ಬಾಳ್ ಏಳ್ ಆಳ್ ಕನ್ನಡ ತಾಯ್- ಗೊರೂರು ಅನಂತರಾಜು,

ವಿಶೇಷ ಲೇಖನ

ಬಾಳ್ ಏಳ್ ಆಳ್ ಕನ್ನಡ ತಾಯ್

ಗೊರೂರು ಅನಂತರಾಜು

ಸಂಸ್ಕೃತಿ ಎನ್ನುವುದು ಸಮೂಹ ಸಮ್ಮತ ಜೀವನ ಪದ್ಧತಿಯಾಗಿದೆ. ಕನ್ನಡಿಗರ ಇಂತಹ ಜೀವನ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ತನ್ನ ಆಯುರ್ಮಾನದಲ್ಲಿ ಆರ್ಯ ಆಂಗ್ಲ ಸಂಸ್ಕತಿಯನ್ನು ಜೀರ್ಣಿಸಿಕೊಳ್ಳುತ್ತಾ ಬಂದ ಕನ್ನಡ ಕಾಲಮಾನದ ಉದ್ದಕ್ಕೂ ದ್ವಿಭಾಷಾ ಸಂದರ್ಭದಲ್ಲಿ ಬದುಕು ಮಾಡಿದೆ. ಹಿಂದಿನದು ಕನ್ನಡ ಸಂಸ್ಕೃತ ದ್ವಿಭಾಷಾ ಸಂದರ್ಭ. ಇಂದಿನದು ಕನ್ನಡ ಇಂಗ್ಲೀಷ್ ದ್ವಿಭಾಷಾ ಸಂದರ್ಭ. ಕನ್ನಡ ಎನ್ನುವುದು ಕನ್ನಡ ಭಾಷೆ, ಕನ್ನಡ ಜನ, ಕನ್ನಡ ನಾಡು ಎಲ್ಲವನ್ನು ಒಳಗೊಳ್ಳುತ್ತದೆ. ಕನ್ನಡ ಪದ ಇಡೀ ಕರ್ನಾಟಕದ ಜನತೆಯನ್ನು ಬೆಸೆಯುವ ಸಂಕೇತವಾಗಿದೆ. ಕನ್ನಡ ಭಾಷೆಯ ಬೆಳವಣಿಗೆ ಕನ್ನಡಿಗರ ಬದುಕಿನ ಬೆಳವಣಿಗೆ ಕನ್ನಡ ನಾಡಿನ ಬೆಳವಣಿಗೆಯಾಗಿದೆ.
ಕರ್ನಾಟಕ ಎಂದರೆ ಕರುನಾಡು. ಎತ್ತರವಾದ, ವಿಶಾಲವಾದ ಕನ್ನಡ ನಾಡು. ರಾಮ ಲಕ್ಷ್ಮಣ ಸೀತೆ ದಂಡಕಾರಣ್ಯಕ್ಕೆ ಬಂದರು ಎ೦ದು ಹೇಳುವ ಪ್ರದೇಶವೇ ಕರ್ನಾಟಕವೆಂದು ಗುರುತಿಸಿದ್ದಾರೆ. ವಾಲಿ ಸುಗ್ರೀವರ ರಾಜಧಾನಿ ಪಂಪಾ ನದಿ ಇಂದಿನ ತುಂಗಭದ್ರಾ ನದಿ. ಮಹಾಭಾರತದಲ್ಲಿ ಕರ್ನಾಟ ಪದದ ಉಲ್ಲೇಖವಿದೆ. ಮಹಿಷಕ ಈಗಿನ ಮೈಸೂರು ಪ್ರದೇಶ. ವಾನಶಕ ಬನವಾಸಿಯ ಸುತ್ತಮುತ್ತಲಿನ ಪ್ರದೇಶ. ಕುಂತಲ ಎನ್ನುವುದು ಈಗಿನ ಉತ್ತರ ಕರ್ನಾಟಕ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಪರಶುರಾಮ ಕ್ಷೇತ್ರ ಎಂದು ಕರೆಯುತ್ತಾರೆ.


ನೃಪತುಂಗ ಆಸ್ಥಾನ ಕವಿ ಶ್ರೀವಿಜಯನು ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಮಾ ಗೋದಾವರಿ ವರಮಿರ್ಪ ನಾಡದಾ ಕನ್ನಡದೊಳ್..ಎಂಬುದಾಗಿ ಕನ್ನಡ ನಾಡಿನ ವಿಸ್ತಾರ ಚೆಲುವು ವರ್ಣಿಸಿದ್ದಾನೆ. ಗೋದಾವರಿಯು ಮಹಾರಾಷ್ಟದ ಉತ್ತರದ ಕೊನೆಯ ನಾಸಿಕ್ ಜಿಲ್ಲೆಯ ನದಿ. ಕದಂಬರು ಕನ್ನಡದ  ಮೊದಲ ಅರಸರು (ಕ್ರಿ.ಶ.೩೪೫-೫೧೯). ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ದೊರೆತಿರುವ ಕ್ರಿ.ಶ.೪೫೦ರ ಕಾಲದ ಹಲ್ಮಿಡಿ ಶಾಸನ ಮೊತ್ತ ಮೊದಲ ಕನ್ನಡ ಗದ್ಯ ಶಾಸನ. ಈ ಶಾಸನ ಹಲ್ಮಿಡಿಯ ವೀರಭದ್ರ ದೇವಾಲಯದಲ್ಲಿತ್ತು. ೧೯೩೦ರರಲ್ಲಿ ಶಾಸನ ತಜ್ಞ ಎಂ.ಹೆಚ್.ಕೃಷ್ಣ ಬೆಳಕಿಗೆ ತಂದರು. ಬನವಾಸಿ ಕದಂಬರ ಕಾಕುಸ್ಥವರ್ಮನ ಹೆಸರಿನಲ್ಲಿ ಅವನ ಮಗ ಶಾಂತಿವರ್ಮನ ಆಳ್ವಿಕೆಯ ಅವಧಿಯಲ್ಲಿ ಹಾಕಿಸಿದ ದಾನ ಶಾಸನ. ೧೯೩೬ರಲ್ಲಿ ಮೂಲ ಶಾಸನವನ್ನು ಪ್ರಾಚ್ಯವಸ್ತು ಸಂಶೋಧನ ಇಲಾಖೆಗೆ ರವಾನಿಸಲಾಯಿತು. ಪ್ರಸ್ತುತ ಬೇಲೂರು ತಾಲೂಕು ಹಲ್ಮಿಡಿಯಲ್ಲಿ ಶಾಸನದ ಪ್ರತಿಕೃತಿ ಮಂಟಪವನ್ನು ನಿರ್ಮಿಸಲಾಗಿದೆ. ಹಲ್ಮಿಡಿ ಶಾಸನದಿಂದ ಮುಂದಕ್ಕೆ ೧೯ನೆಯ ಶತಮಾನದವರೆಗೆ ಸುಮಾರು ೩೦ ಸಾವಿರಕ್ಕೂ ಮೇಲ್ಪಟ್ಟು ಕರ್ನಾಟಕ ಶಾಸನಗಳು ದೊರೆತಿವೆ.
ಕ್ರಿ.ಶ.೯೨೦ರ ಸುಮಾರಿಗೆ ರಚಿತವಾದ ವಡ್ಡಾರಾಧನೆ ಕೃತಿಯು ಕನ್ನಡದ ಲಭ್ಯ ಮೊತ್ತ ಮೊದಲ ಗದ್ಯ ಕಾವ್ಯ. ಜಿನಮುನಿಗಳ ಸಲ್ಲೇಖನ ವ್ರತದ ೧೯ ಕತೆಗಳಿರುವ ಈ ಕೃತಿಯನ್ನು ಶಿವಕೋಟ್ಯಾಚಾರ್ಯರು ರಚಿಸಿದ್ದಾರೆ. ೧೦ನೆಯ ಶತಮಾನ ಕನ್ನಡ ಸಾಹಿತ್ಯದ ಸುವರ್ಣಯುಗ. ಕನ್ನಡದ ಆದಿಕವಿ ಪಂಪನ ಆದಿ ಪುರಾಣ ಮತ್ತು ವಿಕ್ರಮಾರ್ಜುನ
 ವಿಜಯ ಚಂಪೂ ಕಾವ್ಯ ಪರಂಪರೆಯ ಮೌಲಿಕ ಕೃತಿಗಳು. ಪೊನ್ನನ ಶಾಂತಿಪುರಾಣ, ರನ್ನನ ಸಾಹಸ ಭೀಮ ವಿಜಯಂ, ಅಜಿತ ತೀರ್ಥಂಕರ ಪುರಾಣ ತಿಲಕ, ೧ನೇ ನಾಗವರ್ಮನ ಕರ್ನಾಟಕ ಕಾದಂಬರಿ. ಛಂದೋಬುದಿ, ದುರ್ಗಸಿಂಹನ ಪಂಚತಂತ್ರ ಮುಂತಾದವು ಪಂಪಯುಗದ ಶ್ರೇಷ್ಠ ಕೃತಿಗಳು.


೧೨ನೆಯ ಶತಮಾನದ ವಚನ ಚಳುವಳಿ ಕನ್ನಡ ಭಾಷೆ ಬಳಕೆಯಲ್ಲಿ ಕ್ರಾಂತಿಯ ಬಿರುಗಾಳಿ. ಈ ಕಾಲದಲ್ಲಿ ಶಿವಶರಣರ ಚಳುವಳಿ ಪ್ರಾರಂಭವಾಯಿತು. ಜಾತಿ ಪದ್ದತಿಯನ್ನು ತೊಡೆದು ಹಾಕಿ ಶಿವಭಕ್ತರೆಲ್ಲಾ ಸಮಾನ ಎಂದು ಸಾರಿ ಶುದ್ಧವಾದ ಬದುಕಿಗೆ ಮಹತ್ವ ನೀಡುವ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿ ಇದು. ಇದರ ಪ್ರಭಾವ ಸಾಹಿತ್ಯದ ಮೇಲೆಯೂ ಆಯಿತು.ಅಲ್ಲಮಪ್ರಭು, ಬಸವೇಶ್ವರ, ದೇವರ ದಾಸಿಮಯ್ಯ, ಅಕ್ಕಮಹಾದೇವಿ ಮೊದಲಾದವರು ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.
ಹರಿಹರ ರಾಘವಾಂಕ ಪದ್ಮರಸರು ೧೩ನೆಯ ಶತಮಾನ ಮಹತ್ವದ ಕವಿಗಳು. ಹರಿಹರನು ತಾನು ಯಾವ ಮನುಷ್ಯನನ್ನು ಸ್ತುತಿಸುವುದಿಲ್ಲ ಹಗಲಿರುಳೂ ಶಿವನ ಪೂಜೆಗೆ ತಾನು ಮುಡಿಪು ಎಂದು ಸಾರಿದ. ಷಟ್ಪದಿಯನ್ನು ಪರಿಣಾಮಕಾರಿಯಾಗಿ ಬಳಸಿದ ರಾಘವಾಂಕನ ಹರಿಶ್ಚಂದ್ರ ಕಾವ್ಯ ಬಹು ಜನಪ್ರಿಯವಾದುದು. ಲೀಲಾವತಿ ಪ್ರಬಂಧ, ನೇಮಿನಾಥ ಪುರಾಣ ಬರೆದ ನೇಮಿಚಂದ್ರ, ಜಗನ್ನಾಥ ವಿಜಯ ಬರೆದ ರುದ್ರಭಟ್ಟ, ಯಶೋಧರ ಚರಿತೆ, ಅನಂತನಾಥ ಪುರಾಣ ಬರೆದ ಜನ್ನ ಈ ಕಾಲದ ಇತರ ಗಮನಾರ್ಹ ಕವಿಗಳು. ಅಂಡಯ್ಯನೆಂಬ ಕವಿ ಸಂಸ್ಕೃತವನ್ನೇ ಬಳಸದೆ ಕನ್ನಡ ಶಬ್ಧಗಳನ್ನೇ ಬಳಸಿ ಕಬ್ಬಿಗರ ಕಾವಂ ಕೃತಿ ರಚಿಸಿದ.
ಷಟ್ಪದಿ ಛಂದಸ್ಸನ್ನು ಬಳಸಿ ಕುಮಾರವ್ಯಾಸ ಕರ್ಣಾಟ ಭಾರತ ಕಥಾಮಂಜರಿ ಕೃತಿ ರಚಿಸಿದರೆ ಚಾಮರಸ ಪ್ರಭುಲಿಂಗ ಲೀಲೆ ರಚಿಸಿದ. ಜನರಿಗಾಗಿ ಬರೆಯುವ ಪರಿಶುದ್ದ ಜೀವನವನ್ನು ಹಾಡಿ ಹೊಗಳುವ ಸಾಹಿತ್ಯವನ್ನು ಕೊಟ್ಟವರು ನಿಜಗುಣ ಶಿವಯೋಗಿ ಮತ್ತು ಸರ್ವಜ್ಞರು. ೧೬ನೆಯ ಶತಮಾನದಲ್ಲಿ ದಾಸ ಸಾಹಿತ್ಯವು ಜನ ಸಾಮಾನ್ಯರೊಡನೆ ಸಂಪರ್ಕವನ್ನು ಬೆಸೆಯಿತು. ಪುರಂದರದಾಸರು, ಕನಕದಾಸರು  ಹಾಡುಗಳಲ್ಲಿ ತಮ್ಮಅನುಭವವನ್ನು ರೂಪಿಸಿ ಮನೆ ಮನೆಗೆ ಕೊಂಡೊಯ್ದರು. ಕುಮಾರ ವಾಲ್ಮಿಕಿಯು ರಾಮಾಯಣದ ಕಥೆಯನ್ನು ಷಟ್ಪದಿಯಲ್ಲಿ ಹೇಳಿದ. ಲಕ್ಷ್ಮೀಶನ ಜೈಮಿನಿ ಭಾರತ ಬಹು ಜನಪ್ರಿಯವಾಯಿತು. ಭರತೇಶ ವೈಭವವನ್ನು ಬರೆದ ರತ್ನಾಕರ ವರ್ಣಿ ಬಳಸಿದ ಸಾಂಗತ್ಯ ಛಂದಸ್ಸು ಜನಪದ ಕಾವ್ಯದ ಛಂದಸ್ಸು. ರಾಜಶೇಖರ ವಿಳಾಸಂ, ಶಬರ ಶಂಕರ ವಿಳಾಸಂಗಳನ್ನು ರಚಿಸಿದ ಷಡಕ್ಷರಿ ಕವಿ ಚಂಪೂ ಮಾಧ್ಯಮ ಬಳಸಿ ಕರುಣಾರಸ ಹರಿಸಿದ ಕನ್ನಡದ ಮೊದಲನೆಯ ನಾಟಕ ಸಿಂಗರಾರ‍್ಯ ರಚಿಸಿದ ಮಿತ್ರವಿಂದಾ ಗೋವಿಂದ. ಈ ನಾಟಕವು ಸಂಸ್ಕೃತ ರತ್ನಾವಳಿ ನಾಟಕದ ಅನುವಾದಿತ ಕೃತಿ. ಕೇರಳಾಪುರದ ಬಸವಪ್ಪ ಶಾಸ್ತಿಗಳ ಕರ್ನಾಟಕ ಶಾಕುಂತಲ ನಾಟಕಂ (೧೮೮೨) ಒಂದು ಕೇವಲ ಭಾಷಾಂತರಿತ ಕೃತಿಯಾಗಿರದೆ ರೂಪಾಂತರಿತ ಕೃತಿಯಾಗಿದೆ.
ಮುದ್ದಣ್ಣನ ರಾಮಾಶ್ವಾಮೇಧದೊಂದಿಗೆ (೧೮೯೮) ಆಧುನಿಕ ಯುಗವು ಪ್ರಾರಂಭವಾಯಿತು. ಈ ಸಾಹಿತ್ಯದ ಮೇಲೆ ಇಂಗ್ಲೀಷ್ ಪ್ರಭಾವ ಗಾಢವಾದುದು. ಇಂಗ್ಲೀಷ್ ಸಾಹಿತ್ಯದಿಂದ ಭಾವಗೀತೆ, ಕಾದಂಬರಿ, ಸಣ್ಣಕತೆ, ಏಕಾಂಕ ನಾಟಕ, ಲಲಿತ ಪ್ರಬಂಧ ಮೊದಲಾದ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ದತ್ತಾಗಿ ಬಂದವು. ಇಲ್ಲಿ ವಿಶಿಷ್ಟವಾಗಿ ಬೆಳೆದವು. ಗದ್ಯವು ಹೊಸ ಶಕ್ತಿಯನ್ನು ಪಡೆದುಕೊಂಡಿತು. ಒಂದು ಕೃತಿಯನ್ನು ಒಬ್ಬ ಬರಹಗಾರನನ್ನು ವಸ್ತುವಾಗಿ ಆರಿಸಿಕೊಂಡು ಅಧ್ಯಯನ ಮಾಡಿ ಸಾಹಿತ್ಯ ವಿಮರ್ಶೆ ಬೆಳೆಯಿತು. ಈ ಕಾಲವನ್ನು ನವೋದಯ ಯುಗ ಎಂದು ಕರೆದರು.


೧೯೫೨ರ ಹೊತ್ತಿಗೆ ಹಲವಾರು ಸಾಹಿತಿಗಳಿಗೆ ದೇಶಕ್ಕೆ ಬಂದ ಸ್ವಾತಂತ್ರ್ಯದಿಂದ ಹೆಚ್ಚಿನ ಫಲವಾಗಲಿಲ್ಲ ಎನಿಸಿತು. ಅವರ ಗಮನವು ಮನುಷ್ಯನ ಮನಸ್ಸಿನ ಕಡೆಗೆ ಹರಿಯಿತು. ಅವರು ಭಾಷೆಯನ್ನು ಹೊಸ ರೀತಿಯಲ್ಲಿ ಬಳಸಲು ಆರಂಭಿಸಿದರು. ಇವರು ಬರೆದ ಸಾಹಿತ್ಯದ ಮೇಲೆ ಯೂರೋಪಿನ ಮತ್ತು ಇಂಗ್ಲೆಂಡಿನ ಕಾಮು, ಕಾಫ್ಕ, ಸ್ಯಾಮ್ಯುಯಲ್, ಬೆಕಟ್, ಎಲಿಯಟ್ ಮೊದಲಾದವರ ಪ್ರಭಾವವಿತ್ತು. ಇವರ ಸಾಹಿತ್ಯಕ್ಕೆ ನವ್ಯ ಸಾಹಿತ್ಯ ಎಂದರು.
೧೯೭೦ರ ಹೊತ್ತಿಗೆ ಬಂಡಾಯ ಸಾಹಿತ್ಯ ಮೂಡಿ ಬಂದಿತು. ಇದು ಜಾತಿ ಪದ್ಧತಿ, ಸಮಾಜದಲ್ಲಿ ಅಸಮಾನತೆ, ಶೋಷಣೆ ವಿರುದ್ದ ಸಿಡಿದೆದ್ದಿತು. ದಲಿತರು ಬರೆದ ಪ್ರಗತಿಪರ ಸಾಹಿತ್ಯ ದಲಿತ ಸಾಹಿತ್ಯವೆಂದು ಗುರುತಿಸಲಾಯಿತು. ನವೋದಯದ ಕಾಲದಿಂದ ಈಚಿನ ದಲಿತ  ಬಂಡಾಯ ಸಾಹಿತ್ಯದವರೆಗಿನ ಕನ್ನಡ ಸಾಹಿತ್ಯವು ಹಿಂದಿಯನ್ನು ಬಿಟ್ಟರೆ ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿದೆ.


೧೯೧೭ರಲ್ಲಿ ಆಲೂರು ವೆಂಕಟರಾಯರು ರಚಿಸಿದ ಕರ್ನಾಟಕ ಗತ ವೈಭವ ಕೃತಿ ಕನ್ನಡಿಗರ ಮನದಲ್ಲಿ ಏಕೀಕೃತ ಕರ್ನಾಟಕದ ಕಲ್ಪನೆಯನ್ನು ಮೂಡಿಸಿತು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹುಯಿಲಗೋಳ ನಾರಾಯಣರಾಯರು ರಚಿಸಿದ ಈ ಗೀತೆಯನ್ನು ೧೯೨೪ರಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡಲಾಯಿತು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕನ್ನಡ ನಾಡು ೨೦ಕ್ಕಿಂತಲೂ ಹೆಚ್ಚು ಆಡಳಿತ ಘಟಕಗಳಲ್ಲಿ ಸೇರಿಹೋಗಿತ್ತು. ೧೯೫೬ರ ನವೆಂಬರ್ ೧ರಂದು ಬೇರೆ ಬೇರೆ ಆಡಳಿತಕ್ಕೆ ಒಳಪಟ್ಟಿದ ಕರ್ನಾಟಕದ ೨೦ಕ್ಕೂ ಹೆಚ್ಚು ಭಾಗಗಳು ಐಕ್ಯಗೊಂಡು ಏಕ ಆಡಳಿತಕ್ಕೆ ಒಳಪಟ್ಟು ಕರ್ನಾಟಕ ಏಕೀಕರಣವಾಯಿತು. ಅಂದು ನವ ಮೈಸೂರು ಎಂದು ಹೆಸರಿಸಲಾದ ೧೯ ಜಿಲ್ಲೆಗಳ ಕನ್ನಡ ರಾಜ್ಯಕ್ಕೆ ೧೯೭೩ರ ನವೆಂಬರ್ ೧ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಈ ನೆನಪಿಗಾಗಿ ೧೯೫೬ರಿಂದ ಪ್ರತಿವರ್ಷವೂ ನವೆಂಬರ್ ೧ರಂದು ರಾಜ್ಯೋತ್ಸವ ದಿನವೆಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ನಾಡನ್ನು ಮತ್ತು ನುಡಿಯನ್ನು ತಾಯಿಯ ಸ್ಥಾನದಲ್ಲಿಟ್ಟು ಗೌರವಿಸುವ ಪರಿಪಾಠ ನವೋದಯದಲ್ಲಿ ಆರಂಭವಾಯಿತು. ನಾಡು ನುಡಿಯೊಂದಿಗೆ ಇಂಥ ಭಾವನಾತ್ಮಕ ಸಂಬಂಧ ಏಕೀಕರಣದ ಹೋರಾಟದ ಸಂದರ್ಭದಲ್ಲಿ ಅಗತ್ಯವಾಗಿತ್ತು. ಕನ್ನಡವನುಳಿದೆನಗೆ ಅನ್ಯಜೀವವಿಲ್ಲ ಕನ್ನಡವೇ ಎನ್ನುಸಿರು ಪೆತ್ತನ್ನತಾಯಿ.. ಬೆನಗಲ್‌ ರಾಮರಾವ್‌ ಕನ್ನಡಾಂಬೆಯ ಹಿರಿಮೆ ಸಾರಿದರು. ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸುತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ.. ಕನ್ನಡಿಗರ ತಾಯಿಯನ್ನು ಕಾವ್ಯದಲ್ಲಿ ಕಂಡರು ರಾಷ್ಟ್ರ ಕವಿ ಮಂ. ಗೋವಿಂದ ಪೈ. ಬಾಳ್ ಕನ್ನಡ ತಾಯ್ ಏಳ್ ಕನ್ನಡ ತಾಯ್ ಆಳ್ ಕನ್ನಡ ತಾಯ್‌ ಕನ್ನಡಿಗರೊಡತಿ ಓ ರಾಜೇಶ್ವರಿ ಎಂದರು ಬಿಎಂಶ್ರೀಯವರು. ರಾಷ್ಟ್ರ ಕವಿ ಕುವೆಂಪು ರಚಿಸಿದ ಜಯ ಬಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ.. ಸರ್ವ ಜನಾಂಗದ ಈ ಗೀತೆ ನಾಡಗೀತೆಯಾಯಿತು.
ನೀವು ಕನ್ನಡವನ್ನು ಕಾಪಾಡಿಕೊಂಡು ಬಂದರೆ ಅದು ತಾಯಿ ನುಡಿಯಾಗಿ ಉಳಿಯುತ್ತದೆ, ಬೆಳೆಯುತ್ತದೆ. ಇಲ್ಲದಿದ್ದರೆ ಬಾಯಿ ಮಾತಾಗಿ ಉಳಿಯುತ್ತದೆ ಎಂದಿದ್ದಾರೆ ಡಾ. ಎ.ಆರ್.ಕೃಷ್ಣಶಾಸ್ತ್ರೀಯವರು. ಕವಿ ಬಿಎಂಶ್ರೀ ಭುವನೇಶ್ವರಿ ರಥವನ್ನೇರಿದಳು ದಾರಿ  ಬಿಡಿ ದಾರಿ ಬಿಡಿ ಅಡ್ಡ ಬಾರದಿರಿ.. ಎಂದು ಹಾಡಿದರಲ್ಲಾ ಈ ಭುವನೇಶ್ವರಿ ದೇವಿ ವಿಗ್ರಹ ಉತ್ತರ ಕನ್ನಡ ಜಿಲ್ಲೆಯ ಭುವನಗಿರಿಯಲ್ಲಿದೆ. ಸಿದ್ದಾಪುರದಿಂದ ಕುಮಟಾ ಮಾರ್ಗದಲ್ಲಿ ೮ ಕಿ.ಮೀ ಸಾಗಿದರೆ ಸಿಗುತ್ತದೆ ಭುವನಗಿರಿ. ಮುನ್ನೂರು ಅಡಿ ಎತ್ತರದ ಬೆಟ್ಟದ ಮೇಲೆ ಭುವನೇಶ್ವರಿ ದೇವಾಲಯವಿದೆ. ಭುವನಗಿರಿಯಲ್ಲಿ ಭುವನೇಶ್ವರಿ ದೇಗುಲ ನಿರ್ಮಿಸಿದವರು ಬಿಳಗಿ ಅರಸರು. ಬಿಳಗಿ ಅರಸರ ಕೊನೆಯ ದೊರೆ ಬಸವೇಂದ್ರ ೧೬೯೨ರಲ್ಲಿ ಈ ದೇಗುಲ ಹಾಗೂ ಕಲ್ಯಾಣಿ ನಿರ್ಮಿಸಿದ. ಬಿಳಗಿ ಅರಸರ ಅಂದಿನ ರಾಜಧಾನಿ ಶ್ವೇತಪುರ ಇಂದಿನ ಬಿಳಗಿ. ಭುವನಗಿರಿ ಬಿಳಗಿ ನಡುವಿನ ಅಂತರ ೫ ಕಿ.ಮೀ. ಇಲ್ಲಿ ನಿತ್ಯಪೂಜೆ ಮಾಘ ಮಾಸದಲ್ಲಿ ರಥೋತ್ಸವ ಇರುತ್ತದೆ. ಕದಂಬ ವಿಜಯನಗರ ಅರಸರೆಲ್ಲ ಭುವನೇಶ್ವರಿಯ ಆರಾಧಕರು. ವಿಜಯನಗರದ ಸಾಮಂತರು ಬಿಳಗಿ ಅರಸರು. ಶಬ್ದಾನುಶಾಸನಂ (೧೬೦೪) ವ್ಯಾಕರಣ ಗ್ರಂಥ ಬರೆದ ಭಟ್ಟಾಕಳಂಕ ಬಿಳಗಿಯವನು.  


ಏರಿಸಿ ಹಾರಿಸಿ ಕನ್ನಡದ ಬಾವುಟ ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ ಶ್ರೀಯವರ ಈ ಹಾಡು ಕನ್ನಡ ಬಾವುಟಕ್ಕೆ ಸ್ಫೂರ್ತಿ. ೧೮೫೬ರಲ್ಲಿ ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ಜನತೆ ಒಂದುಗೂಡಿಸಿ ಚೆಲುವ ಕನ್ನಡ ನಾಡು ನಿರ್ಮಿಸಲು ದನಿ ಎತ್ತಿದರು. ೧೯೦೫ರ ಬಂಗಾಳ ವಿಭಜನೆ ಕನ್ನಡಿಗರ ಏಕೀಕರಣ ಹೋರಾಟಕ್ಕೆ ಪ್ರೇರಣೆಯಾಯಿತು. ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ (೧೮೯೦) ಕರ್ನಾಟಕ ಸಭಾ (೧೯೧೬) ಮತ್ತು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು (೧೯೧೫) ಇವುಗಳ ಸ್ಥಾಪನೆಯಿಂದ ಕರ್ನಾಟಕ ಏಕೀಕರಣ ಹೋರಾಟಕ್ಕೆ ಹೊಸ ಶಕ್ತಿ ಬಂದಿತು. ೧೯೨೦ರ ನಾಗಪುರ ಕಾಂಗ್ರೆಸ್‌ ಅಧಿವೇಶನದಲ್ಲಿ ೪೦೦ ಕನ್ನಡಿಗರಿಂದ ಪ್ರಾಂತೀಯ ಕಾಂಗ್ರೆಸ್ ಸಮಿತಿ ಅಸ್ತಿತ್ವಕ್ಕೆ. ೧೯೩೮ರಲ್ಲಿ ಏಕೀಕರಣ ಸಮಿತಿ ಸ್ಥಾಪನೆ. ದೆಹಲಿಯಲ್ಲಿ ಏಕೀಕರಣದ ನಿಜಲಿಂಗಪ್ಪ ಎಂದೇ ಚಿರಪರಿಚಿತರಾಗಿದ್ದ ಎಸ್ಎನ್ ಪ್ರಾಂತ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದರು. ಸಾಹಿತಿ ಅನಕೃ ನೇತೃತ್ವದಲ್ಲಿ ಕರ್ನಾಟಕ ಸಂಯುಕ್ತ ರಂಗ ಸಂಘಟನೆ ರೂಪಿತಗೊಂಡಿತು. ಕನ್ನಡದ ಕೆಚ್ಚಿನ ನಾಯಕರೆನಿಸಿದ್ದ ಮ.ರಾಮಮೂರ್ತಿಯವರಿಂದ ೧೯೬೬ರಲ್ಲಿ ಕನ್ನಡ ಪಕ್ಷ ಸ್ಥಾಪನೆ. ೧೯೬೬ರಲ್ಲಿ ಬೆಂಗಳೂರು ಛೇಂಬರ್‌ ಆಫ್‌ ಕಾಮರ್ಸ್ ಆವರಣದಲ್ಲಿ ಕನ್ನಡ ಪಕ್ಷದ ಬಾವುಟ ಹಾರಿತು. ಅಂದಿನಿಂದ ಕನ್ನಡ ಪಕ್ಷದ ಬಾವುಟ ಚಳುವಳಿಗಾರರಲ್ಲಿ ಜನಪ್ರಿಯವಾಗತೊಡಗಿತು. ಕೆಂಪು ಹಳದಿ ಬಣ್ಣಗಳು ಕುಂಕುಮ ಆರಿಶಿಣದ ಪ್ರತೀಕ. ತಾಯಿ ಭುವನೇಶ್ವರಿ ಕುಂಕುಮ ಅರಿಶಿಣದಿಂದ ಸುಮಂಗಲಿಯಾಗಿ ಕಂಗೊಳಿಸುತ್ತಿರಲಿ ಎಂಬುದೇ ಕನ್ನಡ ಭಾವುಟದ ಆಶಯ.

——————————————–

ಗೊರೂರು ಅನಂತರಾಜು, ಹಾಸನ.

Leave a Reply

Back To Top