ವಿಶೇಷ ಲೇಖನ
ಹಮೀದಾ ಬೇಗಂ ದೇಸಾಯಿ-
ಕುವೆಂಪು – ಕಾದಂಬರಿ, ನಾಟಕ ಮತ್ತು ಕಾವ್ಯಗಳು.
ಕುವೆಂಪು ನಮ್ಮ ಯುಗದ ಅತ್ಯಂತ ಶಕ್ತಿಶಾಲಿ ಸಾಹಿತಿಗಳಲ್ಲಿ ಒಬ್ಬರು. ಇವರ ಸಮಕಾಲೀನರಾದ ಬೇಂದ್ರೆ, ಕಾರಂತ,ಮಾಸ್ತಿಯವರಲ್ಲಿ ಕಾಣಿಸದ ಕಥನ ಶಕ್ತಿ, ನಾಟಕ ಪ್ರಜ್ಞೆ, ಬದುಕಿನ ವಿವರಗಳ ಬಗ್ಗೆ ಪ್ರಿಯವಾದ ಆಸಕ್ತಿ ಇವರಿಗಿದೆ. ಇವರ “ಕಾನೂರು ಹೆಗ್ಗಡತಿ” ಮತ್ತು “ಮಲೆಗಳಲ್ಲಿ ಮದುಮಗಳು” ಕಾದಂಬರಿಗಳಲ್ಲಿ ಚಿತ್ರಿಸಿರುವ ಘಟನೆಗಳ ಹಿಂದೆ ಇರುವ ನಿಷ್ಟುರ ಧೋರಣೆ ಆಸಕ್ತಿಯನ್ನು ಹುಟ್ಟಿಸುತ್ತದೆ. ಪೂರ್ಣದೃಷ್ಟಿಯ ‘ ಶ್ರೀ ರಾಮಾಯಣ ದರ್ಶನಂ ‘ ಬರೆದ ನಂತರ , ಬಹಳಷ್ಟು ಉಳಿದಿರುವ ಅನುಭವಗಳನ್ನು ಒಳಗೊಂಡ ಹೆಚ್ಚು ಜೀವಂತಿಕೆಯುಳ್ಳ ‘ಮಲೆಗಳಲ್ಲಿ ಮದುಮಗಳು ‘ ಕಾದಂಬರಿಯನ್ನು ಕುವೆಂಪು ಬರೆದರು.
ಅವರ ಎರಡೂ ಕಾದಂಬರಿಯನ್ನು ಅವಲೋಕಿಸಿದಾಗ, ಒಂದು ಸಾಮಾಜಿಕ ಸಂದರ್ಭದಲ್ಲಿ, ಸಮಾಜದ ವರ್ಗಗಳ ವಿರೋಧಾತ್ಮಕ ಸಂಬಂಧಗಳನ್ನೂ, ಮನುಷ್ಯ ಜೀವನವನ್ನು ಪರಿಪೂರ್ಣವಾಗಿ ಸೃಷ್ಟಿ ಮಾಡಲು ಯತ್ನಿಸುವದರಿಂದ- ಅನೇಕ ರೀತಿಗಳಲ್ಲಿ ಚಿತ್ರಿಸಿರುವುದು ಗಮನಾರ್ಹ ಸಂಗತಿ! ಮೇಲ್ವರ್ಗದವರು ಕೆಳವರ್ಗದವರನ್ನು ನಡೆಸಿಕೊಳ್ಳುವ ರೀತಿ ; ಹಾಗೆಯೇ ಶೂದ್ರ ವರ್ಗದವರು ಪ್ರತಿಕ್ರಿಯಿಸುವ ರೀತಿ-ಇವೆಲ್ಲಾ ಸಾಮಾಜಿಕ ಜೀವನದ ವಿರೋಧಾತ್ಮಕ ಸಂಬಂಧಗಳನ್ನು ಎತ್ತಿ ತೋರುತ್ತವೆ.
ಮಹಾಕಾವ್ಯ ‘ರಾಮಾಯಣ ದರ್ಶನಂ’ ಕುವೆಂಪು ಅವರ ದೃಷ್ಟಿಯಲ್ಲಿ ಸಕಲ ಪೃಥ್ವಿಯೊ ಅಯೋಧ್ಯೆಯಾಗಿ, ಮಾನವ ಜೀವಿಯೇ ರಾಮನಾಗಿ, ಪೃಥ್ವಿಯ ಒಂದೊಂದು ಜೀವವೂ ತಂತಮ್ಮ ಕ್ಷೇತ್ರದಲ್ಲಿ ಇಂದ್ರಿಯ ಬಾಹ್ಯ ಜಗತ್ತಿನೊಡನೆ ಹೋರಾಡಿ, ಆತ್ಮವನು ಬಂಧನದಿಂದ ಕಳಚಿ ಮುಕ್ತವಾಗಿ ಮಾಡಿ, ಸ್ವಸ್ವರೂಪ ಜ್ಞಾನಾನುಭವದಿಂದ ಆನಂದವೆಂಬ ಅನುಭೂತಿ ಪಡೆಯುವ ಕ್ಲೇಶಪೂರ್ವಕ ಉದ್ಧಾರವೇ- ರಾಮಾಯಣಗಾಥೆಯಾಗಿ ಪರಿಣಮಿಸಿದೆ ಎಂದರೆ ತಪ್ಪೇನಿಲ್ಲ.!
ಕುವೆಂಪು ಅವರು ‘ಕವಿಯ ಜೀವನ ಚರಿತ್ರೆ ಎಂದರೆ ಅವನ ಕವನಗಳೆ ‘- ಎಂದು ಒಂದೆಡೆ ಹೇಳಿದ್ದಾರೆ. ಅವರ ಕವನಗಳಿಗೆ ಮಹತ್ವವಿರಲು ಮುಖ್ಯ ಕಾರಣವೇನೆಂದರೆ, ಅವರ ಬದುಕನ್ನು ಸಮಗ್ರವಾಗಿ ಎಂಬಂತೆ ತಮ್ಮ ಕವನಗಳೂ ಕಂಡರಿಸಿದ್ದಾರೆ -ಎಂಬುದು.
ಕುವೆಂಪು ಅವರ ಭಾವಗೀತೆಗಳಲ್ಲಿ ‘ಪ್ರಕೃತಿಗೆ ‘ ಮೊದಲ ಸ್ಥಾನ! ಉದಾ: ಕೊಳಲು, ನವಿಲು, ಪಕ್ಷಿಕಾಶಿ….ಮುಂತಾದ ಕೃತಿಗಳು ಪ್ರಕೃತಿ ಗೀತೆಗಳಿಗೇ ಮೀಸಲು! ಅವರ ಒಂದು ಕವನ ‘ಹಸುಕು’ ಅವರ ಮೇಲೆ ಬೀರಿದ ದಟ್ಟವಾದ ಪ್ರಭಾವ ಮಲೆನಾಡಿನ ಪ್ರಾಕೃತಿಕ ಸೌಂದರ್ಯ!
ಹಸುರಾಗಸ: ಹಸುರು ಮುಗಿಲು:
ಹಸುರು ಗದ್ದೆಯ ಬಯಲು:
ಹಸುರು ಮಲೆ: ಹಸುರು ಕಣಿವೆ:
ಹಸುರು ಸಂಜೆಯಾ ಬಿಸಿಲು!
ಹಸುರತ್ತಲ್, ಹಸುರಿತ್ತಲ್, ಹಸುರೆತ್ತಲ್ ….
ಕುವೆಂಪು ಅವರ ಪ್ರೇಮಗೀತೆಗಳೂ ಕೂಡಾ ಅಷ್ಟೇ ಸೊಗಸಾಗಿವೆ. ಜೇನಾಗುವಾ, ಅನುತ್ವಾರ, ಷೋಡಶಿ ಇತ್ಯಾದಿ ಕೃತಿಗಳು. ಆದರೆ ಕುವೆಂಪು ಅವರ ಪ್ರೇಮಕವನಗಳು ಉಳಿದ ನವೋದಯ ಕವಿಗಳ ಕವನಗಳಿಗಿಂತ ಭಿನ್ನ! ಇವುಗಳನ್ನು ‘ದಾಂಪತ್ಯ ಗೀತೆ’ಗಳೆಂದು ಕರೆಯುವುದೇ ಹೆಚ್ಚು ಸೂಕ್ತ! ಇವು ಲೌಕಿಕ ಅರ್ಥದಲ್ಲಿ ಮಾತ್ರ ಇರದೆ, ದೈವಿಕ ಆವರಣವನ್ನೂ ಹೊಂದಿವೆ. ಬಹುಶಃ ಕುವೆಂಪು ಅವರಿಗೆ ರಾಮಕೃಷ್ಣ ಪರಮಹಂಸರ ದಟ್ಟ ಪ್ರಭಾವ ಕಾರಣವೂ ಹೌದು.
ಯೋಗವೇದಿಕೆ ಮಂಚ
ಭೋಗಾಸನವೇ ಯೋಗಾಸನ
ಕೆಂದುಟಿಯ ಚುಂಬನವೆ ಧ್ಯಾನ ಮುದ್ರೆ
ಹೊಂಗಳಸದಾಲಿಂಗನವೇ ಯೋಗನಿದ್ರೆ..…
ಹೀಗೆ ಅವರ ಪ್ರೀತಿ -ಪ್ರೇಮ ಪ್ರಣಯಗಳೆಲ್ಲ ‘ಪ್ರಣವದಲ್ಲಿ’ ವಿರಮಿಸಿವೆ !
ಕುವೆಂಪು ಅವರ ಕವನಗಳಲ್ಲಿ ಸಾಮಾಜಿಕ ಪ್ರಜ್ಞೆ, ವೈಜ್ಞಾನಿಕ ಪ್ರಜ್ಞೆ, ವೈಚಾರಿಕ ಪ್ರಜ್ಞೆ, ನಾಡುನುಡಿಗಳ ಬಗ್ಗೆ ಉತ್ಕಟ ಅಭಿಮಾನ; ಧಾರ್ಮಿಕ, ಪೌರಾಣಿಕ, ಐತಿಹಾಸಿಕ ವ್ಯಕ್ತಿ ಚಿತ್ರಣಗಳೂ ಆಧ್ಯಾತ್ಮಿಕ ಚಿಂತನೆ ವಿಶೇಷ ಮಹತ್ವ ಹೊಂದಿವೆ.
ಕುವೆಂಪು ಅವರ ನಾಟಕ ಕೃತಿಗಳಲ್ಲಿ ‘ಬೆರಳ್ ಗೆ ಕೊರಳ್ ‘ ಒಂದು ಅರ್ಪೂರ್ವ ಕೃತಿ ! ಏಕಲವ್ಯನ ಕಥೆಗಳು ಪೌರಾಣಿಕವಿದ್ದರೂ, ಇದೊಂದು ಅತ್ಯುತ್ತಮ ನಾಟಕ ಎನಿಸಿಕೊಳ್ಳಲು ಕಾರಣ -ಪಾತ್ರ ಕಲ್ಪನೆಯ ಸಮಗ್ರತೆ, ವಸ್ತು ನಿರ್ವಹಣೆಯ ಅಚ್ಚುಕಟ್ಟು ಮತ್ತು ಗುರು, ಕರ್ಮ, ಯಜ್ಞತತ್ವಗಳು ಪ್ರತಿಮಾ ವಿಧಾನದಿಂದ ಆವಿಭಾರವಗೊಂಡಿರುವ ಬಗ್ಗೆ !
ಈ ನಾಟಕದಲ್ಲಿ ಏಕಲವ್ಯನ ತಾಯಿಯ ಪಾತ್ರ ಹೊಸದು. ಮಗನ ತುಂಡಾದ ಬೆರಳನ್ನು ನೋಡಿ ಮಾತೃ ಹೃದಯ ಶೋಕಸಂತೃಪ್ತಳಾಗಿ ಶಾಪನೀಡುತ್ತಾಳೆ .
ಆರ್ಗೊ ಬಲಿ ನನ್ನ ಕಂದನ ಬೆರಲ್
ಬಲಿಯಕ್ಕೆ ಆ ಪಾಪಿಯ ಕೊರಳ್ !
ಹೀಗೆ ಕುವೆಂಪುರವರ ಎಲ್ಲಾ ಪ್ರಕಾರದ ಕೃತಿಗಳು ಮಹತ್ವ ಎನಿಸಿವೆ. ಕುವೆಂಪು ಅವರು ಮನುಜಮತ – ವಿಶ್ವಪಥ ಪರಿಕಲ್ಪನೆಯಲ್ಲಿ ಬಲವಾದ ವಿಶ್ವಾಸ ಹೊಂದಿದವರು. ಇಡೀ ಮನುಕುಲದ ಐಕ್ಯತೆ, ಏಳ್ಗೆ, ಪ್ರಗತಿ ಇದರಲ್ಲಿ ಅಡಕವಾಗಿವೆ. ಜಾತಿ-ಮತ-ಪಂಥದ ಗೊಡವೆ ನೀಗಿದವರು! ಅವರು ಪೂರ್ಣದೃಷ್ಟಿ. ಜಡದಲ್ಲೂ ಚೈತನ್ಯ ಕಾಣುವ, ನಿಕೇತನವಾದರೂ ಅನಿಕೇತನನಾಗುವ ಅವರ ಭಾವನೆ ಅಪೂರ್ವ !
ಒಟ್ಟಿನಲ್ಲಿ ಕುವೆಂಪು ಅವರ ಸಾಹಿತ್ಯ ಬೃಹತ್ತು ಮತ್ತು ಮಹತ್ತು…!
( ಆಧಾರಿತ)
ಹಮೀದಾ ಬೇಗಂ ದೇಸಾಯಿ