ಟೂರ್ ಮುಗಿಸಿ ಮನಿಗಿ ಬಂದದ್ದೆ ತಡ ಎಲ್ಲಾ ಒತ್ತಡ ಮುಕರಿಕೊಂಡು ಬಿಟ್ವು ನೋಡ್ರೀ ,  ಟೆನ್ಷನ್ ಆಗಲತದ ಅಂತ ಯಾರಿಗರ ಅಂದ್ರ ಅವರು ನಗೋದು ಖರೆ.ಗಂಡ ದುಡದು ತಂದಹಾಕತಾನ , ನೀನಗೇನು ಕುದಿ ಚಿಂತಿ ಅದ ಅಂಬೋರೆ ಎಲ್ಲರೂ. ಅಲ್ಲ ,  ಚಿಂತಿ ಇಲ್ಲದ ಮನುಷ್ಯ ರು ಯಾರಾದ್ರೂ ಹರಾ ಎನ್ರೀ ದುನಿಯಾದಾಗ.. .ಎಲ್ಲಾ ಬಿಟ್ಟು ಸನ್ಯಾಸಿ ಆದೋರಿಗೂ ಬಿ ಪಿ , ಶುಗರ ಇರತದ. ಅವರಿಗಿ ಯಾಕ ಒತ್ತಡ ಇರಬೇಕು..! ಆದ್ರೂ ಇರತದ.

ನನ್ನ ಟೆನ್ಷನ್ ಅಂದ್ರ , ಎಂಟತ್ತು ದಿನಕ್ಕಾಗೊವಷ್ಟು ಒಯ್ದ ಬಟ್ಟಿ ಬರಿ ಎಲ್ಲ ಒಗಸಿ ಇಡಬೇಕು . ಮನಿ ಕ್ಲೀನ್ ಮಾಡಬೇಕು , ಮತ್ತ ಅಡಗಿ ಮಾಡಬೇಕು , ಟೂರ್ ನಿಂದ ನನ್ನ ಜೊತಿಗಿ ಬಂದ ನೆಗಡಿ ಕೆಮ್ಮಿಗಿ ಸಂಭಾಳಸಬೇಕು. ಇಷ್ಟೆಲ್ಲಾ ಟೆನ್ಷನ್ ಮಾಡಕ್ಕೋಳಕಾ ಯಾಕ ಟೂರ್ ಹೋಗಬೇಕು ಅನ್ನತಿರೇನೋ..ಅದೇಷ್ಟೆ ಟೆನ್ಷನ್ ಆದ್ರೂ ಪ್ರವಾಸ ಹೋಗಲಕ ನಾ ಯಾವಾಗಲೂ ರೆಡಿ ನೋಡ್ರಿ.

ಜೀವನ. ಎಂಬೋದು ಒಮ್ಮೆ ದೊಡ್ಡದು ಅನಸತದ , ಒಮ್ಮೆ ಬಹಳ ಚಿಕ್ಕದು ಅನಸತದ. ಜೀವಿಸಲಾಕ ಎಲ್ಲರೂ ಕೈಲಾದೋಟು ಕೈಕಾಲು ಬಡಿದ್ರ ಇಲ್ಲಿ ಜೀವಿಸಲಕ ಆಗತದ. ಆದ್ರ ನಮ್ಮ ಬಾಳ ಜನರ ಜೀವನ  ಮುಗಿಲಕ್ಕೆ ಬಂತಲ್ಲ ಅಂತ ಅರಿವಿಗಿ ಬರುವಷ್ಟರಲ್ಲಿ ಮುಗದೆ ಹೋಗಿರತದ. ಕೈಕಾಲು, ಟೊಂಕ , ಬ್ಯಾನಿ , ಬ್ಯಾಸರಿಕಿ  ಅನ್ನಕೊಂತ ಇರೋ ಅಷ್ಟು ಜೀವನಾನು ಅವುಗಳ ಜೊತಿಗಿ ಕಳಿತಿವಿ.

ಮೊನ್ನೆ ಒಬ್ರು ಕವಿ ಪೇಸ್ ಬುಕ್ ನಾಗ ಮೇಸೆಜ್ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡ್ರು. ಮತ್ತೊಬ್ಬರಿಗಿ ಹೇಳುವ ಅವರೆ ಇಂತ ಸಾಹಸಕ್ಕ ಕೈ ಹಾಕ್ಯಾರಂದ್ರ ಅವರು ಅದೆಷ್ಟು ಖಿನ್ನತೆಗೆ ಒಳಪಟ್ಟಿರಬೇಕು.!. ರೋಗಗಳು ಮನುಷ್ಯಗ ಮೆತ್ತಗ ಮಾಡಿದಷ್ಟು ಮತ್ತಾವ ವಿಷಯಗಳು  ಮಾಡ್ಲಿಕ್ಕಿಲ್ಲ ಅನಿಸತದ. ಈ ರೋಗ ಅಂಬೋದು ಮನುಷ್ಯಗ ಸಾಯಲಕ್ಕು  ಬಿಡಲ್ಲ , ಬದುಕಲಕ್ಕೂ ಬಿಡಲ್ಲ.

ದುಡದದೆಲ್ಲ ರೋಗಗಳಿಗಿ ಖರ್ಚು ಮಾಡೋದಂದ್ರ ಯಾರಿಗಾದ್ರೂ ಬ್ಯಾಸರ ಆಗತದ. ತಮ್ಮ ದುಡ್ಡಾದ್ರ ಹ್ಯಾಂಗಾದ್ರೂ ಸಮಾಧಾನ ಮಾಡ್ಕೋಬಹುದು. ಆದ್ರ  ಸಾಲ ಮಾಡಿಯೋ ಅಥವಾ ಮಕ್ಕಳ ದುಡ್ಡಿನಾಗೋ  ಆಸ್ಪತ್ರೆ , ಬ್ಯಾನಿ ಇವುಗಳಿಗಿ ದುಡ್ಡು ಹಾಕೊದಂದ್ರ ಅದರಷ್ಟು ದೊಡ್ಡ ತ್ರಾಸ ಮತ್ತೊಂದಿಲ್ಲ . ಆ ಸಂದರ್ಭದಲ್ಲಿ ಮನುಷ್ಯ ಕುಗ್ಗಿ ಬಿಡತಾನ , ಸಾವೊಂದೆ ಪರಿಹಾರ ಅನಿಸಬಹುದು. ಮಕ್ಕಳಿಗಿ ಒಜ್ಜಿ  ಆಗಿ  ಬದುಕಲಕ ಯಾವ ತಂದಿತಾಯಿನೂ ಇಷ್ಟ ಪಡಲ್ಲ. ಮಕ್ಕಳಿಂದ ಒಂದಿಷ್ಟು ಆಪೇಕ್ಷೀಸಬಹುದು , ತಾವು ಅವರಿಗಿ ಕಾಳಜಿ ಕಕ್ಕಲಾತಿ ಮಾಡಿದಂಗ ಅವರು ತಮಗ ಮಾಡ್ಲಿ ಅಂತ  ಆಪೇಕ್ಷಿಸೋದು ಸಹಜನ ನೋಡ್ರಿ. ಆದ್ರ ದುಡ್ಡಿನ ವಿಷಯ ಬಂದ್ರ ಅಲ್ಲಿ ಟೆನ್ಷನ್ ಶುರುವಾಗತದ. ಮಕ್ಳು ದುಡದು ಚನ್ನಾಗಿ ದುಡ್ಡು ಗಳಸೋರು ಇದ್ರ ತಂದೆತಾಯಿಗಿ ನೋಡಕೋಬಹುದು . ಈಗೀನ ಕಾಲದಾಗ ತಾವು ಗಳಿಸಿದ್ದು ತಮಗೆ ಸಾಕಾಗೋದು ಕಷ್ಟ , ಅಂತದ್ದರಾಗ ಅಪ್ಪ ಅಮ್ಮನ ಖರ್ಚು ನೋಡಕೊಳ್ಳೊದಂದ್ರ ಮಕ್ಕಳಿಗೂ ಕಷ್ಟನೆ.

ಬಹಳಷ್ಟು ತಂದಿತಾಯಿಗಳು ಮಕ್ಕಳು ಮರಿ ಅಂತ ಜೀವ ಸವೇಸಿರತಾರ. ದುಡದದ್ದೆಲ್ಲ ಅವರ  ವಿದ್ಯಾಬ್ಯಾ್ಸ  , ನೌಕರಿ   ,  ಮದುವಿಗಳಿಗೆಲ್ಲ ಖರ್ಚ ಮಾಡಿ , ಅವರಿಗಲ್ಲದಿದ್ರ ಮತ್ತಾರಿಗಿ ಮಾಡೊದದ ಅಂತ ಸಾರ್ಥಕಭಾವದಿಂದ ಮೆರಿತಾರ. ತಮ್ಮ ಕೊನಿ  ಕಾಲಕ್ಕ ತಮ್ಮ ರೋಗ ರುಜಿನಗಳಿಗೆಲ್ಲ ಮಕ್ಕಳಿಗಿ ಅವಲಂಬಿಸಿ ಅವರಿಂದ ನಿರಾದರಕ್ಕ ಒಳಗಾಗಿ  ಖಿನ್ನತೆ  ಅನುಭವಿಸತಾರ. ಯಾವ ಮಕ್ಕಳು ನಿಮ್ಮ ಜೀವನದ ಎಲ್ಲಾ ಖುಷಿ ತ್ಯಾಗ ಮಾಡಿ ನಮಗಾಗಿ ದುಡಿರಿ ಎಂದು  ಹೇಳಲ್ಲ.  ಆಸ್ತಿ ಮಾಡಿಟ್ರ ಅದಕ್ಕಾಗಿ ಜಗಳ ಆಡತಾರ ನೋಡ್ರಿ  ಅಷ್ಟ. ಅದರ ಹೊರತು ಯಾವ ಮಕ್ಕಳು ತಮ್ಮ ಒಂದು ಖುಷಿ ಸಂತೋಷ ತೊರದು ತಂದಿತಾಯಿಗಾಗಿ ಎನನ್ನು ತ್ಯಾಗ ಮಾಡೊದಿಲ್ಲ.  ಅವರು ತ್ಯಾಗ ಮಾಡಬಹುದು  , ಅವರ ಪ್ರೀತಿ  , ಅಥವಾ ಅವರ ಆಸೆಗಳು   ಯಾಕಂದ್ರ ತಂದಿತಾಯಿ ಅಂಬ ಪ್ರೀತಿ ಅವರಿಗೂ ಎಷ್ಟರ ಇರತದ  ಅಲ್ರಿ  ,  ಪ್ರೀತಿ ಎಂಬೋದು ಯಾವಾಗಲೂ ಮುಮ್ಮುಖವಾಗಿ ಹರಿತಿರತದ. ನಾವು ನಮ್ಮ ಮಕ್ಕಳು ಅಂತ ಬಡಿದಾಡದಂಗ ಅವರು ಅವರ ಮಕ್ಕಳಿಗಾಗಿ ಬಡದಾಡತಾರ. ತಂದಿತಾಯಿ ಹಿಂದ ಬಿಳತಾರ , ಪ್ರ್ರೀತಿ ಹಿಮ್ಮಖವಾಗಲಾರದು.

ನಾವು ಹುಟ್ಟಿಸಿದ ಮಕ್ಕಳಿಗೂ ಜೀವನದಲ್ಲಿ ಒಂದು ನೆಲೆ ಸಿಗೋವರೆಗೂ ಅವರಿಗಿ ಸಹಾಯ ಮಾಡೊಣ.  ಯಾಕಂದ್ರ. ನಾವು ಹುಟ್ಟಿಸಿದಕ್ಕಾಗಿ ನಾವು ಅವರನ್ನು ಸ್ವಾವಲಂಬಿ ಯಾಗಲು ಸಹಾಯ ಮಾಡಲೇಬೇಕು. ಆದ್ರ  ನಮಗಾಗಿ ನಾವು ಸ್ವಲ್ಪ ಬದುಕಬೇಕು. ಕೊನೆಗಾಲದಲ್ಲಿ ಅವರಿಗಿ ಭಾರ ಆಗಲಾರದಂಗ ನಮ್ಮ ರೋಗ ರುಜಿನಗಳಿಗಿ ಒಂದಿಷ್ಟು ಹಣ ಉಳಿಸಿ ಇಡಬೇಕು. ಈಗಿನ ಕಾಲದಲ್ಲಿ ಮಕ್ಕಳಿಂದ ಹಣ ಸಹಾಯ ಸಿಗದಿದ್ರೂ ಒಂದಿಷ್ಟು ಭಾವನಾತ್ಮಕ ಸಹಾಯ ಸಿಕ್ರ ಅದೆ ದೊಡ್ದು.



ಈಗೀನ ಸಂದರ್ಭದಲ್ಲಿ ಬಾಳ ಜನ ಒಂಟಿತನ , ಖಿನ್ನತೆಗೆ ಒಳಪಡತಿದ್ದಿವಿ. ಸಂಭಂಧಗಳಂತೂ ಹೇಳಕೊಳ್ಳಕ ಮಾತ್ರ ಇರತಾವ. ಎಲ್ಲರೂ ಇದ್ದು ಒಂಟಿತನ ಅನುಭವಿಸೋದು ನಾವೆ ಮಾಡಕೊಂಡದ್ದೆನೊ ಅನಸತದ. ಎಷ್ಟು ಕಷ್ಟವೋ ಹೊಂದಾಣಿಕೆ ಎಂಬುವದು ನಾಲ್ಕು ದಿನದ ಈ ಬದುಕಿನಲಿ ಎಂಬ ಕವಿ ಸಾಲು ಎಷ್ಟು ಸತ್ಯ. ಹೆತ್ತ ಮಕ್ಕಳಿಂದ , ಒಡಹುಟ್ಟಿದವರಿಂದ , ಜೊತೆಯಲ್ಲಿ ಕೆಲಸ ಮಾಡುವವರಿಂದ , ಸ್ನೇಹಿತರಿಂದ , ಒಂದಿಲ್ಲೊಂದು ರಿತಿಯಲ್ಲಿ ಎಲ್ರೂ ನೋವನ್ನು ಅನುಭವಿಸಿದವರೆ , ಇದು ಹಿಂದೆಯು ಇತ್ತು. ಮುಂದೂ ಇರತದ. ಆದ್ರ ಈ ನೋವು , ಮತ್ತು ಸಮಸ್ಯೆ ಎದುರಿಸಲಕ್ಕ ಈಗೀನ ಜನರೇಷನ್ ದವರಿಗಿ ಸಾದ್ಯವಾಗತಿಲ್ಲ. ಬಹಳ ಬೇಗ ಖಿನ್ನತೆಗೆ ಒಳಪಡತಾರ. ಯಾರಿಗೂ ಹೇಳಲಾರದೆ ಒಳಗೆ ಕೊರಗಿ ಆತ್ಮಹತ್ಯೆ ಗೆ ಶರಣಾಗಲತಾರ. ಮುಪ್ಪಿನ ಕಾಲದಲ್ಲಿ ಖಿನ್ನತೆ ಬರೋದು ಸಹಜ. ಮಕ್ಕಳು ಮಮ್ಮಕ್ಕಳು ಎಲ್ರೂ ಅವರವರ ಲೋಕದಲ್ಲಿ ಬಿಜಿ ಆಗಿರತಾರ. ಯಾರೂ ಮಾತಾಡಸವರು ಇರದೆ ಒಂಟೀ ಭಾವನೆ ಬರತದ.

ಅದಕ್ಕ ನಾವು ಬೇರೆಯವರಿಗಾಗಿ ಜೀವಿಸದೆ ನಮಗಾಗಿ ಬದುಕಲಿಕ್ಕ ಪ್ರಯತ್ನ ಪಡಬೇಕು . ಬರೀ ಮಕ್ಕಳು ಮಕ್ಕಳು ಅನ್ನಕೊಂತ ಅವರೆ ಪ್ರಪಂಚ ಅನ್ನೊ ಬದಲು ಸ್ವಲ್ಪ ಹೊರಗಿನ ಪ್ರಪಂಚನೂ ನೋಡಬೇಕು. ಮಗನ ಮದುವಿ ಮಾಡ್ದ ಮ್ಯಾಲ ಸೋಸಿಗಿ ಮಗನ್ನ ಒಪ್ಪಿಸಿ ಪ್ರೀ ಆಗಬಿಡಬೇಕು.ಮದಿ  , ಕುಬಸ , ತೊಟ್ಟಲು , ಬಟ್ಟಲು ಅನ್ನಕೊಂತ ಜೀವನಾನೆ ಮುಗಿತದ. ಈಗ ಮಕ್ಕಳ ಮದುವಿ ಮಾಡಿದ್ರ ಜವಾಬ್ದಾರಿ ಮುಗಿತು ಅನ್ನೊಂಗ ಇಲ್ರಿ . ದುಡಿಯೋ ಸೋಸಿ , ಮಗಳು  ಇದ್ರ ಅವರ ಮಕ್ಕಳಿಗೂ ನೋಡ್ಕೋಬೇಕು  ನಾವು . ನೋಡ್ಕೋಳ್ಳಿಲ್ಲ ಅಂದ್ರ ,  ಅವರು ಯಾರ್ದು ಕುದಿ ಮಾಡಲ್ಲ ತನ್ನ ತಾ ಆರಾಮ ಇರಬೇಕು ಅನ್ನತಾರ , ಅಂತ ಮಕ್ಕಳ ಕೈಲಿ ಅನ್ನಸಕೋಬೇಕು ,  ಇವೆಲ್ಲವೂ ಅದೇಷ್ಟು ಟೆನ್ಷನ್ ಕೊಡತಾವಂದ್ರೆ , ಮ್ಯಾಲ ನೋಡಲಕ್ಕ ಎಲ್ಲ ಚಂದಿದ್ರೂ ಒಳಗ ಗೊಳ್ಳಿಯಂಗ ಕೊರಿತಿರತವ. ಎಲ್ಲರ ಸಂಸಾರದಾಗೂ ಇವು ಸರ್ವೆ ಸಾಮಾನ್ಯ.

ನಮ್ಮಿಂದ ಯಾರನ್ನೂ ನೂರು ಪರ್ಸೆಂಟ  ಆರಾಮಾಗಿ ಇಡಲಾಕ ಅಗತದೇನ್ರೀ. ಸಾದ್ಯಿಲ್ಲ .ಮಕ್ಕಳಿರಲಿ ಯಾರೇ ಇರಲಿ ನಮ್ಮ ಕೈಲಾದಷ್ಟೆ ಅವರಿಗಿ ಸಹಾಯ ಮಾಡಬಹುದು. ಅವರ ಮಕ್ಕಳ ಜವಾಬ್ದಾರಿ ಅವರಿಗಿ  ಬಿಡಬೇಕು. ಎನಾರ ಅನ್ಕೋಳ್ಳಿ. ನಮ್ಮ ಮಕ್ಕಳಿಗಿ , ಅವರ ಮಕ್ಕಳಿಗಿ ಸಾಕೋದ್ರೋಳಗ ಮುಪ್ಪು ಬಾಗಿಲ ಬಡಿತದ.

ದುಡಿಯೊ ಹೆಣ್ಣಮಕ್ಕಳಿಗಿ ಯಾರಾರ ಅಯ್ಯೋ ಪಾಪ ಅನಬಹುದು , ಮನ್ಯಾಗೆ ಇರೊ ಹೆಣ್ಣಮಕ್ಕಳಿಗಿ ಮಾತ್ರ ಯಾರೂ ಪಾಪ ಅನ್ನಲ್ರಿ , ಅವರು ಎಷ್ಟೆ ದುಡಿಲಿ , ಹತ್ತ ಮಂದಿ ಮೊಮ್ಮಕ್ಕಳಿಗನು ದೊಡ್ಡೊರು ಮಾಡ್ಲಿ , ಮನ್ಯಾಗಿದ್ದು ಮತ್ತೆನು ಮಾಡ್ತಾರ ಅಂತಾರ ಅಷ್ಟೆ. ನಮಗ ಟೆನ್ಷನ್ ಅಂದ್ರೂ ನಗತಾರ. ಯಾಕಂದ್ರ ನಮಗ ಮನ್ಯಾಗ ಇರೋರಿಗಿ ಟೆನ್ಷಷ್ ಯಾಕಾಗತದ ಅಂತ ,‌ಒಂಟಿತನ ಖಿನ್ನತೆ ಎಲ್ಲಾ ಬರಿ ಮನ್ಯಾಗ ಇರೋವ್ರಿಗೆ ಹೆಚ್ಚಿಗಿ ಇರತಾವ. ಆದ್ರ ಲೋಕದ ಕಣ್ಣಿಗಿ  ಎಲ್ಲ ಮಾತಿಲಿ ಇದ್ರೂ ಮತ್ತೆನು ಟೆನ್ಷನ್ ಮಾಡ್ಕೋತಾರೊ ಎಂಬ ವ್ಯಂಗ.

ಅದಕ್ಕ ನಮಗ ಒಂದಿಷ್ಟು ಖಿನ್ನತೆ , ಒಂಟಿತನ ಕಾಡಿದ್ರೂ ತಡ ಮಾಡ್ದೆ ಮಾನಸಿಕ ರೋಗ ತಜ್ಞರ ಹತ್ರ ತೋರಿಸಬೇಕು. ತಲೆನೋವು , ನಿದ್ರೆ ಬರದೆ ಇರೋದು , ಮನಸ್ಸು ಬೆಚೈನ್ ಅಗೋದು , ಚಿಕ್ಕ ಚಿಕ್ಕ ವಿಷಯಗಳಿಗಿ ಸಿಟ್ಟು ಬರೋದು , ಯಾರೊಂದಿಗೂ ಮಾತಾಡ್ದೆ ಒಬ್ಬರೆ ಇರಬೇಕು ಅಂತನಿಸೋದು , ಯಾವದರಲ್ಲೂ ಆಸಕ್ತಿ
 ಇರದೆ ಇರೋದು ಇವೆಲ್ಲ ಖಿನ್ನತೆಯ ಲಕ್ಷಣಗಳೆ. ಮೆನೋಪಾಸ್ ಸಂದರ್ಭದಲ್ಲೂ ನಮ್ಮ ಹೆಣ್ಣಮಕ್ಕಳಿಗಿ ಇವೆಲ್ಲ ಕಾಡಬಹುದು. ಆದ್ರ ದೀರ್ಘ ಕಾಲದಿಂದ ಇವೆಲ್ಲ ಲಕ್ಷಣಗಳಿದ್ರ ತಜ್ಞ ರಲ್ಲಿ ತೋರಿಸಿಕೊಳ್ಳಲೇ ಬೇಕು. ಮಾನಸಿಕ ತಜ್ಞ ರಲ್ಲಿ ಹೋಗೋರೆಲ್ಲರೂ ಹುಚ್ಚರೆ ಅಗಿರಲ್ಲ.  ದೇಹಕ್ಕ ಬೇಕಾದಂಗ , ಮನಸ್ಸಿಗೂ ಒಮ್ಮೊಮ್ಮೆ ಚಿಕಿತ್ಸೆ ಬೇಕಾಗತದ.

ಮನೆಯಲ್ಲಿ ಹೆಣ್ಣ ಮಕ್ಕಳು ಟೆನ್ಷನ್ ಅಂದ್ರ ಯಾಕ ಹಾಂಗ ಆಗಲತದ ಅಂತ ಮನ್ಯಾಗಿನ ಇತರ ಸದಸ್ಯರು ಒಂದಿಷ್ಟು ಶಾಂತ ರೀತಿಲಿ ಕೇಳಿದ್ರ ಎಷ್ಟೊ ಸಮಾಧಾನ ಆಗತದ.  ಮನೆಯಲ್ಲಿನ ಹಿರಿಯರು ಇರಲಿ ಕಿರಿಯರೆ ಇರಲಿ ಒಬ್ಬೊರಿಗೊಬ್ರು ಮಾತಾಡ್ತ ಇರಬೇಕು , ಎಲ್ಲರೂ ಅವರದೆ ಲೋಕದಲ್ಲಿ ಬ್ಯೂಸಿ ಆಗಿರೋಂದ್ರಿಂದ ಒಂದೇ ಮನ್ಯಾಗ ಇದ್ರೂ ಅಪರಿಚಿತರಂತೆ ಆಗಲತಿದೆವು. ವಯಸ್ಸಾದವರಿಗಿಂತ ಚಿಕ್ಕಚಿಕ್ಕವರೆ ಇದಕ್ಕ ಹೆಚ್ಚು ಬಲಿಯಾಗಲತರ. ಈಗೀನ ಮಕ್ಕಳು ತಂದಿತಾಯಿ ಜೋತಿಗಿ ಪ್ರೇಂಡ್ಸ ಹಂಗ ಇರತತಾರ , ಅಷ್ಟೆ ಬೇಗ ಸಿಟ್ಟು ಮಾಡಕೋತಾರ. ತಮ್ಮಂತೆ ಆಗದಿದ್ರ ಹಠ ಕೋಪ ಹೆಚ್ಚಗತದ , ಅವರು ಹೇಳಿದಂಗ ಕೇಳಿದ್ರು ಕಷ್ಟ , ಕೇಳ್ದೆ ಇದ್ರೂ ಕಷ್ಟ. ಇವೆಲ್ಲವೂ ಜೀವನದ ಟೆನ್ಷನ್ ಗಳೆ.

ಸುಖ ದುಃಖ ದ ಹಂಗ ಒತ್ತಡ ಟೆನ್ಷನ್ ಗಳೆಲ್ಲ ಈಗ ಜೀವನದ ಒಂದು ಭಾಗವೇ ಆಗಿಬಿಟ್ಟಾವ. ಹುಟ್ಟಿದ ಕೂಸಿನಿಂದ ಮುಪ್ಪಿನ ಮುದುಕರವರೆಗೂ ಈ ಟೆನ್ಷನ್ ಅಂಬೋದು ಯಾರಿಗೂ ತಪ್ಪಿದ್ದಲ್ಲ ಬಿಡ್ರಿ. ಜೀವನಕ್ಕ ಒಂದಿಷ್ಟು ಟೆನ್ಷನ್ ನ ಅವಶ್ಯಕತಿನೂ ಇರತದ.ಇಲ್ಲಂದ್ರ ಮನುಷ್ಯ ಸೋಮಾರಿ ಆಗತಾನ.ಆದ್ರ ಬರಿ ಟೆನ್ಷನ್ ಮಾಡಕ್ಕೊಂಡ್ರ ಆರೋಗ್ಯ ಮಾತ್ರ ಪೂರಾ ಹಾಳಾಗತದ. ಅತೀ ಟೆನ್ಷನ್ ಮತ್ತು ಖಿನ್ನತೆಗಳು ಆತ್ಮಹತ್ಯೆ ಗೆ ಪ್ರೇರೆಪಿಸತಾವ. ಅಂತಹ ಸಂದರ್ಭದಲ್ಲಿ ತಮ್ಮ ಆತ್ಮೀಯ ರೊಂದಿಗೆ ತಮ್ಮ ಮನಸ್ಸಿನ ಮಾತಾದ್ರೂ ಹಂಚಿಕೊಳ್ಳಬೇಕು. ಬೀಸೊದೊಣ್ಣೆಯಿಂದ ತಪ್ಪಿಸಿಕೊಂಡ್ರೆ ಸಾವಿರ ವರ್ಷ ಆಯಸ್ಸಂತೆ. ಹಾಗೆ ಖಿನ್ನತೆಗೊಳಗಾಗಿ ಆತ್ಮಹತ್ಯೆ ಆಲೋಚನೆ ಬಂದಾಗ ಯಾರ ಜೊತೆಗಾದ್ರೂ ಒಂದೆರಡು ಮಾತಾಡಿದರೆ ಸಾಕು. ಆ ಸಮಯ ದೂರಾಗತದ.  ಇಂತಹ ಒಂದು ನಿರ್ಧಾರ ದಿಂದ ತಮ್ಮವರು ಜೀವನಪೂರ್ತಿ ನೋವನುಭವಿಸುವಂತೆ ಮಾಡುವದು ಎಷ್ಟೂ ಸರಿಯಲ್ಲ.ನಾನು ಮತ್ತ ಮತ್ತ ಹೇಳತಾನೆ ಇರತಿನಿ.ಖಿನ್ನತೆಗೆ ದಯವಿಟ್ಟು ಮಾನಸಿಕ ರೋಗ ತಜ್ಞ ರಿಗಿ ತೋರಸರಿ ಅಂತ.

ಎಲ್ಲಕ್ಕೂ ತಾಳ್ಮೆ ಸಹನೆ ಇರಲಿ ಅಂತಿವಿ. ಆದ್ರ ಈಗ ಇದರದ್ದೆ ಕೊರತೆ ಎಲ್ಲ್ರ ಹತ್ರ. ಅದಕ್ಕ ನಮಗ ಖಿನ್ನತೆ ಜಲ್ದಿ ಬರತದ. ಅದನ್ನು ಓಡಿಸಬೇಕಾದ್ರ ನಮನಮ್ಮವರೊಂದಿಗೆ ಬಿಚ್ಚು ಮನಸ್ಸಿನಿಂದ ಮಾತಾಡಬೇಕು.ನಮ್ಮ ಭಾವನೆ ಹಂಚಿಕೊಳ್ಳಬೇಕು. ಆರೋಗ್ಯ ಸಮಸ್ಯೆ , ಹಣಕಾದಿನ ಸಮಸ್ಯೆ ಇವೆಲ್ಲ ಸ್ವಲ್ಪ ಸಮಯ ತಗೊಂಡರೂ ಪರಿಹಾರ ಇದ್ದೆ ಇರತದ .ಜವಾಬ್ದಾರಿಗಳು ಜೀವನದುದ್ದಕ್ಕೂ ಇದ್ದೆ ಇರತಾವ . ಅವುಗಳೊಂದಿಗೆ ನಾವು ನಮಗಾಗಿಯೂ ಬದುಕಬೇಕು.

One thought on “

Leave a Reply

Back To Top