ಧಾರಾವಾಹಿ-ಅಧ್ಯಾಯ –7

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಕಲ್ಯಾಣಿಯ ದುಗುಡ

ಎಷ್ಟು ಪ್ರಯತ್ನ ಪಟ್ಟರೂ ಕಲ್ಯಾಣಿಯವರಿಗೆ ನಿದ್ರೆಯೇ ಬರಲಿಲ್ಲ. ಪತಿ ಹೇಳಿದ ಮಾತು ಅರಗಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಬರ ಸಿಡಿಲು ಬಡಿದಂತೆ ಇತ್ತು ಅವರಿಗೆ ಪತಿಯ ಪ್ರತೀ ಮಾತುಗಳು. ಇಷ್ಟು ತಣ್ಣೆಗೆ ಹೇಗೆ ಇವರಿಗೆ ಈ ಮಾತುಗಳನ್ನು ಹೇಳಲು ಸಾಧ್ಯವಾಯಿತು. ಪತಿ ಭೂಮಿ ಕೊಂಡು ಕೊಳ್ಳುವ ಬಗ್ಗೆ ಮಾತ್ರ ಹೇಳುತ್ತಾರೆ ಎಂದು ಭಾವಿಸಿದ್ದ ಅವರಿಗೆ ಇಲ್ಲಿಯ ತಮ್ಮ ಸಂಪೂರ್ಣ ಆಸ್ತಿ ಮನೆ ತೋಟ ಎಲ್ಲವನ್ನೂ ಮಾರಿ ಬೇರೆ ನೆಲದಲ್ಲಿ ಹೊಸದಾಗಿ ನೆಲೆಸುವುದು ಕನಸಲ್ಲಿ ಕೂಡಾ ಯೋಚಿಸಲು ಸಾಧ್ಯ ಆಗದೇ ಇರುವ ವಿಷಯವಾಗಿತ್ತು. ಅವರಿಗೆ ಅರಿವಿಲ್ಲದೇ ಕಣ್ಣಂಚು ಒದ್ದೆಯಾಯಿತು. ಕೇರಳವನ್ನು ಬಿಟ್ಟು ಅವರು ಎಂದೂ ಬೇರೆ ರಾಜ್ಯಕ್ಕೆ ಹೋದವರಲ್ಲ. ಮಲಯಾಳಂ ಭಾಷೆ ಬಿಟ್ಟು ಬೇರೆ ಯಾವುದೇ ಭಾಷೆಯೂ ಅವರಿಗೆ ಬಾರದು. ಹುಟ್ಟಿ ಬೆಳೆದ ಊರಿನ ಬಗ್ಗೆ ಅವರಿಗೆ ಮಮಕಾರ ಇದ್ದರೂ ಮದುವೆಯ ನಂತರ ಪತಿಯೊಂದಿಗೆ ಇದ್ದಿದ್ದು ಕೇರಳದಲ್ಲೇ ಆದುದರಿಂದ ಅವರಿಗೆ ಹೆಚ್ಚಿನ ವ್ಯತ್ಯಾಸ ಏನೂ ಅನಿಸಿರಲಿಲ್ಲ. ಅವರ ತವರು ಮನೆ ಅಂಬಲಪುಳ  ಹೆಚ್ಚೇನೂ ದೂರ ಇಲ್ಲದ  ಕಾರಣ ಆಗಾಗ ಹೋಗಿ ಬರುತ್ತಾ ಇದ್ದರು. ಈಗ ಒಮ್ಮಿಂದೊಮ್ಮೆಲೆ ಎಲ್ಲವನ್ನೂ ಬಿಟ್ಟು ಬೇರೆಡೆ ಹೋಗಬೇಕು ಎಂದು ನೆನೆಯುವಾಗಲೆ ಅಳು ಬರುವಂತೆ ಆಯಿತು ಕಲ್ಯಾಣಿಗೆ. ಅದೂ ಅಲ್ಲದೇ ಮಕ್ಕಳು ಇನ್ನೂ ಚಿಕ್ಕವರು ಹೆಣ್ಣು ಮಕ್ಕಳು ಹತ್ತನೇ ತರಗತಿಯವರೆಗಾದರೂ ಕಲಿತಿದ್ದಾರೆ. ಗಂಡು ಮಕ್ಕಳಿಬ್ಬರು ಇನ್ನೂ ಚಿಕ್ಕವರು. ಈಗ ಏಳು ಹಾಗೂ ಮೂರನೇ ತರಗತಿಗೆ ಸೇರಿಕೊಳ್ಳಬೇಕಿದ್ದ ಗಂಡು ಮಕ್ಕಳು ಏನು ಮಾಡುವರು? ಹೊಸ ಊರಿಗೆ ಹೋಗಿ ಹೊಸ ಭಾಷೆ ಕಲಿತು ಓದ ಬಲ್ಲರೆ? ಅಲ್ಲಿ ಮಕ್ಕಳು ಯಾವ ಶಾಲೆಗೆ ಸೇರುತ್ತಾರೆ? ಅನ್ಯ ಭಾಷಿಕರ ಮಕ್ಕಳನ್ನು ಅಲ್ಲಿನ ಶಾಲೆಗೆ ಸೇರಿಸಿ ಕೊಳ್ಳುವರೇ? ಮಕ್ಕಳ ಭವಿಷ್ಯ ಮುಂದೆ ಏನು? ಭಾಷೆ ಬಾರದೆ ತೀರಾ ಒಂಟಿಯಾಗಿ ಬಿಡುತ್ತೇವಲ್ಲ. ತಕ್ಷಣಕ್ಕೆ ಏನಾದರೂ ಅಗತ್ಯ ಇದ್ದರೆ ಹೇಗೆ ಕೇಳುವುದು. ಯಾರಲ್ಲಿ ಕೇಳುವುದು? 

ಹೀಗೆಲ್ಲಾ ಕಾಡುತ್ತಾ ಇದ್ದ ಚಿಂತೆಯಿಂದ ನಿದ್ರೆಯೇ ಬಾರದಂತೆ ಆಗಿ ನಿಟ್ಟುಸಿರು ಬಿಡುತ್ತಾ ಮಗ್ಗುಲು ಬದಲಿಸಿ ನಿದ್ರೆ ಮಾಡಲು ಪ್ರಯತ್ನಿಸಿದರಾದರೂ ನಿದ್ರಾದೇವಿ ಹತ್ತಿರ ಸುಳಿಯುವ ಲಕ್ಷಣವೇ ಕಾಣಲಿಲ್ಲ.  ಒಂದು ಕಡೆ ಊರನ್ನು ಬಿಟ್ಟು ಹೋಗಬೇಕು ಎನ್ನುವ ಚಿಂತೆಯಾದರೆ ಮತ್ತೊಂದೆಡೆ ಮಕ್ಕಳ ಭವಿಷ್ಯದ ಚಿಂತೆ. ಏನು ಮಾಡುವುದು ಎಂದು ತೋಚದೇ ದಿಕ್ಕುಗೆಟ್ಟಂತೆ ಆಯಿತು ಅವರ ಮನ. ಆದಷ್ಟು ಬೇಗ ಒಂದು ಸರಿಯಾದ ನಿರ್ಧಾರವನ್ನು ತಿಳಿಸುವಂತೆ ಪತಿ ಹೇಳಿದ್ದಾರೆ ನಾನು ಏನೆಂದು ತೀರ್ಮಾನ ಮಾಡಲಿ. ಪತಿಯ ಮಾತು ಸರಿಯಾಗಿ ಗಮನಿಸಿದರೆ ಅವರು ಎಲ್ಲವನ್ನೂ ಮೊದಲೇ ತೀರ್ಮಾನಿಸಿದಂತಿದೆ. ಕರ್ನಾಟಕಕ್ಕೆ ಹೋಗಿ ಬಂದಾಗಿನಿಂದ ಬರೀ ಅಲ್ಲಿನ ತೋಟದ ಮಾತೇ ಅವರ ಬಾಯಲ್ಲಿ. ಮೊದಲಿಗಿಂತಲೂ ಲವಲವಿಕೆ ಹಾಗೂ ಸಂತೋಷದಿಂದ ಇದ್ದಾರೆ. ಇಲ್ಲಿ ಅವರಿಗೆ ಇರುವ ಸ್ಥಾನ ಮಾನ ಗೌರವವನ್ನು ಕೂಡಾ ಮರೆತಂತೆ ಇದ್ದಾರೆ. ಅಲ್ಲಿ ಕೊಂಡುಕೊಳ್ಳಬೇಕು ಎಂದು ಇರುವ ತೋಟದ ಕನಸು ಇಷ್ಟೊಂದು ಅವರನ್ನು ಸೆಳೆದು ಬಿಟ್ಟಿತೇ? ಏಕೆ ಹೀಗಾದರು ನನ್ನವರು ಎಂದು ಎಷ್ಟು ಯೋಚಿಸಿದರೂ ಅವರ ಮನಕ್ಕೆ ಹೊಳೆಯಲೇ ಇಲ್ಲ. ನಡುರಾತ್ರಿ ಆಯಿತು ದೂರದಲ್ಲಿ ಎಲ್ಲೋ ಗೂಬೆ ಗೂ… ಗೂ… ಎಂದು ಕೂಗುವ ಸದ್ದು ಅವರಿಗೆ ಏನೋ ಅಪಶಕುನ ಸೂಚಿಸುತ್ತಾ ಇರುವಂತೆ ಭಾಸವಾಯಿತು. ತೋಟದ ಮೂಲೆಯಿಂದ ನರಿಗಳು  ಊಳಿಡುತ್ತಾ ಇರುವ ಕೂಗು ಸಣ್ಣಗೆ ನಡುಕ ಹುಟ್ಟಿಸಿತು. ಬಾವಲಿ ರೆಕ್ಕೆ ಬಡಿದು ಕಿಟಕಿಯ ಪಕ್ಕದಲ್ಲಿಯೇ ಹಾರಿ ಹೋಯಿತು ಆ ಸದ್ದಿಗೆ ಕಲ್ಯಾಣಿ ಒಮ್ಮೆಲೇ ಬೆಚ್ಚಿದರು. ಕಿಟಕಿಯಾಚೆ ನೋಡಿದರು ಎತ್ತಲೂ ಕಾರ್ಗತ್ತಲು. ಇಂದು ಎಲ್ಲವೂ ತನಗೆ ಅಪರಿಚಿತವಾದಂತೆ ಕಂಡಿತು ಕಲ್ಯಾಣಿಗೆ. ತನಗೇಕೆ ಹೀಗೆ ಆಗುತ್ತಿದೆ. ಮನೆಯ ಮುಂದೆ ಕಟ್ಟಿದ ನಾಯಿ ಏಕೋ ಇಂದು ಕುಂಯ್ ಕುಂಯ್ ಎಂದು ಸಣ್ಣಗೆ ನರಳಿದಂತೆ ಅನಿಸಿತು ಅವರಿಗೆ. ಆಡು ಕೋಳಿಗಳು ಗೂಡಿನಲ್ಲಿ ಸದ್ದು ಮಾಡುತ್ತಾ ಇರುವಂತೆ ಭಾಸವಾಯಿತು.

ಕೊಟ್ಟಿಗೆಯಲ್ಲಿ ಕಟ್ಟಿದ ಅವರ ಪ್ರೀತಿಯ ದನ ಕರುಗಳು

ನಿದ್ರೆ ಮಾಡದೆ ಸದ್ದು ಮಾಡಿದಂತೆ ತೋರುತ್ತಿದೆ. ಹೊರಗಿನ ಕತ್ತಲೆ ತನ್ನ ಮನದಲ್ಲೂ ಕವಿದಿದೆ ಎನಿಸಿತು ಕಲ್ಯಾಣಿಯವರಿಗೆ. ಏನು ಮಾಡಲೂ ತೋಚದೇ ಎದ್ದು ಕಿಟಕಿಯ ಬಳಿ ಹೋಗಿ ಆಕಾಶಡೆದೆಗೆ ನೋಡುತ್ತಾ ಯೋಚನೆಯಲ್ಲಿ ಮಗ್ನರಾಗಿ ಎಷ್ಟು ಹೊತ್ತು ಹಾಗೇ ನಿಂತಿದ್ದರೋ ತಿಳಿಯದು. ಕೋಳಿ ಕೂಗುವ ಸದ್ದು ಕೇಳಿ ಅಯ್ಯೋ ಬೆಳಗಾಯಿತು ಇನ್ನು ತಾನು ಮಲಗಿ ನಿದ್ರೆ ಮಾಡಲು ಸಾಧ್ಯವಿಲ್ಲವೆಂದು ಬಾವಿಯ ಹತ್ತಿರ ಹೋಗಿ ಹಗ್ಗಕ್ಕೆ ಚಿಕ್ಕ ತಾಮ್ರದ ಬಿಂದಿಗೆಯನ್ನು ಕಟ್ಟಿ  ಬಿಂದಿಗೆಯನ್ನು ನಿಧಾನವಾಗಿ ಬಾವಿಯೊಳಗೆ ಬಿಟ್ಟು ನೀರು ಸೇದಿ ಹಿತ್ತಾಳೆಯ ಬಕೆಟ್ಟಿಗೆ ಹಾಕಿ ಅದು ತುಂಬುವವರೆಗೂ ನೀರು ಸೇದಿ ತಣ್ಣೀರಲ್ಲಿ ಮಿಂದು ದಿನ ನಿತ್ಯದ ಕೆಲಸದಲ್ಲಿ ತೊಡಗಿದರು. ಆದರೆ ಏಕೋ ಇಂದು ಎಂದಿನ ಲವಲವಿಕೆ ತನಗೆ ಕೆಲಸದಲ್ಲಿ ಇಲ್ಲ ಎನ್ನುವುದು ಅವರಿಗೆ ಮನವರಿಕೆ ಆಯಿತು. ಇತ್ತ ನಾರಾಯಣನ್ ಎದ್ದು ನೋಡಿದರು ಪತ್ನಿ ಅದಾಗಲೇ ಎದ್ದು ಹೋಗಿದ್ದು ತಿಳಿಯಿತು. ಅವರಿಗೆ ಅರ್ಥವಾಯಿತು ಪತ್ನಿ ನಿನ್ನೆ ರಾತ್ರಿ ನಿದ್ರೆ ಮಾಡಿಲ್ಲ ಎಂದು. ಮನದಲ್ಲಿಯೇ ಅಂದುಕೊಂಡರು ಇವಳು ಹೀಗೆಯೇ ಸುದೀರ್ಘ ಯೋಚನೆ ಮಾಡುವ ಸ್ವಭಾವದವಳು ಯಾವುದೇ  ವಿಷಯವನ್ನು ಹೇಳಿದರೂ ಹೀಗೇ ರಾತ್ರಿಯೆಲ್ಲಾ ನಿದ್ರೆಗೆಟ್ಟು ಯೋಚಿಸುವಳು. ಆದರೆ ಮೌನವಾಗಿ ಇದ್ದುಕೊಂಡೇ  ಸರಿಯಾದ ನಿರ್ಧಾರ ತೆಗೆದು ಕೊಳ್ಳುವವಳು ನಂತರ ಕೇಳಿದರೆ ಆಯಿತು ಎಂದು ಅವರೂ ಕೂಡಾ ನಿತ್ಯ ಕರ್ಮ ಮುಗಿಸಿ ಬರಲು ಹೋದರು.  ಪತಿಯು ಸ್ನಾನ ಮುಗಿಸಿ ಪೂಜೆಯ ನಂತರ ಚಾಯ್ ಕುಡಿಯಲು ಬರುವುದನ್ನೇ ಕಾಯುತ್ತಾ ಕುಳಿತರು ಕಲ್ಯಾಣಿ.  ತನ್ನ ಮನದಲ್ಲಿ ಇರುವ ಆಶಂಕೆಗಳನ್ನು ಹೇಳಿ ತಡ ಮಾಡದೇ ಸರಿಯಾದ ಒಂದು ನಿರ್ಧಾರಕ್ಕೆ ಬರಬೇಕೆಂದು ಅಂದುಕೊಂಡು ಕೇಳಬೇಕೆಂದಿರುವ ವಿಷಯಗಳನ್ನು ಪಟ್ಟಿ ಮಾಡುತ್ತಾ ಕುಳಿತರು. 

ಪೂಜೆ ಮುಗಿಸಿ ನಾರಾಯಣನ್ ಅಡುಗೆ ಮನೆಗೆ ಬಂದರು. ಪತಿ ಒಳಗೆ ಬಂದಿದ್ದನ್ನು ಅರಿತ ಕಲ್ಯಾಣಿಯವರು ಹಬೆಯಾಡುವ ಚಾಯ್ ಕಪ್ ಅನ್ನು ಪತಿಯ ಕೈಗೆ ನಸು ನಗುತ್ತಾ ಕೊಟ್ಟರು. ಬೆಳಗ್ಗೆ ಪತ್ನಿಯ ಈ ನಸು ನಗು ಕಂಡರೆ ಅವರ ಅಂದಿನ ದಿನ ಶುಭವಾಗಿ ಇರುತ್ತಿತ್ತು. ನಾರಾಯಣನ್ ಪತ್ನಿಯನ್ನು ಸೂಕ್ಷ್ಮವಾಗಿ ಗಮನಿಸಿದರು. ನಸು ನಕ್ಕರೂ ಎಂದಿನಂತೆ ಇರಲಿಲ್ಲ ಪತ್ನಿಯ ಮುಖ. ಸ್ವಲ್ಪ ಬಾಡಿದಂತೆ ತೋರಿತು. ರಾತ್ರಿ ನಿದ್ರೆ ಇರದ ಕಾರಣ ಇರಬಹುದು ಎಂದು ಚಾಯ್ ಹೀರಲು ಪ್ರಾರಂಭಿಸಿದರು. ಆದರೂ ಅವರ ನೋಟ ಪತ್ನಿಯ ಕಡೆಗೇ ಇತ್ತು. ನಿನ್ನೆ ಹೇಳಿದ ವಿಷಯಗಳ ಬಗ್ಗೆ ಏನು ಹೇಳಬಹುದು ತಮ್ಮ ಮುದ್ದಿನ ಪತ್ನಿ?  ತಮ್ಮ ಮನದ ಇಂಗಿತವನ್ನು ಅರಿತು ಅದಕ್ಕೆ ಅನುಕೂಲವಾಗಿ ತನ್ನ ಅನಿಸಿಕೆ ಹೇಳಬಹುದು ಎಂಬ ವಿಶ್ವಾಸ ಅವರಿಗಿತ್ತು. ಇಲ್ಲಿಯವರೆಗೂ ತಾನು ತೆಗೆದುಕೊಂಡ ಯಾವುದೇ ನಿರ್ಧಾರಕ್ಕೂ ಪತ್ನಿಯು ಎದುರು ಹೇಳಿದವಳಲ್ಲ.  ನಾನು ಎಲ್ಲವನ್ನೂ ವಿವರವಾಗಿ ಹೇಳಿದ ಮೇಲೆ ಖಂಡಿತಾ ನನ್ನ ದೂರ ದೃಷ್ಟಿ ಹಾಗೂ ಮುಂದಾಲೋಚನೆ ಪತ್ನಿಗೆ ಹಿಡಿಸದೇ ಇರದು ಎಂಬ ಆಶಾ ಭಾವನೆಯಿಂದಲೇ ಕೇಳಿದರು…

” ಕಲ್ಯಾಣಿ ಏನನ್ನಿಸಿತು ನಿನ್ನೆ ರಾತ್ರಿ ನಾನು ಹೇಳಿದ ವಿಷಯ?

ನಿನ್ನ ಮನಸ್ಸಲ್ಲಿ ಏನೇ ಇದ್ದರೂ ಅದನ್ನು ನಿಸ್ಸಂಕೋಚವಾಗಿ ಹೇಳು…. ನೀನು ಏನು ಹೇಳುತ್ತೀಯೋ ಅದನ್ನು ತಿಳಿದು ಮುಂದುವರೆಯಬೇಕಿದೆ ನಾನು…. ನಂತರ ಮಾಡಬೇಕಾದ ಕೆಲಸಗಳು ಬೇಕಾದಷ್ಟು ಇದೆ….ನೀನು ಅದೇನು ಹೇಳುವೆಯೋ ಅದು ನಮಗೆ ಅನುಕೂಲವಾಗುವಂತೆ ಇರಬೇಕು ನೋಡು”…. ಎಂದು ಇಷ್ಟು ಹೊತ್ತಾದರೂ ಏನೂ   ಮಾತನಾಡದೇ  ಸುಮ್ಮನೇ ಕುಳಿತಿರುವ  ಪತ್ನಿಯೆಡೆಗೆ ಪ್ರಶ್ನಾರ್ಥಕವಾಗಿ ನೋಡಿದರು ನಾಣು.  ಈ ರೀತಿಯಾಗಿ ಹೇಳಿ ತನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದ ಪತಿಯನ್ನೇ ನೋಡುತ್ತಾ ಅವರ ಮನದಲ್ಲಿ ಇರುವ ದುಗುಡದ ಬಗ್ಗೆ ಹೇಳಲು ಮುಂದಾದರು ಕಲ್ಯಾಣಿ.


ರುಕ್ಮಿಣಿ ನಾಯರ್

ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು

Leave a Reply

Back To Top