ನಂದಿನಿ ಹೆದ್ದುರ್ಗವರ ಸಂಕಲನ “ಒಂದು ಆದಿಮ ಪ್ರೇಮ”ದ ಅವಲೋಕ ಸಂಗೀತ ರವಿರಾಜ್

ಪುಸ್ತಕ ಸಂಗಾತಿ

ನಂದಿನಿ ಹೆದ್ದುರ್ಗ

“ಒಂದು ಆದಿಮ ಪ್ರೇಮ”

ಸಂಗೀತ ರವಿರಾಜ್

ನಮ್ಮ ನಾಡಿನ ಲೇಖಕಿಯರಲ್ಲಿ  ಮುಂಚೂಣಿಯಲ್ಲಿರುವ ‘ ನಂದಿನಿ ಹೆದ್ದುರ್ಗ ‘ ರ  ಎಲ್ಲರೂ ಮೆಚ್ಚುವಂತಿರುವ  ಕವನ ಸಂಕಲನ  ‘ಒಂದು ಆದಿಮ ಪ್ರೇಮ ‘. ಪುಸ್ತಕದ ಹೆಸರೇ ಇಷ್ಟು ಚಂದಿರುವಾಗ ಇನ್ನು ಕವಿತೆಗಳ ಅಂದ ಹೇಗಿರಬೇಡ ? ಒಂದಕ್ಕಿಂತ ಒಂದು ಗುಣಮಟ್ಟಕ್ಕೆ ಪೈಪೋಟಿ ಕೊಡುವಂತಹ ಪ್ರೇಮ, ವಿರಹ, ನೋವು, ನಲಿವು , ಕುಟುಂಬ ಎಲ್ಲವೂ ಮಿಳಿತಗೊಂಡ ಕವಿತೆಗಳ ಗುಚ್ಛ ಇಲ್ಲಿದೆ. ‘ ಅಮ್ಮನಾಗುವುದೆಂದರೆ  ಕೆಲವು ನೋವುಗಳನ್ನು ಆಕಾಶಕ್ಕೆ ಹಾರಿ ಬಿಡಬೇಕು ;
ಕೆಲವು ಮಾತುಗಳನ್ನು ಬರಡು ನೆಲದೊಳಗೆ ಆಳ ಗುಳಿ ತೆಗೆದು ಮೊಳೆಯದಂತೆ ಹೂಳಿ ಬಿಡಬೇಕು ” .
ಎಷ್ಟು ಜವಾಬ್ದಾರಿಯುತ , ಅನುಭವಯುಕ್ತ ಸಾಲುಗಳಿವು . ಪ್ರತಿ ಅಮ್ಮಂದಿರ ಎದೆಯೊಳಗೆ ಇಳಿಯುತ್ತ ಮಾಗಿದ ಈ ಅಕ್ಷರಗಳ ಶಕ್ತತೆಯಿಂದ , ನಮ್ಮ ಭಾವನೆಗಳಲ್ಲಿಯು ಏರಿಳಿತ ಉಂಟಾಗುವುದು ಈ ಕವಿತೆಯ ಸಾರ್ಥಕತೆ. ಮೊದಲು ಅಮ್ಮ ಆಮೇಲೆ ಮಗಳೋ , ಗೆಳತಿಯೋ , ಹೆಂಡತಿಯೋ ಏನೋ ಒಂದು.
        ನಮ್ಮೊಳಗೆ, ಮನೆಯೊಳಗೆ,ಮನದೊಳಗೆ ,  ಮತ್ತು ಸಮಾಜದೊಳಗೆ ಏನೆಲ್ಲಾ ಘಟನಾವಳಿಗಳು ನಡೆಯುತ್ತ ಹೋಗುತ್ತದೋ ಅದರ ಲೋಕ ಗ್ರಹಿಕೆಗಳನ್ನು ಎಷ್ಟು ಕರಾರುವಕ್ಕಾಗಿ ಅಂದಾಜಿಸುವ ಕಲೆ ಕವಯತ್ರಿಯ ಮನೋಬಲಕ್ಕೆ ಇದೆ ಎಂಬುದು ಇಲ್ಲಿನ ಕವಿತೆಗಳನ್ನು ಓದುವಾಗ ನಮಗೆ ಅಚ್ಚರಿಯಾಗುತ್ತದೆ. ಕವಿಯಾದವನು ಅಥವಾ ಅವಳು ತುಂಬಾ ಸೂಕ್ಷ್ಮ ಎಂಬುದು ಎಲ್ಲವರು ಹೇಳುವಂತ   ಮಾತು . ಆದರಿಲ್ಲಿ ಅತಿ ಸೂಕ್ಷಾತಿ  ಸೂಕ್ಷ್ಮ , ಇದಕ್ಕಿಂತ ಸೂಕ್ಷ್ಮ ಗ್ರಹಿಕೆ ಇನ್ನಿಲ್ಲ ಎನ್ನಬಹುದೇನೋ ಎನ್ನುವಷ್ಟು ಸಂವೇದನೆ ಇಲ್ಲಿನ ಕವಯತ್ರಿಗಿದೆ. ” ನಮ್ಮ ನಡುವಿನ ಉದ್ದಾನುದ್ದ ಕದನ  ಮುಗಿದ ಮೇಲೆ/ ಇಬ್ಬರ ಹೃದಯಗಳ ಬಳಸಿ ಒಂದು ಬಳ್ಳಿ ಬೆಳೆಯುತ್ತದೆ / ಘಳಿಗೆಯಲ್ಲಿ ಮೊಳ ಮುಂದಕ್ಕೆ ಬೆಳೆಯುವ ರಾಕ್ಷಸ ಬಳ್ಳಿ . ಇಬ್ಬರು ಕೂಡಿಯೇ ಬೆಳೆದ್ದದ್ದು , ತುಸು ಹೊತ್ತಿಗೆ ಮುಂಚೆ ಗೊಬ್ಬರ ಹಾಕಿದ್ದು / ಹಬ್ಬಿ ಬೆಳೆಯುತ್ತಿರುವ ವೇಗಕ್ಕೆ ಉಬ್ಬಸ ನಮಗೆ” . ನಮ್ಮೊಳಗಿನ ಸಿಟ್ಟನ್ನು ರಾಕ್ಷಸತನಕ್ಕೆ ಹೋಲಿಸಿ ಆ ಸಿಟ್ಟಿನ ಬಳ್ಳಿಯಲ್ಲಿ ನಾವೇ ಸಿಲುಕಿ ವಿಲವಿಲನೆ ಒದ್ದಾಡುವ ವಿಲಕ್ಷಣ ಸ್ಥಿತಿಯನ್ನು ವರ್ಣಿಸಿದ ರೀತಿ ಮನಮುಟ್ಟುವಂತಿದೆ ಇಲ್ಲಿ.
          ಕಾವ್ಯ ಸೃಷ್ಠಿ ಯಲ್ಲಿ ಮಾಗುತ್ತ ಸಾಗುವುದೇ ಕವಿತೆ ಉತ್ತಮವಾಗುತ್ತ ಹೋಗುವುದರ ಲಕ್ಷಣ. ಅದು ಸಿದ್ಧಿಸಿದ್ದು ಇಲ್ಲಿಯೇ ನಮಗೆ ಸಂಕಲನದುದ್ದಕ್ಕೂ  ತೋಚಿದಂತಾಗುತ್ತದೆ. ಬರೆದ ಕಾವ್ಯವೆಂಬ ಹೊರೆಯನ್ನು ಮೆಲ್ಲನೆ ಇಳಿಬಿಟ್ಟು ಹಗುರಾಗಿ,  ಮತ್ತೆ ಹೊಚ್ಚ ಹೊಸ ಬಹುದೊಡ್ಡ ಹೊರೆ ಹೊತ್ತು ಮತ್ತೆ ಹಗುರಾಗುತ್ತಾರೆ ಎಂಬಂತೆ ನಮಗಿಲ್ಲಿ ಭಾಸವಾಗುತ್ತದೆ. ಪ್ರೇಮವೆನುದರ ಕುರಿತು ಹಲವು ರೀತಿಯ ಭಿನ್ನ ಭಿನ್ನ ವ್ಯಾಖ್ಯಾನಗಳು ನಮ್ಮನ್ನು ದಂಗುಬಡಿಸುತ್ತವೆ. ಚಾಹಾ ಮಾಡುವುದೆಂದರೆ , ಲವಂಗದ ಗಿಡ , ಉತ್ಪಾತ ಕವಿತೆಗಳ ವ್ಯಾಖ್ಯಾನಗಳು, ಕವಿತೆ ಹೀಗೂ ಬರಿಯಬಹುದೆ ಎನ್ನುವಷ್ಟು ಆಕರ್ಷಿಸುತ್ತವೆ. ಪ್ರತಿಯೊಂದು ಸಾಲುಗಳು ಮೌಲ್ಯಯುತವಾಗಿದೆ. ” ಧಿಕ್ಕರಿಸಿದಾಗಲೆಲ್ಲ ಸತ್ಕರಿಸಬೇಕೆನ್ನುವುದನ್ನು   ಭೋಧಿಸಲಾಗಿದೆ ನಮಗೆ / ಬಡ ಪ್ರೇಯಸಿಯರ ಎದೆ ಕನಸುಗಳ ಒಯ್ದು ಆತ್ಮದ ಅವಸರಿಸುವಿಕೆ ಎಂದೆಲ್ಲ ಪದವಾಡಿ / ಕವಿತೆ ಶೋಷಿಸುವುದನ್ನು ನಾನೊಳ್ಳೆ / ಕ್ಷಮಿಸಿ” .  ದೃಷ್ಠಿ ಯಂತೆ  ಸೃಷ್ಠಿ ಎಂಬುದು ಇವರ ಕಾವ್ಯ ಧರ್ಮಕ್ಕೆ ಒಪ್ಪುವಂತಹ ಮಾತು.


‌                    ಜಗತ್ತನ್ನು ಮತ್ತು ತನ್ನೊಳಗನ್ನು ತುಂಬಾ ಪ್ರೀತಿಸುವ ಕವಯತ್ರಿ ಇವರು ಎಂಬರಿವು ಕವಿತೆಗಳನ್ನು ಓದಿದಾಗ ನಮಗನಿಸುತ್ತದೆ.  ಧಾವಂತದ ಬದುಕಿನ ಸದ್ಯದಲ್ಲಿ ಇದು ಎಲ್ಲರಿಗೂ ಬೇಕಾಗಿರುವಂತಹ ವಿಚಾರವು ಹೌದು . ಕವಯತ್ರಿ ನಂದಿನಿಯವರ ಮಾತಿನಂತೆ   ‘ ತಲೆಗೆ ಮಿಂದು ಒಣಗಿಸಿಕೊಳ್ಳುವ ಖುಷಿಗೆ ಕಟ್ಟೆಯ ಮೇಲೆ ಕಾಲು ನೀಡಿ ಕೂತರೆ ಹಳದಿ ಬಣ್ಣದ ಪುಟ್ಟ ಚಿಟ್ಟೆ ಸಲೀಸು ಬಂದು ಬೆರಳ ಮೇಲೆ ಕೂತಿದೆ. ಅದರ ಕೂದಲಿನಂತಹ ಪಾದಗಳು ಆಚೀಚೆ ಹರಿದರೆ ಮುಳು ಮುಳು ಪುಳಕ ನನಗೆ ” ಹೀಗೆ ಸಾಗುವ ಅವರ ಕವಿತೆಯಂತಹ ಲಹರಿ ನಮಗೆಲ್ಲ ಅಚ್ಚರಿ. ಹೀಗೆ ಬದುಕಿನ ಸದ್ಯಕ್ಕೆ ಬೇಕೇನಿಸುವ ಕಾವ್ಯ ಜರೂರತ್ತು ಇಲ್ಲಿನ ಪದ್ಯಗಳಲ್ಲಿ ಇದೆ. ತುಂಬು ಆತ್ಮ ವಿಶ್ವಾಸದಿಂದ , ನಿರ್ಭಿಡೆಯಿಂದ ಬರೆದ ಸಾಲುಗಳು ಅಕ್ಷರಶಃ ಬದುಕಿನ ಹಲವಾರು ಬಣ್ಣಗಳನ್ನು ತಿರುವುಗಳನ್ನು ನಮಗೆ ಕಾಣಿಸುತ್ತದೆ. ಒಲವೆನ್ನುವುದನ್ನು ಮಾಸಲು ಬಿಡಬಾರದು ಎಂಬಂತರಂಗದ ಸತ್ಯ  , ಪ್ರತಿಯೊಬ್ಬರ ಜೀವನೋತ್ಸಾಹಕೆ  ಹಿಡಿದ   ಕನ್ನಡಿಯಂತಿದೆ. ಇಲ್ಲಿರುವ ಪ್ರತಿಮೆಗಳು ಓದುಗನ ಮೇಲೆ ಗಾಢ ಪರಿಣಾಮ ಬೀರುವಂತಹವು.  ಇಲ್ಲಿನ ಕವಿತೆಗಳು ಅನುಭವಗಳೋ , ಕಲ್ಪನೆಗಳೋ ಏನೇ ಆದರೂ ಅದು ಸಾಮಾನ್ಯ ಮನುಷ್ಯನಲ್ಲಿ ಘಟಿಸಬಹುದಾದ ವಿಚಾರವೇ ಆಗಿದೆ. ಆದರೆ ಅದನ್ನು ಗಹನವಾಗಿ ಕವಿತೆಯಲ್ಲಿ ಹಿಡಿದಿಟ್ಟ ಗಟ್ಟಿತನದ ಹಿರಿಮೆ ಮಾತ್ರ ಕವಯತ್ರಿಗೆ ಸಲ್ಲಬೇಕು . ” ಗಾಜಿನ ಮನೆಯಲ್ಲಿ ಗೋಡೆ ಮಾತ್ರ ಒಡೆಯುವುದಿಲ್ಲ ಗೆಳತಿ/ ಲೋಕಕ್ಕೆ ಒಳಗಿನ ತೂತು ಕಾಣಿಸುತ್ತದೆ. ಕಟ್ಟಳೆಗಳ ಒಟ್ಟಿಲಿಂದ ಒಂದೊಂದೇ ಕಟ್ಟಿಗೆ ತೆಗೆದು ಚಪ್ಪರ ಮಾಡಬಹುದು / ಒಂದು ತೊಂಡೆ ಬಳ್ಳಿಯನೂರಿದರೆ ಪದಾರ್ಥ ಮಾಡಬಹುದು.
           ಹೀಗೆ ಅಸಂಗತ ಸಂಗತಿಗಳ ಹೂರಣದೊಳಗೆ ಹುದುಗಿದ ಇಲ್ಲಿನ ಕಾವ್ಯ ಲೋಕ ಸಮಾಜಮುಖಿಯು ಆಗಿದೆ. ಹೆಣ್ಣಿನ ಜೀವನದ ಸ್ವರೂಪಗಳು ಗಂಡಿಗಿಂತ ಎಷ್ಟೋ ಭಿನ್ನ . ಈ ಭಿನ್ನತೆಯ ಚುಂಗನ್ನು ಹಿಡಿದು ಅಲ್ಲಾಡಿಸಿದ ಕವಿತೆಗಳು ಮಾರ್ಮಿಕವಾಗಿ ನಮ್ಮನ್ನೆಲ್ಲ ಕಾಡುತ್ತವೆ. ಕಳಚಿಕೊಳ್ಳುತ್ತಲೆ ಹೋಗುತ್ತದೆ ಹೀಗೆ / ಒಂದೊಂದೇ ಒಂದೊಂದೇ ಬಂಧ/ ಬಿಡಿಸಲಾಗದ್ದು ಎನ್ನುವಾಗಲೇ ಬಿಟ್ಟು ಹೊರಡುತ್ತದೆ.
          ಬದುಕಿನ ಕವಲುಗಳ ಪರಿಚಯಾತ್ಮಕ ಸಾಲುಗಳೊಂದಿಗೆ ಹದವಾದ ಭಾವ ಭಾಷೆಯ ಇಲ್ಲಿನ ವಿನೂತನ ಕವಿತೆಗಳು ಪ್ರತಿಯೊಬ್ಬರನ್ನೂ ಸೆಳೆಯುವುದರಲ್ಲು ಸಂಶಯವೇ ಇಲ್ಲ.  ಜೀವನದ ಒಳನೋಟಗಳಿಗೆ  ಅರ್ಥ ನೀಡುವಂತಹ ಇಲ್ಲಿನ ಸಾಲುಗಳೆಲ್ಲವು  ಸಾಹಿತ್ಯದ ಪಾರದರ್ಶಕತೆಯನ್ನು ನಮಗೆ ತೋರಿಸುತ್ತದೆ.  ಇದು ಬರಹಗಾರ್ತಿಯ ಸಾರ್ಥಕತೆ.  ‘ ಒಂದು ಆದಿಮ ಪ್ರೇಮ ‘ ಕವನ ಸಂಕಲನ ಓದಿದ ಮೇಲೆ  ಯಾಕೋ  ‘ ಕೊನೆಗೆ  ಉಳಿಯುವುದು ಕಾವ್ಯವೇ’ ಎಂಬ ಎಲ್ಲೋ ಓದಿದ  ಹೇಳಿಕೆಯೊಂದು ತುಂಬಾ  ನೆನಪಾಗಿ ಕಾಡುತಿದೆ.

————————


   ಸಂಗೀತ ರವಿರಾಜ್ ಚೆಂಬು

Leave a Reply

Back To Top