ಮಮತಾ ಶಂಕರ್-ಎಲ್ಲಾ ಮುಗಿದ ಮೇಲೆ

ಕಾವ್ಯ ಸಂಗಾತಿ

ಮಮತಾ ಶಂಕರ್-

ಎಲ್ಲಾ ಮುಗಿದ ಮೇಲೆ

ಯುದ್ಧ ಮುಗಿದ ನಂತರದ  ನಗರದಲ್ಲಿ  
ಸದ್ದು ಗದ್ದಲಗಳು ಕ್ಷೀಣಿಸುತ್ತಾ ಹೋಗುತ್ತದೆ  
ಹಸಿ ರಕ್ತದ ವಾಸನೆ, ಯುದ್ಧದ ಹೊಗೆ, ಕಾರ್ಮೋಡಗಳು ಮಸುಕಾಗುತ್ತದೆ…
ಒಂದಷ್ಟು ಬಾರಿ ಸೂರ್ಯ ಚಂದ್ರ ನಕ್ಷತ್ರಗಳು ಇಣುಕಿ ನೋಡುವಷ್ಟರಲ್ಲಿ
ಎದೆ ಬಿರಿದು ಅಳುವ ಧ್ವನಿ  ಕೂಡ
ಕರಗಿ ಹೋಗುತ್ತಿರುತ್ತದೆ
ಏನನ್ನೋ ಬಯಸಿ ನೋಡುವ ನಿಸ್ತೇಜ ಕಣ್ಣುಗಳು
ಅನ್ನ ನೀರು ನೆರಳಿಲ್ಲದೆ
ನೆಲಕ್ಕೊರಗುತ್ತವೆ…  

ಗಂಡನಿಲ್ಲದ ಹೆಣ್ಣು, ಅಪ್ಪನಿಲ್ಲದ ಮಕ್ಕಳು, ಮಕ್ಕಳ ಕಳಕೊಂಡ ಮುದಿ ತಾಯಿ ತಂದೆ
ಇಂಥ ಏನೆಲ್ಲವನ್ನು ಹೆತ್ತು ಬಿಡುವ ಯುದ್ಧ
ಎಲ್ಲರ ನೋವನ್ನೂ ಕಣ್ಣೀರ ನದಿಯಾಗಿ ಹರಿಸಿಬಿಡುತ್ತದೆ…

ಮತ್ತೆ ಇವರುಗಳ ಗುರುತು ಅಲ್ಲೆಲ್ಲೋ ಸಿಕ್ಕುವುದಿಲ್ಲ ಹುಡುಕಿದರು  
ಅದೊಂದು ದಿನ ರಣ ಮಳೆಯೊಂದು ಬಂದು  
ಎಲ್ಲಾ ಕಸಗುಡಿಸಿ ಎಸೆದಂತೆ ಸ್ವಚ್ಛ ಮಾಡಿ
ಕೆಂಪಾದ ನೆಲವೆಲ್ಲ ಹದಗೊಳಿಸುತ್ತದೆ  
ಗೆದ್ದ ಅನಾಥ ಕಿರೀಟವೊಂದು  ಯಾರದೋ ನಿರೀಕ್ಷೆಯಲ್ಲಿರುವಾಗ  
ಅಲ್ಲೊಬ್ಬ ರಾಜ ತಲೆ ಎತ್ತಿ ನಿಲ್ಲುತ್ತಾನೆ  

ಮತ್ತೆ
ಎಲ್ಲಾ ಮುಗಿದ ಮೇಲೆ ಹೊಸದೊಂದು ಕಥೆ ಶುರುವಾಗುತ್ತದೆ
ಚರಿತ್ರೆ ಪುನಃ ಹೇಗೆ ಆರಂಭವಾಗುತ್ತದೆಂದರೆ ಕೈಬೀಸಿ  ಶಾಲೆಗೆ ಹೊರಟ ಪುಟ್ಟ ಮಗು
ಬಂದೂಕು ಹಿಡಿದು ನಡೆದ ಸೈನಿಕ….
ಅಷ್ಟೇ ಅಲ್ಲ ನೋಡಿ
ಮತ್ತೆ ತಯಾರಾಗುತ್ತದೆ ಸಿಂದೂರ ಕಾಲುಂಗುರ ಕರಿಮಣಿ ಇತ್ಯಾದಿ.. ಇತ್ಯಾದಿ…


ಮಮತಾ ಶಂಕರ್

Leave a Reply

Back To Top