ಪ್ರಸ್ತುತ

ಮರುವಲಸೆಯ ಮಹಾಪರ್ವಕ್ಕೆ ಪರಿಹಾರ


ಯಾರೂ ಊಹಿಸಿರದ ಪ್ರಮಾಣದಲ್ಲಿ ಕಾರ್ಮಿಕರ ಮರುವಲಸೆ ಪ್ರಾರಂಭವಾಗಿದೆ. ತಮ್ಮ ಊರಿನಲ್ಲಿ ದುಡಿಮೆಯ ಅವಕಾಶವಿಲ್ಲದೆ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ವಲಸೆ ಬಂದವರು ಕೊರೊನಾ ಲಾಕ್ಡೌನ್ನಿಂದಾಗಿ ಕಂಗಾಲಾಗಿದ್ದಾರೆ. ಪೂರ್ವಾಪರ ಯೋಚಿಸದೆ, ಶತ್ರು ದೇಶದ ಮೇಲೆ ದಾಳಿ ಮಾಡುವ ರೀತಿಯಲ್ಲಿ ದಿಢೀರ್ ಎಂದು ಘೋಷಣೆಯಾದ ಲಾಕ್-ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ನೂರಾರು ಕಿಲೋ ಮೀಟರ್ ನಡೆದುಕೊಂಡೇ ಹೊರಟರು. ಕೊರೊನಾ ಭಯಕ್ಕಿಂತ ಹಸಿವಿನ ಭಯ ಅವರನ್ನು ಕಾಡುತ್ತಿತ್ತು.


ಪೋಲೀಸರ ಲಾಠಿಗೆ ಹೆದರಿ, ನಗರ ತೊರೆಯಲಾರದವರು ಈಗ ಅವಕಾಶ ಸಿಕ್ಕೊಡನೆ ತಮ್ಮ ಊರುಗಳಿಗೆ ಧಾವಿಸುತ್ತಿದ್ದಾರೆ.


ಈ ಮರುವಲಸೆ ಕೇವಲ ದೈಹಿಕ ಶ್ರಮಿಕರಿಗೆ ಮಾತ್ರ ಸೀಮಿತವಾಗಿಲ್ಲ ಅಥವಾ ದೇಶದ ನಗರಗಳಿಂದ ಮಾತ್ರ ನಡೆದಿಲ್ಲ. ಪ್ರತಿಯೊಂದು ರಾಜ್ಯದಿಂದಲೂ ಜನರು ಇತರೆಡೆಗೆ ವಲಸೆ ಹೋಗಿದ್ದಾರಾದರೂ ಉತ್ತರ ಭಾರತದಿಂದ ದೈಹಿಕ ಶ್ರಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಿರುವದು ನಿಚ್ಚಳವಾಗಿ ಕಾಣುತ್ತಿದೆ. ದೇಶದೊಳಗಡೆ ಮಾತ್ರವಲ್ಲ, ಇತರ ದೇಶಗಳಿಗೂ ದೈಹಿಕ ಶ್ರಮಿಕರು ವಲಸೆ ಹೋಗಿದ್ದು, ಅವರಲ್ಲಿ ಹೆಚ್ಚಿನವರು ವಾಪಸು ಬರುವುದು ನಿಶ್ಚಿತ.


ಆರ್ಥಿಕ ಹಿಂಜರಿತ ಇಡೀ ಜಗತ್ತನ್ನು ಕಾಡುತ್ತಿದೆ. ಎಲ್ಲೆಡೆ ಉದ್ಯೋಗ ಕಡಿತ ಪ್ರಾರಂಭವಾಗಿದೆ. ಪ್ರತಿಯೊಂದು ದೇಶವೂ ತನ್ನ ನಾಗರಿಕರ ಉದ್ಯೋಗಾವಕಾಶ ರಕ್ಷಣೆಗೆ ಮುಂದಾಗುತ್ತಿದೆ. ಇದರ ಪರಿಣಾಮದಿಂದಾಗಿ ಉದ್ಯೋಗಕ್ಕಾಗಿ ಹೊರದೇಶಗಳಿಗೆ ಹೋಗಿರುವವರಲ್ಲಿ ಹಲವರು ಉದ್ಯೋಗ ಕಳೆದುಕೊಂಡು ತಮ್ಮ ದೇಶಗಳಿಗೆ ಹಿಂದಿರುಗಬೇಕಾಗಿದೆ. ಇವರಲ್ಲಿ ದೈಹಿಕ ಶ್ರಮಿಕರು ಹಾಗೂ ಬೌದ್ಧಿಕ ಶ್ರಮಿಕರು ( ತಂತ್ರಜ್ಞರು, ಇಂಜಿನಿಯರ್, ವೈದ್ಯರು ಇತ್ಯಾದಿ) ಸೇರಿದ್ದಾರೆ. ಮರುವಲಸೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಎಲ್ಲಾ ದೇಶಗಳಲ್ಲೂ ನಡೆಯಲಿದೆ. ಆದರೆ ಮರುವಲಸಿಗರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾಕೆಂದರೆ ಜಗತ್ತಿನ ಬಹುತೇಕ ಎಲ್ಲಾ ದೇಶಗಳಿಗೂ ಉದ್ಯೋಗ ಹುಡುಕಿಕೊಂಡು ಭಾರತೀಯರು ಹೋಗಿದ್ದಾರೆ.


ತಾವು ವಾಸಿಸುವ ಪ್ರದೇಶದಲ್ಲಿ ದುಡಿಮೆಯ ಅವಕಾಶ ಇಲ್ಲದ ಕಾರಣಕ್ಕೆ ಬೇರೆಡೆ ವಲಸೆ ಹೋದವರು, ತಮ್ಮ ದೇಶ ಅಥವಾ ಊರಿಗೆ ವಾಪಸು ಬಂದೊಡನೆ ಅವರಿಗೆ ಉದ್ಯೋಗವಕಾಶ ಸಿಗಲು ಸಾಧ್ಯವೇ? ಕೃಷಿ ಭೂಮಿ ಉಳ್ಳವರು ಬೇಸಾಯ ಪ್ರಾರಂಭಿಸುವ ಕುರಿತು ಚಿಂತನೆ ನಡೆಸಬಹುದು. ಕೆಲವರು ಚಿಕ್ಕ ಪುಟ್ಟ ವ್ಯವಹಾರ , ಚಿಲ್ಲರೆ ಮಾರಾಟ ಮಳಿಗೆ ತೆಗೆಯಬಹುದು. ಆದರೆ ಹೆಚ್ಚಿನವರಿಗೆ ಯಾವುದೇ ದುಡಿಮೆಯ ಅವಕಾಶ ಸಿಗಲಾರದು.


ಆಧಾರ ರಹಿತ, ಅವೈಚಾರಿಕ,ಅತಾರ್ಕಿಕ ಮಾಹಿತಿ ಸೃಷ್ಟಿಸಿ, ಮಾಧ್ಯಮಗಳ ಮೂಲಕ ಬಿತ್ತರಿಸುತ್ತಿರುವ ಕೊರೊನಾ ಜೀವ ಭಯದಿಂದ ಬೆದರಿರುವ ಜನರು ಪೋಲೀಸರ ಲಾಠಿ ಏಟಿಗೆ ಹೆದರಿ ಲಾಕ್-ಡೌನ್ ಪಾಲಿಸುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆಯ ನಂತರ ಆರ್ಥಿಕ ವ್ಯವಹಾರಗಳು ಸಾಮಾನ್ಯ ಸ್ಥಿತಿಗೆ ಬರಲು ವರ್ಷಗಳೇ ತಗಲಬಹುದು.


ನಗರಗಳಲ್ಲಿರುವ ಉದ್ಯೋಗದಾತರು ಕರೆದರೂ, ಅಲ್ಲಿಂದ ವಾಪಸ್ಸು ಬಂದವರು ಪುನಃ ಹೋಗುವ ಧೈರ್ಯ ಮಾಡಲಾರರು. ಯಾಕೆಂದರೆ ಮತ್ತೆ ಪುನಃ ಏಕಾಏಕಿಯಾಗಿ ಲಾಕ್ಡೌನ್ ಹೇರಿಯಾರೆಂಬ ಭಯ ಅವರನ್ನು ಕಾಡುತ್ತಿದೆ. ತಮ್ಮನ್ನು ಯಾವ ರೀತಿಯಲ್ಲಿ ಉದ್ಯಮಿಗಳು ಬಳಸಿ ಬಿಸಾಡುತ್ತಾರೆಂಬುದನ್ನು ಲಾಕ್ಡೌನ್ ಅವಧಿಯ ನರಕಯಾತನೆಯಿಂದ ಕಾರ್ಮಿಕರು ಅರಿತಿದ್ದಾರೆ. ಇನ್ನೊಂದೆಡೆ ಆದಾಯದ ಕೊರತೆ ಅನುಭವಿಸುತ್ತಿರುವ ಮಧ್ಯಮ ವರ್ಗ, ಖರೀದಿ ಶಕ್ತಿಯಿಲ್ಲದ ಬಡವರಿಂದಾಗಿ ಉದ್ಯಮಗಳ ಉತ್ಪನ್ನಗಳು ಮಾರಾಟವಾಗದೇ ಅವು ಹಿನ್ನೆಡೆ ಅನುಭವಿಸುತ್ತಿವೆ. ಇದರಿಂದಾಗಿ ಮೊದಲಿನಂತೆ ಪೂರ್ತಿ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ಅಗತ್ಯವೂ ಅವರಿಗಿಲ್ಲ.


ಒಂದೆಡೆ ನಗರ ಕೇಂದ್ರಿತ ಉದ್ದಿಮೆಗಳು, ಕಾರ್ಮಿಕರ ಅಭಾವ ಎದುರಿಸುವ, ಮರುವಲಸೆ ಹೋಗಿರುವ ಕಾರ್ಮಿಕರು ತಮ್ಮ ಊರುಗಳಲ್ಲಿ ನಿರುದ್ಯೋಗ ಪೀಡಿತರಾಗಿರುವ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಿಭಾಯಿಸುವ ಯಾವ ಯೋಚನೆ ಅಥವಾ ಯೋಜನೆ ಯಾವ ರಾಜಕೀಯ ಪಕ್ಷದ ಬಳಿಯೂ ಇಲ್ಲ. ಈ ಸಮಸ್ಯೆಯ ಸರಳ ಪರಿಹಾರವೆಂದರೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಜನರ ಸಹಭಾಗಿತ್ವದಿಂದ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳು ಅರ್ಥಾತ್ ಜನಾಧಿಕಾರ ವ್ಯವಸ್ಥೆಯ ಅನುಷ್ಠಾನ.


ಉದ್ದಿಮೆಗಳು ಕೇಂದ್ರೀಕೃತವಾಗಿ ಸ್ಥಾಪಿತವಾಗಲು ಮೂಲ ಕಾರಣ ಬಂಡವಾಳವಾದಿ ಚಿಂತನೆಗಳು. ಲಾಭಗಳಿಕೆಯ ಹೆಚ್ಚಳದ ತವಕದಲ್ಲಿ ಸ್ಥಳೀಯ ಸಂಪನ್ಮೂಲಗಳ ಕುರಿತಾದ ನಿರ್ಲಕ್ಷ್ಯ , ಸಂಪನ್ಮೂಲಗಳ ದುರ್ಬಳಕೆ, ಕೇಂದ್ರಿಕೃತ ಉತ್ಪಾದನೆಯಿಂದ ವೆಚ್ಚ ತಗ್ಗಿಸುವ ದಿಸೆಯಲ್ಲಿ ನಡೆಯುತ್ತಿರುವ ಉದ್ಯಮಿಗಳ ನಡೆಯನ್ನೂ ಬೆಂಬಲಿಸುವ ಸರ್ಕಾರದ ಆರ್ಥಿಕ ನೀತಿಗಳೇ ನಗರಾಭಿಮುಖಿ ವಲಸೆಗೆ ಕಾರಣ. ಪೃಥ್ವಿಯ ಎಲ್ಲೆಡೆಗೂ ಸಂಪನ್ಮೂಲಗಳು ಇಲ್ಲವೆಂಬ ಬಂಡವಾಳವಾದಿ ಚಿಂತನೆಗೆ, ಸಂಪನ್ಮೂಲಗಳ ಕುರಿತಾದ ಸೀಮಿತ ಚಿಂತನೆಯೇ ಕಾರಣ.


ಪೃಥ್ವಿಯ ಎಲ್ಲಾ ಭಾಗಗಳಲ್ಲಿಯೂ ಪ್ರಕೃತಿ ಒಂದಿಲ್ಲೊಂದು ವಿಧದ ಸಂಪನ್ಮೂಲಗಳನ್ನು ನೀಡಿದೆ. ಹಾಗೆ ಅದನ್ನು ಗುರ್ತಿಸಿ, ಬಳಸುವ ಬುದ್ಧಿಶಕ್ತಿಯನ್ನು ಮಾನವನಿಗೂ ನೀಡಿದೆ. ತಾಯಿಯಲ್ಲಿ ಎದೆ ಹಾಲು ಸೃಷ್ಟಿ ಮಾಡಿ, ಭೂಮಿಗೆ ಬರುವ ಮುನ್ನವೇ ಮಗುವಿನ ಕುರಿತಾಗಿ ಪ್ರಕೃತಿ ಕಾಳಜಿ ತೋರುತ್ತದೆ. ಅಂದರೆ ಯಾವುದೇ ಪ್ರದೇಶದಲ್ಲಿ ಜನವಸತಿ ಇದೆಯೆಂದಾದರೆ ಅವರ ಬದುಕಿಗೆ ಬೇಕಾಗುವಷ್ಟು ಸಂಪನ್ಮೂಲಗಳು ಆ ಪ್ರದೇಶದಲ್ಲಿ ಇದೆಯೆಂದೇ ಅರ್ಥ.


ಸ್ಥಳೀಯ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ, ಜನರಸಹಭಾಗಿತ್ವದೊಂದಿಗೆ ,ಆ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರಿಗೆ ದುಡಿಮೆಯ ಅವಕಾಶ ಸೃಷ್ಟಿಸುವ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ( ಕೃಷಿ, ಉದ್ದಿಮೆ, ವ್ಯಾಪಾರ, ಸೇವೆ ಇತ್ಯಾದಿ) ನಡೆಸುವ ಯೋಜನೆಗಳು ರೂಪುಗೊಳ್ಳಬೇಕು. ಬ್ಲಾಕ್ ಮಟ್ಟದಲ್ಲಿ ಅಂದರೆ ತಳಮಟ್ಟದಲ್ಲಿ ಯೋಜನೆಗಳು ರೂಪಿತವಾಗಿ, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಕ್ರೋಢೀಕೃತಗೊಳ್ಳಬೇಕು. ಮೇಲಿನಿಂದ ಕೆಳಗೆ ಹರಿದು ಬರುವ ಯೋಜನೆಗಳು ನಿಷ್ಪ್ರಯೋಜಕ.


ಇಂದು ಅನುಸರಿಸುತ್ತಿರುವ ಕೇಂದ್ರೀಕೃತ ಅರ್ಥವ್ಯವಸ್ಥೆಯ ಬದಲಿಗೆ ವಿಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯನ್ನು ಅನುಷ್ಟಾನಗೊಲಿಸಬೇಕು ಅಂದರೆ ಜನಾಧಿಕಾರದ ವ್ಯವಸ್ಥೆಯಿಂದ ಹೊಸ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿ ಸುಲಭ ಸಾಧ್ಯ. ಹೊರ ದೇಶಗಳ ಹೂಡಿಕೆದಾರರಿಂದ ಅಥವಾ ಬೇರೆ ದೇಶಗಳನ್ನ ಬಿಟ್ಟು ಬರುತ್ತಿರುವ ಕಂಪನಿಗಳಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಂಬ ಭ್ರಮೆಯಲ್ಲೇ ಇದ್ದರೆ, ಮರು ವಲಸೆಯ ಪರಿಣಾಮದಿಂದಾಗಿ ಉಂಟಾಗುವ ನಿರುದ್ಯೋಗ, ಕಳ್ಳತನ, ದರೋಡೆ, ಹಿಂಸಾಚಾರ, ಸಾಮಾಜಿಕ ಸಂಘರ್ಷಗಳನ್ನು ಎದುರಿಸುವುದು ಅನಿವಾರ್ಯ.

*********

ಗಣೇಶ ಭಟ್ಟ ಶಿರಸಿ

Leave a Reply

Back To Top