ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣದವಾಗಿ 50 ವರ್ಷಗಳು ಬಂದಿರುವುದರ ಪ್ರಯುಕ್ತ ಸುವರ್ಣ ಕರ್ನಾಟಕ ಮಹೋತ್ಸವದ ಸವಿ ಸಮಯದಲ್ಲಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಕವಿ ಚೆನ್ನವೀರ ವಾಣಿ ಕಬ್ಬಿಗರ ಆತ್ಮನುಡಿಯಾಗಲಿ

ಜಗದಗಲ ಮುಗಿಲೇತ್ತರ ನೆಲ ಜಲಧಿ ತರಂಗಗಳಲ್ಲಿ ನಿನಾದೀಸಲಿ

ಚಲುವ ಕನ್ನಡ ನಾಡಿನ ಪಂಚ ಕನ್ನಡ ಕವನಗಳು

ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡಿರುವ ಶುಭ ಸಂದರ್ಭದ ಸವಿನೆನಪಿನಲ್ಲಿ ‘ಕರ್ನಾಟಕ ಸಂಭ್ರಮ–50’ ಕಾರ್ಯಕ್ರಮದ ಅಡಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನ ಏರ್ಪಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

‘ನವೆಂಬರ್‌ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಐದು ಗೀತೆಗಳಾದ ಹುಯಿಲಗೋಳ ನಾರಾಯಣರಾಯರ–ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ–ಎಲ್ಲಾದರೂ ಇರು ಎಂತಾದರೂ ಇರು, ದ.ರಾ. ಬೇಂದ್ರ ಅವರ–ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕರ–ಹೊತ್ತಿತ್ತು ಹೊತ್ತಿತ್ತು ಕನ್ನಡದ ದೀಪ, ಚನ್ನವೀರ ಕಣವಿ ಅವರ-ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಈ ಐದು ಹಾಡುಗಳನ್ನು ಕಡ್ಡಾಯವಾಗಿ ಹಾಡಬೇಕು. ಕಾರ್ಯಕ್ರಮದ ಛಾಯಾಚಿತ್ರಗಳು ಹಾಗೂ ವೀಡಿಯೊ ತುಣುಕುಗಳನ್ನು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಾಯಕ ನಿರ್ದೇಶಕ ಇ-ಮೇಲ್ bidar.dkc@gmail.com  ಗೆ ಅಪ್‌ಲೋಡ್‌ ಮಾಡಬೇಕು’ ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಅಭಿಯಾನದಡಿಯಲ್ಲಿ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳು, ಅರೆ ಸರ್ಕಾರಿ ಕಚೇರಿಗಳು, ನಿಗಮ ಮಂಡಳಿಗಳು, ಬ್ಯಾಂಕುಗಳು ಹಾಗೂ ಸಂಘ-ಸಂಸ್ಥೆಗಳಲ್ಲಿ ಐದು ಗೀತೆಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ಸೂಚಿಸಿದ್ದಾರೆ. ಆ ಐದು ಹಾಡುಗಳ – ಗೇಯಗೀತೆಗಳ ಅರ್ಥ ವಿವರಣೆ ಸ್ವಾರಸ್ಯಗಳೊಂದಿಗೆ ಈ ಕೆಳಕಾಣಿಸಿದ್ದಂತೆ ವಿವರಿಸಲಾಗಿದೆ.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
                 – ಹುಯಿಲಗೋಳು ನಾರಾಯಣರಾಯರು

                         ಉದಯವಾಗಲಿ ಚೆಲುವ ಕನ್ನಡ ನಾಡು ಹಾಡು ಕೇಳಿದ ಕೂಡಲೇ ಕನ್ನಡಿಗರ ಕಿವಿ ನೆಟ್ಟಗಾಗುತ್ತೆ. ಮನಸ್ಸು ಆ ಹಾಡಿನ ಸಾಲುಗಳನ್ನು ಪುನರುಚ್ಚರಿಸತೊಡಗುತ್ತೆ. ಹೌದು ಆ ಹಾಡಿನಲ್ಲೊಂದು ಆಪ್ತಭಾವ ಇದೆ. ನಮ್ಮ ನಾಡು – ನುಡಿಯ ಪ್ರೀತಿಯ ಪ್ರತೀಕ ಅದು. ಕರ್ನಾಟಕದ ನಾಡಗೀತೆಯೆಂದೇ ಅಂದು ಜನಪ್ರಿಯವಾಗಿದ್ದ ಹಾಡು ಇದು. ಈ ಗೀತೆ ರಚನೆಕಾರರಾದ ನಾರಾಯಣರಾಯರು ಸದಾ ಸ್ಮರಣೀಯರು.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||

ರಾಜನ್ಯರಿಪು ಪರಶುರಾಮನಮ್ಮನ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರವೃಂದದ ಬೀಡು || 1 ||

ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪಿ ಕಲೆಯಚ್ಚರಿಯ ಕರುಗೋಡು

ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು || ೨ ||

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಅವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರನಾರಾಯಣನ ಬೀಡು|| ೩ ||

                    ಹುಯಿಲಗೋಳ ನಾರಾಯಣರು ರಚಿಸಿದ ಈ ಗೀತೆ ‘ಕರ್ನಾಟಕ ರಾಜ್ಯದ ನಾಡಗೀತೆ’ಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು ಬೆಳಗಾವಿಯ ಟಿಳಕವಾಡಿಯಲ್ಲಿ ಜರುಗಿದ ೧೯೨೪ರ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಮಹಾತ್ಮ ಗಾಂಧಿಜಿಯವರು ಅಧ್ಯಕ್ಷರಾಗಿದ್ದ ಅದೀವೇಶನದಲ್ಲಿ ಆಗಿನ್ನೂ ಬಾಲಕಿಯಾಗಿದ್ದ, ಪದ್ಮಭೂಷಣ ಪ್ರಶಸ್ತಿ ಗಳಿಸಿದ್ದ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಅಂದು ಹಾಡಿದ್ದರು. (ಈ ಗೀತೆಯನ್ನು ಪ್ರಸಿದ್ಧ ಗಾಯಕ ಸುಬ್ಬರಾಯರು ಸಹ ಹಾಡಿದ್ದರು. ಅದನ್ನು ಆಲಿಸಿದ ಜನರು ಹರ್ಷೋದ್ಗಾರ ಮಾಡಿದ್ದರು.) ೧೯೭೦ ರಲ್ಲಿ ಅಧಿಕೃತ ನಾಡಗೀತೆ ಪಟ್ಟಿಯಿಂದ ಇದನ್ನು ತೆಗೆದು ಹಾಕಲಾಯಿತಾದರೂ ಕರ್ನಾಟಕ ಏಕೀಕರಣಕ್ಕೆ ಸ್ಪೂರ್ತಿ ನೀಡಿದ ಗೀತೆ ಕನ್ನಡ ನಾಡಿನ ರಾಜ ಮಹಾರಾಜರ ಆಡಳಿತ ಶಿಲ್ಪಕಲೆ ವೈಭವ ಅನಾವರಣದ ನಾಡಿನ ಅಸ್ಮಿತೆಯಾಗಿ ಕನ್ನಡಿಗರೆದೆಯಲ್ಲಿ ಅಚ್ಚಳಿಯದುಳಿದಿದೆ. ಕಿನ್ನರ ಕಂಠದ ಕನ್ನಡ ಕೋಗಿಲೆ ಪಿ. ಕಾಳಿಂಗ ರಾವ್ ರವರ ಸಂಗೀತದಲ್ಲಿರುವ ಗೀತೆ ನಮ್ಮೆಲ್ಲರ ತನುಮನದಲ್ಲಿ ಕನ್ನಡದ ಉದಯವಾಗಿ ಕನ್ನಡ ಪರಿಮಳಿಸಲಿ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 5೦ ವರ್ಷಗಳು ಸಂದಿರುವ ಸಂದರ್ಭದಲ್ಲಿ ಈ ಸುವರ್ಣ ಕನ್ನಡ ಮಹೋತ್ಸವ (1 ನವೆಂಬರ್ 2023)ದಲ್ಲಿ ನಾವೆಲ್ಲರೂ ಚೆಲುವ ಕನ್ನಡ ನಾಡಿನ ಬಗ್ಗೆ ಹಾಡೋಣ ಹೃದಯ ತುಂಬಿ ನಲಿಯೋಣ.

ಎಲ್ಲಾದರು ಇರು ಎಂತಾದರು ಇರು
                    – ರಾಷ್ಟ್ರಕವಿ ಕೆ.ವಿ. ಪುಟ್ಟಪ್ಪ (ಕುವೆಂಪು)

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಕನ್ನಡ ಗೋವಿನ ಓ ಮುದ್ದಿನ ಕರು

ಕನ್ನಡತನವೊಂದಿದ್ದರೆ ನೀನಮ್ಮಗೆ

ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ !

ನೀ ಮೆಟ್ಟುವ ನೆಲ ಅದೇ ಕರ್ನಾಟಕ

ನೀನೇರುವ ಮಲೆ ಸಹ್ಯಾದ್ರಿ,

ನೀ ಮುಟ್ಟುವ ಮರ ಶ್ರೀಗಂಧದ ಮರ

ನೀ ಕುಡಿಯುವ ನೀರ್ ಕಾವೇರಿ

ಪಂಪನನೋದುವ ನಿನ್ನ ನಾಲಗೆ ಕನ್ನಡವೇ ಸತ್ಯ

ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।।

ಹರಿಹರ ರಾಘವರಿಗೆ ಎರಗುವ ಮನ

ಹಾಳಾಗಿಹ ಹಂಪೆಗೆ ಕೊರಗುವ ಮನ

ಪೆಂಪಿನ ಬನವಾಸಿಗೆ ಕರಗುವ ಮನ

ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ

ಜೋಗದ ಜಲಪಾತದಿ ಧುಮುಕುವ ಮನ

ಮಲೆನಾಡಿಗೆ ಹೊಂಪುಳಿ ಹೋಗುವ ಮನ

ಕನ್ನಡವೇ ಸತ್ಯ ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।।

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ,

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ

ಮಾವಿನ ಹೊಂಗೆಯ ತಳಿರಿನ ತಂಪಿಗೆ

ರಸರೋಮಂಚನಗೊಳುವ ಮನ

ಎಲ್ಲಿದ್ದರೆ ಏನ್? ಎಂತ್ತಿದ್ದರೆ ಏನ್?

ಎಂದೆಂದಿಗೂ ತಾನ್ –

ಕನ್ನಡವೇ ಸತ್ಯ

ಕನ್ನಡವೇ ನಿತ್ಯ

ಅನ್ಯವೆನಲದೆ ಮಿಥ್ಯಾ!

            ಜಗದ ಕವಿ ಯುಗದ ಕವಿ ಎಂದು ವರಕವಿ ಬೇಂದ್ರೆಯವರಿಂದ ವರ್ಣಿಸಿಕೊಂಡ ರಸ ಋಷಿ, ವಿಶ್ವಮಾನವ, ರಾಷ್ಟ್ರಕವಿ ಕುವೆಂಪುರವರು ಕನ್ನಡಿಗರಿಗೆ ಕನ್ನಡ ದೀಕ್ಷೆಯನ್ನು ನೀಡಿದವರು. ತನು – ಮನ – ಹೃದಯಕ್ಕೆ ಕನ್ನಡದ ಕಂಕಣವನ್ನು ಕಟ್ಟಿದವರು. ‘ಶ್ರೀ ರಾಮಾಯಣ ದರ್ಶನ’ ಮಹಾ ಕಾವ್ಯದ ಮೂಲಕ ಕನ್ನಡ ಲೋಕಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡದ ಸಂತ, ಕನ್ನಡ ಕಾಯಕದಲ್ಲಿ ಕಲ್ಪವೃಕ್ಷವನ್ನು ತೋರಿದವರು. ಈ ಮಹಾಕವಿಯ “ಎಲ್ಲಾದರು ಇರು – ಎಂತಾದರು ಇರು” ಎಂದೆಂದಿಗೂ ಕನ್ನಡವಾಗಿರು” ಕವನವು ಕನ್ನಡ ನಾಡಿನ್ನು ಕಟ್ಟಿಬೆಳೆಸಿದ ಕವಿ ರಾಜಗಣವನ್ನು, ನೆಲ ಜಲ ಪ್ರಕೃತಿಯ ಹಿರಿಮೆಯನ್ನು, ಕನ್ನಡವೇ ಸತ್ಯ ಎಂಬ ಧ್ಯಾನವನ್ನು ಎಲ್ಲರೂ ಮಾಡಬೇಕು. ಕನ್ನಡತನವನ್ನು ಉಳಿಸಿ ಬೆಳೆಸಬೇಕೆಂಬ ಸ್ಪಷ್ಟವಾದ ನಿಲುವನ್ನು ಮಂಡಿಸಿದ್ದಾರೆ.

           ಎಲ್ಲೆ ಇದ್ದರೂ ಎಂದೆಂದಿಗೂ ನೀ ಕನ್ನಡವಾಗಿರು ಅಂತಾ ಹೇಳುವುದರ ಮೂಲಕ ಮಾತೃಭಾಷೆ ಮಾತೃಬೂಮಿಯಗೆ ಎಂದು ದ್ರೋಹ ಬಗೆಯಬಾರದೆಂದು ಸಾರಿದ್ದಾರೆ. ಈ ಅಮೋಘ ಹಾಡಿಗೆ ಸಿ. ಅಶ್ವಥ್ ಸಂಗೀತ ಸಂಯೋಜನೆ ಮಾಡಿದ್ದು; ಗಾನ ಗಂಧರ್ವ ವರನಟ ಡಾ. ರಾಜಕುಮಾರ ಮಾಧುರ್ಯವಾಗಿ ಹಾಡಿದ್ದಾರೆ. ಕರ್ನಾಟಕದ ಸುವರ್ಣ ಸಂದರ್ಭದಲ್ಲಿ ಕನ್ನಡವು ಕಲ್ಪತರು ಎಂಬುದನ್ನು ಸಾಭಿತುಪಡಿಸೋಣ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ನಮ್ಮ ಮಕ್ಕಳನ್ನು ಓದಿಸೋಣ. ಕನ್ನಡ ಕಂಪನನು ಸೂಸೋಣ. ಕನ್ನಡ ಸಾಹಿತ್ಯವನ್ನು ಸೇತುವೆಯಾಗಿಸಿ ವಿಶ್ವಮಾನವ ಸಂದೇಶ ಸಾರಿದ ಕನ್ನಡ ಕವಿ ಕುವೆಂಪುರವರ ಆದರ್ಶವನ್ನು ಪಾಲಿಸೋಣ.

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
                                    – ವರಕವಿ ದ.ರಾ. ಬೇಂದ್ರೆ

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ ||
ಹಿಂದೆ ಮುಂದೆ ಎಂದೇ ಕರ್ನಾಟಕ ಒಂದೇ

ಜಗದೇಳಿಗೆಯಾಗುವುದಿದೆ  ಕರ್ನಾಟಕದಿಂದೆ
ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ
ಒಂದೇ ಜಗವು ಮನವು ಕನ್ನಡಿಗರು ಎಂದೆ
ಕುಲವೊಂದೇ ಚಲವೊಂದೇ ನೀತಿಯ ನೆಲೆಯೊಂದೇ
ಹೀಗೆನ್ನದ ಹೆರವರು ಅವರಿದ್ದರು ಒಂದೇ ಇರದಿದ್ದರೂ ಒಂದೇ
ಕನ್ನಡವೆಂದು ಒಪ್ಪದು ಕರ್ನಾಟಕನಿಂದೆ

ಕನ್ನಡ ಮಾತೆ ಮಾತೆಯೂ ಕರ್ನಾಟಕ ಒಂದೇ
ಅದು ದೈವತ ಅದು ಜೀವಿತ ಒಪ್ಪಿಹೆವದು ಎಂದೆ
ನಮ್ಮದು ನಿಮ್ಮದು ಅವರದು ಈ ಆಸ್ತಿ ಪಾಸ್ತಿ
ನಾಡಿನ ತಾಯಿಗೆ ಸೇರಿದೆ ಬೇರೆಯ ಮನೆ ನಾಸ್ತಿ
ಕನ್ನಡ ಕಾಯಕದಲ್ಲಿಲ್ಲವು ಕಮ್ಮೀ ಜಾಸ್ತಿ
ಇದನೋಪ್ಪದ ಹೆರವರು ಅವರಿದ್ದರು ಒಂದೇ ಇರದಿದ್ದರೂ ಒಂದೇ
ಕರ್ನಾಟಕ ಹಿತವಿಹಿತವು ಕನ್ನಡ ಕುಲದಿಂದೆ

ಕನ್ನಡವು ಭಾರತವು ಜಗವೆಲ್ಲವು ಒಂದೇ
ತುಂಬಿದೆ ಕನ್ನಡ ಕುಲವನ್ನೋಪ್ಪುವ ಕುಲದಿಂದೇ
ಕನ್ನಡ ಧೀಕ್ಷೆಯ ಹೊಂದಿದ ಪ್ರತಿಯೊಬ್ಬನು ಆರ್ಯ
ಕನ್ನಡ ತೇಜವು ಸಾರಲಿ ಕನ್ನಡಿಗರ ಕಾರ್ಯಾ
ಕನ್ನಡ ನಡೆ ಇರದವರೇ ಶೂದ್ರರು ಅನಿವಾರ್ಯ
ಇಂತರಿಯದ ಹೆರವರು ಅವರಿದ್ದರು ಒಂದೇ ಇರದಿದ್ದರೂ ಒಂದೇ
ಉಗ್ಗಡಿಸಿರಿ ನಾಸ್ತಿಗೆ ಜಯ ಜಯ ಜಯವೆಂದು

                                        – ಅಂಬಿಕಾತನಯದತ್ತ

               ಅಂಬಿಕಾತನಯದತ್ತ ಕಾವ್ಯನಾಮದಿಂದ ನಾಕು ತಂತಿ ಕವನ ಸಂಕಲನದ ಮೂಲಕ ಕನ್ನಡಾಂಬೆಗೆ ಎರಡನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರಾವಣ ಕವಿ, ವರಕವಿ, ಶಬ್ಧಗಾರುಡಿಗ, ಕಾವ್ಯಮಾಂತ್ರಿಕ, ಸಾಮಾನ್ಯ ಜನರ ಕವಿ ದ. ರಾ. ಬೇಂದ್ರೆ (ಜನನ:31 ಜನವರಿ 1896, ಅಮರ: 26 ಅಕ್ಟೋಬರ್ 1981) ಕೃತ “ಒಂದೇ ಒಂದೇ ಕರ್ನಾಟಕ ಒಂದೇ” ಗೇಯಗೀತೆಯು ಮೈಸೂರು ಅನಂತ ಸ್ವಾಮಿಯವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಕನ್ನಡದ ಸಾರ್ವಭೌಮ ಗೀತೆಯನ್ನು ರವಿ ಮೂರೂರು, ವಿನಯ್ ಕುಮಾರ್, ಉದಯ್ ಅಂಕೋಲಾ, ಸುಪ್ರಿಯಾ ಆಚಾರ್ಯ ಮತ್ತು ಮಂಗಳಾ ರವಿಯವರು ಅದ್ಭುತವಾಗಿ ಹಾಡಿದ್ದಾರೆ.

                       ಒಂದೇ ಒಂದೇ ಒಂದೇ ಕರ್ನಾಟಕ ಒಂದೇ/ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ’ ಎನ್ನುವ ವರಕವಿ ಬೇಂದ್ರೆಯವರು ಕನ್ನಡ – ಕರ್ನಾಟಕದಿಂದ ಕನ್ನಡಿಗರಿಗಷ್ಟೇ ಒಳಿತೆಂಸು ಭಾವಿಸುವುದಲ್ಲ. ಜಗದ ಏಳಿಗೆಯಾಗುವುದಿದ್ದರೆ ಅದು ಕರ್ನಾಟಕದಿಂದ ಎನ್ನುತ್ತಾರೆ. ಕರ್ನಾಟಕ ಎನ್ನುವುದು ಕೇವಲ ಸಂಕುಚಿತ ಮನಸ್ಸಿನ ಒಂದು ಭೌಗೋಳಿಕ ರಚನೆಯಲ್ಲ. ಅದರ ಅಸ್ತಿತ್ವ, ರಚನೆಯ ಹಿಂದಿರುವುದು ಜಗದ ಏಳಿಗೆಯ ಉದ್ದೇಶ. ಕರ್ನಾಟಕದ ರೂಪುಗೊಳ್ಳುವಿಕೆಯ ಉದ್ದೇಶ ಒಂದು ಭಾಷೆಯನ್ನಾಡುವ ಜನಗಳಿಗೆ ಒಂದು ಆಡಳಿತಕ್ಕೊಳ ಪಟ್ಟ ಒಂದು ರಾಜ್ಯ ರಚನೆಗಾಗಿ ಅಲ್ಲ. ಅದು ಜಗತ್‌ ಕಲ್ಯಾಣದ ಮಾರ್ಗವೇ ಹೌದು. ‘ಕನ್ನಡವೂ ಭಾರತವೂ ಜಗವೆಲ್ಲವೂ ಒಂದೇ’ ಎನ್ನುವ ಮೂಲಕ ಕೇವಲ ಕರ್ನಾಟಕವಲ್ಲ, ಕೇವಲ ಭಾರತವಲ್ಲ, ಜಗತ್ತೆಲ್ಲವೂ ಒಂದೇ ಎಂಬ ವಿಶ್ವಾತ್ಮಕವಾದ, ಜಗತ್ತು ಒಂದು ಕುಟುಂಬ ಎಂಬ ಉದಾತ್ತತೆಯನ್ನು ನಾಡಿನ ಸ್ವರೂಪವಾಗಿ ಮಂಡಿಸಿದ್ದಾರೆ. ವಿಶ್ವಮಯ ಕನ್ನಡದ ಬಗ್ಗೆ ಅವರಿವರ ಮಾತಿಗೆ ಕೀಳರಿಮೆಗೊಳಗಾಗದೆ ಕಬ್ಬಿಗರ ಶಕ್ತಿ ಪ್ರದರ್ಶನ ಮಾಡೋಣ. ಕನ್ನಡ ಶಾಲೆಗಳನ್ನು ಉಳಿಸೋಣ – ಬೆಳೆಸೋಣ , ಕನ್ನಡ ಸೊಗಡನ್ನು ಲೋಕಕ್ಕೆ ಹಂಚೋಣ.

ಹೊತ್ತಿತೋ ಹೊತ್ತಿತು ಕನ್ನಡದ ದೀಪ
                                         – ಡಾ.ಸಿದ್ದಯ್ಯ ಪುರಾಣಿಕ

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ..
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ.. ಕನ್ನಡದ ಮಾನ ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ..
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ..
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ.. ಹೊತ್ತಿತು.. ಕನ್ನಡದ ದೀಪ .

                          – ಡಾ. ಸಿದ್ದಯ್ಯ ಪುರಾಣಿಕ

                   ವಚನ ಧ್ಯಾನದ ಅನುಭವಿ ಕವಿ ಕಾವ್ಯಾನಂದ ಕಾವ್ಯನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಬೆಳಗುತ್ತಿರುವ ಕವಿ ಸಿದ್ದಯ್ಯ ಪುರಾಣಿಕ (ಜನನ:18 ಜೂನ್ 1918, ಅಮರ: 5 ಸಪ್ಟೆಂಬರ್ 1994) ಇವರು ಬರೆದ “ಹೊತ್ತಿತೋ ಹೊತ್ತಿತು ಕನ್ನಡದ ದೀಪ – ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ”.. ಗೀತೆಯು ಜನಮಾನಸದಲ್ಲಿ ಕನ್ನಡದ ಮಹತ್ವವನ್ನು, ಕನ್ನಡಿಗರ ಅಸ್ತಿತ್ವವನ್ನು, ಕನ್ನಡದ ಒಗ್ಗಟ್ಟನ್ನು ಬಿಗಿಗೋಳಿಸಿದ, ಕನ್ನಡ ಶಕ್ತಿಯನ್ನು ದರ್ಶಿಸಿದ ಅದ್ಬುತ ಕವಿತೆ ಇದಾಗಿದೆ. ಮೈಸೂರು ಅನಂತಸ್ವಾಮಿ ಸಂಗೀತ ನಿರ್ದೇಶನ ಮಾಡಿರುವ ಈ ಕನ್ನಡದಾಗ ಗೀತೆಯನ್ನು ಆಯ್ಕೆ ವೈ ವೈ ಕೆ ಮುದ್ದುಕೃಷ್ಣ ನಗರ ಶ್ರೀನಿವಾಸ ಉಡುಪ ಕಿಕ್ಕೇರಿ ಕೃಷ್ಣಮೂರ್ತಿ ಪ್ರದೀಪ್ ಬಿ ವಿ ನಾಗಚಂದ್ರಿಕಾ ಭಟ್ ಸುನಿತಾ ಮುರಳಿ ಸೀಮಾ ರಾಯಕರ್, ಮಂಗಳಾ ರವಿ ಇವರು ಸಮೂಹ ವೃಂದದಲ್ಲಿ ಹಾಡಿರುವ ಹಾಡು ಕನ್ನಡಿಗರಲ್ಲಿ ಸ್ವಾತಂತ್ರ್ಯ ನಾಡಾಭಿಮಾನವನ್ನು ಬಡಿದೆಬ್ಬಿಸುತ್ತದೆ. ಕರ್ನಾಟಕವೆಂದು 50 ವರ್ಷಗಳ ಸಂದ ಈ ಶುಭ ಸಂದರ್ಭದಲ್ಲಿ ಪ್ರಕಾಶಮಾನ ಕನ್ನಡವನ್ನು ಮತ್ತಷ್ಟು ಪ್ರಜ್ವಲಗೊಳಿಸಲು ಸ್ವಶಕ್ತವಾಗಿದೆ. ಎಲ್ಲರೂ ಸಂಭ್ರಮಿಸೋಣ.

ಹೆಸರಾಯಿತು ಕರ್ನಾಟಕ
                                  – ನಾಡೋಜ ಚೆನ್ನವೀರ ಕಣವಿ

ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ ಹುಸಿಹೋಗದ ಕನ್ನಡ

ಹೊಸೆದ ಹಾಗೆ ಹುರಿಗೊಳ್ಳುವ ಗುರಿ ತಾಗುವ ಕನ್ನಡ
ಕುರಿತೋದದ ಪರಿಣತಮತಿ ಅರಿತವರಿಗೆ ಹೊಂಗೊಡ

ಪಡುಗಡಲಿನ ತೆರೆಗಳಂತೆ ಹೆಡೆ ಬಿಚ್ಚುತ ಮೊರೆಯುವ
ಸಹ್ಯಾದ್ರಿಯ ಶಿಖರದಂತೆ ಬಾನೆತ್ತರ ಕರೆಯುವ

ಗುಡಿ ಗೋಪುರ ಹೊಂಗಳಸಕೆ ಚೆಂಬೆಳಕಿನ ಕನ್ನಡ
ನಮ್ಮೆಲ್ಲರ ಮೈಮನಸಿನ ಹೊಂಗನಸಿನ ಕನ್ನಡ

ತ್ರಿಪದಿಯಿಂದ ಸಾಸಿರಪದಿ ಸ್ವಚ್ಚಂದದ ಉಲ್ಲಾಸ
ಭಾವಗೀತ ಮಹಾಕಾವ್ಯ ವೀರ ವಿನಯ ಸಮರಸ

ಹಳ್ಳಿ- ಊರು ನಗರ-ಜಿಲ್ಲೆ ಮೊಗೆದ ಹೊಗರು ಕನ್ನಡಿ
ಎಲ್ಲ ದಿಸೆಗು ಚೆಲ್ಲುವರೆದ ಚೈತನ್ಯದ ದಾಂಗುಡಿ

                    ವಿಶ್ವ ಭಾರತಿಗೆ ಕನ್ನಡದ ಆರತಿ ಬೆಳಗಿದ ಸುನಿತಾಗಳ ಸಾಮ್ರಾಟ, ಸಮನ್ವಯ ಕವಿ, ಚಂಬೆಳಕಿನ ಚೆನ್ನವೀರ ಕಣವಿ (ಜನನ:28 ಜೂನ್ 1928, ಅಮರ: 16 ಫೆಬ್ರವರಿ 2022) ರವರು ಬರೆದ ಈ ಗೀತೆ ಕನ್ನಡ ಅಭಿಮಾನವನ್ನು ಹುಟ್ಟಿಸುವಂತದ್ದು; ವಿಶಾಲ ಮೈಸೂರು ರಾಜ್ಯಕ್ಕೆ ದೇವರಾಜ ಅರಸರ ಸಾರಥ್ಯದಲ್ಲಿ ಕನ್ನಡ ಮಾತನಾಡುವ ನಾಡಿಗೆ 1 ನವೆಂಬರ್ 1973ರಲ್ಲಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದ ಸಂದರ್ಭದಲ್ಲಿ ಕವಿ ಚನ್ನವೀರ ಕಣವಿಯವರು ನಾಡ ಪ್ರೇಮವನ್ನು – ನುಡಿಯ ಅಭಿಮಾನವನ್ನು ಅನಾವರಣಗೊಳಿಸುವುದಕ್ಕಾಗಿ “ಹೆಸರಾಯಿತು ಕರ್ನಾಟಕ – ಉಸಿರಾಗಲಿ ಕನ್ನಡ” ಎಂಬ ಗೀತೆಯನ್ನು ಬರೆದು ಕನ್ನಡಿಗರ ಎದೆಯಲ್ಲಿ ರಾರಾಜಿಸುತ್ತಿದ್ದಾರೆ. ಈ ಗೀತೆಗೆ ನಾದಬ್ರಹ್ಮ ಹಂಸಲೇಖರವರು ಸಂಗೀತವನ್ನು ನೀಡಿದ್ದು; ಗಾನಗಂಧರ್ವ, ವರನಟ ರಾಜಕುಮಾರ ರವರು ಸುಶ್ರಾವ್ಯಯವಾಗಿ ಹಾಡಿದ್ದಾರೆ. ಅಲ್ಲದೆ ಮೈಸೂರು ಅನಂತ ಸ್ವಾಮಿಯವರು ಸಂಗೀತ ನೀಡಿರುವ ಗೀತೆಗಳು ಕಸ್ತೂರಿ ಶಂಕರ್ ಅವರು ಕೂಡ ಮಾಧುರ್ಯವಾಗಿ ಹಾಡಿ, ಜನಮಾನಸದಲ್ಲಿ ನಾಡಭಕ್ತಿ ಬೆಳೆಸಿದ್ದಾರೆ. ಸಾಮಾಜಿಕ ಜಾಲತಾಣ (ವಿಶಾಲಮ್ಮ – ಗೂಗಲ್) ಲಭ್ಯವಿರುವ ಹಾಡು. ಸುವರ್ಣ ಕರ್ನಾಟಕದ ಈ ಸವಿಗಳಿಗೆಯಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಶೀರ್ಷಿಕೆಯೊಂದಿಗೆ ರಾಜ್ಯ ಸರ್ಕಾರ ವರ್ಷವಿಡಿ ಕನ್ನಡಪರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನಾರ್ಹವಾಗಿದೆ.

                    ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ೨೦೨೩ನೇ ಇಸ್ವೀಯ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಉದ್ದೇಶಿಸಲಾಗಿದೆ. ಅದರ ಅಂಗವಾಗಿ ಈಗಾಗಲೇ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಾರ್ಯಕ್ರಮದ ಸ್ವರೂಪ ಸಿದ್ಧಪಡಿಸಲಾಗಿದೆ. ಅದರಂತೆ, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ವತಿಯಿಂದ ಈ ಕೆಳಕಂಡ ಅಂಶಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು ಹಾಗೂ ಸಂಬಂಧಪಟ್ಟ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಈ ಮೂಲಕ ಸೂಚಿಸಿದೆ.

* ನವೆಂಬರ್ ಒಂದರಂದು ರಾಜ್ಯದ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿ ಗಳನ್ನು ಬಿಡಿಸಿ ಕರ್ನಾಟಕ ಸಂಭ್ರಮ :೫೦ “ಹೆಸರಾಯಿತು ಕರ್ನಾಟಕ – ಉಸಿರಾಗಲಿ ಕನ್ನಡ” ಎಂಬ ಘೋಷವಾಕ್ಯವನ್ನು ಬರೆಯುವಂತೆ ನಾಗರಿಕರಲ್ಲಿ ಮನವಿ ಮಾಡುವುದು.

* ನವೆಂಬರ್ ಒಂದರ ಬೆಳಿಗ್ಗೆ 9:00ಗೆ ಎಲ್ಲಾ ಆಕಾಶವಾಣಿ (ರೇಡಿಯೋ) ಕೇಂದ್ರಗಳಲ್ಲಿ ನಾಡಗೀತೆಯನ್ನು ಪ್ರಸಾರ ಮಾಡಲಾಗುವುದು ಆ ಸಮಯದಲ್ಲಿ ಕನ್ನಡ ನಾಡಿನ ಸಮಸ್ತ ನಾಗರಿಕರು ಎದ್ದುನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡಗೀತೆಗೂ ಗೌರವ ಸಲ್ಲಿಸಲು ಮನವಿ ಮಾಡುವುದು.

* ನವೆಂಬರ್ ಒಂದರ ಸಂಜೆ  5:೦೦ ಗಂಟೆಗೆ ನಿಮ್ಮ ನಿಮ್ಮ ಜಿಲ್ಲೆಗಳ ಎಲ್ಲಾ ಗ್ರಾಮಗಳ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟವನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸಲು ಮನವಿ ಮಾಡುವುದು.

* ನವೆಂಬರ್ ಒಂದರ ಸಂಜೆ 7:00ಗೆ ನಿಮ್ಮ ನಿಮ್ಮ ಜಿಲ್ಲೆಗಳ ಎಲ್ಲಾ ಗ್ರಾಮಗಳ ಮನೆಗಳ ಮುಂದೆ, ಕಚೇರಿಗಳ ಮುಂದೆ ಹಾಗೂ ಅಂಗಡಿ – ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗುವುದು.

                   ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ಜಿಲ್ಲಾಡಳಿತ ಸೂಕ್ತ ಸುತ್ತೋಲೆಗಳನ್ನು ಹೊರಡಿಸಿ, ಜಿಲ್ಲೆ ಎಲ್ಲಾ ನಾಗರಿಕರ ಹಾಗೂ ಸಂಘ – ಸಂಸ್ಥೆಗಳ ಸಹಯೋಗ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶಿವರಾಜ ಎಸ್. ತಂಗಡಗಿ ಈ ಮೂಲಕ ಕೋರಿದ್ದಾರೆ.

ಕನ್ನಡದ ಹೃದಯ ಬಾಂಧವರೇ ನಾವೆಲ್ಲರೂ ಒಂದು ನವೆಂಬರ್ 2023 ರಂದು ಮುಂಜಾನೆ ನಮ್ಮ ನಮ್ಮ ಮನೆಯ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಯನ್ನು ಬಿಡಿಸುವುದರ ಮೂಲಕ ಸುವರ್ಣ ಕರ್ನಾಟಕ ಮೆರೆದನ್ನು ತರೋಣ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬುದಾಗಿ ಹೃದಯ ಹಲಗೆಯ ಮೇಲೆ ಬರೆಯೋಣ ಅಂದು ಬೆಳಿಗ್ಗೆ 9:00ಗೆ ರೇಡಿಯೋ ಬಾನುಲಿಯಲ್ಲಿ ಪ್ರಸಾರವಾಗುವ ರಾಷ್ಟ್ರಕವಿ ಕುವೆಂಪು ಅವರ ಚಿತ್ರ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸಲ್ಲಿಸೋಣ ಸಂಜೆ 5:00ಗೆ ಎಲ್ಲೋ ಗ್ರಾಮದವರು ಹಿರಿಯ ಕಿರಿಯರು ಕೆಂಪು ಮತ್ತು ಹಳದಿ ಬಣ್ಣದ ಗಾಳಿಪಟವನ್ನು ಆಕಾಶದಲ್ಲಿ ಎತ್ತರಕ್ಕೆ ಹಾರಿಸುವುದರ ಮೂಲಕ ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವನು ಸಂಜೆ 7:00ಗೆ ಎಲ್ಲರೂ ಹಚ್ಚೇವು ಕನ್ನಡದ ದೀಪ ಎಂಬ ಪಯಣಿಗೆ ಕಿವಿಯಾಗಿ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕನ್ನಡದ ಒಲುಮೆಯನ್ನು ಜಗಕೆ ತೋರಿಸೋಣ ಅದರೊಂದಿಗೆ ಜಗದಗಲ – ಮುಗಿಲೇತ್ತರ, ತರು -ಲತೆ , ಗಿರಿ – ಶಿಖರ, ಮಣ್ಣು- ಶಿಲೆ ಕಣಕಣದಲ್ಲಿ, ನೆಲ – ಜಲಧಿ ತರಂಗಗಳಲ್ಲಿ ನಿನಾದೀಸಲಿ ಚಲುವ ಕನ್ನಡ ನಾಡಿನ ಪಂಚ ಕನ್ನಡ ಕವನಗಳು ಗೇಯಗೀತೆಗಳು

“ಸಿರಿಗನ್ನಡಂ ಗೆಲ್ಗೆ – ಸಿರಿಗನ್ನಡಂ ಬಾಳ್ಗೆ”
 “ಬಾಳ್ ಕನ್ನಡ – ಆಳ್ ಕನ್ನಡ.” ಜೈ ಸುವರ್ಣ ಕರ್ನಾಟಕ


ಸುಹೇಚ ಪರಮವಾಡಿ
ಸುಭಾಷ್ ಹೇಮಣ್ಣಾ ಚವ್ಹಾಣ, ಶಿಕ್ಷಕ ಸಾಹಿತಿಗಳು, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಮಂಜುನಾಥ ನಗರ ಹುಬ್ಬಳ್ಳಿ

Leave a Reply

Back To Top