ವಚನ ಸಂಗಾತಿ
ಹೇಮಗಲ್ಲ ಹಂಪ ರ ವಚನ
ಪ್ರೊ. ಜಿ ಎ ತಿಗಡಿ.
ಚ್ಚಲ ಕಚ್ಚಿದ ಉಣ್ಣೆ
ನಿಚ್ಚಾಮೃತದ ಸವಿಯನೆತ್ತಬಲ್ಲುದಯ್ಯಾ?
ಪಾಯಸದೊಳಿಹ ಸಟ್ಟುಗ ರುಚಿಯಬಲ್ಲುದೆ?
ಸರ್ವವ ಮುಟ್ಟಿ ಮೂಸುವ
ಮಕ್ಷಿಕ ಶುಚಿಯ ಬಲ್ಲುದೇನಯ್ಯಾ?
ಸಂಸಾರದೋಷ ದುಸ್ಸಂಗ ದುಶ್ಚರಿತ್ರದೊಳಿಪ್ಪ ಮಾನವರು
ಶಿವಜ್ಞಾನಾಮೃತದ ಸವಿಯನೆತ್ತ ಬಲ್ಲರಯ್ಯಾ? ಉಣ್ಣೆಯಂತೆ.
ಹುಗ್ಗಿಯೊಳಿಹ ಹುಟ್ಟು ತೊಳಸಬಲ್ಲುದಲ್ಲದೆ
ಸವಿಯ ಬಲ್ಲುದೇನಯ್ಯಾ?
ವೇದಾಗಮವನೋದಿದ ಮಾನವರೆಲ್ಲ
ಸಂಸಾರಬಂಧನವ ಕಳೆಯಬಲ್ಲರೇನಯ್ಯಾ?
ಮನಮಕ್ಷಿಕ ಸರ್ವದುಚ್ಚಿಷ್ಠವ ಮುಟ್ಟಿ ಮುಟ್ಟಿ
ಹಲವು ಕಡೆಗೆ ಹಾರುತಿರಲು,
ಮಹದರುವನೆತ್ತ ಬಲ್ಲುದಯ್ಯಾ!
ಪರಮಗುರು ಪಡುವಿಡಿ ಸಿದ್ದಮಲ್ಲಿನಾಥಪ್ರಭುವೆ.
********
ಆಕಳ ಕೆಚ್ಚಲನ್ನು ಕಚ್ಚಿ ಕುಳಿತ ಉಣ್ಣಿಗೆ ರಕ್ತ ಹೀರಿ ಹೊಟ್ಟೆಯ ಹಸಿವನ್ನು ಹಿಂಗಿಸಿಕೊಳ್ಳುವುದೊಂದೇ ಗೊತ್ತು. ಆದರೆ ತನ್ನ ಪಕ್ಕದಲ್ಲಿಯೇ ಇರುವ ಅಮೃತ ಸಮಾನವಾದ ಹಾಲಿನ ಸವಿಯನ್ನು ಅದೆಂದೂ ಅನುಭವಿಸಲಿಲ್ಲ. ಪಾಯಸದಲ್ಲಿರುವ ಸೌಟು ಅದರ ರುಚಿಯನ್ನು ಅರಿಯಬಲ್ಲುದೇ ? ಸುತ್ತಮುತ್ತಲಿನ ಎಲ್ಲ ವಸ್ತುಗಳನ್ನು ಮುಟ್ಟಿಮೂಸುವ ನೊಣಕ್ಕೆ ಶುಚಿತ್ವದ ಅರಿವಿದೆಯೇ? ಹಾಗೆಯೇ ಈ ಸಾಂಸಾರಿಕ ಜೀವನದ ದೋಷಗಳನ್ನು ಅಂಟಿಸಿಕೊಂಡು ದುಷ್ಟರ ಸಹವಾಸದಲ್ಲಿರುತ್ತ, ಕೆಟ್ಟ ಕೆಲಸ ಕಾರ್ಯಗಳಲ್ಲಿ ಮಗ್ನರಾದವರಿಗೆ ಶಿವಜ್ಞಾನಾಮೃತದ ಸವಿಯ ಅರಿವು ಮೂಡೀತೆ? ಹುಗ್ಗಿಯ ಪಾತ್ರೆಯಲ್ಲಿ ಮೇಲೆ ಕೆಳಗೆ ತಿರುವುತ್ತಾ ಹುಗ್ಗಿಯಲ್ಲಿ ಸುತ್ತುತ್ತಿರುವ ಹುಟ್ಟು, ಹುಗ್ಗಿಯ ಸವಿಯನ್ನೆoದಿಗಾದರೂ ಅರಿತಿದೆಯೇ? ವೇದಾಗಮಗಳನ್ನು ಓದಿದ ಮಾತ್ರಕ್ಕೆ ಮಾನವರೆಲ್ಲರೂ ಸಂಸಾರ ಬಂಧನದಿಂದ ಮುಕ್ತರಾಗಬಲ್ಲರೇ? ಎಂದು ಪ್ರಶ್ನಿಸುತ್ತಾರೆ. ಲೋಕದ ಸಕಲ ಎಂಜಲನ್ನು, ಹೊಲಸನ್ನು ಮುಟ್ಟಿ ಮುಟ್ಟಿ ಅತ್ತಿತ್ತ ಹಾರುತ್ತಿರುವ ಮನವೆಂಬ ನೊಣಕ್ಕೆ ಮಹತ್ತಾದ ಘನ ಅರಿವನ್ನು ಅರಿಯಲಾದೀತೇ? ಎಂದು ತಮ್ಮ ಆರಾಧ್ಯ ದೈವ ಪರಮಗುರು ಪಡುವಿಡಿ ಸಿದ್ದಮಲ್ಲಿನಾಥನಲ್ಲಿ ಕೇಳುತ್ತಾರೆ.
ಪ್ರಸ್ತುತ ವಚನದಲ್ಲಿ ಹೇಮಗಲ್ಲ ಹಂಪ ಶರಣರು ಶಿವಜ್ಞಾನಾಮೃತವನ್ನು ಸವಿಯುವ ಬಗೆ, ಹಾಗೂ ಸಂಸಾರ ಬಂಧನವನ್ನು ಕಳಚಿಕೊಳ್ಳುವ ರೀತಿ ಹಾಗೂ ಪರಮ ಪರಾಶಕ್ತಿಯ ಘನ ಅರಿವಿನ ಬೆಳಗಿನಲ್ಲಿ ಒಂದಾಗುವ ರೀತಿಗಳನ್ನು ವಿವರಿಸಿದ್ದಾರೆ. ಇದನ್ನು ಮನಗಾಣಿಸಲು ನಮ್ಮ ನಿತ್ಯದ ಬದುಕಿನಲ್ಲಿ ನಡೆಯುವ ಕೆಲ ಘಟನೆಗಳನ್ನು ಪೂರಕವಾಗಿ ಪ್ರಸ್ತಾಪಿಸಿದ್ದಾರೆ.
ಆಕಳ ಕೆಚ್ಚಲಿನಲ್ಲಿ ಕಚ್ಚಿ ಕುಳಿತ ಉಣ್ಣೆಗೆ ರಕ್ತ ಹೀರುವುದೊಂದೇ ಗೊತ್ತು. ಆದರೆ ತಾನಿದ್ದಲ್ಲಿಯೇ ಆ ರಕ್ತದ ಜೊತೆಗೆ ಅಮೃತ ಸಮಾನವಾದ ಕ್ಷೀರವಿದೆಯೆಂಬ ಅರಿವು ಅದಕ್ಕಿಲ್ಲ. ನಾಲಿಗೆಯ ಚಪಲಕ್ಕೆ ದಾಸನಾಗಿ ಕ್ಷಣಿಕ ಹಸಿವನ್ನು ಹಿಂಗಿಸುವ ದಂದುಗದಲ್ಲಿ ಅದು ಮುಳುಗಿಬಿಡುತ್ತದೆ. ಇನ್ನು ಪಾಯಸದಲ್ಲಿರುವ ಸೌಟು ಮತ್ತು ಹುಗ್ಗಿಯಲ್ಲಿರುವ ಹುಟ್ಟುಗಳೆರಡೂ ರುಚಿಯಾದ, ಸವಿಯಾದ ಪಾಯಸದ ಮಧ್ಯದಲ್ಲಿದ್ದರೂ ಅದರ ರುಚಿಯ-ಸವಿಯ ಅನುಭವವೇ ಅವುಗಳಿಗಿಲ್ಲ. ಪಾಯಸದ ಪಾತ್ರೆಯಲ್ಲಿ ನಿರಂತರವಾಗಿ ಮೇಲೆ ಕೆಳಗೆ ಸುತ್ತುವುದೊಂದೇ ಗೊತ್ತು. ಇದನ್ನು ನೋಡಿದಾಗ, “ನೀರೊಳಗಿರ್ದು ಅಸಗ ನೀರಡಿಸಿ ಸತ್ತಂತೆ ” ಎಂಬ ಅಕ್ಕನ ನುಡಿ ನೆನಪಾಗುತ್ತದೆ. ತಮ್ಮ ಸುತ್ತಲೂ ಭಗವಂತನ ಇರುವಿಕೆಯಿರುವುದನ್ನು ಮರೆತು ನಾವು ಕೂಡ ಹುಟ್ಟು, ಸೌಟುಗಳಂತೆ ಕ್ಷಣಿಕ ಸುಖಕ್ಕಾಗಿ ಎಲ್ಲೆಂದರಲ್ಲಿ ಅಲೆಯುತ್ತಿದ್ದೇವೆ. ಎಲ್ಲೆಡೆಗೆ ಹಾರಾಡುತ್ತಾ ಹೊಲಸು ಎಂಜಲು ಪದಾರ್ಥಗಳ ಮೇಲೆ ಕುಳಿತು ಮುಟ್ಟಿ ಮುಟ್ಟಿ ನೋಡುವ ನೊಣಗಳ ರೀತಿಯಲ್ಲಿ ಶುಚಿತ್ವವನ್ನರಿಯದೆ ಬದುಕುತ್ತಿದ್ದೇವೆ. ನಮ್ಮ ಬದುಕಿನ ರೀತಿಯು, ಆಕಳ ಕೆಚ್ಚಲಲ್ಲಿದ್ದರೂ ಅಮೃತ ಸಮಾನವಾದ ಹಾಲನ್ನು ಬಯಸದೆ ರಕ್ತಕ್ಕೆಳಸುವ ಉಣ್ಣೆಯಂತೆ, ಪಾಯಸದ ಪಾತ್ರೆಯಲ್ಲಿದ್ದು ಮೈತುಂಬ ಪಾಯಸವನ್ನು ಅಂಟಿಸಿಕೊಂಡು ತಿರುಗುತ್ತಿದ್ದರೂ ಸವಿಯನ್ನು ಅನುಭವಿಸದ ಹುಟ್ಟು , ಸೌಟುಗಳಂತಾಗಿದೆ.
ಲೌಕಿಕವಾದ ಸಾಂಸಾರಿಕ ತಾಪತ್ರಯಗಳಲ್ಲಿ ಸಿಲುಕಿ, ದುಷ್ಟರ ಸಂಗದಲ್ಲಿದ್ದು, ಅರಿಷಡ್ವರ್ಗಗಳ ಅಡಿಯಾಳಾಗಿ, ದುಷ್ಟ ವ್ಯಸನಗಳ ದಾಸರಾಗಿ ಬಿಟ್ಟಿದ್ದೇವೆ. ಕ್ಷಣಿಕ ದೈಹಿಕ ಸುಖಕ್ಕಾಗಿ ಮಾಡಬಾರದ ಕುಕಾರ್ಯಗಳನ್ನು ಮಾಡುತ್ತಿದ್ದೇವೆ. ಮನವೆಂಬ ನೊಣವು ಲೋಕದ ಸಕಲ ಕ್ಷುಲ್ಲಕ ಸುಖಗಳಿಗಾಗಿ ಹಾತೊರೆಯುತ್ತಾ, ಹಾರುತ್ತಾ ಸುಖದ ವಾಂಛೆಯನ್ನು ಜೀವಂತವಾಗಿಟ್ಟು ತಿರುಗಾಡ ತೊಡಗುತ್ತದೆ. ಇಂಥವರಿಗೆ ಶಿವ ಜ್ಞಾನಾಮೃತದ ಸವಿ ರುಚಿಸಬಹುದೇ ? ಎಂದು ಪ್ರಶ್ನಿಸುತ್ತಾರೆ. ಇನ್ನು ಕೆಲವರು ವೇದಾಗಮಾದಿ ಶಾಸ್ತ್ರ- ಪುರಾಣಗಳ ಬೆಂಬತ್ತಿ ಹೋದರೂ ಸಂಸಾರ ಬಂಧನದಿಂದ ಮುಕ್ತರಾಗಲು ಸಾಧ್ಯವಾಗಲೇ ಇಲ್ಲ.
ವಸ್ತು ಸ್ಥಿತಿ ಹೀಗಿರುವಾಗ ಶಿವನಾಮ, ಶಿವಜ್ಞಾನವನ್ನು ಅರಿಯಲು ಇವರಿಗೆ ಸಮಯವಾದರೂ ಎಲ್ಲಿದೆ ? ಮನವೆಂಬ ಮಕ್ಷಿಕ, ಅರಿವೆಂಬ ಗುರುದೇವನತ್ತ ಹೊರಟಾಗ ಮಾತ್ರ ‘ ಮಹದರಿವಿನ ‘ ಫಲ ದೊರಕಲು ಸಾಧ್ಯ. ಕಾರಣ ಲೌಕಿಕ ಜೀವನದ ಸಂಸಾರಿಕ ವಾಂಛೆಗಳಿಂದ, ಆಸೆ ಆಮಿಷಗಳಿಂದ ದೂರಾಗಬೇಕು. ಅಂತರಂಗದ ಅರಿವೆಂಬ ಮಹಾಘನ ಸತ್ಯವನ್ನು ಅರಿತುಕೊಂಡು, ‘ನಾನ ‘ ತ್ವವನ್ನು ಕಳಚಿಕೊಂಡು ಆ ಬೆಳಗಿನಲ್ಲಿ ಬೆಳಗಾಗಬೇಕು, ಬಯಲಲ್ಲಿ ಬಯಲಾಗಬೇಕು.
————————————————–
ಪ್ರೊ. ಜಿ ಎ ತಿಗಡಿ.