ಕಾವ್ಯಯಾನ

ದಾರಿಯುದ್ದಕ್ಕೂ……

ಮುಗಿಲಕಾವ್ಯ

ನೀ ಬರುವ ದಾರಿ ಉದ್ದಕ್ಕೂ
ಒಲವಿನ ಹೂ ಹಾಸಿ
ಗರಿಗೆದರಿದ
ನನ್ನೊಳಗಿನ ಹೃದಯದ
ಭಾವಗಳನ್ನು,,, ಒಪ್ಪವಾಗಿ
ಜೋಡಿಸಿಕೊಳ್ಳುತ್ತಾ
ಕಣ್ಣು ಕೀಲಿಸುತ್ತೇನೆ,,

ಹಾದಿಯೂ ಒಮ್ಮೊಮ್ಮೆ ಸಿಟ್ಟಿಗೇಳುತ್ತದೆ
ಅಲ್ಲಲ್ಲ ಕರುಬುತ್ತದೆ
ನಿನ್ನ ಮೇಲಿನ
ನನ್ನೊಲವಿನ ಕಂಡು

ಇದರ ಮತ್ಸರ
ಎಷ್ಟಿದೆ ಗೊತ್ತಾ?

ಬೇಕೆಂತಲೇ ಭಾರವಾಗಿ
ದೂರವಾಗಿ
ಕ್ಷಣಗಳನ್ನು ಯುಗಗಳಾಗಿ
ಮಾಡುತ್ತಾ,,,
ಮತ್ತಷ್ಟು ನನ್ನ ಕಾಯಿಸಲು
ಶುರುವಿಟ್ಟುಕೊಳ್ಳುತ್ತದೆ

ಮೊದಮೊದಲಿಗೆ
ನಾನು ಜಿದ್ದಿಗಿಳಿಯುತ್ತೇನೆ
ಸೋಲಲಾರೆ ಎಂದೂ

ನಿನ್ನ ಕಾಣುವ ತವಕ
ಮೂಡಿದಂತೆಲ್ಲಾ
ನಾನೇ ನಾನಾಗಿ
ಸೋತುಬಿಡುತ್ತೇನೆ;
ನಿನ್ನ ಸಂಧಿಸುವ ಗಳಿಗೆಯ
ಮುಂದೆ ,,ನನ್ನ ಜಿದ್ದು
ಮಂಡಿಯೂರಿ ಬಿಡುತ್ತದೆ,,
ನಿನಗೋಸ್ಕರ ತಾನೇ
ಎಂಬ ಭಾವ ಮೂಡಿ
ಮನ ಸಮಾಧಾನಿಸಿಕೊಂಡು;

ದಾರಿ ಉದ್ದಕ್ಕೂ
ಕಣ್ಣು ಕೀಲಿಸುತ್ತದೆ

ನೀನು ಈ ಹಾದಿಯಿಂದ
ಎಂದೋ ಕವಲೊಡೆದು
ಬಹುದೂರ ಸಾಗಿದ್ದರೂ

ಮತ್ತೆ ದಾರಿಯಲಿ
ಒಲವಿನ ಹೂ ಹಾಸಿ
ಪ್ರೀತಿಸುವುದಷ್ಟೆ
ಗೊತ್ತಿರುವ ಈ ಮನಸ್ಸು,,,,

ದಾರಿ ಉದ್ದಕೂ ಕಣ್ಣು
ಕೀಲಿಸುತ್ತದೆ.

===========

3 thoughts on “ಕಾವ್ಯಯಾನ

Leave a Reply

Back To Top