ಅಂಕಣ ಬರಹ

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು

ಬಳ್ಳೇಶ ಮಲ್ಲಯ್ಯನ ಸಮಾಧಿಯ

ಜಾಡು ಹಿಡಿದು

2015  ಶ್ರಾವಣದಲ್ಲಿ  ರಾಮದುರ್ಗ ನಮ್ಮೂರಿನಿಂದ  18  ಕಿಲೋ ಮೀಟರ್ ಅಂತರದಲ್ಲಿ  “ಬೆಳ್ಳೇರಿ “ಎಂಬ ಗ್ರಾಮಕ್ಕೆ ನನ್ನನ್ನು ಅತಿಥಿ ಉಪನ್ಯಾಸಕರನ್ನಾಗಿ
ಅಲ್ಲಿನ ಬಸವನಾನಂದ ಶ್ರೀಗಳು ಕರೆದಿದ್ದರು .ನಾನು  ಮತ್ತು ಶರಣು ಸಹೋದರ ಶ್ರೀ ಎಂ ಬಿ ಕಡಕೋಳ ಇವರು ಅಲ್ಲಿಗೆ ಸಂಜೆ 6 ಕ್ಕೆ ಹೋದೆವು .
ಸುಂದರ ಕಾರ್ಯಕ್ರಮವು  ಬಳ್ಳಾಲಲಿಂಗೇಶ್ವರ ಗುಡಿಯಲ್ಲಿ ನಡೆಯಿತು.

*ನನ್ನ ತರ್ಕ ಗ್ರಹಿಕೆಗೆ ವಿಚಾರಕ್ಕೆ ಒಂದು ಹೊಸ ವಿಷಯ ಸಿಕ್ಕಿತೆಂದು ಭಾವಿಸಿದೆ.*

ಗರ್ಭಗುಡಿಯಲ್ಲಿ ಸಮಾಧಿಯಾಕಾರದ ಕಟ್ಟೆಯಿದೆ. ನನ್ನ ಕೂತುಹಲಕ್ಕೆ  ಸುಮ್ಮನೆ ಕುಳಿತು ಕೊಳ್ಳದೆ ಅಲ್ಲಿಯೊಬ್ಬರನ್ನು ಈ  ಗರ್ಭ ಗುಡಿಯ  ವಿಶಿಷ್ಟವೇನು ಎಂದು ಕೇಳಿದೆ.ಆಗ ಅಲ್ಲಿನ ಹಳ್ಳಿಯ ರೈತನೊಬ್ಬ ” ಸರ್ ಇಲ್ಲಿ ನೂರಾರು ವರ್ಷದ ಹಿಂದ ಒಬ್ಬ ಶರಣ ಇಲ್ಲಿ ಆಗಿ  ಹೋಗ್ಯಾನ್ರೀ  , ಅವನು ಕಾಳು ಕಡಿ   ಅಳೆಯುವ ಬಳ್ಳವನ್ನು ಇಲ್ಲಿಯೇ ಬಿಟ್ಟು ಐಕ್ಯ ಅಗ್ಯಾನ್ರೀ ” ಎಂದನು . ನನಗೆ ಕಲ್ಯಾಣದ ಶರಣರಿಗೂ ಈ ಬಳ್ಳೇಶ ಲಿಂಗ ಗುಡಿಗೂ ಸಂಬಂಧವಿದೆಯೆಂದು ಅಲ್ಪ ಸ್ವಲ್ಪ ವಿಚಾರಕ್ಕೆ ಸಮಾಧಾನಿಯಾದೆ. ವಚನಗಳ ನಿರಂತರ ಓದು ಮತ್ತು ಶರಣರ  ಸಮಾಧಿಗಳ ಹುಡುಕಾಟದ ಗೀಳು ನನ್ನನು ಬಳ್ಳಾಲ ಲಿಂಗ ಗುಡಿಯಲ್ಲಿರುವ ಬಳ್ಳಾಕಾರದ ಕಟ್ಟೆ ಮತ್ತೆ ಮತ್ತೆ ಕಾಡ ಹತ್ತಿತು. ಇಂತಹ ಒಬ್ಬ ಶರಣ ಆಗಿ ಹೋಗಿರುವನೇ ಎಂದು ವಚನಗಳ ಸಮಗ್ರ ಸಂಪುಟ ತಿರುವಿ ಹಾಕಿದಾಗ ನನಗೆ ಒಂದು ರೀತಿಯ ಖುಷಿ ಮತ್ತು ಆಶ್ಚರ್ಯ ಕಾದಿತ್ತು.
ಇಂತಹ ಅಪರೂಪದ ಜೈನ ಮೂಲದ ಸಾಧಕನೊಬ್ಬನ ಪರಿಚಯಾಗಿತ್ತು.ಅವನೇ ಬಳ್ಳಾಲ ಲಿಂಗ ಅಥವಾ ಬಳ್ಳೇಶ ಮಲ್ಲಯ್ಯನೆಂಬ ಶರಣ.
ಗೊಡಚಿಯಲ್ಲಿ ಮಡಿವಾಳ ಮಾಚಿದೇವರು ಐಕ್ಯವಾದನಂತರ ಅವರ ಆಪ್ತ ಬಳ್ಳೇಶ ಮಲ್ಲಯ್ಯ ಮುಂದೆ ಕಲಹಾಳದ ಮಾರ್ಗವಾಗಿ ಒಂದು ಪುಟ್ಟ ಗ್ರಾಮಕ್ಕೆ ಬಂದು ನೆಲೆಸಿ ಅಲ್ಲಿಯೇ ಐಕ್ಯನಾಗುತ್ತಾನೆ.
ಬಳ್ಳೇಶ ಮಲ್ಲಯ್ಯನ ಒಟ್ಟು ಒಂಬತ್ತು ವಚನಗಳು ಸಿಗುತ್ತವೆ  ಬಹುತೇಕ ವಚನಗಳು ಶಿವಾನುಭಾವ ಬೆಡಗಿನಲ್ಲಿ ಹೆಣೆದುಕೊಂಡಿವೆ.ಕಾವ್ಯ ಲಕ್ಷಣ ಭಾಷೆ ಅಷ್ಟಾಗಿ ಕಂಡು ಬಂದಿಲ್ಲ.

ಈತನ ವಚನಗಳು ಬದುಕಿನ ಪಾರಮಾರ್ಥಿಕ ವಿಷಯ ಅನುಭಾವದ ಕೊಂಡಿ ಎಂದೇ ಹೇಳಬಹುದು.

ಧರೆಯೊಳಗೆ ಚೋದ್ಯವ ನೋಡಿರೆ :
ಒಂದು ಹರಿಣಿಯ ಮೃಗವು ಓದು ಬಲ್ಲುದಾ ?
ಚೆಲುವ ಗಿಳಿಯಲ್ಲಿ ವಿಪರೀತ ಕೊಂಬು ಕೊಂಬುಗಳುಂಟು.
ಇಂಬು ಕಾಲಲ್ಲಿ ಮುಖವು.
ಜಂಬುದ್ವೀಪದ ಬೆಳಗಿನುದಯದಾಹಾರವದಕೆ.
ಸಂಭ್ರಮವ ನುಡಿವ ಕವಿಗಳ ಮುಖವ ಝಳಪಿಸಿತ್ತು
ಶಂಭು ಬಳ್ಳೇಶ್ವರನ ಕೊರಳಹಾರವ ನೋಡಿ ನಗುತ.

ಭೂಮಿಯ ಮೇಲಿನ ಆತ ವಿಚಿತ್ರವನ್ನು ನೋಡ ಬಲ್ಲಿರಾ ? ಇಲ್ಲಿ-ಜಿಂಕೆ ಒಂದು ಮೃಗವು ಅಂದರೆ ಮನುಷ್ಯನ ಮಾಯಾ ಮನಸು ಚಂಚಲ ಸ್ವಭಾವದ   ಸ್ಥಿತಿಅದು ಓದಬಲ್ಲುದೆ ?.ಸುಂದರವಾದ ಗಿಳಿಯಲ್ಲಿ ಜಿಂಕೆಯ  ಚಂಚಲತೆಯ ಕೊಂಬು ,ಅಹಂ ಭಾವ ಮೈತುಂಬಾ ಕಾಣುತ್ತವೆ.ಗಿಳಿ ತನ್ನ ಸುಂದರತೆ ಶ್ರೇಷ್ಠತೆಯ ಭ್ರಮೆಯಲ್ಲಿರುವಾಗ ಇಂಬು ಕಾಲಲ್ಲಿ ತನ್ನ ಮುಖವನಿಟ್ಟಾಗ,ಅಂದರೆ ತನ್ನ ವ್ಯಕ್ತಿತ್ವವನ್ನು ತನ್ನ ಸೌಂದರ್ಯತೆ ಆಕರ್ಷಣೆಯಲಿಟ್ಟಾಗ , ಆ ಆಮಿಷದ ಪಕ್ಷಿ ಜಂಬೂ ದ್ವೀಪದ ಸೂರ್ಯೋದಯದ ವೇಳೆಗೆ ಬೇಟೆಗಾರನ ಬೇಟೆಗೆ ಆಹಾರವಾಗುತದೆ . ಆ  ಸಂಭ್ರಮವ ನುಡಿವ ಕವಿಗಳ ಮುಖವ ಝಳಪಿಸಿತ್ತು,ಶಂಭು ಬಳ್ಳೇಶ್ವರನ ಕೊರಳಹಾರವ ನೋಡಿ ನಗುತ.ಇಲ್ಲಿ ಅತಿಯಾದ ಸ್ವಾಭಿಮಾನ
ವೈಯಾರ ಬಿಂಕಿನಿಂದ ಬದುಕುವ ಗಿಳಿ ಎಂಬ  ಸಾಂಕೇತಿಕ ಜೀವಕ್ಕೆ ಉದ್ದೇಶಿಸಿ ಇಂತಹ ಮನಸ್ಥಿತಿಯು ಶಾಶ್ವತವಲ್ಲ   .ಗಿಳಿಯ ನೋಡಿ ಸಂಭ್ರಮಿಸುವ ಕವಿಗಳು ಆಘಾತಗೊಳ್ಳುವರು ಕೊನೆಗೆ ಸೃಷ್ಟಿಯ ಕೃತ್ಯಕ್ಕೆ ನಾಗದೇ ಇರಲಾರರು ಎಂದಿದ್ದಾರೆ.

ಇದೆ ರೀತಿ ಬಳ್ಳೇಶ ಮಲ್ಲಯ್ಯನು ಸುಂದರ ಬೆಡಗಿನಿಂದ ಬದುಕಿನ ಸಾರವನ್ನು ತಿಳಿಯ ಪಡಿಸಿದ್ದಾನೆ.

ಆರು ಬಣ್ಣದ ಹಕ್ಕಿ, ತೋರಿದ ಗುರಿಯ ನುಂಗಿ
ಮೀರಿ ನಿಂದುದು ಗಗನ ಮಂಡಲದಲ್ಲಿ.
ಸಾರುತೈದೂದೆ ಹೋಗಿ ಮೀರಿ ಬರಬೇಡಾ ಎಂದು
ಬೇರೆ ಮತ್ತೊಂದು ದಿಕ್ಕ ತೋರುತ್ತದೆ.
ಮೂರುಕೋಣೆಯೊಳಗೆ ಈರೈದು ತಲೆಯುಂಟು.
ನೋಡಿ ಬಂದಾ ಶಿಶು ಬೆಸಗೊಂಬುದು.
ಪ್ರಾಣವಿಲ್ಲದ ಸೇನೆ ಪದ್ಮಸಂಖ್ಯೆಯು ಕೋಟೆದಾಳಿವರಿದುದು
ಎಂಟುಜಾವದೊಳಗೆ.
ಜಾಲಗಾರನ ಕೈಯ ಮಾಣಿಕ್ಯ ಸಿಕ್ಕದೆ ಆಳಿಗೊಂಡಿತ್ತು.
ಜಗವ ಬೆಳುಮಾಡಿ, ಜಾಣ ಕವಿಗಳಿಗೆ ಎದೆ ದಲ್ಲಣ.
ಬಳ್ಳೇಶ್ವರನ ಕನ್ನಡವು ಹೇಳುವಡೆ ಯುಗಸಂಖ್ಯೆ ಶಿವ ಶಿವಾ

ಕಾಮ ಕ್ರೋಧ ಮೋಹ ಲೋಬಾಧಿಗಳೆಂಬ ಅರಿಷಡ್ವರ್ಗಗಳು  ಬಣ್ಣಬಣ್ಣದ ರೆಕ್ಕೆ ಪಕ್ಕದ ಹಕ್ಕಿ. ( ಮನುಷ್ಯ ಜೀವಿ) ಎಲ್ಲವನ್ನು ಪಡೆಯ ಬೇಕೆಂಬ ಇಟ್ಟ ಗುರಿಯನ್ನು ಹಕ್ಕಿ ನುಂಗಿ ಮೀರಿದ ಗಗನದಲ್ಲಿ ಸ್ವಚಂದವಾಗಿ ಹಾರಾಡ ಹತ್ತಿತು.ಇನ್ನೊಂದೆಡೆ ಹೋಗಿ ಮತ್ತೆ ಮರಳಿ ಬರಬೇಡ ಎಂದು ತಿಳಿದು ಮತ್ತೊಂದು ದಿಕ್ಕು ತೋರುತ್ತದೆ ಜೀವ . ಚಿತ್ತ ಚಂಚಲತೆ ಮನುಷ್ಯನ ಬೇಕು ಬೇಡಗಳಿಗೆ ಸಿಲುಕಿ ಹಲವು ಪರಿ ಪಯಣದ ದಿಕ್ಕು ಬದಲಿಸುವ ಸಹಜ ಸ್ವಭಾವ . ಸೃಷ್ಟಿ ಸ್ಥಿತಿ ಲಯ ,ಅಂಗ ಪ್ರಾಣ ಆತ್ಮವೆಂಬ ಶರೀರದ ಕೋಣೆಯೊಳಗೆ ಪಂಚೇಂದ್ರಿಯ ಅನೇಕ ತಲೆಯುಂಟು ,ಹಲವು ತಲೆ ಎಂದರೆ ಅನೇಕ ವಿಷಯಾದಿಗಳಿಗೆ ಮಾರು ಹೋಗಿ ಬೆನ್ನು ಹತ್ತು ಸೂಕ್ಷ್ಮ ಮನಸ್ಸು .ಇಂತಹ ಶರೀರವನ್ನು ನೋಡ ಬಂದ ಶಿಶು ಬೆಸಗೊಂಡಿತು.ಪ್ರಾಣವಿಲ್ಲದ ಸೇನೆ  ಪದ್ಮ ಸಂಖ್ಯೆಯ ಕೋಟೆ ದಾಳಿಗೆ ಅರಿಯುತ್ತದೆ.ನಿತ್ಯ ಸಾವಿರ ಬಾ ರೀ ಉಸಿರಿಸುವ ಶರೀರ  ಹಲವು ಜನ್ಮಕ್ಕೆ ಕಾರಣ ಎಂದು ಸಾಂಕೇತಿಕವಾಗಿ ಹೇಳಿದ್ದಾನೆ ವಚನಕಾರ. ಆದರೆ ಇಂತಹ ಹಲವು ಜನ್ಮದ ಸಂಖ್ಯಾ ಸೇನೆಯನ್ನು ಮೀರಿದ ದಾಳಿಗೆ ಶರೀರ ತುತ್ತಾಗುತ್ತದೆ. ಕಾಲದ ಚಕ್ರದಲಿ ಬದುಕಿದ ಪಕ್ಷಿ ಬೆಳಗಿನ ಎಂಟರ ಜಾವದಲ್ಲಿ ಜಾಲಗಾರನ ಕೈಯಲ್ಲಿ ಸಿಕ್ಕು ಆಳಿಗೊಂಡಿತ್ತು.ಜಗತ್ತಿಗೆ ಈ ಸತ್ಯವ ಬೆಳಕು  ಮಾಡಿ ತೋರಿಸಿ  ,ಜನ ಕವಿಗಳಿಗೆ ಎದೆ ತಲ್ಲಣಗೊಂಡಿತ್ತು.ಬಳ್ಳೇಶ್ವರನ ಭಾಷೆಯು ಕನ್ನಡವ ಹೇಳುವೊಡೆ ಯುಗಸಂಖ್ಯೆ ಶಿವಾ ಶಿವಾ ಎಂದು ಮಾಯವಾಯಿತ್ತು. ಬಳ್ಳೇಶ್ವರನ ಭಾಷೆ  ಎಂಬ ಸುಂದರ ಉಕ್ತಿ ಪ್ರತಿಮೆಯನ್ನು ಬಳಸಿದ ಬಲ್ಲೇಶ ಮಲ್ಲಯ್ಯನು ಶರಣರ ಉಕ್ತಿ ಅನುಭಾವದ ಸತ್ಯವನ್ನು ಪ್ರತಿಬಿಂಬಿಸುತ್ತದೆ.

ಇಂದಿನ ಗದಗ ಜಿಲ್ಲೆಯ ನರಗುಂದ ತಾಲೂಕಿನ ಪುಟ್ಟ ಗ್ರಾಮ ಬೆಳ್ಳೇರಿ -ಬಳ್ಳೇಶ ಮಲ್ಲಯ್ಯನ ಐಕ್ಯ ಸ್ಥಾನ .ಬಳ್ಳಾರಿಯವನಾದ ಬಳ್ಳೇಶ ಮಲ್ಲಯ್ಯ  ನೆಲೆಗೊಂಡ ಸ್ಥಳವು ಬೆಳ್ಳೇರಿ ಎಂದು  ಹೆಸರಾಯಿತು. ಆತನು ಐಕ್ಯಗೊಂಡ ಸ್ಥಳ ಬಳ್ಳೇಶ್ವರ ಲಿಂಗವೆಂದು ಪ್ರತೀತಿ ಪಡೆದಿದೆ.ಇಂತಹ ಅನೇಕ ಶರಣರ ಸಮಾಧಿಯ ಶೋಧನೆಯ ಅಭಿಯಾನಕ್ಕೆ ನಿರಂತರವಾಗಿ ಪ್ರೋತ್ಸಾಹಿಸುವ ಅನೇಕರಿಗೆ ನನ್ನ ಶರಣು.

ಸಮಾಧಿಗಳೆಂಬ ಸ್ಥಾವರದ ಒಳಗೆ ಹೂತಿರುವ ಅಗಮ್ಯ ಜಂಗಮ ಚೈತನ್ಯವನ್ನು ನಮ್ಮ ಅಧ್ಯಯನದ ಮೂಲಕ ಪಡೆದುಕೊಳ್ಳೋಣ.
—————————————-————————————————–


ಡಾ.ಶಶಿಕಾಂತ,ಪಟ್ಟಣ -ರಾಮದುರ್ಗ

ಡಾ ಶಶಿಕಾಂತ ಪಟ್ಟಣ – ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸ್ವಾತಂತ್ರ ಹೋರಾಟದ ಮನೆತನದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಸೈನಿಕ ಶಾಲೆವಿಜಯಪುರದಲ್ಲಿ ಪೂರೈಸಿದರು. ವೃತ್ತಿಯಲ್ಲಿ ಔಷಧ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತಿ ವಿಮರ್ಶಕ ಸಂಶೋಧಕ ಮತ್ತು ಹೊರಾಟಗಾರರು. ಇವರು ಇಲ್ಲಿಯವರೆಗೆ 37 ಪುಸ್ತಕಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಇವರ ಗಾಂಧಿಗೊಂದು ಪತ್ರ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರತಿಷ್ಠಾನದ 2022 ಶಾಲಿನ ಶ್ರೇಷ್ಠ ಕವನ ಸಂಕಲನ ಪ್ರಶಸ್ತಿ ಪಡೆದಿದ್ದಾರೆ. ಜನೆವರಿ 2023 ರಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿ ಆನಂದಿಸಿರಿ

5 thoughts on “

  1. ಶರಣರ ತತ್ವಗಳನ್ನು ನೇರವಾಗಿ ಪ್ರಸಾರ ಮಾಡುವ ನಿಮ್ಮ ಲೇಖನ ಚೆನ್ನಾಗಿದೆ ಸರ್

    ಡಾ ಜಿ ಕೆ ಕಾಪಸೆ

  2. ವೈಚಾರಿಕ ಮನೋಭಾವ ಕೂಡಿದ ಈ ಲೇಖನ ಸರ್

    ಗೀತಾ ಜಿ ಎಸ್

  3. ನಿಮ್ಮ ಶೋಧನೆಯ ಅಭಿಯಾನ ಮತ್ತು ಶರಣರ ಜೀವನವನ್ನು ಪರಿಚಯಿಸುವ ನಿಮ್ಮ ಕಾರ್ಯ ಶ್ಲಾಘನೀಯ

    ಸುಶಿ

Leave a Reply

Back To Top