ಕಾವ್ಯ ಸಂಗಾತಿ
ಸೋಮಲಿಂಗ ಬೇಡರ ಆಳೂರ
ಬಾರಪ್ಪ ಮಳೆರಾಯ
ಅಂತರ್ಜಲ ಕುಸಿದಿದೆ
ನದಿಯೊಡಲು ಬರಿದಾಗುತ್ತಲಿವೆ
ಕೆರೆಯಂಗಳ ಬತ್ತುತ್ತಿವೆ
ಜಲಾಶಯಗಳು ಖಾಲಿಯಾಗುತ್ತಿವೆ
ಬಾರಪ್ಪ ಮಳೆರಾಯ
ನೆಲ ಬಿರುಕು ಬಿಟ್ಟಿವೆ
ಬೆಳೆಯೆಲ್ಲ ಬಾಡಿ ಬಕ್ಕಲಾಗಿವೆ
ದನಕರುಗಳಿಗೆ ಮೇವಿಲ್ಲ
ಬಿಸಿಲಿನ ತಾಪ ಹೆಚ್ಚಾಗುತ್ತಿದೆ
ಬಾರಪ್ಪ ಮಳೆರಾಯ
ಮುಂಗಾರು ಹಿಂಗಾರು ಮಳೆ
ಹದವಾಗಿ ಸುರಿಯಲಿಲ್ಲ
ಒಣ ಭೂಮಿಯಲ್ಲಿ ಬಿತ್ತಿದ ಬೀಜ
ಸುಟ್ಟು ಹೊರಟಿವೆ ಬಿಸಿಲಿಗೆ
ಬಾರಪ್ಪ ಮಳೆರಾಯ
ಒಣ ಬೇಸಾಯಕ್ಕೆ ಮಳೆಯಿಲ್ಲ
ನೀರಾವರಿ ಬೆಳೆಗೆ ನೀರಿಲ್ಲ
ಪ್ರಾಣಿ ಪಕ್ಷಿಗಳು ಹೌಹಾರಿವೆ
ಭೀಕರ ಬರಗಾಲದ ಛಾಯೆ ಮೂಡಿದೆ
ಬಾರಪ್ಪ ಮಳೆರಾಯ
ಮಳೆಯಿಲ್ಲದೆ ಛಳಿಯಾಗದು
ಛಳಿಗಾಲವಿಲ್ಲದೆ ಬೇಸಿಗೆ ಹೇಗೆ?
ಅದರ ನೆನಪಾದರೆ ಮೈಮನ ಸುಡುತ್ತದೆ
ಬದುಕು ಕರಾಳವೆನಿಸುತ್ತದೆ
ಬಾರಪ್ಪ ಮಳೆರಾಯ
ದುಡಿಯುವ ಕೈಗಳಿಗೆ ಕೆಲಸವಿಲ್ಲ
ಭೂಮಾಲಿಕರಿಗೆ ಸಾಲದ ಶೂಲ
ಸಾಮಾನ್ಯ ಜನರ ಬದುಕು ದುಸ್ತರವಾಗಿದೆ
ಗುಳೆ ಹೊರಟಿದ್ದಾರೆ ಕೂಲಿಯರಸಿ
ಬಾರಪ್ಪ ಮಳೆರಾಯ.
……………………..
ಸೋಮಲಿಂಗ ಬೇಡರ ಆಳೂರ