ಕಾವ್ಯ ಸಂಗಾತಿ
ತಂತಿಯೊಳಗಣ ಶಬ್ದ !
ಬಿದಲೋಟಿ ರಂಗನಾಥ್
ನಾನು ಶರಾಬಿನ ದಾಸ
ಘಟಶೋಧನೆಯಲ್ಲಿನ ಬಂಧವನ್ನು
ಹುಡುಕುತ್ತಲೇ ಹೋದೆ
ಅವನ ನೆರಳಿತ್ತು
ಅವಳ ಒಲವಿತ್ತು
ನಾನೇ ಇರಲಿಲ್ಲ.
ಶೋಧಿಸಿಸಲು ಎದೆಗೂಡಲ್ಲಿದ್ದ
ಹಂಸದ ನಡಿಗೆಯ ಹೆಜ್ಜೆಯ
ಸುತ್ತಿ ಹೊಲೆದ ಪಾಪದ ಮೂಟೆಯ.
ತಿರುಗಿದೆ
ಕಾಡು –ಮೇಡು ಬೆಟ್ಟ ಕಣಿವೆ ಕಂದರ
ನಾ ಬಯಸಿದ್ದು ಸಿಗಲಿಲ್ಲ
ಧ್ಯಾನದ ಹೆಜ್ಜೆ ಮುಟ್ಟಿ ನೋಡಿದೆ
ಸಕಲವೂ ನನ್ನೊಳಗೇ ಇತ್ತು
ತಂತಿ ಮೀಟಿದ ಶಬ್ದ
ನಿಜದ ನೆಲೆಯ ಬದುಕಿಗೆ ದಾರಿ ತೋರಿ
ಬಯಲ ಪದಗಳು ಮುತ್ತಿದವು
ಎದೆಯ ತುಂಬಾ..
ಸಣ್ಣ ಬೆಳಕಿನ ದಾರಿ ಮೇಲೆ
ಕಂಡು ಕಾಣದ ಹಂಸದ ನಡಿಗೆ
ಬೆನ್ನ ಹಿಂದಿನ ಸತ್ಯ ನಿರಾಕಾರದಲಿ
ಮಿಥ್ಯವ ಸುಟ್ಟು
ನಡೆಯುತ್ತಲೇ ಹೋಯಿತು
ಗೋಡೆಗಳಿಲ್ಲದ ಬಯಲ ಹರಸಿ
ಯಾರೂ ಇರಲಿಲ್ಲ
ನನ್ನೊಳಗೆ ನನ್ನವರು
ಶರಾಬೇ ಸೌತಿ
ಓಂಕಾರದೋಳಗಿನ ಗುಂಡಿಯ ಶೋಧಿಸುತ
ಹಂಸ ಗೋರಿಯಾಯಿತು
ತನ್ನೊಳಗೆ ಇಷ್ಟು ದಿನವಿದ್ದು
ಒಂದು ಸುಳಿವೂ ಕೊಡದೆ.
ತಂತಿಯೊಳಗಣ ಶಬ್ಧ ಮಾತ್ರ
ಪಂಚಾಕ್ಷರಿಯ ನುಡಿಯುತ್ತಲೇ ಇತ್ತು
ಗೂಡು ಬಯಲಾಗುತ್ತ…
===============
ತುಂಬಾ ಅರ್ಥಪೂರ್ಣ ಕವಿತೆ…
ಅಧ್ಯಾತ್ಮಿಕ ಚಿಂತನೆಗೆಹಚ್ಚುವ ಕವಿತೆ.. ರಂಗನಾಥ ಜಿ
ಧನ್ಯವಾದಗಳು ಬೀ ಮೆಡಮ್
ಧನ್ಯವಾದಗಳು ಬೀ ಮೆಡಮ್