ಲೇಖನ

ಆ ದೃಶ್ಯಗಳನ್ನು ಅಲಂಕರಿಸಿ ಹಂಚುತ್ತಿದ್ದಾರೆ!

ಪಿಎಂ ಇಕ್ಬಾಲ್ ಕೈರಂಗಳ

ಕೆಲವು ದೌರ್ಜನ್ಯದ ವಾರ್ತೆಗಳು, ವೀಡಿಯೋಗಳು FB ಮತ್ತು ವಾಟ್ಸಪಲ್ಲಿ ಷೇರು ಆಗಿ ನಮ್ಮ ಕಣ್ಣಿಗೆ ಬೀಳುತ್ತಿರುವುತ್ತವೆ. ನೋಡಕ್ಕಾಗದೇ ನೋಡುತ್ತೇವೆ. ಆಗೆಲ್ಲಾ ಮನಸ್ಸು ವಿಪರೀತ ಹರ್ಟುಗೊಳ್ಳುತ್ತದೆ. ಹೃದಯವನ್ನು ಯಾರೋ ಹಿಂಡಿದಂತಾಗುತ್ತದೆ. ಕೆಲವು ನಮ್ಮನ್ನು ಅಳಿಸಿಯೇ ಬಿಡುತ್ತವೆ. ವಿಕೃತ ಮನಸ್ಸಿನ ಪೈಶಾಚಿಕ ಮನುಷ್ಯರ ವಿರುದ್ಧ ರಕ್ತ ಕುದಿಯುತ್ತದೆ. ಅವರನ್ನು ಜೀವಂತ ಸುಡಬೇಕೆಂದು ಅನಿಸುತ್ತದೆ. ಕ್ರೌರ್ಯ, ದೌರ್ಜನ್ಯಗಳ ತಾಕತ್ತೇ ಹಾಗೆ. ಒಂದೆರಡು ನಿಮಿಷದ ವಾರ್ತೆಯಾಗಿ ಅಥವಾ ವೀಡಿಯೋ ಆಗಿ ಸಿಕ್ಕರೆ ನಮಗೆ ಹೀಗಾಗುತ್ತವೆ. ಅವನ್ನು ಅನುಭವಿಸಿದ ಆ ಜೀವಗಳ ಪರಿಸ್ಥಿತಿಯೆಷ್ಟು ಘೋರ ಇದ್ದೀತು! ಉಹುಂ, ಕಲ್ಪನೆ ಮಾಡೋಕೂ ಆಗುವುದಿಲ್ಲ.
ಈ ಲೋಕವೇ ಬೇಡ, ಲೋಕವು ಒಮ್ಮೆ ಅವಸಾನ ಕಾಣಲಿ ಎಂದು ಅನಿಸುತ್ತದೆ.

ಇತ್ತೀಚೆಗೆ ಹೊಸ ಬೆಳವಣಿಗೆಯೊಂದು ಕಾಣಸಿಗುತ್ತಿವೆ. ಗಾಯಕ್ಕೆ ಬರೆ ಹಾಕುವುದು ಅನ್ತಾರಲ್ಲಾ ಹಾಗೆ. ದೌರ್ಜನ್ಯಗಳ ವೀಡಿಯೋಗಳ ಜೊತೆಗೆ ಕೋಮುಪ್ರಚೋದಿತ ಕೆಲವು ವಾಕ್ಯಗಳು ಸೇರಿ ಷೇರ್ ಆಗುತ್ತಿವೆ. ‘ತಮ್ಮ ಧರ್ಮೀಯರ ವಿರುದ್ಧ ಇಂತಹ ಧರ್ಮೀಯರ ದೌರ್ಜನ್ಯ ಇದು’ ಎನ್ನುತ್ತಾ ಒಂದಷ್ಟು ವಾಕ್ಯಗಳು ಇರುತ್ತವೆ. ಕೆಲವು ವಾಕ್ಯಗಳಂತೂ ಅತಿ ಅಸಹ್ಯವಾಗಿರುತ್ತವೆ. ‘ಕೋಮು ಅಸಹನೆಯನ್ನು ಪ್ರಚೋದಿಸುವುದೇ ಧರ್ಮರಕ್ಷಣೆ’ಯೆಂಬ ವ್ಯಾಧಿಗೆ ತುತ್ತಾದವರು ಕಂಡುಕೊಂಡ ಹೊಸ ಫಾರ್ಮುಲಾ ಇವು. ಒಂದೇ ವೀಡಿಯೋ ಒಂದು ಕಡೆ ಮುಸ್ಲಿಮರ ಮೇಲಿನ ಹಿಂದೂಗಳ ದೌರ್ಜನ್ಯವಾಗಿಯೂ, ಮತ್ತೊಂದು ಕಡೆ ಹಿಂದುಗಳ ಮೇಲಿನ‌ ಮುಸ್ಲಿಮರ ದೌರ್ಜನ್ಯವಾಗಿಯೂ ಬರೆಯಲ್ಪಟ್ಟು ಷೇರ್ ಆಗುತ್ತಿರುವುದು ನನ್ನ ಗಮನಕ್ಕೆ ಎಷ್ಟೋ ಬಂದಿದೆ. ವೀಡಿಯೊ- ಫೋಟೋಗಳಲ್ಲಿರುವ ಬರ್ಬರತೆಯೇ ಸಾಕಾಗುತ್ತೆ ನಮ್ಮ ಮನಸ್ಸನ್ನು ಗಾಯಗೊಳಿಸಿಬಿಡಲು. ಇಂತಹ ಬರಹಗಳು ಗಾಯದ ಮೇಲಿನ ಬರೆಯಾಗಿ ಪರಿಣಮಿಸುತ್ತದೆ.

ಅಂತಹ ವೀಡಿಯೋಗಳಲ್ಲಿ ಕಾಣುವ ಕ್ರೂರಿಗಳದ್ದು ಒಂದು ಮನಸ್ಥಿತಿಯಾದರೆ ಅವನ್ನು ಕೋಮು ಅಸಹನೆಗೆ ಉಪಯೋಗಿಸಲು ಉದ್ರೇಕಕಾರಿಯಾಗಿ ಬರಹದೊಂದಿಗೆ ಅಲಂಕರಿಸುವವರದ್ದು ಇನ್ನೊಂದು ಮನಸ್ಥಿತಿ. ವೀಡಿಯೋ ಜೊತೆಗೆ ಇರುವ ಬರಹ ಕನ್ಫರ್ಮಾ, ಬಹುಶ ಕನ್ಫರ್ಮು ಆದರೂ ಅದು ಆ ಪುಂಡರ ಹೆಸರು ಪ್ರತಿನಿಧಿಸುವ ಧರ್ಮದ ಎಲ್ಲರ ಕೃತ್ಯವಾ ಎಂದು ಯೋಚಿಸುವ ಗೋಜಿಗೇ ಹೋಗದೇ ಹಾಗೇ ಷೇರ್ ಮಾಡುವವರದ್ದು ಮತ್ತೊಂದು ಮನಸ್ಥಿತಿ.

ಇಂತಹ ಕೋಮೋದ್ರೇಕ ಬರಹದೊಂದಿಗಿನ ವೀಡಿಯೋಗಳನ್ನು ನಾನು ವರ್ಷಗಳಿಂದ ನೋಡುತ್ತಿದ್ದೇನೆ. ಅವುಗಳಲ್ಲಿರುವ ಸಂತ್ರಸ್ತರ ಪರವಾಗಿ ಮನಸ್ಸು ಮರುಗಿ, ಆ ರಾಕ್ಷಸರ ವಿರುದ್ಧವಾಗಿ ರೋಷ ಉಕ್ಕುತ್ತದೆಯೇ ಹೊರತು ಬರಹವನ್ನು ನಂಬಿ ಆ ಕೆಟ್ಟವರ ಹೆಸರುಗಳು ಪ್ರತಿನಿಧಿಸುವ ಧರ್ಮದ ಮೇಲೋ, ಧರ್ಮೀಯರ ಮೇಲೋ ಅಸಹನೆ ಒಮ್ಮೆಯೂ ಬಂದದ್ದಿಲ್ಲ.

ವಾಟ್ಸಪ್, fbಯಲ್ಲಿ
ವೀಡಿಯೋ ಜೊತೆ ಅಂತಹ ಬರಹ ಷೇರ್ ಮಾಡಿದವರೊಂದಿಗೆ ನನ್ನ ರಿಯಾಕ್ಟು, “ಈ ಘಟನೆಯ ರಾಕ್ಷಸರ ಮತ್ತು ಸಂತ್ರಸ್ತರ ಧರ್ಮ ಯಾವುದೆಂದು ನಿಮಗೆ ಕನ್ಫರ್ಮಾ, ಕನ್ಫರ್ಮಾದರೆ ಹೇಗೆ? ಇರೋದನ್ನು ಹಾಗೇ ನಂಬಿ ಷೇರ್ ಮಾಡಬೇಡಿ. ವೀಡಿಯೋವನ್ನು ಷೇರ್ ಮಾಡುವುದಾದರೆ ಅದರ ಜೊತೆಗಿರುವ ಬರಹವನ್ನು ದಯವಿಟ್ಟು ಅಳಿಸಿ’ ಎಂದಾಗಿರುತ್ತದೆ. ‘ಬಹುಶ ವೀಡಿಯೋ ಜೊತೆಗಿರುವ ಬರಹ ಪ್ರಕಾರ ಅದು …ಇಂತಹ ಧರ್ಮೀಯರು ಎಂಬುದು ನಿಮಗೆ ಪಕ್ಕಾ ಆದರೂ ಅದಕ್ಕೆ ಅವರ ಇಡೀ ಧರ್ಮೀಯನ್ನು ಹೊಣೆಗಾರರನ್ನಾಗಿ ಮಾಡಬೇಡಿ” ಎಂದೂ ಹೇಳುತ್ತೇನೆ.

ಕೆಲವರು ನನ್ನ ಮಾತನ್ನು ಅನುಮೋದಿಸಿದರೆ ಕೆಲವರು ಜಗಳಕ್ಕೆ ನಿಂತದ್ದು ಇವೆ. ಜಗಳ ಮಾಡಿದವರಲ್ಲಿ ನಾನು “
‘ನಿಮ್ಮ ಅರಿವು ನಿಜವೇ ಆದರೂ ಲೋಕದಲ್ಲಿ ಕಾಣುವ ಅಮಾನುಷ ಕಾರ್ಯಗಳನ್ನೆಲ್ಲ ಒಮ್ಮೆ ಪಟ್ಟಿ ನೋಡಿ. ಆ ಕೃತ್ಯಗಳ ಇಡೀ ಧರ್ಮೀಯರನ್ನೋ ಅಥವಾ ಸಿದ್ಧಾಂತವನ್ನೋ ಹೇಗೆ ಅಪರಾಧಿ ಮಾಡೋಕ್ಕಾಗುತ್ತೆ? ಹಾಗೆ ಮಾಡೋದಾದರೆ ಲೋಕದ ಅಷ್ಟೂ ಧರ್ಮ, ಸಿದ್ಧಾಂತಗಳನ್ನು ಅಪರಾಧಿ ಮಾಡಲೇಬೇಕಾಗುತ್ತದೆ ಎಂಬುದು ನಮಗೆ ಗೊತ್ತಿರಲಿ” ಎನ್ನುತ್ತೇನೆ. ಹೆಚ್ಚಿನವರು ಕನ್ವಿನ್ಸು ಆಗ್ತಾರೆ.

ತೊಟ್ಟಿಲ ಮಗುವನ್ನೂ ಹೆಣವನ್ನೂ, ಪ್ರಾಣಿಯನ್ನೂ ರೇಪು ಮಾಡುವವರಿದ್ದಾರೆ. ಸ್ವಂತ ಕರುಳ ಕುಡಿಯನ್ನೇ ಕೊಲ್ಲುವ ತಾಯಿ, ಅಪ್ಪನನ್ನೇ ಕೊಲ್ಲುವ ತಂದೆ, ಸೋದರಿಯನ್ನೇ ಬಲಾತ್ಕರಿಸುವ ಸೋದರ, ನಿಧಿಗಾಗಿ ತಾಯಿಯನ್ನೇ ಬಲಿ ಕೊಡುವ ಮಗ, ಹತ್ಯಾ ಸರಮಾಲೆಯನ್ನೇ ಮಾಡುವ ಸರಣಿ ಹಂತಕ…‌ಹೀಗೆ ನಾವು ನ್ಯೂಸುಗಳನ್ನು ಕೇಳುತ್ತಿದ್ದೇವೆ. ಇಂತಹ ಕೃತ್ಯಗಳಲ್ಲಿ ಅಪರಾಧಿಗಳ ಹೆಸರು ನೊಡಿ.. ಎಲ್ಲಾ ಧರ್ಮಗಳಲ್ಲಿರುವ ಹೆಸರಿನವರಿಂದಲೂ ಅಪರಾಧ ನಡೆಯುತ್ತವೆ. ಆದರೆ ಆಕಸ್ಮಾತ್ ಕೆಲವು ಸಂದರ್ಭಗಳಲ್ಲಿ ಅಪರಾಧಿ ಮತ್ತು ಅಪರಾಧಗೊಳಪಟ್ಟವರ ಧರ್ಮ ಬೇರೆ ಆಗಿರುತ್ತವೆ!

ಅಪರಾಧಗೊಳಪಟ್ಟವರು ಮತ್ತು ಅಪರಾಧಿಗಳು ಒಂದೇ ಧರ್ಮದವಾದರೆ ಅವು ಆ ಅಪರಾಧಿಗಳ ಮಾತ್ರ ಕೃತ್ಯಗಳಾಗಿಯೂ, ಅಪರಾಧಗೊಳಪಟ್ಟವರು ಅಪರಾಧಿಗಳ ಧರ್ಮದವರಲ್ಲವಾದರೆ ಆ ಕೃತ್ಯಗಳು ಅಪರಾಧಿಗಳ ಧರ್ಮೀಯರ ಎಲ್ಲರ ಕೃತ್ಯಗಳಾಗಿಯೂ ಆಗಿ ನಮಗೆ ಕಾಣೋದು ಯಾವ ನ್ಯಾಯ? ನಾವು ಯಾವ ಮನಸ್ಥಿತಿಯಲ್ಲಿ ಹೂತುಹೋಗಿದ್ದೇವೆ?

99 ಪರ್ಸೆಂಟ್ ಜನರು ಸತ್ಯ, ನ್ಯಾಯದ ದಾರಿಯಲ್ಲಿ‌ಸಾಗಿ ಭಗವಂತನ ಕೃಪೆ ಸಿಗಬೇಕೆಂದು ಬಯಸಿ ಆ ಉದ್ದೇಶಕ್ಕಾಗಿ ಅವರು ಹುಟ್ಟಿದ ಧಾರ್ಮಿಕ ನಂಬಿಕೆಯಲ್ಲಿ ಜೀವನದ ಏರಿಳಿತವನ್ನು ಎದುರಿಸೋದರಲ್ಲೇ ಸುಸ್ತಾಗಿ ಬದುಕುತ್ತಿದ್ದಾರೆ. ಅವರಲ್ಲಿ ಕೆಲವರಂತೂ ನರಳುತ್ತಾ ‘ಯಾರಿಲ್ಲ ನಮಗೆಂದು’ ಫೀಲಾಗುತ್ತಾ ಜೀವನ ದೂಡುತ್ತಿದ್ದಾರೆ. ಅವರಲ್ಲಿ
ಕೆಲವರಷ್ಟೇ ಆರ್ಥಿಕ ಸಬಲರಿದ್ದರೆ ಅವರೂ ಸೇವೆ, ದಾನ, ಪ್ರೆಸ್ಟೀಜು ಅಂತ ಬಿಝಿಯಾಗಿರ್ತಾರೆ. ಅದರೆ ಒ ಮಾನವಕುಲದ ಒಟ್ಟು ಜನರ ಒಂದು ಪರ್ಸೆಂಟು ಜನರು ವಿಕೃತರಾಗಿ ತಯಾರಾಗಿರುತ್ತಾರೆ. ಅವರು ವಿಕೃತ ಮೆರೆಯೋದು ಅವರದ್ದಲ್ಲದ ಧರ್ಮೀಯಲ್ಲಿ ಮಾತ್ರ ಅಲ್ಲ!

ಪೋಲೀಸ್ ಠಾಣೆಗಳ ಕೇಸುಗಳ ಪಟ್ಟಿ ನೋಡಿ. ಕೋರ್ಟುಗಳಲ್ಲಿರುವ ಪಟ್ಟಿಗಳನ್ನು ಅವಲೋಕಿಸಿ. ಮಾಧ್ಯಮಗಳಲ್ಲಿ ಬರುತ್ತಿರುವ ವಾರ್ತೆಗಳನ್ನು ನೋಡಿ. ಏನನ್ಸುತ್ತದೆ? ಕೊಲೆ, ಅತ್ಯಾಚಾರ, ಹಿಂಶೆ ಮುಂತಾದ ಅಪರಾಧಗಳೆಲ್ಲದರಲ್ಲಿ ಅಪರಾಧಿಗಳ ಮತ್ತು ಅಪರಾಧಗೊಳಪಟ್ಟವರ ಧರ್ಮಗಳು ಬೇರೆ ಬೇರೆಯಾಗಿಯೇ ಇರುತ್ತಾ? ಒಂದು ಧರ್ಮದವರು ಒಂದಾಗಿ ಇನ್ನೊಂದು ಧರ್ಮದವರ ವಿರುದ್ಧ ಮಾಡಿದ ಯುದ್ಧವಾಗಿರುತ್ತವಾ ಅವುಗಳು?

ನಮ್ಮ ಉತ್ತರ ‘ಅಲ್ಲ’ ಎಂದಾಗಿಯೇ ಇರುತ್ತದೆ!
ಹಾಗಿರುವಾಗ ಕೆಲವು ಘಟನೆಗಳಲ್ಲಿ ಮಾತ್ರ ಅಪರಾಧಿ ಮತ್ತು ಅಪರಾಧಿಗಳ ಹೆಸರಿನವರ ಧರ್ಮಗಳು ಬೇರೆಯಾದರೆ ಅಪರಾಧ ಜಗತ್ತಿನ ಆಕಸ್ಮಿಕಗಳಷ್ಟೇ ಅವೆಂದು ತಿಳಿದುಕೊಳ್ಳದೆ ಅಪರಾಧಿಗಳ ಇಡೀ ಧರ್ಮೀಯರ ಮನಸ್ಥಿತಿಯ ಪ್ರತಿಬಿಂಬವೆಂದು ನಮಗೆ ಯಾಕೆ ಅನಿಸಬೇಕು?

ನಮ್ಮಲ್ಲಿ ಹಿಂದುಗಳ ಬಗ್ಗೆ ಮುಸ್ಲಿಮರಿಗೆ ಮತ್ತು ಮುಸ್ಲಿಮರ ಬಗ್ಗೆ ಹಿಂದುಗಳಿಗೆ ಭಯವನ್ನು ಇಂಜೆಕ್ಟು ಮಾಡಲು
ತಮ್ಮ ಆರಾಧನಾಲಯಗಳನ್ನು ತಾವೇ ಮಲಿನಗೊಳಿಸುತ್ತಾರೆ. ವಾಸ್ತವ ಏನು ಅಂತ ಗೊತ್ತಿಲ್ಲದ ಹಿಂಶಾತ್ಮಕ ವೀಡಿಯೋಗಳು ಸಿಕ್ಕಿದರೂ ಬಳಸುತ್ತಾರೆ.

ಅಮಾನುಷ ಘಟನೆಗಳು‌ ನಡೆದಾಗ ಅಥವಾ ತಿಳಿದಾಗ ಆ ಅಪರಾಧಿಗಳ ಹೆಸರಿನ ಧರ್ಮದ 99.9 ಪರ್ಸೆಂಟ್ ಜನರ ಮನಸ್ಸೂ ಕರೆಳಿ ನಿಲ್ಲುತ್ತವೆ. ಅಪರಾಧಿಗಳ ವಿರುದ್ಧ ಹಿಡಿಶಾಪ ಹಾಕುತ್ತವೆ.‌ ಸಂತ್ರಸ್ತರಿಗಾಗಿ ಮರುಗುತ್ತವೆ. ಆ ನರರೂಪಿ ಚಿಶಾಚಿಗಳಿಗೆ ಶಿಕ್ಷೆ ಆಗಲು ಮನಸಾರೆ ಬಯಸುತ್ತವೆ. ಒಂದು ಧರ್ಮೀಯರು ಒಂದಾಗಿ, ಪ್ಲಾನ್ ಮಾಡಿದ ಕೃತ್ಯಗಳು ಅವುಗಳಲ್ಲ. ಅವು ಅಪರಾಧಿಗಳ ಹೆಸರುಗಳು ಪ್ರತಿನಿಧಿಸುವ ಧರ್ಮೀಯರಿಂದ ಶಹಬಾಸ್ ಪಡೆಯುವುದಿಲ್ಲ.
ಅವೆಲ್ಲಾ ಧರ್ಮಯುದ್ದವಲ್ಲ, ವಿಕೃತರ ಅಟ್ಟಹಾಸವಷ್ಟೇ. ಹಿಂಶಾಪ್ರಿಯರ ಕೃತ್ಯಗಳನ್ನು ಕೋಮು ಬಣ್ಣದಿಂದ ಆಲಂಕರಿಸಬೇಡಿ. ಹಾಗೆ ಮಾಡಿದರೆ ಅದು ಆ ಹಿಂಶಾಪ್ರಿಯರಿಗೆ ಮತ್ತಷ್ಟು ಆನಂದ ತಂದುಕೊಡಬಲ್ಲದು.
ಅಷ್ಟೂ ಸಮಸ್ಯೆಗಳಿಂದ ನರಳುತ್ತಿರುವ ಮನುಷ್ಯರ ನಡುವೆ ಕೋಮುರಾಕ್ಷಸನನ್ನು ಇನ್ನಷ್ಟು ಬೆಳೆಸಬೇಡಿ.

ಅಪರಾಧಿಗಳನ್ನು ಅಪರಾಧವಾಗಿ ನೋಡದೇ ಅವರ ಹೆಸರು ಪ್ರತಿನಿಧಿಸುವ ಧರ್ಮದವರ ಮನಸ್ಥಿತಿ ಅಥವಾ ಕೃತ್ಯಗಳಾಗಿ ಕಂಡರೆ ಈ ಲೋಕದಲ್ಲಿ ಯಾವ ಧರ್ಮವನ್ನು ಸಾಚಾ ಅನ್ನೋಕೆ ಸಾಧ್ಯ ಎಂದು ಎದೆಯಲ್ಲಿ ಕೈಯಿಟ್ಟು ಚಿಂತಿಸಿನೋಡಿ.

=================

ಪರಿಚಯ:

ಮಂಗಳೂರು ಸಮೀಪದ ಕೈರಂಗಳದವರು.. ವಾರ್ತಾಭಾರತಿಯಲ್ಲಿ ಪ್ರೂಫ್ ರೀಡರ್ ಆಗಿದ್ದವನು

2 thoughts on “ಲೇಖನ

Leave a Reply

Back To Top