ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖ
ಹುಲು ಮಾನವರಾದ ನಾವು
ಗೆಲುವನ್ನು ಹಬ್ಬದಂತೆ
ಸಿಹಿಯೊಂದಿಗೆ ಸಂಭ್ರಮಿಸುತ್ತೇವೆ !
ಗೆಲುವಿಗೆ ನನ್ನ ಪರಿಶ್ರಮ
ನನ್ನ ಅಪರಿಮಿತ ಜ್ಞಾನ
ಕಾರಣವೆಂದು ಅಹಂಭಾವ ಪಡುತ್ತೇವೆ !
ಹೂಹಾರಗಳನ್ನು
ಕೊರಳಿಗೆ ಹಾಕಿಕೊಂಡು
ಫೋಟೋಕೆ ಫೋಜು ನೀಡುತ್ತೇವೆ !
ಹಿರಿಯರ ಮುಂದೆ
ಎದೆ ಸೆಟೆಸಿ ನಡೆದು
ನನ್ನಂತವರಾರಿಲ್ಲವೆಂದು ಬೀಗುತ್ತೇವೆ !
ನಮ್ಮ ಕಾಲುಗಳು
ಧರೆಯ ಮೇಲೆ ನಿಲ್ಲದೆ
ಆಗಸದಲ್ಲಿ ಹಕ್ಕಿಯಂತೆ ಹಾರಾಡುತ್ತವೆ !
ಆದರೆ…
ಸೋತಾಗ ನಾವು
ಸೋಲನ್ನು ಒಪ್ಪಿಕೊಳ್ಳದೆ
ಬೇರೆಯವರ ಮೇಲೆ ಗೂಬೆ ಕೂರಿಸುತ್ತೇವೆ !
ನನಗವರು ತಿಳಿಯದಂತೆ
ಮೋಸ ಮಾಡಿದರೆಂದು
ಕಣ್ಣೀರು ಸುರಿಸಿ ಅನುಕಂಪ ಸೃಷ್ಟಿಸುತ್ತೇವೆ !
ನನ್ನವರೇ ನನ್ನ ಕಾಲೆಳೆದು
ಹಿಂದಾಕಿದರೆಂದು ಹಲಬುತ್ತ
ಬೊಟ್ಟು ಮಾಡಿ ತೋರಿಸುತ್ತೇವೆ !
ಈ ಎಲ್ಲವುಗಳನ್ನು ಮಾಡುವ ಮುನ್ನ
ನಮಗೇಕೆ ತಿಳಿಯುವುದಿಲ್ಲ
ಸೋಲು ಗೆಲುವು ಒಂದೇ ನಾಣ್ಯದ ಮುಖವೆಂದು !!
ಪ್ರೊ. ಸಿದ್ದು ಸಾವಳಸಂಗ