75ನೇ ಭಾರತ ಸಂವಿಧಾನ ದಿನಾಚರಣೆ ನಿಮಿತ್ತ ಲೇಖನ, ಸುಹೇಚ ಪರಮವಾಡಿ ಅವರಿಂದ

ವಿಶೇಷ ಲೇಖನ

(೨೬ ನವೆಂಬರ್ ೨೦೨೩ರಂದು 75ನೇ ಭಾರತ ಸಂವಿಧಾನ ದಿನಾಚರಣೆ ನಿಮಿತ್ತ ಭಾರತ ಸಂವಿಧಾನ ಬೆಳೆದು ಬಂದ ಬಗೆ, ಬಹುತ್ವ ಭಾರತದಲ್ಲಿ ಸರ್ವ ಸಮ ಸಮತೆಯ ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನ ತತ್ವಾದರ್ಶ ಮಹತ್ವದ ಮೇಲೆ ಬೆಳಕು ಚೆಲ್ಲುವ ಒಂದು ಪುಟ್ಟ ಲೇಖನ)

ಸುಹೇಚ ಪರಮವಾಡಿ

1947,ಅಗಸ್ಟ್ 14ರ ಮದ್ಯರಾತ್ರಿ ಭಾರತಕ್ಕೆ ಅಂಗ್ರೇಜಿಗರಿಂದ ಸ್ವಾತಂತ್ರ್ಯ ಬಂದು ನವಕಳೆ ತುಂಬಿತ್ತಾದರೂ ಜಾತಿ ರೋಗದ ಕೊಳೆ, ಮತಾಂಧತೆಯ ಅಮಲು, ಮೇಲ್ವರ್ಗದ ಜನರಲ್ಲಿದ್ದ ಮನುಮತಿ, ಧರ್ಮಾಧಂತೆ ಇನ್ನೂ ದೂರವಾಗಿರಲಿಲ್ಲ. ಈ ನಿಮಿತ್ತ ಬಹುಜನರು ನಿಂದೆ ಅಪಮಾನ, ಅಪಹಾಸ್ಯದಿಂದ ನರಳಬೇಕಾಗಿತ್ತು. ಭಾವನಾತ್ಮಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ವ್ಯಕ್ತಿಯ ನೆಲೆಗಟ್ಟನ್ನಲ್ಲಿ ದಾಸ್ಯವಿನ್ನೂ ತಾಂಡವಾಡುತಿತ್ತು. ಅಟ್ಟಹಾಸ ಮೆರೆದಿತ್ತಲ್ಲದೆ ಬಹುತ್ವ ಭಾರತ ದೇಶವೆಂಬ ಮಹಾ ಹಡಗನ್ನು ಸರಿಯಾದ ದಿಕ್ಕಿನೆಡೆಗೆ ಸಾಗಿಸಲು, ಬಹುಮತಿಯರಲ್ಲಿ ಐಕ್ಯತೆ ತರಲು ಹಾಗೂ ಸರ್ವಜನಾಂಗದ ಗಣಮನದ ಜೀವನದಲ್ಲಿ ಸರ್ವ ಸಮತೆ ತರಲು ಸಮಗ್ರ ಸುವ್ಯವಸ್ಥಿತ ಕಾನೂನು ನೀತಿ ನಿಯಮಗಳು ಬೇಕಾಗಿತ್ತು. ವಿಶ್ವದಲ್ಲಿ ಬಹು ವಿಶಿಷ್ಠವಾದ ದೇಶ ಜನರದ ಅಭ್ಯುದಯಕ್ಕಾಗಿ ದೇಶಪ್ರೇಮಿಗಳು, ರಾಷ್ಟ್ರನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಚಿಂತಿಸಿ – ಯೋಚಿಸಿ – ಯೋಜಿಸಿ ವಿಶ್ವ ಜ್ಞಾನಿ, ಸಮತಾ ಸಮಾಜದ ಹೋರಾಟಗಾರ ಬಾಬಾಸಾಹೇಬ ಡಾಕ್ಟರ್ ಭೀಮರಾವ್ ರಾಮಜಿ ಅಂಬೇಡ್ಕರ್ ಸಾಹೇಬರರವರಿಗೆ ವಹಿಸಿದರು.

                ಭಾರತಕ್ಕೆ ಸಂವಿಧಾನವನ್ನು ರಚಿಸುವ ಮಹತ್ವದ ಕಾರ್ಯವನ್ನು ಸಂವಿಧಾನದ ರಚನಾ ಸಭೆಗೆ ವಹಿಸಲಾಗಿತ್ತು. ಸಂವಿಧಾನದ ಕರಡನ್ನು ಸಿದ್ದಪಡಿಸುವ ಕೆಲಸವನ್ನು 1946 ಡಿಸೆಂಬರ್ 6ರ ದಿನಾಂಕದಿಂದಲೇ ಪ್ರಾರಂಭಿಸಿತು. ಸಂವಿಧಾನ ರಚನಾ ಸಭೆಯ ಎಲ್ಲಾ 2೦ ಸಮಿತಿಗಳಲ್ಲಿ ಅತ್ಯಂತ ಪ್ರಮುಖವಾದ ಸಮಿತಿಯು 29 ಆಗಸ್ಟ್ 1947 ರಂದು ಡಾ. ಬಿ. ಆರ್. ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ ರಚಿಸಲಾದ ಕರಡು ಸಮಿತಿಯಾಗಿದೆ. ಈ ಸಮಿತಿಗೆ ಹೊಸ ಸಂವಿಧಾನದ ಕರಡು ಸಿದ್ಧಪಡಿಸುವ ಕಾರ್ಯವನ್ನು ವಹಿಸಲಾಯಿತು. ಭಾರತದ ಸಂವಿಧಾನದ ಮುಖ್ಯ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ ಸಾರಥ್ಯದಲ್ಲಿ ಸಮಿತಿಯು ಸುಮಾರು ಮೂರು ವರ್ಷಗಳ ಕಾಲ ಶ್ರಮಿಸಿ ಸಂವಿಧಾನವನ್ನು ಸಿದ್ಧಪಡಿಸುವ ಕಾರ್ಯವನ್ನು 1949 ನವೆಂಬರ್ 26ರಂದು ಪೂರ್ಣಗೊಳಿಸಿ ಸರ್ವಾನುಮತದಿಂದ ಅಂಗೀಕಾರವಾಯ್ತು. ಆರ್ಟಿಕಲ್ 395 ರ ಪ್ರಕಾರ, 1935 ರ ಭಾರತ ಸರ್ಕಾರದ ಕಾಯಿದೆ ಮತ್ತು 1947 ರ ಭಾರತೀಯ ಸ್ವಾತಂತ್ರ್ಯ ಕಾಯಿದೆಯನ್ನು ಭಾರತದ ಸಂವಿಧಾನದ ಕಾರ್ಯಾರಂಭ ಆಗುವುದರೊಂದಿಗೆ 26 ಜನವರಿ 195೦ರಿಂದ ರದ್ದುಗೊಳಿಸಲಾಯಿತು.

                     ಬ್ರಿಟಿಷ್ ರಾಜ್ ಅಡಿಯಲ್ಲಿ ಭಾರತವು ಎರಡು ರೀತಿಯ ಪ್ರದೇಶಗಳನ್ನು ಒಳಗೊಂಡಿತ್ತು, ಅಂದರೆ, ಬ್ರಿಟಿಷ್ ಇಂಡಿಯಾ ಮತ್ತು ಪ್ರಿನ್ಸ್ಲಿ ಸ್ಟೇಟ್ಸ್ ಜನಸಂಖ್ಯೆಯ ಆಧಾರದ ಮೇಲೆ ಸಂವಿಧಾನ ಸಭೆಯನ್ನು ರಚಿಸಲಾಯಿತು, ಪ್ರತಿ 10 ಲಕ್ಷ ಜನರಿಗೆ ಒಬ್ಬ ಪ್ರತಿನಿಧಿ ಇರುತ್ತಿದ್ದರು. ಆದ್ದರಿಂದ ಸಂವಿಧಾನ ಸಭೆಯನ್ನು ರಚಿಸಲು ಇಡೀ ಭಾರತದಿಂದ 389 ಪ್ರತಿನಿಧಿಗಳು, ಬ್ರಿಟಿಷ್ ಇಂಡಿಯಾದಿಂದ 296 ಪ್ರತಿನಿಧಿಗಳು ಮತ್ತು ರಾಜಪ್ರಭುತ್ವದ ರಾಜ್ಯಗಳಿಂದ 93 ಪ್ರತಿನಿಧಿಗಳು ಇದ್ದರು. ಬ್ರಿಟಿಷರು ಭಾರತವನ್ನು ತೊರೆದ ನಂತರ ತಮ್ಮದೇ ಆದ ಸ್ವತಂತ್ರ ರಾಜ್ಯಗಳನ್ನು ರಚಿಸುತ್ತಾರೆ ಮತ್ತು ಅವುಗಳನ್ನು ಆಳುತ್ತಾರೆ ಎಂಬ ಭರವಸೆಯಲ್ಲಿ ರಾಜಪ್ರಭುತ್ವದ ರಾಜ್ಯಗಳು ಸಂವಿಧಾನ ಸಭೆಯಲ್ಲಿ ಭಾಗವಹಿಸುವಿಕೆಯನ್ನು ನಿರಾಕರಿಸಿದವು. ಆದ್ದರಿಂದ ಬ್ರಿಟೀಷ್ ಇಂಡಿಯಾದ 296 ಪ್ರತಿನಿಧಿಗಳೊಂದಿಗೆ ಸಂವಿಧಾನ ಸಭೆಯನ್ನು ರಚಿಸಲಾಯಿತು. ಸಾರ್ವತ್ರಿಕ ವಯಸ್ಕ ಮತದಾನದ ಆಧಾರದ ಮೇಲೆ ಸಂವಿಧಾನ ಸಭೆಯನ್ನು ಚುನಾಯಿಸಲಾಗಿಲ್ಲ ಮತ್ತು ಮುಸ್ಲಿಮರು ಮತ್ತು ಸಿಖ್ಖರು ಅಲ್ಪಸಂಖ್ಯಾತರಾಗಿ ವಿಶೇಷ ಪ್ರಾತಿನಿಧ್ಯವನ್ನು ಪಡೆದರು. ಈ 296 ಪ್ರತಿನಿಧಿಗಳಲ್ಲಿ ಮಹಿಳಾ ಸದಸ್ಯರಾದ ಸರೋಜಿನಿ ನಾಯ್ಡು, ಹಂಸಾ ಮೆಹ್ತಾ, ದುರ್ಗಾಬಾಯಿ ದೇಶಮುಖ್, ರಾಜಕುಮಾರಿ ಅಮೃತ್ ಕೌರಂದ್ ವಿಜಯಲಕ್ಷ್ಮಿ ಪಂಡಿತ್, ಡಾ. ಬಿ. ಆರ್. ಅಂಬೇಡ್ಕರ್, ಸಂಜಯ್ ಫೇಕಿ, ಜವಾಹರಲಾಲ್ ನೆಹರು, ಸಿ. ರಾಜಗೋಪಾಲಾಚಾರಿ, ಡಾ. ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ಪುರುಷೋತ್ತಮ ಮಾವಲಂಕರ್, ಸಂದೀಪ್ ಕುಮಾರ್ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಶ್ಯಾಮ ಪ್ರಸಾದ್ ಮುಖರ್ಜಿ, ನಳಿನಿ ರಂಜನ್ ಘೋಷ್, ಮೆಹರ್ ಬಳವಂದ್ ಮೋದಿ ಮತ್ತು ಫ್ರಾಂಕ್ ಆಂಥೋನಿ ಅವರು ಸಂವಿಧಾನ ಸಭೆಯಲ್ಲಿ ಕೆಲವು ಪ್ರಮುಖ ವ್ಯಕ್ತಿಗಳಾಗಿದ್ದರು. ಪ್ರಮುಖ ನ್ಯಾಯಶಾಸ್ತ್ರಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಬೆನಗಲ್ ನರಸಿಂಗ್ ರಾವು ಮತ್ತು ಕೆ. ಎಂ. ಮುನ್ಶಿ ಮತ್ತು ಗಣೇಶ್ ಮಾವ್ಲಂಕರ್ ಅವರು ವಿಧಾನಸಭೆಯ ಸದಸ್ಯರಾಗಿದ್ದರು. ಸಂವಿಧಾನ ರಚನಾ ಸಮಿತಿಯ ಸದಸ್ಯರೆಲ್ಲರೂ ಭಾರತದ ವಿವಿಧ ಮೂಲಗಳಿಂದ ಬಂದವರಾಗಿದ್ದರು. ಅನೇಕರು ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿದ್ದರು ಪರಿಣಿತರು ಆಗಿದ್ದರು.

                   ಭಾರತ ಸಂವಿಧಾನವು ಭಾರತಿಯ ಸಮಾಜ ಸುಧಾರಕರ, ಮಾನವತಾವಾದಿ ಹೋರಾಟಗಾರರ, ಸಮತಾವಾದಿ ವೈಚಾರಿಕ ಚಿಂತಕರ, ಪ್ರಗತಿಪರ ವಿಚಾರವಾದಿ ಸಮ ಸಮಾಜ ಪ್ರತಿಪಾದಕರ ಕವಿ – ಸಂತ – ಶರಣರ ಸಾಮರಸ್ಯ ತತ್ವಗಳಾಧಾರದ ಧರ್ಮ ಸಮನ್ವಯತೆ – ಪರಧರ್ಮ ಸಹಿಷ್ಣುತೆ – ಸರ್ವ ಜನಾಂಗದ ಕಲ್ಯಾಣ, ವ್ಯಕ್ತಿ ಕಲ್ಯಾಣ, ವೈಜ್ಞಾನಿಕ ತಳಹದಿ ಆಶಯದ ತತ್ವಾದರ್ಶ ನೆಲೆಯಲ್ಲಿ ಭಾರತೀಯರಿಂದ ರೂಪಿತವಾಗಿದ್ದರೂ; ಪ್ರಪಂಚದ ಇತರ ಸಂವಿಧಾನಗಳಿಂದ ಉತ್ತಮ ಅಂಶಗಳನ್ನು ನಾವು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಿಲ್ಲ. ನಮ್ಮ ಸಂವಿಧಾನವು ಅಮೇರಿಕಾ, ಬ್ರಿಟನ್, ಐರ್‌ಲ್ಯಾಂಡ್ ಮೊದಲಾದ ಸಂವಿಧಾನಗಳಿಂದ ಕೆಲ ಒಳ್ಳೆಯ ಅಂಶಗಳನ್ನು ಎರವಲಾಗಿ ಪಡೆದು ಭಾರತೀಯ ಸಾಮಾಜಿಕ ಹಿನ್ನೆಲೆಯಲ್ಲಿ ರೂಪಿಸಲಾದ ಸಂವಿಧಾನವಾಗಿರುತ್ತದೆ. 1946 ರಲ್ಲಿ, ಸಂವಿಧಾನ ಸಭೆಯು ಮೊದಲ ಬಾರಿಗೆ ನವದೆಹಲಿಯಲ್ಲಿ ಸಂವಿಧಾನದ ಸಭಾಂಗಣದಲ್ಲಿ ಸಭೆ ಸೇರಿತು, ಇದನ್ನು ಪ್ರಸ್ತುತ ಸಂಸತ್ ಭವನದ ಸೆಂಟ್ರಲ್ ಹಾಲ್ ಎಂದು ಕರೆಯಲಾಗುತ್ತದೆ.

                 ಭಾರತದ ಸಂವಿಧಾನವು ವಿಶ್ವದ ಅತಿ ಉದ್ದದ ಸಂವಿಧಾನವಾಗಿದೆ. ಇದನ್ನು ಪ್ರಾರಂಭಿಸಿದಾಗ, ಇದು 22 ವಿಭಾಗಗಳು ಮತ್ತು ಎಂಟು ವೇಳಾಪಟ್ಟಿಗಳಲ್ಲಿ 395 ವಿಷಯಗಳನ್ನು ಒಳಗೊಂಡಿತ್ತು. ಇದು ಈಗ 448 ಐಟಂಗಳನ್ನು 25 ವಿಭಾಗಗಳು ಮತ್ತು 12 ವೇಳಾಪಟ್ಟಿಗಳಾಗಿ ವಿಂಗಡಿಸಲಾಗಿದೆ. ಇಲ್ಲಿಯವರೆಗೆ ಭಾರತೀಯ ಸಂವಿಧಾನಕ್ಕೆ 104 ತಿದ್ದುಪಡಿಗಳನ್ನು ಮಾಡಲಾಗಿದೆ. (ಅದರಲ್ಲಿ ಕೊನೆಯದು ಜನವರಿ 25, 2020 ರಂದು ಲೋಕಸಭೆ ಮತ್ತು ರಾಜ್ಯ ಅಸೆಂಬ್ಲಿಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಸ್ಥಾನಗಳ ಮೀಸಲಾತಿಯನ್ನು ವಿಸ್ತರಿಸಲು ನಡೆಯಿತು). ಈ ದಿಸೆಯಲ್ಲಿ ಸರ್ವ ಪ್ರಜಾ ಕಲ್ಯಾಣಕ್ಕಾಗಿ ಹಾಗೂ ವಿಶ್ವ ಗುರು ಭಾರತವಾಗಲು ನಮ್ಯತೆ ಗುಣವನ್ನು ಹೊಂದಿದೆ.



                        ಭಾರತ ಸಂವಿಧಾನಕ್ಕೆ ಒಂದು ‘ಪ್ರಸ್ತಾವನೆ’ ಅಥವಾ ‘ಪೂರ್ವ ಪೀಠಿಕೆ’ ಇದೆ. ಸಂವಿಧಾನದ ಪೂರ್ವ ಪೀಠಿಕೆಯು ಅದರ ಔಚಿತ್ಯ, ವೈಶಾಲ್ಯತೆಗಳಿಗೆ ಕೈ ದೀವಿಗೆಯಾಗಿರುತ್ತದೆ ಎಂದು ಹೇಳಬಹುದು. ಈ ಪ್ರಸ್ತಾವನೆಯಲ್ಲಿ ಭಾರತವು ಸಂಪೂರ್ಣ ಸ್ವತಂತ್ರ ಸಂಪನ್ನ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಲ್ಪಟ್ಟಿದೆ. ಸಂವಿಧಾನವು ಪ್ರಜೆಗಳೇ ಪರಮಾಧಿಕಾರದ ಮೂಲವೆಂದು ಪರಿಗಣಿಸಿದೆ. ಪೀಠಿಕೆಯನ್ನು ಸಂವಿಧಾನದ ಆತ್ಮವೆಂದು ಪರಿಗಣಿಸಲಾಗಿದೆ. ಎಂಕೆಂದರೆ ಸಂಪೂರ್ಣ ಸಂವಿಧಾನದ ಮಹತ್ವವನ್ನು ಹೂರಣದ ರೂಪವಾಗಿ ಪೀಠಿಕೆ ರೂಪತಳೆದಿರುವುದು ಅನನ್ಯವಾಗಿದೆ.

                         ನಮ್ಮ ಸಂವಿಧಾನವು ಭಾರತವನ್ನು ಒಂದು ಲೌಕಿಕ ರಾಷ್ಟ್ರ ಅಥವಾ ಜಾತ್ಯಾತೀತ ರಾಷ್ಟ್ರವೆಂದು ಘೋಷಿಸಿದೆ. ಎಲ್ಲಾ ಮತ, ಧರ್ಮಗಳನ್ನು ಸಮಾನ ದೃಷ್ಟಿಯಿಂದ ಕಾಣುವ ರಾಷ್ಟ್ರವೇ ಲೌಕಿಕ, ಜಾತ್ಯಾತೀತ ರಾಷ್ಟ್ರ, ಅಂದರೆ ರಾಷ್ಟ್ರವು ಯಾವುದೇ ಧರ್ಮವನ್ನು ಅನುಸರಿಸುವುದೂ ಇಲ್ಲ ಅಥವಾ ಯಾವುದೇ ಧರ್ಮಕ್ಕೆ ವಿರುದ್ದವಾಗಿಯೂ ಇಲ್ಲ. ಭಾರತವು ಎಲ್ಲಾ ಮತ – ಧರ್ಮಗಳನ್ನು ಸಮಾನ ದೃಷ್ಟಿಯಿಂದ ಕಾಣುತ್ತದೆ. ಧಾರ್ಮಿಕ ವಿಷಯಗಳಲ್ಲಿ ಭಾರತವು ತಟಸ್ಥ ಧೋರಣೆಯನ್ನು ಅನುಸರಿಸುತ್ತದೆ. ಭಾರತದ ಜನರಲ್ಲಿ ನಾವೆಲ್ಲಾ ಭಾರತೀಯರು ಎಂಬ ಭಾವನೆಯನ್ನು ಬೆಳೆಸುವ ಸಲುವಾಗಿ ಭಾರತವನ್ನು ‘ಜಾತ್ಯಾತೀತ ರಾಷ್ಟ’ವೆಂದು ಘೋಷಿಸಲಾಗಿದೆ. ಈ “ಜಾತ್ಯಾತೀತ” ಎಂಬ ಪದವನ್ನು ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಸಂವಿಧಾನದ ಪೂರ್ವ ಪೀಠಿಕೆಗೆ ಸೇರಿಸಲಾಗಿದೆ.

             ಭಾರತೀಯ ಸಂಸತ್ತು ತನ್ನ ವ್ಯಕ್ತಿಗಳ ಮೇಲೆ ಯಾವುದೇ ಧರ್ಮವನ್ನು ಹೇರದಿರುವುದೇ ಜಾತ್ಯಾತೀತ ಶಬ್ದದ ನಿಜವಾದ ಅರ್ಥವೆಂದು ಡಾ. ಬಿ. ಆರ್. ಅಂಬೇಡ್ಕರ್‌ರವರು ವ್ಯಾಖ್ಯಾನಿಸಿರುತ್ತಾರೆ. ಈ ಕಾರಣದಿಂದ ಈಗ ಅಸ್ಪೃಶ್ಯತೆಯನ್ನು ರದ್ದುಗೊಳಿಸಲಾಗಿದೆ. ಯಾವುದೇ ರೀತಿಯಲ್ಲಿ ಅಸ್ಪೃಶ್ಯತೆಯ ಆಚರಣೆ ಕಾನೂನು ಬಾಹಿರವಾಗಿರುತ್ತದೆ. ಈ ಎಲ್ಲಾ ಕಾರಣದಿಂದ ‘ಜಾತ್ಯಾತೀತ ತತ್ವಕ್ಕೆ ನಮ್ಮ ಭಾರತವು ಎಷ್ಟೊಂದು ಪ್ರಾಮುಖ್ಯತೆಯನ್ನು ನೀಡಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸಹಸ್ರಾರು ಶತ ಶತಮಾನಗಳಿಂದ ಅಬಲೆ ಎಂಬ ಹಣೆಪಟ್ಟಿ ಅಟ್ಟಿಸಿಕೊಂಡು ಶೋಷಣೆಗೆ ಒಳಗಾಗಿದ್ದ ಮಹಿಳೆಯಾದಿಯಾಗಿ ಮಕ್ಕಳು, ಜನ ಸಾಮಾನ್ಯರೆಲ್ಲರಿಗೂ ಲಿಂಗ, ವರ್ಣ, ಜಾತಿ, ಭಾಷೆಯ ಸಂಕೋಲೆ ಮೀರಿ ಗೌರವಯುತ ಬದುಕನ್ನು ಕಟ್ಟಿಕೊಳ್ಳಲು ನ್ಯಾಯೋಚಿತ ಸ್ಥಾನ – ಮಾನ ಗೌರವವನ್ನು ಒದಗಿಸಿರುವ ಭಾರತೀಯ ಸಂವಿಧಾನವು ಪ್ರಜೆಗಳನ್ನು ಪ್ರೆಜೆಗಳನ್ನಾಗಿ ಮಾಡಿರುವುದು ಸುವರ್ಣಯುಗವೆಂದು ದಾಖಲಿಸಬಹುದು.

                       ಸಂವಿಧಾನ ಸಂವಿಧಾನವನ್ನು ಅಂಗೀಕರಿಸಿದ ದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ನವೆಂಬರ್ 26 ಅನ್ನು “ಸಂವಿಧಾನ್ ದಿವಸ್” ಎಂದು ಆಚರಿಸಲಾಗುತ್ತದೆ. ಈ ವರ್ಷ ಭಾರತ ಸರಕಾರವು, ಸಂಸದೀಯ ವ್ಯವಹಾರಗಳ ಸಚಿವಾಲಯದಿಂದ ಎಲ್ಲರಿಗೂ ಭಾರತ್ – ಲೋಕತಂತ್ರ ಕಿ ಜನನಿಯ ರಸಪ್ರಶ್ನೆ  (https://bit.ly/constitutionquizz) ಮತ್ತು ಸಂವಿಧಾನ ಪೀಠಿಕೆಯನ್ನು (https://bit.ly/ReadingthePreambletotheConstitution) ಓದುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಪ್ರಮಾಣಪತ್ರವನ್ನು ಪಡೆಯಲು ಅವಕಾಶವನ್ನು ನೀಡಿರುವುದು ಸರ್ವ ಪ್ರಜೆಗಳಲ್ಲಿ ಸಂವಿಧಾನದ ಮಹತ್ವವನ್ನು ಖಾತರಿಪಡಿಸಿದೆ. 75ನೇ ಭಾರತೀಯ ಸಂವಿಧಾನ ದಿನಾಚರಣೆ ನಿಮಿತ್ತ ದೇಶದ ಎಲ್ಲಾ ಶಾಲಾ – ಕಾಲೇಜು, ವಿಶ್ವವಿದ್ಯಾಲಯ, ಸರ್ಕಾರಿ ಕಛೇರಿಗಳಲ್ಲಿ ಸಂವಿಧಾನ ಅಂಗೀಕಾರ ದಿನಾಚರಣೆ ಆಚರಿಸಿ ಅದರ ಮಹತ್ವವನ್ನು ಎಲ್ಲರಿಗೂ ಮನನ ಮಾಡಿಸಿ, ಸಂವಿಧಾನ ಪೀಠಿಕೆಯನ್ನು ಪ್ರತಿಜ್ಞೆ ವಿಧಿಯಾಗಿ ನೇರವೆರಸಿ ಸೌಹಾರ್ದತೆಯಿಂದ ಬಾಳಲು ಅದೇಶಿಸಿ ಕೋರಿದೆ.

                     ಕೊನೆಯದಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು 1948 ರಲ್ಲಿ ತಮ್ಮ ಭಾಷಣದ ಸಮಾರೋಪದಲ್ಲಿ ಹೇಳಿದ್ದ ಉಲ್ಲೇಖವನ್ನು ನಾನು ಮತ್ತೊಮ್ಮೆ ಉಲ್ಲೇಖಿಸುತ್ತಿದ್ದೇನೆ: ಸಂವಿಧಾನವು ಕಾರ್ಯಸಾಧ್ಯವಾಗಿದೆ, ಅದು ಹೊಂದಿಕೊಳ್ಳುತ್ತದೆ ಮತ್ತು ಶಾಂತಿಕಾಲ ಮತ್ತು ಯುದ್ಧಕಾಲದಲ್ಲಿ ದೇಶವನ್ನು ಒಟ್ಟಿಗೆ ಹಿಡಿದಿಡಲು ಸಾಕಷ್ಟು ಪ್ರಬಲವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಕಾರಣದಿಂದ ಬಹುತ್ವ ಭಾರತೀಯರಲ್ಲಿ ಐಕ್ಯತೆಯನ್ನು, ರಾಷ್ಟ್ರೀಯ ಪ್ರೇಮವನ್ನು ಜಾಗೃತಗೊಳಿಸುವ ಪರಿಶುದ್ಧ ಮಹಾನ ರಾಷ್ಟ್ರ ಗ್ರಂಥವಾಗಿದೆ ಎಂಬ ನಿಲುವಿಗೆ ಬರಲು ನಾವು ಹಿಂದೆ – ಮುಂದೆ ಎಣಿಸಬಾರದು. ಏಕೆಂದರೆ ವೈವಿಧ್ಯಮಯ ಸಂಸ್ಕೃತಿ, ಸಂಪ್ರದಾಯ, ಹಬ್ಬ ಹರಿದಿನ ಆಚರಿಸಲು ಒಗ್ಗಟ್ಟನ್ನು – ಒಮ್ಮತವನ್ನು ನೀಡಿರುವ ಭಾರತೀಯ ಸಂವಿಧಾನ ಸರ್ವ ಜನಾಂಗದವರನ್ನು ಒಗ್ಗೂಡಿಸುವ ಮಹಾನ ಸೇತುವೆಯೂ, ಜಗತ್ತೇ ಅನುಕರಿಸುವ, ಕೊಂಡಾಡುವ ವಿಶ್ವ ಶ್ರೇಷ್ಠ ಸಂವಿಧಾನವಾಗಿದೆ. ನೂರೂಕಾಲ ಜಪ – ತಪವಿದ್ದೂ ಬರೆದರೂ ಮಗದೊಂದು ಮಹೋತ್ತಮ ಸಂವಿಧಾನ ಬರೆಯಲು ಸಾಧ್ಯವಾಗದ ಮಾತು. ಹಾಗಾಗಿ ನಾವು ಸಂವಿಧಾನ ಕೃತೃವಿಗೂ ಸಂವಿಧಾನ ಕೃತಜ್ಞಾನರಾಗಿರೋಣ.

ಜೈ ಭಾರತೀಯ ಸಂವಿಧಾನ, ಜೈ ಭೀಮ್


ಸುಹೇಚ ಪರಮವಾಡಿ
(ಸುಭಾಷ್ ಹೇಮಣ್ಣಾ ಚವ್ಹಾಣ),

ಶಿಕ್ಷಕ ಸಾಹಿತಿಗಳು,

ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ,

ಮಂಜುನಾಥ ನಗರ, ಹುಬ್ಬಳ್ಳಿ ಶಹರ, 

Leave a Reply

Back To Top