ಈರಪ್ಪ ಬಿಜಲಿ ಕೊಪ್ಪಳ ಗಜಲ್

ಕಾವ್ಯ ಸಂಗಾತಿ

ಈರಪ್ಪ ಬಿಜಲಿ ಕೊಪ್ಪಳ

ಗಜಲ್

ಓ ಒಲವೇ ನೀ ಬರುವ ಹಾದಿಗೆ ಮಡಿ ಹಾಸಿ ಹೂ ಗುಚ್ಚ ಹಿಡಿದು ಕಾದಿರುವೆ
ಓಲಾಡಿ ಬಳುಕಾಡಿ ನಡೆವ ನಡಿಗೆ ಶೈಲಿ ಕಂಡು ಆನಂದ ಪಡುತ ನಿಂದಿರುವೆ ||೧||

ಮಾಯಾಪುರದ ಮೇನಕೆಯೇ ತುಟಿಬಿಚ್ಚಿ
ಸವಿನುಡಿಯ ಆಡಬಾರದೇ
ನಯನ ಮನೋಹರವಾದ ಮೈಮಾಟಕೆ
ಪರವಶನಾಗಿ ಬಯಸಿ ಬಂದಿರುವೆ||೨||

ಕಣ್ಣ ಕೊಳದಲ್ಲಿ ಚಿಗುರಿದ ಪ್ರೇಮ ನೈದಿಲೆ
ಬಿರಿದು ಕಂಪು ಸೂಸುತಿದೆಯಲ್ಲ
ಬೆಣ್ಣೆಯಿಂದ ತಿದ್ದಿತೀಡಿದ ಸೌಂದರ್ಯ ಲಹರಿಯಲಿ ನನ್ನನ್ನು ಕೊಂದಿರುವೆ ||೩||

ಅಪ್ಪಟ ಅಪರಂಜಿ ಸುಗುಣ ಸಂಪನ್ನೆಯ
ಮೆಚ್ಚಿ ಮತಿಹೀನನಾದೆನಲ್ಲ
ಅಪ್ಸರೆಯೇ ನಾಚುವಂತೆ ಚಿತ್ತ ಗೆಲ್ಲುವ ಅಂದವಾದ ವದನವ ಹೊಂದಿರುವೆ ||೪||

ಅಮೃತ ಸಿಂಚನಗೊಳಿಸು ಬಿಜಲಿಯ ಹೃದಯದಿ ಮೊಳೆತ ಪ್ರೀತಿ ಪೈರಿಗೆ
ನಮ್ರತೆಯಿಂದಲಿ ಒಪ್ಪಿಗೆಯ ಸೂಸೇ
ಬಿಗಿದಪ್ಪಿಕೊಳ್ಳಲು ನಾ ಮುಂದಿರುವೆ ||೫||

———————

ಈರಪ್ಪ ಬಿಜಲಿ ಕೊಪ್ಪಳ

Leave a Reply

Back To Top