ವಿಜಯ್ ತೆಂಡೂಲ್ಕರ್ ಅವರ “ಕನ್ಯಾದಾನ” ನಾಟಕದ ವಿಮರ್ಶೆ-ಜಿ. ಹರೀಶ್ ಬೇದ್ರೆ

ರಂಗ ಸಂಗಾತಿ

ವಿಜಯ್ ತೆಂಡೂಲ್ಕರ್

ಕನ್ಯಾದಾನ

ಜಿ. ಹರೀಶ್ ಬೇದ್ರೆ

ಮರಾಠಿ ನಾಟಕ ರಂಗದ ದಿಗ್ಗಜ, ಭಾರತ ಕಂಡ ಶ್ರೇಷ್ಠ ರಾಜಕೀಯ ವಿಶ್ಲೇಷಕ, ಚಿಂತಕ, ಸಾಹಿತಿ ವಿಜಯ್ ತೆಂಡೂಲ್ಕರ್ ಅಂದರೆ ಯಾವ ಸಾಹಿತ್ಯಾಸಕ್ತನಿಗೆ ಗೊತ್ತಿಲ್ಲ ಹೇಳಿ. ಇಂತಹ ಮಹಾನ್ ನಾಟಕಕರರಿಂದ 1983 ರಲ್ಲಿ ಮೂಡಿಬಂದ “ಕನ್ಯಾದಾನ” ಎನ್ನುವ ನಾಟಕವನ್ನು ಶಿವಮೊಗ್ಗದ ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲರಾದ ನಾಗಭೂಷಣರವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ನಾಟಕವು ಸಮಾಜವಾದ, ಸಮಾನತೆ, ದಲಿತಪರ ಹೋರಾಟ, ಅಂತರ್ಜಾತೀಯ ವಿವಾಹದಂತ ಸಂಕೀರ್ಣ ವಿಷಯವನ್ನು ಹೊಂದಿದೆ.

ಇಂತಹ ಸಂಕೀರ್ಣ ವಿಷಯವಿರುವ ನಾಟಕವನ್ನು ಯಾವುದೇ ವಿವಾದಕ್ಕೆ ಆಸ್ಪದ ಇರದಂತೆ ರಂಗದ ಮೇಲೆ ತರುವುದು ಸವಾಲಿನ ಕೆಲಸವೇ ಸರಿ. ಆದರೆ ಈ ಸವಾಲನ್ನು ಅತ್ಯಂತ ಯಶಸ್ವಿಯಾಗಿ ಈ ನಾಟಕದ ನಿರ್ದೇಶಕ ಹಾಲಸ್ವಾಮಿಯವರು ತಮ್ಮ ಸಹ್ಯಾದ್ರಿ ರಂಗ ತರಂಗ (ರಿ) ತಂಡದವರಿಂದ ಪ್ರಸ್ತುತಿ ಪಡಿಸಿ ಗೆದ್ದಿದ್ದಾರೆ. ಅಲ್ಲದೇ ಇದರ ಮೂಲಕ ಹಲವು ಹೊಸ ಪ್ರಯೋಗಕ್ಕೂ ನಾಂದಿ ಹಾಡಿದ್ದಾರೆ.

ಅದೊಂದು ಮೇಲ್ವರ್ಗದ ಪುಟ್ಟ ಕುಟುಂಬ. ಗಂಡ ಹೆಂಡತಿ ಹಾಗೂ ವಯಸ್ಸಿಗೆ ಬಂದ ಮಗ ಮತ್ತು ಮಗಳಿರುವ ಕುಟುಂಬ. ತಂದೆ, ಸಮಾಜವಾದ, ಸಮಾನತೆ ಎಂಬ ಆದರ್ಶ ಇಟ್ಟುಕೊಂಡು ದಲಿತಪರ ಹೋರಾಟ, ಅಂತರ್ಜಾತೀಯ ವಿವಾಹಗಳಿಗೆ ಪ್ರೋತ್ಸಾಹ ನೀಡುತ್ತಿರುವ ವ್ಯಕ್ತಿ. ತಾಯಿ, ಗೃಹಿಣಿಯಾಗಿದ್ದು ತನ್ನ ಆಸಕ್ತಿ ಇರುವ ಕೆಲಸಗಳಲ್ಲಿ ತೊಡಗಿಸಿಕೊಂಡಾಕೆ. ಇವರ ವಯಸ್ಸಿಗೆ ಬಂದ ಮಗಳು ಜಾಡಮಾಲಿಯ ಮಗನನ್ನು ಪ್ರೀತಿಸುತ್ತಾಳೆ. ಅವನು ಅದು ಇದು ಬರೆಯುತ್ತಾನೆ ಎನ್ನುವುದರ ಹೊರತಾಗಿ ಬೇರೇನೂ ಕೆಲಸ ಮಾಡುವುದಿರಲಿ ಪೂರ್ತಿ ಓದನ್ನು ಮುಗಿಸಿರುವುದಿಲ್ಲ. ವಯೋ ಸಹಜವಾಗಿ ಇವನ ಪ್ರೀತಿಗೆ ಬಿದ್ದ ಮಗಳು ಮನೆಯಲ್ಲಿ ತಿಳಿಸಿದಾಗ, ಸಹಜವಾಗಿ ತಾಯಿ ಮಗಳಿಗೆ ಬುದ್ಧಿ ಹೇಳಿ ತಿದ್ದಲು ಪ್ರಯತ್ನಿಸಿದರೆ, ಆದರ್ಶದ ಕನಸು ಹೊತ್ತಿದ್ದ ತಂದೆ, ಹಿಂದೆ ಮುಂದೆ ಯೋಚಿಸದೆ ಅವಳ ಬೆಂಬಲಕ್ಕೆ ನಿಲ್ಲುತ್ತಾನೆ.

ಮದುವೆಯೂ ಆಗುತ್ತದೆ, ಮದುವೆಯಾದ ಕೆಲವೇ ದಿನಗಳಲ್ಲಿ ಮಗಳಿಗೆ ನಿಜ ಪ್ರಪಂಚದ ಅರಿವಾಗುತ್ತದೆ. ತಂದೆಯ ಆದರ್ಶದಿಂರ ಪ್ರೇರಿತಳಾಗಿದ್ದ ಅವಳಿಗೆ ತಂದೆಯ ಮೇಲೆ ಸಿಟ್ಟು ಬರುತ್ತದೆ. ದಿನನಿತ್ಯ ಕುಡಿದು ಬಂದು ದನಕ್ಕೆ ಬಡಿದಂತೆ ಬಡಿಯುವುದು, ಬಾಯಿಗೆ ಬಂದಂತೆ ಬೈಯುವುದೇ ಬದುಕು, ಪ್ರೀತಿ ಎಂದುಕೊಂಡ ಗಂಡನಿಂದ ಜರ್ಜರಿತಳಾದಗಲೇ ಅವನ ಮಗುವಿಗೆ ತಾಯಿ ಆಗುವಂತೆ ಆಗುತ್ತದೆ. ಕನಸುಗಳೆಲ್ಲಾ ಕರಗಿ ವಾಸ್ತವಕ್ಕೆ ಬಂದವಳಿಗೆ ಗಂಡನ ಮನೆಯಲ್ಲಿ ಇರಲು, ತಂದೆಯ ಮನೆಗೆ ಹೋಗಲು ಆಗದಂತ ಪರಿಸ್ಥಿತಿ.

ವಿಷಯ ತಿಳಿದ ತಾಯಿ, ಹೊರಗಿನಿಂದ ಎಲ್ಲಾ ಸಹಾಯ ಮಾಡಿ ಮನೆಗೆ ಕರೆದರೂ ಮಗಳು ಬರುವುದಿಲ್ಲ ಎನ್ನುತ್ತಾಳೆ. ತಂದೆಗೂ ವಿಷಯ ತಿಳಿದು, ತನ್ನ ಆದರ್ಶ ಪೊಳ್ಳು ಎನ್ನುವುದು ಅರಿವಾಗಿ, ಮಗಳ ಬದುಕು ಕೈಯಾರೆ ಹಾಳು ಮಾಡಿದೆ, ಅದನ್ನು ಹೇಗಾದರೂ ಸರಿ ಮಾಡಬೇಕು ಎಂದು ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಾನೆ.

ಮಗಳು ಮನೆಗೆ ಬಂದಳ, ಅವಳ ಬದುಕು ಸರಿಯಾಯಿತೆ, ಮುಂತಾದ ಮುಖ್ಯ ಪ್ರಶ್ನೆಗಳಿಗೆ ಉತ್ತರ ರಂಗದ ಮೇಲೆಯೇ ನೋಡಿ ತಿಳಿಯಬೇಕು.

ನಾಟಕದ ಮೊದಲ ಎರಡು ಪ್ರದರ್ಶನಗಳು ಇತ್ತೀಚೆಗೆ ಶಿವಮೊಗ್ಗದ ಡಿ.ವಿ.ಎಸ್. ರಂಗಮಂದಿರದಲ್ಲಿ ಅದೂ ನಾಟಕ ಆಸಕ್ತ ಆಹ್ವಾನಿತ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಿತು. ನಾಟಕದ ವೇದಿಕೆಗೂ ಪ್ರೇಕ್ಷಕರ ನಡುವೆ ಇದ್ದ ಅಂತರ ಕೇವಲ ಎರಡರಿಂದ ಮೂರು ಅಡಿಗಳು ಮಾತ್ರ. ಅಲ್ಲದೇ, ವೇದಿಕೆಯ ಬಲಭಾಗದಲ್ಲಿ ಸಂಗೀತಗಾರರು, ಹಿನ್ನೆಲೆ ಗಾಯಕರು, ಬೆಳಕು ನಿರ್ವಾಹಕರ ತಂಡ ಇದ್ದರೆ, ಮುಂಭಾಗದಲ್ಲಿ ಹಾಗೂ ಎಡಭಾಗದಲ್ಲಿ ಪ್ರೇಕ್ಷಕರು ಇದ್ದರು. ನಾಟಕದಲ್ಲಿ ಅತೀ ಮುಖ್ಯವಾಗಿ ಉಪಯೋಗಿಸುವ ಮೈಕನ್ನು ಬಳಸದಿದ್ದರೂ ಸಂಭಾಷಣೆ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಇಡಿಯ ನಾಟಕ ಐದು ಪಾತ್ರಗಳ ನಡುವೆ ನಡೆಯುತ್ತದೆ. ಐದು ಪಾತ್ರಧಾರಿಗಳು ತುಂಬಾ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದು ಸುಳ್ಳಲ್ಲ. ಈಗ ಐವತ್ತರ ಆಸುಪಾಸಿನಲ್ಲಿ ಇರುವ ಜನರಿಗೆ, ಕೆಲವೇ ದಶಕಗಳ ಹಿಂದೆ ಪರಿಸ್ಥಿತಿ ಹೀಗಿತ್ತಲ್ಲ ಎಂದು ತಮ್ಮ ಹಳೆಯ ನೆನಪು ಮರುಕಳಿಸಿದರೆ, ಇಂದಿನ ಪೀಳಿಗೆಗೆ ನಮ್ಮಲ್ಲಿ ಪರಿಸ್ಥಿತಿ ಹೀಗೂ ಇತ್ತ ಎಂದು ಯೋಚಿಸುವಂತೆ ಮಾಡಿತು ನಾಟಕ.

ನಾಟಕ ಮುಗಿದ ಮೇಲೆ ನಿರ್ದೇಶಕ, ನಾಟಕಕಾರ, ನಟರ ಹಾಗೂ ಪ್ರೇಕ್ಷಕರ ನಡುವೆ ನೇರ ನೇರ ಸಂವಾದವೂ ಇತ್ತು. ನಾಟಕದ ಕುರಿತು ಪ್ರೇಕ್ಷಕರ ಮೆಚ್ಚುಗೆಯನ್ನು ಸ್ವೀಕರಿಸಿದಷ್ಟೇ ಶುದ್ಧ ಮನಸ್ಸಿನಿಂದ ಓರೆಕೋರೆಗಳನ್ನು ಒಪ್ಪಿಕೊಂಡ ತಂಡದವರ ನಡೆ ಎಲ್ಲರ ಪ್ರೀತಿಗೆ ಪಾತ್ರವಾಯಿತು.

ಜಿ. ಹರೀಶ್ ಬೇದ್ರೆ

5 thoughts on “ವಿಜಯ್ ತೆಂಡೂಲ್ಕರ್ ಅವರ “ಕನ್ಯಾದಾನ” ನಾಟಕದ ವಿಮರ್ಶೆ-ಜಿ. ಹರೀಶ್ ಬೇದ್ರೆ

Leave a Reply

Back To Top