ಕಾವ್ಯ ಸಂಗಾತಿ
ರಾಜೇಶ್ವರಿ ಎಸ್. ಹೆಗಡೆ.
ಹಸಿರಿನ ತಂಪಲ್ಲಿ ಅರಳಿದ ಮಂದಾರ.
ವಸುಂದರೆಯುಟ್ಟ ಹಸಿರು ಸೀರೆಯ ಮೇಲೆ
ನೇಸರನ ಹೊಂಗಿರಣಗಳ ಸುಂದರ ಮಾಲೆ
ನಿತ್ಯೋತ್ಸವ ಕವಿಯ ವರ್ಣನೆಯಂತ ಸೊಬಗು
ಭೂರಮೆಗೆ ದೃಷ್ಟಿ ಬೀಳುವ ಸೌಂದರ್ಯದ ಮೆರಗು.
ಹಸಿರಿನ ತಂಪಲ್ಲಿ ಅರಳಿ ನಿಂತ ಮಂದಾರ ಕುಸುಮ
ಹಲವು ಬಣ್ಣಬಣ್ಣದಿ ಚಿತ್ತಾರ ಮೂಡಿಸು ಘಮ ಘಮ
ಗಾಳಿ ಮಳೆ ಬಿಸಿಲಿಗೆ ಚಿಗುರಿದ ಹಸಿರೆಲೆ ಗಿಡವಲ್ಲಿ
ಬದುಕಿನ ನೋವು ನಲಿವಿಗೆ ಪ್ರೇರಣೆ ನೀಡುವುದಲ್ಲಿ.
ಹಸಿರಲ್ಲಡಗಿದ ಮಂದಾರ ದೇವರ ಮುಡಿಗೆ ಶೃಂಗಾರ
ಜೇನ ಹೀರಲು ಬರುವ ಭ್ರಮರಗಳಿಗದು ದಿನ ಆಹಾರ
ಹಸಿರುಟ್ಟ ಗಿಡ ಮರಗಳು ನಮ್ಮ ಬಾಳಿಗೆ ಉಸಿರುಗಳು
ಉಸಿರು ನೀಡು ಹಸಿರುಗಳ ಬೆಳೆಸಬೇಕು ನಾವುಗಳು.
ಬಳಲಿ ಬಸವಳಿದು ಬಂದವರಿಗೆ ಕೊಡುವುದು ನೆರಳು
ಪಕ್ಷಿ ಸಂಕುಲಗಳಿಗೆ ಪ್ರಾಣಭಿಕ್ಷೆ ನೀಡುವ ಬಂಗಲೆಗಳು
ಹಸಿರ ಉಳಿಸಿ ಪ್ರಕೃತಿ ಬೆಳೆಸಿ ಕಾಡು ನಾಶ ಮಾಡದಿರಿ
ಮನೆಗೊಂದು ಮರ ಬೆಳೆಸಿ ಉಳಿಸಿ ವಿನಾಶದ ವನಸಿರಿ
ರಾಜೇಶ್ವರಿ ಎಸ್. ಹೆಗಡೆ.
Nice