ಕಥಾ ಸಂಗಾತಿ
ಬಿ.ಟಿ.ನಾಯಕ್
ಬಡತನ ಮತ್ತು ಹಸಿವು
ಅದೊಂದು ಬಡತನದಿಂದ ಬೇಯುತ್ತಿರುವ ಒಂದು ಚಿಕ್ಕ ಕುಟುಂಬದಲ್ಲಿ ತಾಯಿ ಮಗ ಇಬ್ಬರಿದ್ದರು. ಸರಕಾರಿ ಶಾಲೆಯಲ್ಲಿ ಓದಲು ನಿಂಗವ್ವ ಹೇಗೋ ತನ್ನ ಮಗನನ್ನು ಸೇರಿಸಿದ್ದಳು. ಅಲ್ಲದೇ, ಅವರಿವರ ಸಹಾಯದಿಂದ ಆಕೆಯ ಮಗನ ವಿದ್ಯೆ ಕುಂಟುತ್ತಾ ಸಾಗುತ್ತಿತ್ತು. ಅವರಿಗೆ ಇರಲು ಒಂದು ಪುಟ್ಟ ಮನೆಯನ್ನು ನಿಂಗವ್ವಳ ಗಂಡ ಇರುವಾಗಲೇ ಹೇಗೋ ಕಷ್ಟ ಪಟ್ಟು ಮಾಡಿ ಕೊಂಡಿದ್ದರು. ಆಕೆಯ ಯಜಮಾನ ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವಾಗ, ಆತನಿಗೆ ಉದ್ಯೋಗದ ಒತ್ತಡದಿಂದ ಎದೆ ನೋವು ಕಾಣಿಸಿಕೊಂಡು ಚಿಕಿತ್ಸೆ ದೊರಕದೇ ಹೃದಯಾಘಾತದಿಂದ ವಿದ್ರಾವಕವಾಗಿ ತನ್ನ ಹೆಂಡತಿ, ಮಗನ ಹೆಸರನ್ನು ಕೂಗಿಕೊಳ್ಳುತ್ತಾ ಪ್ರಾಣ ಬಿಟ್ಟನು. ಆಮೇಲೆ ಆತನ ಅಂತ್ಯ ಸಂಸ್ಕಾರವನ್ನು ಅವರಿವರು ಮಾಡಿ ಮುಗಿಸಿದರು. ಅದಾದನಂತರ, ತಾನು ಮತ್ತು ತನ್ನ ಮಗನ ಜೀವನೋಪಾಯಕ್ಕೆ ಒಬ್ಬ ಶ್ರೀಮಂತರ ಮನೆಯಲ್ಲಿ ನಿಂಗವ್ವ ಕೆಲಸಕ್ಕೆ ಸೇರಿಕೊಂಡಳು.
ಪ್ರತಿ ನಿತ್ಯ ರಂಗನಿಗೆ ಶಾಲೆಗೆ ಕಳಿಸುವುದಕ್ಕಿಂತ ಮುಂಚೆ ಆತನ ಹೊಟ್ಟೆ ತುಂಬಿಸಲು ರೊಟ್ಟಿಯ ಚೂರುಗಳಿಗೆ ಒಣ ಚಟ್ನಿಯನ್ನು ಹೊಂದಿಸಿ ಅದರ ಜೊತೆಗೆ ನೀರು ಬೆರೆಸಿದ ಹುಳಿ ಮಜ್ಜಿಗೆ ಕೊಡುತ್ತಿದ್ದಳು. ಅದನ್ನು ಮುಖ ಊದಿಸಿ ಕೊಂಡು ತಿನ್ನುವುದು ಆತನ ರೂಢಿಯಾಗಿತ್ತು. ಏನಾದರೂ, ಆತ ವಿಶೇಷವಾಗಿ ಕೇಳಿದರೆ, ಆಕೆ ಕಣ್ಣೀರು ಸುರಿಸುತ್ತಿದ್ದಳು. ಹಾಗಾಗುವುದು ಬೇಡ ಎಂದು ಅವ್ವ ಕೊಟ್ಟಿದ್ದನ್ನೇ ತಾನು ಸುಮ್ಮನೇ ತಿನ್ನುತ್ತಿದ್ದ.
ಅವರಿಬ್ಬರಿಗೆ ಸಂತೋಷದ ಆಸರೆ ಕೊಡುತ್ತಿದ್ದವಳು ನಿಂಗಮ್ಮಳ ಉದ್ಯೋಗದಾತೆ ಒಡತಿ. ತಮ್ಮಲ್ಲಿ ಮಿಕ್ಕುಳಿದ ಅನ್ನ, ಸಾಂಬಾರು, ಚಟ್ನಿ-ಪಲ್ಯಗಳನ್ನು ಈಕೆಗೆ ತಪ್ಪದೆ ಕೊಡುತ್ತಿದ್ದಳು. ಅದು ಇವರಿಬ್ಬರ ಬಾಳಿನ ಭಾಗ್ಯವಾಗಿತ್ತು. ಇನ್ನು ಹಬ್ಬ ಮತ್ತು ವಿಶೇಷ ದಿನಗಳು ಬಂದಾಗ ಒಡತಿಯ ಶೇಷ ಭೋಜನ ಇವರ ಪಾಲಿಗೆ ವಿಶೇಷ ಭೋಜನವಾಗುತ್ತಿತ್ತು. ಆ ಘಳಿಗೆಗೆ ರಂಗ ಯಾವಾಗಲೂ ಕಾಯುತ್ತಿದ್ದ. ಹಾಗೆಯೇ ಒಂದು ದಿನ, ನಿಂಗವ್ವ ರಂಗನಿಗೆ ಹೀಗೆ ಹೇಳಿದಳು;
‘ರಂಗಾ, ಇವತ್ತು ನಮ್ಮೊಡತಿ ಮನೇಲಿ ಏನೋ ವಿಶೇಷ ಕಾರ್ಯಕ್ರಮವಿದೆಯಂತೆ. ಹಾಗಂತಾ ನಿನ್ನೆ ನನ್ನೊಡನೆ ಹೇಳ್ತಿದ್ದಳು. ಏಕೆಂದರೆ, ಆ ಪ್ರಸಂಗದಲ್ಲಿ ತೊಳೆಯುವ ಪಾತ್ರೆಗಳು ದಿನ ನಿತ್ಯಕ್ಕಿಂತ ಹೆಚ್ಚಾಗಿರುತ್ತವೆ. ಹಾಗಾಗಿ, ಅದನ್ನು ಮೊದಲೇ ತಿಳಿಸಿದಳು ನನ್ನೊಡತಿ’ ಎಂದು ಹೇಳಿದಳು. ಇವನಿಗಾದರೋ, ವಿಶೇಷ ಭೋಜನದ ಸವಿ ನಮ್ಮ ಪಾಲಿಗೆ ಬಂದೇ ಬಂತು ಎಂದು ಹಿರಿ ಹಿರಿ ಹಿಗ್ಗಿದ. ಹಾಗೇ ಸುಗ್ರಾಸ ಭೋಜನ ದೊರಕುವ ಖುಷಿಯಲ್ಲಿ ಇವತ್ತು ಒಣ ರೊಟ್ಟಿಗಳನ್ನೇ ಕಚ್ಚಿ ತಿನ್ನಬೇಕು’ ಎಂದು ನಿಂಗವ್ವ ಮೃದುವಾಗಿ ಮಗನಿಗೆ ವ್ಯಂಗವಾಡಿದಳು. ‘ಆಯಿತವ್ವ’ ಎಂದು ರಂಗ ತಲೆ ಅಲ್ಲಾಡಿಸಿದ.
ಇದಲ್ಲದೇ, ರಂಗನಿಗೆ ಇನ್ನೊಂದು ವಿಶೇಷವಾದ ಕೃಪೆ ಇತ್ತು. ಆತನ ಗುರುಗಳಾದ ‘ಆದೆಪ್ಪ ಮಾಸ್ತರ್’ ಈತನ ಮನೆಯ ಪರಿಸ್ಥಿತಿ ಸರಿಯಾಗಿ ಅರಿತು ಕೊಂಡಿದ್ದರು. ಹಾಗಾಗಿ, ಅವರು ತಾವು ಶಾಲೆಗೆ ತರುವ ಊಟದ ಡಬ್ಬಿಯಲ್ಲಿರುವ ಅರ್ಧದಷ್ಟು ತಿಂಡಿಯನ್ನು ರಂಗನಿಗೆ ಕೊಡುತ್ತಿದ್ದರು. ಸದಾ ಹಸಿವಿನಿಂದ ಇರುವ ರಂಗನಿಗೆ ಅದು ಕೂಡಾ ಒಂದು ವರದಾನವೇ ಆಗಿತ್ತು. ಆದರೇ, ಸಧ್ಯದ ಘಳಿಗೆಯಲ್ಲಿ ಆ ಅದೃಷ್ಟ ಆವನಿಗಿರಲಿಲ್ಲ. ಏಕೆಂದರೆ, ಆದೆಪ್ಪ ಮಾಸ್ತರಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಅವರು ರಜೆಯ ಮೇಲಿದ್ದರು. ಹಾಗಾಗಿ, ರಂಗನಿಗೆ ಅವರ ಡಬ್ಬಿ ಊಟದ ಯೋಗ ಆಗ ಇರಲಿಲ್ಲವಾದರೂ, ತನ್ನ ತಾಯಿಯ ಒಡತಿಯೇ ಅವರಿಬ್ಬರ ಪಾಲಿನ ದೇವತೆ ಮತ್ತು ನೆಚ್ಚಿನವಳಾಗಿದ್ದಳು. ಅವ್ವ ಅಂದು ಒಡತಿಯ ಮನೆ ಕೆಲಸಕ್ಕೆ ಮುಂಜಾನೆ ಹೋದಳು. ಆಕೆ ಹಾಗೆ ಹೋಗುತ್ತಿರುವುದನ್ನು ನೋಡಿದ ರಂಗ ಬಹಳೇ ಆನಂದಿತನಾದ. ಇನ್ನೇನು ಒಂದು ಘಂಟೆಯಲ್ಲಿ ಆಕೆ ಬಂದು ತನಗೆ ವಿಧ ವಿಧವಾದ ಊಟ ಬಡಿಸುತ್ತಾಳೆ ಎಂದಂದುಕೊಂಡ. ಆಗ ಆತ ಸಹಜವಾಗಿಯೇ ಆಕೆಯ ಬರುವಿಕೆ ಕಾಯಬೇಕಾಯಿತು. ಸ್ವಲ್ಪ ಹೊತ್ತಾದ ಮೇಲೆ, ದೂರದಲ್ಲಿ ತನ್ನ ತಾಯಿ ಬರುವುದನ್ನು ಗಮನಿಸಿದ. ಆಗ ಅವನ ಮುಖದಲ್ಲಿ ಆನಂದ ಉಕ್ಕಿ ಹರಿಯುತ್ತಿತ್ತು. ಸಧ್ಯಕ್ಕೆ ಹೊಟ್ಟೆಯಲ್ಲಿ ಜ್ವಾಲೆಯಂತೆ ಸುಡುತ್ತಿರುವ ಮತ್ತು ಬಿಟ್ಟು ಬಿಡದೇ ಹೊಟ್ಟೆ ಕಿವುಚುತ್ತಿರುವ ಹಸಿವೆಯನ್ನು ಹೇಗೋ ಸಹಿಸಿಕೊಂಡಿದ್ದ. ಅದರ ಶಮನದ ಸಮಯ ಕೂಡಲೇ ಬಂದಿದೆ ಎಂದು ಆಗ ಆಶಾವಾದಿಯೂ ಕೂಡ ಅವನಾದ.
ಆದರೇ, ಆಕೆ ಹತ್ತಿರ ಬಂದಂತೆ, ಬರಿಗೈಯಲ್ಲಿ ಬರುತ್ತಿರುವುದು ಕಾಣಿಸಿದ್ದು ಆತನಿಗೆ ಆಶ್ಚರ್ಯವಾಯಿತಲ್ಲದೇ, ಮನಸ್ಸಿಗೆ ಕಸಿ ವಿಸಿ ಕೂಡಾ ಆಯಿತು. ಆಗ ಅವ್ವ ಏನೂ ತಂದಿಲ್ಲ ಎಂದು ಖಾತ್ರಿ ಯಾದಾಗ ಆತಂಕವೆನಿಸಿತು. ಆಕೆ ಅದ್ಹೇಗೆ ಬರಿಗೈಯ್ಯಲಿ ಬರಲು ಸಾಧ್ಯ? ಒಡತಿಗೆ ಹೇಳಿ ಏನಾದರೂ ತನಗಾಗಿ ತರಲೇಬೇಕು ಅಲ್ಲವೇ ?. ಹಾಗೆ ಇಲ್ಲ ಎಂದರೇ ಏನೋ ಕಾರಣ ಇರಬೇಕೆಂದು ಅಂದುಕೊಂಡ. ಆದರೂ, ಆತನಿಗೆ ಏನೂ ಅರ್ಥವಾಗದೇ, ತಿಳಿದು ಕೊಳ್ಳುವ ಸಲುವಾಗಿ ಆಕೆಯ ಬಳಿಗೆಯೇ ಹೋದ ಮತ್ತು ಆಕೆಗೆ ಪ್ರಶ್ನಿಸದೇ, ತಾಯಿಯ ಮುಖ ನೋಡುತ್ತಾ ಸುಮ್ಮನೆ ನಿಂತ. ಅವನು ಮುಂದೆ ಬಂದು ನಿಂತು ಮಾತಾಡದ ಪರಿಸ್ಥಿತಿ ನೋಡಿ ನಿಂಗವ್ವಗೆ ದುಃಖ ತಡೆಯದೇ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳ ಕಣ್ಣುಗಳು ಅದಾಗಲೇ ತೇವವಾಗಿದ್ದುವಲ್ಲದೇ, ಇನ್ನೂ ಕಣ್ಣೀರು ಸುರಿಯುತ್ತಲೇ ಇತ್ತು. ಹಸಿದ ಕಂದನಿಗೆ ಹಸಿವು ನೀಗಿಸದಷ್ಟು ತಾನು ಮಹಾಪಾಪಿ ಎಂಬುದು ಆಕೆಯ ಮನಸ್ಸಿಗೆ ಚುಚ್ಚುತ್ತಿತ್ತು ! ಆಕೆ ಕಣ್ಣೀರು ಹಾಕುವದನ್ನು ನೋಡಿ, ರಂಗನಿಗೂ ದುಃಖ ಉಕ್ಕಿ ಬಂತು. ಆತ ತಾಯಿಯನ್ನು ತಬ್ಬಿಕೊಂಡು ತಾನೂ ಅಳಲು ಪ್ರಾರಂಭಿಸಿದ. ಆದಾಗ್ಯೂ ಅದ್ಹೇಗೋ ದುಃಖ ತಡೆದು ಕೊಂಡು ತಾಯಿಗೆ ಹೀಗೆ ಕೇಳಿದ;
‘ಏನಾಯಿತವ್ವ ?’
‘ಮಗಾ. ಬಡವರ ಹಸಿವನ್ನು ಯಾರೂ ಕೇಳುವವರೇ ಇಲ್ಲ’ ಏಂದು ಹೇಳಿ ಮತ್ತೇ ಅಳಲು ಪ್ರಾರಂಭಿಸಿದಳು.
‘ನೀನು ಅಳಬೇಡ, ಏನಾಯಿತೆಂದು ಹೇಳವ್ವಾ.’ ಎಂದ.
‘ಮಗಾ, ಮಾಡಿದ ಅಡಿಗೆ ಎಲ್ಲಾ ಮೈಲಿಗೆ ಆಯಿತೆಂದು ನಿನ್ನೆ ಸಂಜೆಯೇ ತಿಪ್ಪೆಗೆ ಚೆಲ್ಲಿ ಬಿಟ್ಟಿದ್ದಾರೆ.’ ಎಂದಳು.
‘ಅದ್ಹೇಗವ್ವ ಮೈಲಿಗೆ ಆಗೋದು?’
‘ಅಡಿಗೆಯನ್ನು ಹೊರಗಡೆ ಮಾಡಿಸಿದ್ದರಂತೆ. ಆಗ ಒಂದು ನಾಯಿ ಪೆಂಡಾಲಿನೊಳಕ್ಕೆ ಹೊಕ್ಕಿದ್ದನ್ನು ಯಾರೋ ನೋಡಿ ಅವರಿಗೆ ಹೇಳಿದರಂತೆ. ಆ ನಾಯಿ ಅಡಿಗೆ ಮೈಲಿಗೆ ಮಾಡಿರ ಬಹುದೆಂದು ಅಂದು ಕೊಂಡು ಅದನ್ನೆಲ್ಲಾ ತಿಪ್ಪೆಗೆ ಬಿಸಾಡಿದ್ದಾರೆ’ ಎಂದು ಸೆರಗು ಮುಚ್ಚಿಕೊಂಡು ಅಳುತ್ತಾ ಹೇಳಿದಳು.
‘ನಾಯಿ ಹೊಕ್ಕರೆ ಅದ್ಹೇಗವ್ವ ಮೈಲಿಗೆ ?’ ಎಂದ.
‘ನೋಡು ಮಗಾ, ಅವರು ಯಾರೂ ನೋಡಿಲ್ಲ, ಆದರೆ, ಹೇಳಿದ್ದನ್ನು ಕೇಳಿ ನಂಬಿದ್ದಾರೆಯಷ್ಟೇ. ತಕ್ಷಣವೇ ಅವರು ಎಲ್ಲಾ ಅಡಿಗೆಯನ್ನು ಪೂರ್ತಿ ಚೆಲ್ಲಿ, ಖಾಲಿ ಪಾತ್ರೆಗಳನ್ನು ತೊಳೆಯಲು ನನಗಾಗಿ ಇಟ್ಟಿದ್ದರು.’ ಎಂದಳು.
‘ಹಾಗಾದರೆ, ಅವರು ನಿನ್ನೆ ರಾತ್ರಿಯ ಊಟ ಮಾಡಿಲ್ಲವೇ ? ಅದರಲ್ಲಿ ಏನಾದರೂ ಉಳಿದಿರಬೇಕಲ್ಲವೇ ?’ ಮುಗ್ಧತೆಯಿಂದ ಕೇಳಿದ.
‘ಅವರು ನಮ್ಮ ಹಾಗೆ ಹಸಿವಿನಿಂದ ಇರುತ್ತಾರೆಯೇ ? ಏನೋ..ತಮಗೆ ಆಗುವಷ್ಟು ರಾತ್ರಿ ವ್ಯವಸ್ಥೆ ಮಾಡಿ ಕೊಂಡಿರುತ್ತಾರೆ’ ಎಂದಳು.
‘ಅವ್ವ ಈಗ ನಾನು ಏನು ತಿನ್ನಲಿ. ನನಗೆ ಹಸಿವಿನಿಂದ ಪ್ರಾಣ ಹೋಗುವಂತಾಗಿದೆ’.ಎಂದು ರಂಗ ಹೇಳಿದಾಗ ದಿಕ್ಕು ತೋಚದೇ ಅವ್ವ ಮತ್ತೇ ಕಣ್ಣೀರು ಹಾಕತೊಡಗಿದಳು. ‘’ಇನ್ನು ಅಳಬೇಡವ್ವಾ. ಅಳುವದರಿಂದ ಏನೂ ಸಿಗುವುದಿಲ್ಲ. ನನ್ನ ಚಿಂತೆ ಬೇಡ. ನಾನು ಶಾಲೆಗೆ ಹಾಗೆಯೇ ಹೋಗುತ್ತೇನೆ. ಹಸಿವು ನನ್ನನ್ನೇನು ಕೊಲ್ಲುವುದಿಲ್ಲ.’ ಎಂದು ತಾಯಿಯನ್ನು ಸಮಾಧಾನಿಸಲು ಪ್ರಯತ್ನಿಸಿದ. ಆದರೂ ಆಕೆಯ ಕಣ್ಣೀರು ನಿಲ್ಲಲೇ ಇಲ್ಲ. ತಾನು ಅಪರಾಧಿಯೆಂದೇ ಆಕೆ ಗೋಗರೆಯುತ್ತಿದ್ದಳು. ಆಗ ರಂಗ ಮನೆಯೊಳಗೆ ಹೋಗಿ, ಒಂದು ಲೋಟ ನೀರು ಕುಡಿದು ಹೊರಗೆ ಬಂದು ಶಾಲೆಗೆ ಹೋಗಲು ತಯಾರಾದ’.
ಅದೇ ಸಮಯದಲ್ಲಿ, ನೆರೆ ಮನೆಯ ಪಾರಕ್ಕ ದೂರ ನಿಂತು ಇದೆಲ್ಲವನ್ನೂ ಗಮನಿಸುತ್ತಿದ್ದಳು. ಆಕೆ ತಡ ಮಾಡದೇ, ತನ್ನ ಮನೆಯೊಳಕ್ಕೆ ಹೋಗಿ ಎರಡು ವಡೆ ತಂದು ರಂಗನಿಗೆ ಕೊಟ್ಟಳು. ಆಗ ರಂಗ ಆಕೆಯನ್ನು ತಬ್ಬಿಕೊಂಡು ಹೀಗೆ ಹೇಳಿದ ;
‘ನೀನು ನನ್ನ ದೊಡ್ಡವ್ವ’ ಏಂದು ಕಣ್ಣುಗಳ ತುಂಬಾ ನೀರು ತುಂಬಿಕೊಂಡ.
ಅವನ ನೋವು ತುಂಬಿದ ಮಾತು ಮತ್ತು ಆತ್ಮೀಯ ಭಾವ ಹೇಳುವ ಪರಿ ನೋಡಿ ಪಾರಕ್ಕನ ಹೊಟ್ಟೆ ‘ಚುರುಕ್’ ಎಂದಿತು. ಆಕೆ ಆತನಿಗೆ ವಿಷಯ ಮರೆಸಲು, ಆತನ ತಲೆ ನೇವರಿಸಿ ಹೀಗೆ ಹೇಳಿದಳು;
‘ಮಗಾ, ಇಷ್ಟು ತಿಂದು ನೀನು ಈಗ ಶಾಲೆಗೆ ಹೋಗು, ನೀನು ಮರಳಿದ ಮೇಲೆ ನಿನಗೆ ಅಕ್ಕಿ ರೊಟ್ಟಿ ಪಲ್ಯ ಕೊಡುತ್ತೇನೆ’ ಎಂದಾಗ;
ಆತ ಅಳುವಿನಲ್ಲೇ ನಗು ತಂದು ಕೊಂಡು ತಲೆ ಅಲ್ಲಾಡಿಸಿ ಆಕೆ ಕೊಟ್ಟ ವಡೆಯನ್ನು ತಿಂದು ಶಾಲೆಗೇ ಜಿಗಿಯುತ್ತಾ ಹೋದ.
ಆಮೇಲೆ, ನಿಂಗವ್ವ ಪಾರಕ್ಕಳನ್ನು ತಬ್ಬಿಕೊಂಡು ‘ಅಕ್ಕಾ ನೀನು ನಮ್ಮ ಪಾಲಿನ ದೇವರು’
ಎಂದಳು.
‘ಹಾಗೆ ಏನೂ ಇಲ್ಲಮ್ಮ, ನೀನು ನಮ್ಮನೆಗೆ ಬಂದುಬಿಡು, ಅಲ್ಲಿ ನೀನೂ ಹೊಟ್ಟೆಗೆ ಏನಾದರೂ ಹಾಕಿ
ಕೊಳ್ಳುವಿಯಂತೆ’ ಎಂದಾಗ;
‘ಬೇಡ.. ಅಕ್ಕ.. ಮನೆಯಲ್ಲಿ ರೊಟ್ಟಿಗಳಿವೆ, ನನಗೆ ಅಷ್ಟೇ ಸಾಕು’ ಎಂದು ಮುಂದುವರೆಸಿ, ‘ಅಕ್ಕಾ ಆ ದೇವರು ಈ ಜೀವಗಳ ಜೊತೆಗೆ ಹಸಿವು ಯಾಕೆ ಇಟ್ಟನೋ ಏನೋ ?ಅದ್ರಲ್ಲೂ ನಮ್ಮಂಥಹ ಬಡವರಿಗೆ ಅದು ದರಿದ್ರವೇ ಆಗಿದೆ’. ಎಂದು ಮತ್ತೇ ಅಳತೊಡಗಿದಳು.’
‘ಜೀವನದಲ್ಲಿ ಹೀಗೆ ಆಗುವುದು ಸಹಜ. ಕಣ್ಣೀರು ಹಾಕಬೇಡ‘ ಎಂದು ಪಾರಕ್ಕ ಸಮಾಧಾನಿಸಿದಳು.
‘ಇಷ್ಟೆಲ್ಲಾ ಆಗೋದಕ್ಕೆ ನಾನೇ ಕಾರಣ. ರಂಗನಿಗೆ ಇಲ್ಲದ ಆಸೆ ತೋರಿಸಿದ್ದೇ ತಪ್ಪಾಯಿತು.
ನಾನು ಹಬ್ಬದಡಿಗೆ ತರುತ್ತೇನೆಂದು ನಿನ್ನೆಯಿಂದ ಹೇಳುತ್ತಲೇ ಇದ್ದೇನೆ. ಹಾಗಾಗಿ, ಅವನು ಕಾಯುತ್ತಾ ಇದ್ದ.’ ಎಂದಳು.
‘ಇರಲಿ ಬಿಡು, ಯಾವಾಗಲಾದರೂ ಒಮ್ಮೆ ಹೀಗೆ ಆಗುತ್ತದೆ.’ ಎಂದು ಪಾರಕ್ಕ ಸಮಾಧಾನಿಸಿ ತನ್ನ ಮನೆಗೆ ಹೋದಳು.
ಆ ದಿನ ರಂಗ ಶಾಲೆಗೆ ಹೋದಾಗ ಅಲ್ಲಿ ಅದೆಪ್ಪ ಮಾಸ್ತರನ್ನು ಕಂಡು ಆಶ್ಚರ್ಯವಾಯಿತಲ್ಲದೇ ಬಹಳೇ ಹಿಗ್ಗಿದ. ಅವರು ಅರೋಗ್ಯ ಹೊಂದಿ ಶಾಲೆಗೆ ಮರಳಿದ್ದರು.
ಅವರ ಬಳಿ ಹೋಗಿ ‘ನಮಸ್ಕಾರ ಗುರುಗಳೇ’ ಎಂದು ಎರಡೂ ಕೈ ಜೋಡಿಸಿದ. ಆಗ ಅವರು;
‘ಏನು ರಂಗ..ಈಗ ಬಂದೆಯಾ ?’ ಅದಕ್ಕೆ ‘ಹೌದು’ ಎಂದು ತಲೆ ಆಡಿಸಿದ.
‘ಈ ದಿನ ನಿನಗೆ ವಿಶೇಷವಾಗಿ ರಾಗಿ ರೊಟ್ಟಿ, ಪಲ್ಯ ತಂದಿದ್ದೇನೆ, ಮಧ್ಯಾನ್ಹ ನನ್ನ ಬಳಿಗೆ ಬಂದು ಬಿಡು ಇಬ್ಬರೂ ಸೇರಿ ತಿನ್ನೋಣ ‘ ಎಂದರು. ಆಗ ರಂಗನಿಗೆ ಸ್ವರ್ಗವೇ ಎಟುಕಿದಂತಾಯಿತು !
ಪಾರಕ್ಕ ವಡೆ ಕೊಟ್ಟು ಹಸಿವು ಇಂಗಿಸಿ ಕರುಣಾಮಯಿ ತಾಯಿಯಾದಳು, ಇತ್ತ
ಆದೆಪ್ಪ ಮಾಸ್ತರ್ ರಾಗಿ ರೊಟ್ಟಿ ಕೊಟ್ಟಾಗ ಅವರಲ್ಲಿ ರಂಗ ತಂದೆಯ ಪ್ರೀತಿ ಕಂಡ. ಹಾಗಾಗಿ, ಪಾರಕ್ಕ ಮತ್ತು ಅದೆಪ್ಪ ಮಾಸ್ತರ ಇಬ್ಬರೂ ರಂಗನ ಪಾಲಿಗೆ ಹೊಳೆಯುವ ನಕ್ಷತ್ರಗಳಾದರು. ಆಗ ಆತನಿಗೆ ಎಷ್ಟು ಸಂತೋಷವಾಯಿತೋ, ಅಷ್ಟೇ ಕಡು ಕೋಪ ಬಡತನ ಮತ್ತು ಹಸಿವಿನ ವಿಷಮತೆಯ ಬಗ್ಗೆ ಮೂಡಿತು.
ಬಿ.ಟಿ.ನಾಯಕ್
Sir really heart touching & you could have continued the same. – CSK
There is no end for the poverty unless support from out side. We as a neighbour must extend help to the poor like Parakka & Adeppa Master who are godly persons. Thanq for your encouragement in the subject matter and showing a great interest towards poor.
ಮನವೀಯತೆ ತುಂಬಿದ ಕಥೆ ಚೆನ್ನಾಗಿದೆ. ಓದುವಾಗ ಕಣ್ಣಾಲಿಗಳು ತುಂಬುತ್ತವೆ.
ಅಭಿನಂದನೆಗಳು
ತಮ್ಮ ಅನಿಸಿಕೆ ಮತ್ತು ಸ್ಪೂರ್ತಿಗೆ ಧನ್ಯವಾದಗಳು.
ಬಡತನದ ಚಿತ್ರಣ ಅದಕ್ಕೆ ಬಡವರು ಹೊಂದಿ ಕೊಳ್ಳೋ ರೀತಿ ಮನೋಜ್ಞ ವಾಗಿ ಬಿಂಬಿಸಿದ್ದಿರಿ ಕಥೆ ಕೊನೆವರೆಗೂ ಓಡಿಸಿ ಕೊಂಡು ಹೋಯಿತು ಮೃಂದೆ ಏನತು ಅನ್ನೋ ಕುತೂಹಲ ಉಂಟು ಮುಂದುವರೆಸುವಿರಾ
ಇಂಥಹ ಕುಟುಂಬ ನಮ್ಮ ಸುತ್ತಲೂ ಇರುತ್ತವೆ. ಸಾಧ್ಯವಾದಷ್ಟು ಬಡ ಕುಟುಂಬಗಳಿಗೆ ಆಸರೆಯಾಗಬೇಕು ಎಂಬುದೇ ಇದರ ತಾತ್ಪರ್ಯ. ಪಾರಕ್ಕ ಮತ್ತು ಆದೆಪ್ಪ ಮಾಸ್ತರಂತೆ ಸಮಾಜದಲ್ಲಿ ಇದ್ದಾರೆಂದೇ ಬಡವರು ಬದುಕುತ್ತಿದ್ದಾರೆ. ತಮ್ಮ ಅನಿಸಿಕೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಥೆ ಅರ್ಥಪೂರ್ಣವಾಗಿದೆ. ಅಭಿನಂದನೆಗಳು ನಾಯಕರೇ.
ಧನ್ಯವಾದಗಳು ಸರ್.
ಕಥೆ ತುಂಬಾ ಚೆನ್ನಾಗಿದೆ ಆದರೆ ಮೈಲಿಯಾದ ಅಡಿಗೆಯನ್ನು ಇವರಿಗೆ ಕೊಡಬಹುದಾಗಿತ್ತು ಯಾಕೆ ಅವರು ತಿಪ್ಪೆಗೆ ಎಸೆದರು
ನೀವು ಹೇಳುವುದು ಮಾನವೀಯತೆ ದೃಷ್ಟಿಯಿಂದ ಸರಿ ಮತ್ತು ನಿಮ್ಮ ಕಳಕಳಿಯೂ ಹೌದು. ಆದರೇ, ಹಾಗೆಯೇ ಆಗಿದ್ದರೇ ದೇವತಾ ಸ್ವರೂಪಿ ಪಾರಕ್ಕ ಮತ್ತು ಆದೆಪ್ಪ ಮಾಸ್ತರ್ ಅವರ ಚಿತ್ರಣ ಬರುತ್ತಿರಲಿಲ್ಲ. ಅಲ್ಲದೇ, ಇಂಥಹ ಕಥಾ ವಸ್ತುಗಳನ್ನು ಲೇಖಕ ಕೊಂಡೊಯ್ದು ಒಂದು ತಾರ್ಕಿಕ ಅಂತ್ಯದಲ್ಲಿ ಮುಗಿಸುತ್ತಾನೆ. ಆಗ ಓದುಗರಿಗೆ ಆ ಬಗ್ಗೆ ಕಾರುಣ್ಯ ಮೂಡುತ್ತದೆ.: ಬಿ.ಟಿ.ನಾಯಕ್.
ಕಥೆ ಚೆನ್ನಾಗಿದೆ ಸಾರ್. ಹಸಿವು ಎಂದರೇನೆಂದು ತುಂಬಾ ಚೆನ್ನಾಗಿ ಹೇಳಿದ್ದೀರಿ. ಇಂದಿನ ಮಕ್ಕಳು ಅನ್ನದ ಮಹತ್ವ ತಿಳಿಯದೆ, ತಟ್ಟೆಯಲ್ಲಿ ಅರ್ಧಂಬರ್ಧ ಆಹಾರವನ್ನು ಹಾಗೆ ಬಿಟ್ಟು ಕೈ ತೊಳೆಯುತ್ತಾರೆ.
ಹೌದು ಸರ್ ನೀವು ಹೇಳುವುದು ಸತ್ಯ. ಬಡತನ ಮತ್ತು ಹಸಿವು ಅರಿಯಬೇಕಾದರೇ ಅದರ ಒಳ ಹೊಕ್ಕು ಹೊರ ಬಂದರೇನೇ ಅರ್ಥವಾಗುವುದು. ತಮ್ಮ ಜನಪರ ಕಾಳಜಿ ಮತ್ತು ನನ್ನ ಕಥೆಗೆ ಸ್ಪೂರ್ತಿ ತುಂಬಿದುದ್ದಕ್ಕೆ ಧನ್ಯವಾದಗಳು.
ಕಥೆ ತುಂಬ ಮಾರ್ಮಿಕವಾಗಿದೆ. ಮಗುವಿನ ಮುಗ್ಧ ಮನಸ್ಸು, ಕಿತ್ತು ತಿನ್ನುವ ಹಸಿವು, ತಾಯಿಯ ಅಸಹಾಯಕತೆ, ಉಳ್ಳವರು ಮಾಡುವ ಆಹಾರದ ಪೋಲು, ಒಂದಕ್ಕೊಂದು ತಳುಕು ಹಾಕಿಕೊಂಡಿವೆ. ಇವುಗಳ ಮಧ್ಯೆ ಪಾರಕ್ಕ ಮತ್ತು ಆದೆಪ್ಪ ಮಾಸ್ತರ್ ನಿಜಕ್ಕೂ ಸಮಾಜದ ಆಶಾಕಿರಣ. ಓದುತ್ತಾ ಕಣ್ಣಾಲಿಗಳು ನಿರಾಡುತ್ತವೆ. ಅಭಿನಂದನೆಗಳು
ಮ.ಮೋ.ರಾವ್ ರಾಯಚೂರು.
ಶ್ರೀಯುತ ಮ.ಮೊ.ರಾವ್ ನಿಮ್ಮ ವಿಮರ್ಶಾತ್ಮಕ ಅನಿಸಿಕೆಗೆ ನನ್ನ ಧನ್ಯವಾದಗಳು.