುಂದುವರೆದು:
ಬರುವುದೆಲ್ಲವೂ ಬರಲಿ ಛಲದಿಂದ ಎದುರಿಸಿ ನಿಂತು ಸಾಗಬೇಕು
ಕಷ್ಟದ ಹಿಂದೆಯೇ ಬೆಳಕಿನ ದಾರಿಯಿದೆ ಅಪನಂಬಿಕೆ ಇರಬೇಕಿಲ್ಲ ನೀ ತಿಳಿ

“ಬಂದದ್ದೆಲ್ಲ ಬರಲಿ ಗೋವಿಂದನ ದಯೆಯೊಂದಿರಲಿ”
ಅನ್ನುವಂತೆ
“ಈ ಲೋಕದೊಳಗೆಬಂದ ಬಳಿಕ ನಿಂದೆಗೂ ಹೊಗಳಿಕೆಗೂ ಸಮ ಮನಸ್ಥಿತಿ ಹೊಂದಿರು” ಅನ್ನುವಂತೆ ಬರುವುದೆಲ್ಲವೂ ಬರಲಿ ಎದುರಿಸಿ ನಡೆದೇನು. “ಈಸಬೇಕು ಇದ್ದು ಜಯಿಸಬೇಕು”
ಈ ಭವಸಾಗರದಲಿ ಬಿದ್ದ ಬಳಿಕ ಈಸಲೇ ಬೇಕು ಈಸಿ ದಡ ಸೇರಲೇಬೇಕು. ಅನ್ನುವ ಛಲಗಾರಿಕೆ, ಧೈರ್ಯದ ಒಳನೋಟ, ಅಂತರಂಗದ ಅರಿವಿನ ನೋಟ ಜಾಗೃತವಾಗಿಸುತ್ತ ಬದುಕಿನತ್ತ ಮುಖ ಮಾಡುವ ಮಾತು ಇಲ್ಲಿದೆ. ಈ ಮಾತುಗಳು ಮತ್ತೊಬ್ಬ ಹತಾಶ ಜೀವಿಗೂ ಪುನರ್ಬಲನ ತುಂಬಬಲ್ಲದದುದಾಗಿದೆ.

ಹುಟ್ಟಿ ಬಂದವರೆಲ್ಲ ಒಂದಿಲ್ಲೊಂದು ತೊಂದರೆ ಇದ್ದೇ ಇರುವವು.
ಸಾವಿಲ್ಲದ ಮನೆಯ ಸಾಸಿವೆ ತರಲಾಗದು ಕಷ್ಟ ಇಲ್ಲದವರಿಲ್ಲ ನೀ
ತಿಳಿ

ಈ ರೀತಿಯ ಬದುಕುವ ನೆಲೆಯ ಸೆಲೆಯ ಭಾವದ ಜೀವ ಪ್ರೀತಿಯ ಶೇರ್ ಗಳು ಗಮನ ಸೆಳೆಯುತ್ತವೆ.

*ಯಾರು ಇಲ್ಲದವರಿಗೆ ಅವನಿದ್ದಾನೆಂಬ ಭರವಸೆ
ಮುನ್ನಡೆಸಬೇಕು*
“ಹೊನ್ನಸಿರಿ” ಜಗತ್ತು ಕೆಟ್ಟಿದೆ ನನಗ್ಯಾರಿಲ್ಲ ಅಸಹಾಯಕತೆ ಕಾಡಬೇಕಿಲ್ಲ ನೀ ತಿಳಿ

ಈ ಅದ್ಭುತ ಮಕ್ತಾದೊಂದಿಗೆ ಈ ಗಜಲ್ ಸಂಪನ್ನಗೊಳ್ಳುತ್ತದೆ.

ಒಟ್ಟು ಇಲ್ಲಿ ೭೫ ಗಜಲ್ ಗಳಿವೆ. ಪ್ರೀತಿ,ಪ್ರೇಮ,ವಿರಹ,
ತಲ್ಲಣ,ತಳಮಳ,ಆತಂಕ,ನೋವು,ಭಾವಗಳನ್ನು ಸಂವೇದನೆ ತುಡಿತಗಳನ್ನು ಈ ಲೋಕದ ಎಲ್ಲ ಸಂವೇದನಾತ್ಮಕ ಒಳ ಮಿಡಿತಗಳನ್ನು ಈ ಎಲ್ಲ ಗಜಲ್ ಗಳು ಪಿಸುಮಾತಿನಲ್ಲಿ ಅರುಹುತ್ತವೆ. ಅದರಲ್ಲೂ ವಿಶೇಷವಾಗಿ ಗಮನಿಸುವುದಾದರೆ ಜೀವ ಪ್ರೀತಿ ಮತ್ತು ಜೀವನೋತ್ಸಾಹ…! ಇವು ಒಂದು ನಾಣ್ಯದ ಎರಡು ಮುಖಗಳಿದ್ದು ಪರಸ್ಪರ ಪೂರಕವಾದವುಗಳಾಗಿವೆ. .
ಇಂತಹ ಪ್ರೀತಿಯ ಹಲವು ಬಣ್ಣಗಳಲ್ಲಿ ಜೀವ ದಾರದಲ್ಲಿ ಪೋಣಿಸಿದ ಅಕ್ಕರ ಮುತ್ತುಗಳ ಪದ ಪುಂಜಗಳ ಸಾಲು ಸಾಲಿನ ಶೇರ್ ಗಳ ಹೂ ಗುಚ್ಛವಾಗಿ
ಬಗೆ ಬಗೆಯ ಹೂಗಳ ಗುಲ್ ದಸ್ತಾ ಈ ಗಜಲ್ ಸಂಕಲನವಾಗಿದೆ. ಅದುವೇ ನಿನ್ನ ಪ್ರೇಮವಿಲ್ಲದೇ ಸಾಕಿ ಆಗಿದೆ.

ಸಿದ್ಧರಾಮ ಹೊನ್ಕಲ್ ಅವರ ಮತ್ತಷ್ಟೂ ಕೃತಿಗಳು
ಲೋಕಾರ್ಪಣೆಗೊಳ್ಳಲಿ.ಸಾಹಿತ್ಯ ಲೋಕದಾಗಸದಲಿ ಉಡುಗಣವಾಗಿ ಸದಾ ಮಿಂಚಲೆಂಬ  ಆಶಯ…!


3 thoughts on “ಸಿದ್ಧರಾಮ ಹೊನ್ಕಲ್ ಅವರ ಕೃತಿ ‘ಸಾಕಿ’ ಗಜಲ್ ಒಂದುಅವಲೋಕನ-ಅನಸೂಯ ಜಹಗೀರದಾರ

Leave a Reply

Back To Top