ಕಾವ್ಯ ಸಂಗಾತಿ
ಅಮುಭಾವಜೀವಿ ಮುಸ್ಟೂರು
ಯುದ್ಧ ಮಾರಿ
ಯಾರದೋ ಪ್ರತಿಷ್ಠೆಗಾಗಿ
ಇನ್ಯಾರದೋ ಹಪಾಹಪಿಗಾಗಿ
ತನ್ನ ಕುಲದವರ ಕೊಂದು ಹಾಕಿ
ಗೆದ್ದು ಬೀಗುವ ದರ್ದು ನಿಮಗೇಕೆ
ನಿಮ್ಮ ಮನೆಯವರಾರು ಸತ್ತಿಲ್ಲ ನೋಡಿರಲ್ಲಿ
ಬೀದಿಯಲ್ಲಿ ದುಡಿದು ತಿನ್ನುವ ದಿನಗೂಲಿ
ದೇಶಾಭಿಮಾನದ ಗುಂಗಲ್ಲಿ ಪ್ರಾಣ ತೆತ್ತ ಸೈನಿಕರಲ್ಲಿ
ಮನೆಗೆ ಆಧಾರವಾದ ಯಜಮಾನನ ಕಳೆಬರಹಗಳೆ ಬಿದ್ದಿವೆಯಿಲ್ಲಿ
ಏನು ಅರಿಯದ ಕಂದಮ್ಮಗಳು
ರಕ್ತದ ನಡುವಿನಲ್ಲಿ ನೆಂದು ಬಿದ್ದಿವೆ
ಹೆತ್ತವರ ಕಳೆದುಕೊಂಡ ಮಕ್ಕಳು
ಭಯಭೀತಿಯಲಿ ಅನಾಥರಾಗಿ ಆಕ್ರಂದಿಸುತ್ತಿವೆ
ಧರ್ಮದ ಅರ್ಥ ತಿಳಿಯದ ಮತಾಂಧರ
ರಕ್ತ ಪಿಪಾಸು ಫಿರಂಗಿ ಗುಂಡಿಗೆ ಕನಿಕರವಿಲ್ಲ
ಅಧಿಕಾರ ಲಾಲಸೆಯ ಅಧ್ಯಕ್ಷ ಗಿರಿಗೆ
ಪ್ರಾಣತೆತ್ತ ಅಮಾಯಕ ದೇಹಗಳು ಕಾಣುತ್ತಿಲ್ಲ
ಶಾಂತಿ ಕದಡಿ ಕ್ರಾಂತಿಯ ಕಹಳೆಯೂದಿ
ಸಾರಿದ ಯುದ್ಧಕ್ಕೆ ಮುಗ್ಧ ಜೀವಿಗಳ ಬೆಲೆ ತಿಳಿದಿಲ್ಲ
ಕ್ರೌರ್ಯದ ಮದವೇರಿದ ನೌಕೆಗಳ ದಾಳಿಗೆ
ತತ್ತರಿಸಿದ ಸಾವು ನೋವುಗಳಿಗೆ ಮುಲಾಮ ಸಿಕ್ಕುತಿಲ್ಲ
ಹೆಣ್ಣುಗಳು ಹಣ್ಣು ಮುದಿ ಜೀವಗಳು
ಮೊಲೆ ಕಚ್ಚಿ ಮಲಗಿದ ಕಂದಗಳು
ಕತ್ತರಿಸಿ ಬಿದ್ದ ಅಂಗಾಂಗಗಳ ಕಳೆದುಕೊಂಡು
ನರಳುತ್ತಿರುವರ ಬದುಕು ಕಟ್ಟಿಕೊಡುವುದೇ ನಿಮ್ಮ ಅಧಿಪತ್ಯ
ಸಾಕು ನಿಲ್ಲಲಿ ಹಿಂಸೆಯ ಅಮಾನವೀಯತೆ
ಹೃದಯ ಹೃದಯಗಳ ಬೆಸೆಯಲಿ ಮಾನವಿಯತೆ
ವಸುದೈವ ಕುಟುಂಬಕಂ ಅದುವೇ ಜಾಗೃತೆ
ಯುದ್ದರಕ್ಕಸಿಗೆ ಕಲಿಸಬೇಕು ಚೂರು ಮಮತೆ
ಅಮುಭಾವಜೀವಿ ಮುಸ್ಟೂರು
6