ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಬದುಕಿ,ಬದುಕಲು ಬಿಡಿ

ನಾವೆಲ್ಲ ಪಾಲಿಸ ಬೇಕಾದ ಬದುಕಿನ ಗುಟ್ಟು ಒಂದಿದೆ. ಅದೇ ಮೌನ. ಎಲ್ಲೂ ಯಾರಿಗೂ ಹಾನಿ ಮಾಡದ ಆದರೆ ಪ್ರಬಲ ಅಸ್ತ್ರವಿದು. ಮಾತು ಬೆಳ್ಳಿಯಾದರೆ ಮೌನ ಬಂಗಾರ ಎಂಬ ಗಾದೆ ಒಂದಿದೆ. ಮಾತನಾಡಿದರೆ ಒಳ್ಳೆಯದೇ. ಆದರೆ ಸ್ಥಳ, ಪರಿಸ್ಥಿತಿ, ಅಲ್ಲಿರುವ ಜನ, ಕಾಲ, ನಮ್ಮ ಮನಸ್ಸಿನ ಆವೇಗ, ಉದ್ವೇಗ, ಪರರ ಮನದ ಭಾವಗಳ ಹರಿವು, ಅದು ಮುಂದೆ ತರುವ ಬಿರುಗಾಳಿ, ಬಿರುಬಿಸಿಲಿನ ಝಳ – ಇವೇ ಮುಂತಾದ ಹಲವಾರು ಅಂಶಗಳನ್ನು ಮನದಲ್ಲಿಟ್ಟು ಮಾತನಾಡುವಾಗ ಒಂದನ್ನು ಮರೆತರೂ ಎಡವಟ್ಟು ಖಚಿತ. ಹಾಗಾಗಿ ಮೌನಕ್ಕೆ ಶರಣು ಹೋಗುವುದು ಒಳಿತಲ್ಲವೇ?

ಸಾಧಾರಣವಾಗಿ ಸಮಾಜದಲ್ಲಿ ಮಾತುಗಳು ಪುರುಷರನ್ನು ಸುತ್ತಿಕೊಳ್ಳುವುದು ಕಡಿಮೆ. ಕಾರಣ ಪುರುಷರು ಮನೆಯಿಂದ ಹೊರಗೆ ಹೆಚ್ಚು ಜನರೊಡನೆ ಬೆರೆಯವುದರಿಂದಲೂ, ಈ ಕಡೆಯ ಮಾತನ್ನು ಆ ಕಡೆ ತಲುಪಿಸುವ ಅಭ್ಯಾಸ ಇಟ್ಟುಕೊಳ್ಳದೆ ಇರುವುದರಿಂದಲೂ ( ಕೆಲವು ಕಡಿಮೆ ಸಂಖ್ಯೆಯಲ್ಲಿ ಇರುವ ಹಿತ್ತಾಳೆ ಕಿವಿ, ಚಾಡಿಕೋರ ಹಾಗೂ ಹೆಣ್ಣಿಗರನ್ನು ಹೊರತುಪಡಿಸಿ), ಸಮಯ,  ಸಂದರ್ಭ ನೋಡಿ ಮಾತನಾಡುವುದರಿಂದಲೂ, ಯಾರಲ್ಲಿ ಏನು ಬೇಕೋ,ಎಷ್ಟು ಬೇಕೋ ಅಷ್ಟೇ ಮಾತನಾಡುವ ಕಾರಣ ಅವರ ಮೇಲೆ ಈ ಮಾತಿನ ಬಗ್ಗೆ ಜಗಳಗಳು, ವಾಕ್ ಸಮರಗಳು ಕಡಿಮೆ. ಯಾರಿಗೆ ಬೇರೆ ಕೆಲಸವಿಲ್ಲದೆ ಚಾಡಿ ಮಾತನ್ನೇ ಬಂಡವಾಳವಾಗಿ ಇಟ್ಟುಕೊಂಡಿರುವರೋ ಅವರ ಕುಟುಂಬ ಸರ್ವನಾಶ!

ಮಾತನ್ನೇ ಬಂಡವಾಳ ಮಾಡಿಕೊಳ್ಳುವುದು ಎಂದರೆ ಎರಡು ರೀತಿ. ಒಬ್ಬ ಉತ್ತಮ ಮಾತುಗಾರ ಗಂಗಾವತಿ ಪ್ರಾಣೇಶ್ ಅವರಂತೆ ಇಡೀ ಜಗತ್ತನ್ನು ತನ್ನ ಮಾತಿನಿಂದ ರಮಿಸಿ, ನಗಿಸಿ ಕನ್ನಡ ಭಾಷೆಯ ಸೊಗಡನ್ನು ವಿಶ್ವಕ್ಕೆ ಪಸರಿಸಿ ತಾನೂ ಆ ಮೂಲಕ ಬದುಕು ಕಟ್ಟಿಕೊಳ್ಳ ಬಹುದು. ಸ್ವಾಮಿ ವಿವೇಕಾನಂದರು ಭಾರತವನ್ನು ಪ್ರತಿನಿಧಿಸಿ ಅಮೆರಿಕಾದಲ್ಲಿ ಆಡಿದ ಮಾತು ಜಗಜ್ಜನಿತ, ಅಜರಾಮರವಾಗಿ ಇಂದಿಗೂ ಉಳಿದಿದೆ. ಇನ್ನು ತನ್ನ ಸತ್ಯವಾದ ಮಾತುಗಳಿಂದ ಹರಿಶ್ಚಂದ್ರ ಎಲ್ಲರ ಮನಗೆದ್ದರೆ, ಮಾತು ತಪ್ಪಿದ ದುರ್ಯೋಧನನ ಕತೆ ಸರ್ವರಿಗೂ ತಿಳಿದದ್ದೇ ಅಲ್ಲವೇ? ಮಾತೇ ಬಂಡವಾಳ ಶಿಕ್ಷಕ, ಉಪನ್ಯಾಸಕ, ಧಾರ್ಮಿಕ ಪ್ರವಚಕ, ಜ್ಯೋತಿಷಿ, ಮುನಿ, ಭಾಷಣಕಾರರು ಇಂಥ ಹಲವರಿಗೆ. ನಮ್ಮ ಜೀವನವೂ ಇದರಿಂದ ಹೊರತಾಗಿಲ್ಲ, ನಾವು ಪ್ರತಿನಿತ್ಯ ಮಾತನಾಡುತ್ತಲೇ ಇರುತ್ತೇವೆ. ಮಾತಿನಲ್ಲೇ ಕೆಲಸ ಮಾಡಿ ಮನೆಕಟ್ಟುವವರು ನಾವಾಗಿರುವ ಕಾರಣವೇ ಮೊಬೈಲ್ ಫೋನ್ ಗಳ ಕರೆ ದರ ಇಷ್ಟೊಂದು ಹೆಚ್ಚಾಗಿದೆ. ಇಡೀ ದಿನ ಮೊಬೈಲ್ ಅಥವಾ ಇಯರ್ ಫೋನ್ ಕಿವಿಯಿಂದ ತೆಗೆಯದವರೂ ಬಹಳ ಜನರಿದ್ದಾರೆ.

‘ಮಾತು ಮನೆ ಕೆಡಿಸಿತು ‘ ಎನ್ನುವ ಗಾದೆ ಹೇಗೆ ಹುಟ್ಟಿತು ಎಂದು ನನಗೆ ತಿಳಿಯದು. ಆದರೆ ಅಕ್ಕ ಪಕ್ಕದ ಮನೆಯವರು ನಮ್ಮ ಮೇಲಿನ ಮತ್ಸರದಿಂದ ಗಂಡ ಹೆಂಡತಿಯ ನಡುವೆ ತಮ್ಮ ಚಿತ್ತಾರದ ಮಾತುಗಳಿಂದಲೇ ಜಗಳ ತಂದಿಟ್ಟು ತಾವು ಅದನ್ನು ನೋಡಿ ಸಂತಸ ಪಡುವವರು ಕೂಡಾ ಹಲವರಿರುವರು. ತಮಗೆ ಏನೂ ಕೆಲಸ ಇಲ್ಲದೆ, ಮೌನವಾಗಿರಲು ಬಾರದೆ ಬೇರೆಯವರ ಸಂಸಾರ ಹಾಳು ಮಾಡುವ ಹಲವು ಮಹಿಳೆಯರು ಸಮಾಜದಲ್ಲಿ ಬೊಂಬಾಯಿ ಎಂದೇ ಕರೆಸಿಕೊಂಡು ಬದುಕುವರು. ಅವರಲ್ಲಿ ಮಾತನಾಡಲು ಜನ ಹೆದರುವ ಕಾರಣ ಅವರು ಯಾರಲ್ಲಿ ಏನು ಮಾತಾಡಿ ಯಾರು ಯಾರಿಗೆ ಜಗಳ ತಂದಿಡುವರೋ ಎಂಬ ಭಯ ಅವರನ್ನು ಕಂಡರೆ!

ಮತ್ತೆ ಕೆಲವರು ಭಯಂಕರ ಖತರ್ನಾಕ್ ಗಳು. ನಮ್ಮ ಮಾತನ್ನು ಮೌನವಾಗಿ ಆಲಿಸಿ, ನಗುನಗುತ್ತಾ ನಮ್ಮೊಡನೆ ಮಾತಾಡಿ, ತಾವು ಅವರು ಒಳ್ಳೆಯವರೆಂದು ತಿಳಿಯುವಂತೆ ಇದ್ದು, ನಮ್ಮ ಮಾತನ್ನು ಸರಿಯಾಗಿ ಅರ್ಥೈಸದೇ ಅದಕ್ಕೆ ಉಪ್ಪು ಹುಳಿ ಕಾರ ಎಲ್ಲ ಸೇರಿಸಿ, ನಮ್ಮವರಿಗೆ ದಾಟಿಸಿ, ನಮ್ಮವರನ್ನೇ ನಮಗೆ ಎತ್ತಿಕಟ್ಟಿ ಶತ್ರುವಾಗಿ ಮಾಡಿ ಮಜಾ ನೋಡುವವರು. ಇವರು ಬೆನ್ನ ಹಿಂದೆ ಚೂರಿ ಹಾಕಿ ಅಳುವಿನ ಮಜಾ ನೋಡುವ ಮಂದಿ.

ಸಮಾಜದಲ್ಲಿ ಹೀಗೂ ಕೆಲವರಿರುತ್ತಾರೆ. ಕೋಪ ಬಂದ ಕೂಡಲೇ ಹೋಗಿ ಯಾರ ಮೇಲೆ ಕೋಪ ಇದೆಯೋ ಅವರ ಮೇಲೆ ರೇಗಾಡಿ ಮತ್ತೆ ಮರೆಯುವವರು. ಮತ್ತೆ ಕೆಲವರು ಬೇರೆಯವರಾಡಿದ ಮಾತನ್ನು ಹತ್ತಿಪ್ಪತ್ತು ವರುಷಗಳ ವರೆಗೂ ಮರೆಯದೆ ನೆನಪಿಟ್ಟು, ಆ ಮಾತಲ್ಲೇ ಚುಚ್ಚುತ್ತ ಕಣ್ಣೀರು ಹಾಕಿಸುತ್ತಾ ಇರುವ ಅತ್ತೆಯರ ಗುಣದವರು. ನಮ್ಮ ಮಾತನ್ನು ನಮಗೇ ತಿರುಗಿಸಿ ಇಡುವವರು, ಇನ್ನೂ ಕೆಲವರು ನಮ್ಮ ಮಾತಿಗೆ ಬಣ್ಣ ಹಚ್ಚಿ ಪರರಿಗೆ ದಾಟಿಸಿ ಅದಕ್ಕೆ ತಲೆ, ಬಾಲ, ರೆಕ್ಕೆ ಹುಟ್ಟಿಸಿ ಬಹುದೂರ ಹಾರಿಸುವವವರು, ನಮ್ಮಲ್ಲೇ ಬಂದು ತಿಂದು, ಉಂಡು ನಮ್ಮ ವೀಕ್ ನೆಸ್ ಅರಿತು ಅದನ್ನು ಪರರಲ್ಲಿ ಹಂಚಿ ಸಂತಸ ಪಡುವವರು ಹೀಗೆ ಮಾತಿನಿಂದ, ಮಾತು ತಪ್ಪುವುದರಿಂದ, ಮಾತು ಕೊಡುವುದರಿಂದ, ಮಾತು ಮರೆಯುವುದರಿಂದ ಏನೇನೋ ತೊಂದರೆಗಳಾಗುತ್ತವೆ. ಇದನ್ನೆಲ್ಲಾ ನಾವೂ ನೋಡಿ, ಓದಿ, ಕೇಳಿ ತಿಳಿದವರೇ ಅಲ್ಲವೇ?

“ಮಂಜುನಾಥ ಮಾತು ಬಿಡ’ ಎಂಬ ಗಾದೆಯಿದೆ. ಅಂದರೆ ಆ ದೇವರೂ ಕೂಡಾ ನಾವು ಮಾತು ತಪ್ಪಿದರೆ ಕ್ಷಮಿಸಲಾರ! ನಮ್ಮ ಮಾತನ್ನು ನಾವು ಉಳಿಸಿಕೊಳ್ಳುವುದು ಧರ್ಮವಾಗಿದೆ. ಧರ್ಮ ಮಾರ್ಗದಲ್ಲಿ ನಡೆಯದೆ ಮಾತು ತಪ್ಪಿದರೆ, ಮಾತು ಕೊಟ್ಟರೆ ನಮ್ಮ ಬದುಕೂ ಕೂಡಾ ರಾಮಾಯಣ, ಮಹಾಭಾರತ ಕಾಳಗಗಳಂತೆ ಆಗುತ್ತದೆ. ಪ್ರತಿ ಕುಟುಂಬ, ಮನೆ, ಸಂಸಾರ, ಏರಿಯಾ, ರಾಜ್ಯ, ದೇಶ, ಪಕ್ಷಗಳ ನಡುವೆ ಮಾತಿನ ಬಾಣ ಹಾರಾಡುತ್ತಲೇ ಇರುತ್ತದೆ. ಮಾತನ್ನು ಗೆದ್ದವರು ಪ್ರಪಂಚ ಗೆದ್ದಾರು!

ಮಾತಿನಲ್ಲೇ ಚುಚ್ಚುವುದು, ಮಾತಲ್ಲೇ ಮನೆ ಕಟ್ಟುವುದು, ಮಾತಲ್ಲೇ ಕೆಲಸ ಮಾಡಿಸುವುದು, ಮಾತಲ್ಲೇ ಮರುಳು ಮಾಡುವುದು, ಮಾತಲ್ಲೇ ಸಾಯಿಸುವುದು, ಮಾತಲ್ಲೇ ಸರ್ವನಾಶ ಮಾಡಿಸುವುದು, ವಾಕ್ ಸ್ವಾತಂತ್ರ್ಯ ಬಳಸಿಕೊಳ್ಳುವುದು, ಮಾತಲ್ಲೇ ಸಮಾಧಾನ ಮಾಡಿಸುವುದು, ಸಾಂತ್ವನ, ಪ್ರೀತಿಯ ಮಾತಿನ ಸಿಂಚನ, ಮಾತಿನಲ್ಲೇ ಭರವಸೆ, ಜೀವ ಉಳಿಸುವ ಮುತ್ತಿನಂಥ ಮಾತಿನಿಂದ ಸಾಯಲು ಹೊರಟವರನ್ನು ಬದುಕಿಸಲೂ ಬಹುದು! ಬದುಕಬೇಕೆಂಬ ಆಸೆ ಹೊತ್ತವನ ನಿರಾಸೆಗೊಳಿಸಿ ಜೀವನದಲ್ಲಿ ಜಿಗುಪ್ಸೆ ಹುಟ್ಟಿಸಿ ಸಾಯಿಸಲೂ ಬಹುದು! ಉತ್ತಮ ಬದುಕು ಕಟ್ಟಿ ಕೊಡಬಹುದು, ಬಾಳನ್ನೇ ನಾಶ ಮಾಡಲೂ ಬಹುದು! ಮಾತಿನ ಬಾಂಬು ಸ್ಪೋಟಿಸಬಹುದು, ಅಕ್ಕರೆಯ ಸಕ್ಕರೆ ನುಡಿ ಹರಿಸಲೂ ಬಹುದು!

ಮಾತಲ್ಲೇ ಎಲ್ಲಾ ಕಾರ್ಯ, ಮಾತಲ್ಲೇ ಫೋನ್ ಬಿಲ್ಲು! ಮಾತಿಗೂ ಬೆಲೆ ಇದೆ ಅಲ್ಲವೇ? ಮಾತೇ ಮುತ್ತು, ಮಾತೇ ಮೃತ್ಯು, ಮಾತೇ ಮನೆ ಕೆಡಿಸುವುದು.ಮಾತೇ ಮನೆ ಕಟ್ಟುವುದು. ಮಾತೇ ವಿದ್ಯೆ, ಮಾತೇ ಕಲಿಕೆ, ಮಾತೇ ಕೊಳ್ಳುವುದು, ಮಾತೇ ದಿನ ದಿನ ಸತಾಯಿಸಿ ಸಾಯಿಸುವುದು!

ಹನ್ನೆರಡನೆಯ ಶತಮಾನದಲ್ಲೇ ಜಗಜ್ಯೋತಿ ಬಸವೇಶ್ವರರು ಹೇಳಿರುವ ಮಾತು ನೆನಪಾಗುತ್ತಿದೆ, ” ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನಬೇಕು* ಎಷ್ಟು ಅಂದದ ಮಾತು! ಕವಿವಾಣಿ,  ಗುರುವಾಣಿಗಳನ್ನು ನಾವು ಮತ್ತೆ ಮತ್ತೆ ಮೆಲುಕು ಹಾಕುತ್ತೇವೆ  ಒಳ್ಳೆಯ ಮಾತುಗಳನ್ನು ಸುಭಾಷಿತ ಎನ್ನುತ್ತೇವೆ. ಒಗಟುಗಳಲ್ಲಿ ಪರರ ಕಟ್ಟಿ ಹಾಕುತ್ತೇವೆ ಮತ್ತು ಸೋಲಿಸುತ್ತೀವೆ.

ಸುಳ್ಳು, ಸತ್ಯ, ಮೋಸ ವಂಚನೆಗಳು ಮಾತಲ್ಲೇ ನಡೆಯುತ್ತವೆ. ಕೋರ್ಟು ಕಚೇರಿಯ ವಾದಗಳಿಗೂ ಮಾತೇ ಬೇಕು. ಇಂದು ರಾಜಕೀಯಕ್ಕಾಗಿ ಸುಳ್ಳಿನಾಟ ನಡೆಯುತ್ತದೆ. ಒಟ್ಟಾರೆ ನಾವು ನಮ್ಮ ಮಾತಿಗೆ ಒಳಿತು, ನಯ, ಸಭ್ಯತೆ, ಸಂತಸಕರ ಎಂಬಿತ್ಯಾದಿ ಕ್ರೀಮ್, ಪೌಡರ್, ಐ ಲೈನರ್, ಸ್ಟಿಕ್ಕರ್ ಬಳಸಿ ಮೇಕ್ ಅಪ್ ಮಾಡಿ ಸರ್ವ ಮನಗಳಿಗೆ ನೋವು ಹಾಗೂ ತೊಂದರೆ ಕೊಡದ ಹಾಗೆ ನಮ್ಮ ಮಾತನ್ನು ಮಾರ್ಪಡಿಸಿಕೊಳ್ಳ ಬೇಕಿದೆ. ಹಾಗೆಯೇ ಪ್ರತಿದಿನ, ಪ್ರತಿಕ್ಷಣ ಎಲ್ಲಾ ತರಗತಿಯಲ್ಲಿ ಗುರುಗಳು ಹೇಳುವ ಮಾತೊಂದಿದೆ, ‘ ಮಾತನಾಡ ಬೇಡಿ” ಅಂದರೆ, ಮಾತು ಬೆಳ್ಳಿ, ಮೌನ ಬಂಗಾರ. ಬೆಲೆ ಬಾಳುವoಥದ್ದನ್ನೇ ಆರಿಸಿಕೊಳ್ಳೋಣ ಬದುಕಲ್ಲಿ. ನಾವು ಉತ್ತಮವಾಗಿ ಬದುಕಿ ಪರರನ್ನು ನೆಮ್ಮದಿಯಿಂದ ಬದುಕಲು ಬಿಡೋಣ. “ಸರ್ವೇ ಜನಃ ಸುಖಿನೋ ಭವಂತು ” ಈ ಮಾತನ್ನು ಪಾಲಿಸೋಣ. ನೀವೇನಂತೀರಾ? 


ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

Leave a Reply

Back To Top