ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಬದುಕು ಲೆಕ್ಕ ತಪ್ಪಬಾರದು

 ಬದುಕಿನ ದಾರಿಯಲ್ಲಿ ಒಂಟಿತನ ನಮ್ಮ ಸ್ನೇಹಿತ. ಹಿಂದಿನ ಜನ್ಮದ ತಪ್ಪುಗಳೋ ಏನೋ ಈ ಜನ್ಮದಲ್ಲಿ ಒಂಟಿತನದ ಶಾಪವಾಗಿ ಆಗಾಗ ಕಾಡುತ್ತಾ ಇರುತ್ತದೆ. ಬಂಧು, ಬಳಗ, ಗೆಳೆಯರು, ಇಷ್ಟರು ಯಾರೇ ಇದ್ದರೂ ಕೂಡ ಇದು ಕಾಡುತ್ತಲೇ ಇರುತ್ತದೆ.  ಏನೂ ಮಾಡಲು ಆಗದು. ಬಂದ ಬದುಕನ್ನು ಅನುಭವಿಸಬೇಕು, ಏನಾದರೂ ಸಾಧಿಸಬೇಕು ಅಷ್ಟೇ. ನಾವಿನ್ನೂ ಕಲಿಯುವುದು ಬಹಳವಿದೆ ಬದುಕಿನಲ್ಲಿ. ನಮ್ಮವರು ಅಂದುಕೊಂಡ ಯಾರೂ ನಮ್ಮವರಲ್ಲ. ಅವರ ಮನಸಿನಲ್ಲಿ ಬೇರೆ ಇನ್ನು ಯಾರೋ ಇರುತ್ತಾರೆ.
        ನಾವು ಅಂದುಕೊಂಡ ಹಾಗೆ ನಮ್ಮ ಬದುಕು ಇಲ್ಲ. ಇತರರು ಇನ್ನೇನೋ ಅಂದುಕೊಂಡಿರುತ್ತಾನೆ. ದೇವರಲ್ಲಿ ಒಬ್ಬ ಬದುಕು ಬೇಡಿದರೆ, ಇನ್ನೊಬ್ಬ ಅವನ ಸಾವು ಬೇಡುತ್ತಾನೆ. ಕನ್ಫ್ಯೂಸ್ ಆದ ದೇವರು ಆತ ಸಾವು ಬದುಕಿನ ನಡುವೆ ಹೊರಳಾಡುವ ಹಾಗೆ ಮಾಡಿ ಬಿಡುತ್ತಾನೆ. ಇತ್ತ ಸಾಯಲೂ ಆಗದು , ಅತ್ತ ಬದುಕಲು ಕೂಡಾ ಆಗದು. ಅದೇ ನಮ್ಮ ಬಾಳಿನ ಮರ್ಮ ಅಲ್ಲವೇ?
          ನೋವುಗಳ ಮೇಲೆ ನೋವು, ಏಟಿನ ಮೇಲೆ ಏಟು, ಬರೆಯ ಮೇಲೆ ಬರೆ, ಒಂದು ಸಣ್ಣ ಸಕ್ಕರೆ ಹನಿ ನಡುವೆ. ಆ ಸಿಹಿ ಬಾಯಿಗೆ ಬಿದ್ದ ಕೂಡಲೇ ಮನುಷ್ಯ ಎಲ್ಲವನ್ನೂ, ಎಲ್ಲಾ ಕಷ್ಟಗಳನ್ನೂ ಮರೆತು ಇನ್ನು ನನ್ನ ಬದುಕು ಹೀಗೆಯೇ ಸಿಹಿಯಾಗಿ ಇರುತ್ತದೆ ಎಂಬ ಭ್ರಮೆಯಲ್ಲಿ ಬದುಕುತ್ತಾ ಇರುತ್ತಾನೆ. ಮತ್ತೆ ಕಷ್ಟಗಳ ಸಾಲು ಬಂದಾಗ ಸ್ವಲ್ಪ ಧೈರ್ಯದಿಂದ ಎದುರಿಸುತ್ತಾ, ಸಕ್ಕರೆ ಹನಿಯನ್ನು ನೆನಪಿಸುತ್ತಾ, ಹಾನಿ, ನೋವು ಎಲ್ಲಾ ಎದುರಿಸುತ್ತಾ ಸಾಗುತ್ತಾನೆ. ಮತ್ತೆ ಸೋತು ಸಾವಿಗೆ ಹತ್ತಿರವಾಗಿದ್ದೇನೆ ಎನ್ನುವಾಗ ಮತ್ತೊಂದು ಸಕ್ಕರೆ ಹನಿ..ಹೀಗೆಯೇ ದೇವರು ನಮ್ಮನ್ನು ಮಂಗ ಮಾಡುವುದು! ಹನಿ ಸಿಹಿಯ ಬದುಕು ಸರ್ವರದ್ದು!

         ಏನೋ.. ಈ ಬದುಕು ಏನೇನೂ ಸರಿ ಇಲ್ಲ ಅನ್ನಿಸಿ ಬಿಡುತ್ತದೆ ಒಮ್ಮೊಮ್ಮೆ. ಒಂಟಿತನದ , ಬೇಸರದ, ನೋವಿನ, ಬಾಧೆ , ಬವಣೆ ಒಂದೆಡೆ ಆದರೆ ಮತ್ತೇನೇನೋ ಕೊರತೆಗಳು ಕಾಡುತ್ತಿರುತ್ತವೆ. ಎತ್ತರಕ್ಕೆ ಏರಲು ಆಗದ ಬಯಕೆಗಳು. ಯಾವುದನ್ನೂ ಸಾಧಿಸಲು ಒಂಟಿತನದ , ಹಣದ ಖರ್ಚಿನ, ಇತರರ, ಸಮಾಜದ, ಆಡಿಕೊಳ್ಳುವವರ, ಭಯ ಬಿಡದು. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ಹಿರಿಯರು ಹೇಳಿದ್ದಾರೆ. ಹಿರಿಯರ ಮಾತಿಗೆ ತಲೆಬಾಗಿ ನಡೆ ಎಂದು ವೇದ , ಪುರಾಣ, ಗೀತೆಗಳು ಹೇಳಿವೆ.  ನಡುವೆ ಹೊತ್ತು ತಿರುಗುತ್ತಿರುವ ಜವಾಬ್ದಾರಿಗಳ ಮೂಟೆ. ನಮ್ಮದಲ್ಲ ಎಂದು ಗೊತ್ತಿದ್ದರೂ ನಮಗಾಗಿ ಅಲ್ಲ,  ಬೇರೆಯವರ ಬದುಕಿಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕಿದೆ.

            ಎಲ್ಲೋ ಒಂದು  ಬೀಜ ಬಿದ್ದು ಹುಟ್ಟಿ ಅಲ್ಲೇ ಮರವಾಗಿ ಬೆಳೆದು ಎಲೆ, ಹೂ, ಹಣ್ಣು, ಕಾಯಿ, ನೆರಳು, ಗಾಳಿ ಕೊಡುವ ಮರದಂತೆ ಅಲ್ಲ ನಾವು. ಇನ್ನೆಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮತ್ತೆಲ್ಲೋ ಸಾಧಿಸ ಹೊರಟವರು. ಇಂದು ನಮ್ಮೊಡನೆ ನಮ್ಮವರಾಗಿ ಇರುವವರು ನಾಳೆ ಇನ್ನೆಲ್ಲೋ ಪರರಾಗಿ ಉಳಿದು ಬಿಡುತ್ತಾರೆ. ನಾನು, ನನ್ನದು,  ನನಗೆ,  ನನಗಾಗಿ,  ಯಾರೂ ಇರದೆ ಇರಬಹುದು. ನಮ್ಮವರು ಅಂದುಕೊಂಡವರು ಪರರ ಪಾಲಾಗಿರಬಹುದು. ನಮ್ಮನ್ನು ಅವರು ಮರೆತಿರಲೂ ಬಹುದು. ನಮ್ಮೊಡನೆ ಕಳೆದ ಕ್ಷಣಗಳ ಮೆಲುಕು ಹಾಕುತ್ತಾ ಇರಲೂ ಬಹುದು. ಸಂತೋಷದಲ್ಲಿ ಕುಣಿದು ಕುಪ್ಪಳಿಸುವ ಆನಂದದ ಬದುಕಲ್ಲಿ ಮೆರೆದಾಡುತ್ತಾ ಇರಲೂ ಬಹುದು.

            ಕಾಲ ನಿಲ್ಲದು, ಓಡುತ್ತಲೇ ಇರುತ್ತದೆ. ಪ್ರತಿ ಕ್ಷಣವೂ ಬದಲಾಗುತ್ತಲೇ ಇರುವ ದೇಹ, ಮನಸ್ಸು, ಪ್ರಕೃತಿ, ಆಲೋಚನೆಗಳು. ಆದರೆ ದಿಕ್ಕುಗಳು ಬದಲಾವಣೆ ಆಗದು. ಭೂಮಿ ಚಲಿಸುತ್ತಲೇ ಇದ್ದರೂ, ಋತು, ಹಗಲು ಇರುಳು ಬದಲಾಗುತ್ತಲೇ ಇದ್ದರೂ ಅದು ಸೂರ್ಯನನ್ನು ಬಿಟ್ಟು ಇನ್ನೊಂದು ನಕ್ಷತ್ರದ ಸುತ್ತ ಸುತ್ತಲು ಆಗದು, ಹೋಗದು. ಇದಂತೂ ಜಗತ್ತಿನ ಸತ್ಯ. ಹಾಗೆಯೇ ಸೂರ್ಯ ಕೂಡಾ. ತನ್ನ ಸುತ್ತ ಸಾವಿರ ಗ್ರಹಗಳು ಸುತ್ತುತ್ತಲೇ ಇದ್ದರೂ ಗಾಳಿ, ಬೆಳಕು, ನೀರು, ಹಸಿರು ಕೊಟ್ಟು ಕಾಪಿಟ್ಟದ್ದು ವರವಿತ್ತುದು ಧರೆಗೆ ಮಾತ್ರ. ಇನ್ನೊಂದು ಗ್ರಹ ಹಾಗೆ ಇರಲಾರದು. ಧರೆಯನ್ನು ನೋಡಲೆಂದೇ ಪ್ರತಿ ನಿತ್ಯ ರವಿ ಬೆಳಗೆದ್ದು ಬರುತ್ತಾನೆ. ಒಂದೇ ಒಂದು ಕಾರಣ. ತನಗಾಗಿ ಅಲ್ಲ, ಇಳೆಗಾಗಿ. ಧರಣಿಯ ಆರೋಗ್ಯಕರ ಸೌಂದರ್ಯ ಉಳಿಸಲಿಕ್ಕಾಗಿ. ಹಕ್ಕಿಗಳ ಚಿಲಿಪಿಲಿ, ಇಬ್ಬನಿಯ ಬಿಂದುಗಳ ಬೆಳಕಿನಾಟ, ಹನಿಗಳ ಉದುರುವಿಕೆಯ ತಂಪು ಇವುಗಳನ್ನು ನೋಡಲು ಸಿಗುವುದು ಆ ಸೂರ್ಯ ದೇವರ ತರಹ ಬಂದಾಗಲೇ ಅಲ್ಲವೇ. ಭಾನು ಇಲ್ಲದೆ ಇಳೆ ಇಹಳೆ? ಸದಾ ಇಳೆ ಕಾಯುವುದು, ಸುತ್ತುವುದು, ಹಗಲು ರಾತ್ರಿಗೆ, ತನ್ನ ಹಸಿರ ಸೊಬಗಿನ ಮೈಸಿರಿಗೆ ಆಕೆ ಆಧರಿಸಿರುವುದು ಸೂರ್ಯನನ್ನೇ. ಅದು ಆ ಆದಿತ್ಯನಿಗೂ ತಿಳಿದ ಕಾರಣ ಪ್ರತಿ ಮುಂಜಾನೆ ಬಂದು ಇಣುಕಿ ಬಿಡುತ್ತಾನೆ. ವರ್ಷಾನು ವರ್ಷದಿಂದಲೂ ಸೂರ್ಯ ಹಾಗೂ ವಸುದೆಯರ ಜತೆ ತಿರುಗಾಟ ನಿಂತಿಲ್ಲ. ನಿಂತರೆ ಇಳೆ ಇರಲಾರಳು. ಅಂದೇ ಹಸಿರಿನ, ಜೀವ ಜಗತ್ತಿನ ಕೊನೆ. ಪ್ರಪಂಚದ ಪ್ರಳಯ. ಇದು ಅಸಾಧ್ಯ. ಏಕೆಂದರೆ ನಾರಾಯಣನ ಲೆಕ್ಕಾಚಾರ ಬೇರೆಯೇ ಇದೆ. ಹತ್ತವತಾರಗಳನ್ನು ಎತ್ತಿ ಇನ್ನೊಂದು ಹೊಸ ಅವತಾರ ಎತ್ತಿ ಬರಲು ಕಾಯುತ್ತಿರುವ ಅವನು ಭೂಮಿಯನ್ನು ತಾ ಬರುವ ಮೊದಲು ಅಥವಾ ಬಂದು ಸ್ವಚ್ಚ ಗೊಳಿಸಬೇಕಿದೆ. ಈ ಸುತ್ತಾಟದ ಬದುಕಿನಲ್ಲಿ ಯಾರ ಸುತ್ತ ಯಾರು ಸುತ್ತಬೇಕೋ ಅವರೇ ಸುತ್ತಬೇಕು, ಪರರು ಸುತ್ತಿದರೂ, ಪರರ ಹಿಂದೆ ಇವರು ಸುತ್ತಿದರೂ ಬದುಕಿನ ಲೆಕ್ಕಾಚಾರವೇ ಬೇರೆಯಾಗಿ ಹೋಗುತ್ತದೆ. ಭೂಮಿಯು ರವಿಯ ಸುತ್ತ, ಚಂದಿರ ಭೂಮಿಯ ಸುತ್ತ!
         ಬದುಕೇ ಹಾಗೆ. ಅಲ್ಲೊಂದು ಸಿಸ್ಟಂ ಇದೆ. ಅದನ್ನು ಪಾಲಿಸಬೇಕು. ತನಗಾಗಿ ಅಲ್ಲ, ಈ ಸಮಾಜಕ್ಕಾಗಿ ಬದುಕಬೇಕು. ಸಮಾಜ ಎಂದರೆ ನಾವೇ, ಆದರೆ ಸಮಾಜ ಸರಿ ಇಲ್ಲ ಎನ್ನುತ್ತೇವೆ. ಮನುಷ್ಯನನ್ನು ಹೊರತುಪಡಿಸಿ ಇತರ ಎಲ್ಲಾ ಜೀವಿ, ನಿರ್ಜೀವಿಗಳು ಸರಿ ಇರುವಾಗ ತನಗೆ ತಾನು ಸರಿ ಇಲ್ಲ ಎಂದು ತಿಳಿದೂ ಕೂಡ ಮನುಷ್ಯ ತಪ್ಪೇ ಮಾಡುತ್ತಾ ಬದುಕುತ್ತಾ ಇದ್ದಾನೆ. ತನ್ನ ಕಾಲಿಗೆ ತಾನೇ ಕೊಡಲಿ ಏಟು ಹಾಕಿ ಕೊಳ್ಳುತ್ತಾ ಇದ್ದೇನೆ ಎಂದು ಅರಿತರೂ ಕೂಡಾ ಇಂದೇ ಸಾಯಲಿಕ್ಕಿಲ್ಲ, ಮೆಲ್ಲ ಪೆಟ್ಟು ಕೊಟ್ಟುಕೊಳ್ಳುತ್ತೀನೆ ಅಂತ ತಾನು ನೋವು ಭರಿಸುತ್ತಲೇ ಇರುತ್ತಾನೆ. ಅದು ಇತರರಿಗಾಗಿ ಎಂದು ಅರಿತರೂ, ಅದು ತನ್ನ ಜವಾಬ್ದಾರಿ ಎಂಬಂತೆ ಹಣ, ಧನ, ಸಂಪತ್ತು, ಆಸ್ತಿ ತುಂಬಿಡುತ್ತಾ ತನ್ನ ಬದುಕಿನ ಕಾಯಕ ಅದೇ ಎನ್ನುತ್ತಾ ತಾನು ಸರಿಯಾಗಿ ಬೇಕಾದ್ದನ್ನು ತಿನ್ನುವುದನ್ನು ಕೂಡ ಮರೆತು ಬೇಡದ ರುಚಿಕರ ವಸ್ತುವಿನ ಹಿಂದೆ ಅದು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದರೂ ಕೂಡ ಖುಷಿಗಾಗಿ ರುಚಿಗಾಗಿ ಓಡುತ್ತಾ ಇರುತ್ತಾನೆ.
   ಎಲ್ಲವನ್ನೂ ಇಲ್ಲೇ, ಯಾರಿಗಾಗಿಯೋ ಬಿಟ್ಟು ಕೊನೆಗೆ ಒಂದು ದಿನ ಕೋಪ, ರೋಷ, ದ್ವೇಷ, ಜಗಳ, ಪ್ರೀತಿ, ಮೋಹ ಎಲ್ಲದಕ್ಕೂ ಪೂರ್ಣ ವಿರಾಮ ಹಾಕಿ ತನಗೆ ಗೊತ್ತಿಲ್ಲದ ದಾರಿಯಲ್ಲಿ ಒಂಟಿಯಾಗಿ ಬಂದ ಹಾಗೆಯೇ ಆತ್ಮಕ್ಕೆ ಮೋಕ್ಷ, ಚಿರ ಶಾಂತಿ ಹುಡುಕುತ್ತಾ ನಡೆದು ಬಿಡುತ್ತಾನೆ. ಕೆಲವರು ಮತ್ತೆ ಖುಷಿ ಪಟ್ಟರೆ ಇನ್ನು ಕೆಲವರು ದುಃಖ. ಒಟ್ಟಿನಲ್ಲಿ ಸುತ್ತುವ ಕಾರ್ಯ ಇಲ್ಲಿ ದೇಹದ ಜೊತೆಗೆ ಮುಗಿದಿರುತ್ತದೆ. ಮುಂದಿನ ಹಿಂದಿನ ಬದುಕಿನ ಯಾವ ಅಧ್ಯಾಯವೂ ನೆನಪಿನಲ್ಲಿ ಇರುವುದಿಲ್ಲ.


  ಸಾಧನೆಯ ಹಿಂದೆ ಹೋದವನು, ಕಟುಕನೂ, ಬಡವನೂ , ಧನಿಕನೂ, ಮಹರ್ಷಿಯೂ,  ಮಾನವಂತನೂ, ಹೀನನೂ, ಮೂರ್ಖನೂ ಪಂಡಿತನೂ,ಸಾಧಿಸಿ ಗೆದ್ದವ, ಸೋತವ , ಸಾಧನೆ ಮಾಡದವ, ಕುಡಿದ ಮತ್ತಿನಲ್ಲಿ ತೇಲಾಡಿದವ, ಸೋತವ, ದೈವಾಂಶ ಶಂಭೂತ ಎಲ್ಲರದ್ದೂ ಇದೇ ಕಥೆ.
       ಇಲ್ಲಿ ಇದ್ದಷ್ಟು ದಿನ ಬದುಕುವುದು ಕೇವಲ ಆರೋಗ್ಯ, ನೆಮ್ಮದಿ, ಪರಿಶುದ್ಧ ಪ್ರೀತಿಗಾಗಿ. ಇವಿಷ್ಟಕ್ಕೆ ಮನುಷ್ಯ ಅದೆಷ್ಟು ಕಷ್ಟ ಪಡುತ್ತಾನೆ, ಅದೆಷ್ಟು ಸಾಧನೆ, ರೋಗ, ದ್ವೇಷ, ಜಗಳ, ಕದನ, ಆಟ ಓಟ! ಅಬ್ಬಾ ಮನಸ್ಸುಗಳನ್ನು ಅರಿಯುವುದು ಮತ್ತು ಅದರ ನಡುವೆ ಬದುಕುವ ಕಾರ್ಯ ಏಳು ಸುತ್ತಿನ ಕೋಟೆಯ ಒಳಗೆ ಎಲ್ಲರ ಕಣ್ಣು ತಪ್ಪಿಸಿ ನುಗ್ಗುವಷ್ಟು ಕಷ್ಟ. ಬೆರೆತು ಬಾಳುವುದು ಸ್ವರ್ಗ ಸುಖ ಅಂತಾರೆ. ಆ ಮನಸ್ಸುಗಳು ಬೆರೆಯುವ ಕಾರ್ಯ ಅದೆಷ್ಟು ಕಷ್ಟ ಅಲ್ಲವೇ? ಮನದ ಮೂಲೆಯಲ್ಲಿ ಸೇಡು, ದ್ವೇಷ, ಮೋಸ, ರೋಷ, ಹಗೆತನದ ಒಂದು ಸಣ್ಣ ಬೂದಿ, ಹೊಗೆ , ಕಿಡಿ ಇದ್ದರೂ ಸಾಕು. ಅದು ಬದುಕನ್ನು ನಾಶ ಮಾಡಿ ಬಿಡುತ್ತದೆ.
  ಕೆಲವೊಮ್ಮೆ ಮೇಲೇರುತ್ತಾ ಹೋದವ ತನಗೆ ಗೊತ್ತಿಲ್ಲದ ಹಾಗೆ ಏರುತ್ತಲೇ ಹೋಗುತ್ತಾನೆ. ಕಾಲದ ಮಹಿಮೆ. ತಾನು, ತನ್ನದು ಅಂತ ಏನೂ ಇಲ್ಲ, ನಾವು ಕೂಡಿ ಇಟ್ಟದ್ದು, ದುಡಿದದ್ದು, ಬೆಳೆಸಿದ್ದು ಇವು ಯಾವುವೂ ನಮ್ಮವಲ್ಲ. ನಮ್ಮದು ಅಂತ ಸ್ವಂತವಾಗಿ ಉಳಿಯುವುದು ಉಸಿರು ಒಂದೇ. ಆದರೆ ಆ ಉಸಿರು ಇರುವವರೆಗೂ ಒಂಟಿ ಹೋರಾಟ.
  ಕೊನೆ ಕ್ಷಣಗಳು ಕ್ಷಣ ಕ್ಷಣಕ್ಕೂ ಹತ್ತಿರವಾಗುತ್ತಿವೆ. ಹೊರಡಲು ಸ್ವಲ್ಪ ಸ್ವಲ್ಪ ತಯಾರಿ ಮಾಡಿಕೊಳ್ಳ ಬೇಕಿದೆ. ಸ್ವಲ್ಪ ಕೋಪ, ಸ್ವಲ್ಪ ದ್ವೇಷ ಇಟ್ಟುಕೊಂಡರೂ ಸ್ವರ್ಗದ ಬಾಗಿಲು ತಟ್ಟಲು ಆಗದು. ಏಕೆಂದರೆ ಮೆಲೊಬ್ಬ ಇರುವನಲ್ಲ, ಎಲ್ಲವನ್ನೂ ನೋಡಲು, ಮತ್ತೆಲ್ಲವನ್ನೂ ಲೆಕ್ಕಾಚಾರ ಮಾಡಿ ಬರೆದು ಇಡಲು!

ಗೆದ್ದರೂ ಸೋತರೂ ಜನ ತಲೆ ಬಾಗಲೆ ಬೇಕು. ಇಲ್ಲದೆ ಹೋದರೆ ಪದಕ ಹಾಕಲು ಆಗದು. ಸೋತವರು ಮತ್ತೆ ಮತ್ತೆ ಪ್ರಯತ್ನಿಸಿ ವಿಜಯಿಗಳಾಗಬೇಕು. ಪ್ರಯತ್ನದಲ್ಲಿ ಕೂಡಾ ಸೋತರೆ? ದೇವರನ್ನೇ ಕೇಳಬೇಕು ಅಲ್ಲವೇ? ಎಲ್ಲಾ ಆದ ಬಳಿಕ ಕೊನೆಗೆ ಶಿವನ ಪಾದವೇ ಗತಿ. ಇದೇ ಬದುಕು. ನೀ ಉತ್ತಮವಾಗಿ ಬದುಕು.ನೀವೇನಂತೀರಿ?



ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.


Leave a Reply

Back To Top